ರಷ್ಯಾ ವಿರುದ್ಧ ರೊಚ್ಚಿಗೆದ್ದ ಜಿ-7 ರಾಷ್ಟ್ರಗಳ ನಾಯಕರು!
ಹಿರೋಷಿಮಾ: ರಷ್ಯಾ & ಉಕ್ರೇನ್ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶ ಮಾಡುವ ಜೊತೆಗೆ ಇತರ ದೇಶಗಳು ಕೂಡ ತಲೆ ಹಾಕುತ್ತಿವೆ. ಈಗ ಜಿ7 (G7) ರಾಷ್ಟ್ರಗಳ ನಾಯಕರು ಕೂಡ ಇದೇ ರೀತಿ ಒತ್ತಾಯಿಸಿದ್ದು, ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಿ ಅಂತಾ ರಷ್ಯಾಗೆ ಜಿ7 ರಾಷ್ಟ್ರಗಳು ಖಡಕ್ ವಾರ್ನಿಂಗ್ ಕೊಟ್ಟಿವೆ. ಇದು ಉರಿಯುವ ಕಿಚ್ಚಿಗೆ ತುಪ್ಪ ಸುರಿದಿದೆ.
ಜಪಾನ್‌ನಲ್ಲಿ ಜಿ7 ಒಕ್ಕೂಟದ ಮಹತ್ವದ ಸಭೆ ನಡೆಯುತ್ತಿದೆ. ಜಗತ್ತಿನ ಹಲವು ವಿಚಾರದ ಬಗ್ಗೆ ಇಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಪ್ರಮುಖವಾಗಿ ರಷ್ಯಾ & ಉಕ್ರೇನ್ ಯುದ್ಧ ಚರ್ಚೆಗೆ ಬಂದಿದೆ. ಇದೇ ವೇಳೆ ರಷ್ಯಾ ನಡೆ ಬಗ್ಗೆ ಜಿ-7 ರಾಷ್ಟ್ರಗಳ ಒಕ್ಕೂಟ ರೊಚ್ಚಿಗೆದ್ದಿದೆ. ಅಲ್ಲದೆ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ನೀವೂ ಒತ್ತಡ ಹಾಕಿ ಎಂದು ಚೀನಾಕ್ಕೆ ಜಿ7 ರಾಷ್ಟ್ರಗಳು ಒತ್ತಾಯಿಸಿವೆ. ಶನಿವಾರ ಒಕ್ಕೂಟದ ನಾಯಕರು ಈ ಕುರಿತು ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ್ದು, ರಷ್ಯಾದ ಆಪ್ತ ಗೆಳೆಯ ಚೀನಾಗೆ ನುಂಗಲಾರದ ತುತ್ತಾಗಿದೆ.

ಯುದ್ಧ ನಿಲ್ಲಿಸಲು ಚೀನಾಗೆ ಬೆಂಬಲ!
ಹೌದು ಜಿ-7 ರಾಷ್ಟ್ರಗಳ ಒಕ್ಕೂಟದ ಸಭೆಯಲ್ಲಿ ಮತ್ತೊಂದು ಮಹತ್ವದ ವಿಚಾರ ಚರ್ಚೆಗೆ ಬಂದಿತ್ತು. ಚೀನಾ ತನ್ನ ಗೆಳೆಯ ರಷ್ಯಾಗೆ ಹೇಳಿ ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸದರೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಲಾಗಿದೆ. ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ ಕೂಡಲೇ ನಿಲ್ಲಬೇಕು. ಯಾವುದೇ ಷರತ್ತುಗಳು ಇಲ್ಲದೆ ಮಿಲಿಟರಿ ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಜೊತೆಗೆ ಚೀನಾ ಕೈಗೊಳ್ಳುವ ಎಲ್ಲಾ ಕ್ರಮಗಳಿಗೆ ಒಕ್ಕೂಟ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಲಾಗಿದೆ.
ಭಾರತದ ಜೊತೆ ಉಕ್ರೇನ್ ಅಧ್ಯಕ್ಷ ಚರ್ಚೆ
ರಷ್ಯಾ ಜೊತೆ ಭಾರತ ಉತ್ತಮ ಸಂಬಂಧ ಹೊಂದಿದ್ದು ಮತ್ತು ಇನ್ನೊಂದು ಕಡೆ ಉಕ್ರೇನ್ ಕೂಡ ಯುದ್ಧ ನಿಲ್ಲಿಸಿ ಎಂದು ಭಾರತದ ಬಳಿ ಅಂಗಲಾಚಿದೆ. ಈ ಹೊತ್ತಲ್ಲಿ ಪ್ರಧಾನಿ ಮೋದಿ ಮತ್ತು ಉಕ್ರೇನ್ ಅಧ್ಯಕ್ಷರ ಚರ್ಚೆಗೆ ಜಪಾನ್ ವೇದಿಕೆ ಒದಗಿಸಿತ್ತು. ಪ್ರಧಾನಿ ಮೋದಿ ಯುದ್ಧದ ಬದಲು ಮಾನವೀಯತೆ ಪಾಠವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಪರೋಕ್ಷವಾಗಿ ಯುದ್ಧ ನಿಲ್ಲಿಸಿ ಎಂದು ಮತ್ತೆ ರಷ್ಯಾಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಅಲ್ಲದೆ ಉಕ್ರೇನ್‌ಗೆ ಧೈರ್ಯ ತುಂಬಿದೆ ಭಾರತ. ಆದರೆ ಚೀನಾ ಮಾತ್ರ ಈ ಬಗ್ಗೆ ತುಟಿ ಬಿಚ್ಚಿಲ್ಲ.

ಕೊನೆಗೂ ಬೇಡಿದ ಉಕ್ರೇನ್!
ಪರಿಸ್ಥಿತಿ ಬದಲಾಗಿದೆ, ಒಂದು ಕಾಲದಲ್ಲಿ ಭಾರತದ ವಿರುದ್ಧವೇ ಮಾತನಾಡುತ್ತಿದ್ದ ಉಕ್ರೇನ್ ಈ ಸಂದರ್ಭದಲ್ಲಿ ಭಾರತದ ಬಳಿ ಬೇಡುವ ಸ್ಥಿತಿ ಬಂದಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪಿಎಂ ನರೇಂದ್ರ ಮೋದಿ ಜೊತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜಪಾನ್‌ನಲ್ಲಿ ಚರ್ಚೆ ಕೂಡ ನಡೆಸಿದ್ದಾರೆ. ಶೃಂಗಸಭೆ ಜತೆ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಸೇರಿದಂತೆ ಜಾಗತಿಕ ನಾಯಕರ ಜೊತೆ ಅವರು ಸರಣಿ ದ್ವಿಪಕ್ಷೀಯ ಸಭೆ ನಡುವೆಯೂ ಪ್ರಧಾನಿ ಮೋದಿ ಅವರು ಉಕ್ರೇನ್ ಅಧ್ಯಕ್ಷರ ಜೊತೆಗೆ ಚರ್ಚೆ ನಡೆಸಿರುವುದು ವಿಶೇಷ.
ಭಾರತದ ಅಗತ್ಯತೆ ಉಕ್ರೇನ್‌ಗೆ ಮುಖ್ಯ!
ಉಕ್ರೇನ್ ಈಗ ಸಂಕಷ್ಟದಲ್ಲಿ ಇದೆ, ಹೀಗಾಗಿ ಭಾರತದ ಸಹಾಯ ಉಕ್ರೇನ್‌ಗೆ ಅತ್ಯಗತ್ಯ. ಇದೇ ಕಾರಣಕ್ಕೆ ಈಗ ಭಾರತದ ಬಳಿ ಬೇಡುತ್ತಿದೆ ಉಕ್ರೇನ್ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮತ್ತೊಂದ್ಕಡೆ ಉಕ್ರೇನ್ ಮೇಲಿನ ದಾಳಿ ನಿಲ್ಲಿಸುವಂತೆ ರಷ್ಯಾಗೆ ಮನವಿ ಮಾಡಿ ಎಂದು ಭಾರತದ ಬಳಿ ಈ ಹಿಂದೆ ಉಕ್ರೇನ್ ಕೇಳಿಕೊಂಡಿತ್ತು. ಇಷ್ಟೆಲ್ಲದರ ನಡುವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಉಕ್ರೇನ್ ಅಧ್ಯಕ್ಷರು ಭಾರತದ ಪ್ರಧಾನಿ ಜೊತೆ ಮಾತುಕತೆಗೆ ನಡೆಸಿ ಜಗತ್ತಿನ ಗಮನ ಸೆಳೆದಿದ್ದಾರೆ.

ಒಟ್ಟಾರೆ ಹೇಳುವುದಾದರೆ ಉಕ್ರೇನ್ & ರಷ್ಯಾ ಯುದ್ಧದಿಂದ ಪಾಶ್ಚಿಮಾತ್ಯ ರಾಷ್ಟ್ರಗಳು ಸಾಕಷ್ಟು ನಷ್ಟವನ್ನು ಅನುಭವಿಸಿವೆ. ಇದೇ ಕಾರಣಕ್ಕೆ ಹೇಗಾದ್ರೂ ಮಾಡಿ ಯುದ್ಧಕ್ಕೆ ಅಂತ್ಯ ಹಾಡಬೇಕು ಎಂದು ಪ್ರಯತ್ನಿಸುತ್ತಿವೆ. ಆದರೆ ಇದ್ಯಾವುದೂ ವರ್ಕೌಟ್ ಆಗುತ್ತಿಲ್ಲ, ರಷ್ಯಾ ಯುದ್ಧ ನಿಲ್ಲಿಸಲು ಮುಂದೆ ಬಂದಿಲ್ಲ. ಹೀಗಾಗಿ ಇನ್ನೂ ಅದೆಷ್ಟು ದಿನ ಉಕ್ರೇನ್ ಮತ್ತು ರಷ್ಯಾ ಜಗಳ ಮುಂದುವರಿಯಲಿದೆ ಎಂಬುದನ್ನ ಕಾದು ನೋಡಬೇಕು.












Click it and Unblock the Notifications