ಮಾಜಿ ಟೆನಿಸ್ ತಾರೆ ಬೋರಿಸ್ ಬೆಕರ್‌ಗೆ 2 ವರ್ಷ ಜೈಲುಶಿಕ್ಷೆ
ಜರ್ಮನಿಯ ಮಾಜಿ ಟೆನಿಸ್ ತಾರೆ ಬೋರಿಸ್ ಬೆಕರ್ ಅವರಿಗೆ ಬ್ರಿಟನ್ ನ್ಯಾಯಾಲಯವೊಂದು ಎರಡೂವರೆ ವರ್ಷ ಜೈಲುಶಿಕ್ಷೆ ವಿಧಿಸಿದೆ.
ಲಂಡನ್, ಏ. 30: ಜರ್ಮನಿಯ ಮಾಜಿ ಟೆನಿಸ್ ತಾರೆ ಬೋರಿಸ್ ಬೆಕರ್ ಅವರಿಗೆ ಬ್ರಿಟನ್ ನ್ಯಾಯಾಲಯವೊಂದು ಎರಡೂವರೆ ವರ್ಷ ಜೈಲುಶಿಕ್ಷೆ ವಿಧಿಸಿದೆ. 2017ರ ಹಣ ಅವ್ಯವಹಾರ ವಂಚನೆ ಪ್ರಕರಣವೊಂದರಲ್ಲಿ ಬೋರಿಸ್ ಬೆಕರ್ (Boris Becker) ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಲಂಡನ್‌ನ ಸೌತ್‌ವಾರ್ಕ್ ಕ್ರೌನ್ ನ್ಯಾಯಾಲಯ ಅವರಿಗೆ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಾಲ ಮರುಪಾವತಿ ಮಾಡದ ಕಾರಣ ಅವರನ್ನ ದಿವಾಳಿ (Bankruptcy Case) ಎಂದು ಘೋಷಿಸಲಾಗಿತ್ತು. ಆಗ ಅವರು ಸಾಕಷ್ಟು ಹಣ ಮತ್ತು ಆಸ್ತಿಯನ್ನ ಮರೆಮಾಚಿದ್ದು ಬೆಳಕಿಗೆ ಬಂದಿತ್ತು. ಇದರಲ್ಲಿ ಜರ್ಮನಿಯಲ್ಲಿನ ಆಸ್ತಿ ಮತ್ತು ಟೆಕ್ ಕಂಪನಿಯೊಂದರಲ್ಲಿ 8.66 ಲಕ್ಷ ಡಾಲರ್ (ಸುಮಾರು 6.6 ಕೋಟಿ ರೂ) ಮೊತ್ತದ ಷೇರುಗಳೂ ಇವೆ. ಒಟ್ಟು ನಾಲ್ಕು ಆರೋಪಗಳು ಸಾಬೀತಾಗಿ ಕೆಲ ವಾರಗಳ ಹಿಂದೆ ಕೋರ್ಟ್ ಬೋರಿಸ್ ಬೆಕರ್ ಅವರನ್ನ ದೋಷಿ ಎಂದು ತೀರ್ಮಾನಿಸಿತ್ತು. ಇದೀಗ ನಿನ್ನೆ ಶುಕ್ರವಾರ ಶಿಕ್ಷೆ ಪ್ರಕಟವಾಗಿದೆ. ಶಿಕ್ಷೆಯ ಅವಧಿಯ ಅರ್ಧಭಾಗ ಅವರು ಜೈಲುವಾಸ ಅನುಭವಿಸಬೇಕು. ಉಳಿದ ಅವಧಿ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗೆ ಇರಬಹುದು. ಅಂದರೆ ಸುಮಾರು 15 ತಿಂಗಳು ಅವರು ಜೈಲುವಾಸದಲ್ಲಿ ಇರಬೇಕು.
ಜರ್ಮನಿಯ 54 ವರ್ಷದ ಬೋರಿಸ್ ಬೆಕರ್ ಎಂಬತ್ತು ಮತ್ತು ತೊಂಬತ್ತರ ದಶಕದ ಕಾಲಘಟ್ಟದಲ್ಲಿ ವಿಶ್ವದ ಶ್ರೇಷ್ಠ ಟೆನಿಸ್ ತಾರೆಯಾಗಿ ವಿಜೃಂಬಿಸಿದ್ದರು. ಆರು ಬಾರಿ ಅವರು ಗ್ರ್ಯಾನ್ ಸ್ಲಾಮ್ ಚಾಂಪಿಯನ್ (Grand Slam Tennis Champion) ಆಗಿದ್ದಾರೆ. ಇವಾನ್ ಲೆಂಡಲ್ ಮೊದಲಾದವರ ಸಮಕಾಲೀನರಾಗಿದ್ದರು. ಕೇವಲ 17 ವರ್ಷ ವಯಸ್ಸಿನಲ್ಲಿ ವಿಂಬಲ್ಡನ್ ಟ್ರೋಫಿ ಗೆದ್ದು ಅಚ್ಚರಿ ಮೂಡಿಸಿದ್ದರು.

ಟೆನಿಸ್ ವೃತ್ತಿಯಿಂದ ನಿವೃತ್ತರಾದ ಬಳಿಕ ಬೋರಿಸ್ ಬೆಕರ್ ಸಾಕಷ್ಟು ವಿವಾದಗಳಿಗೆ ಸಿಲುಕಿದ್ದಾರೆ. 2002ರಲ್ಲಿ ಜರ್ಮನಿಯ ನ್ಯಾಯಾಲಯವೊಂದು ಹಣ ಅವ್ಯವಹಾರ ಮತ್ತು ವಂಚನೆ ಆರೋಪಗಳ ಪ್ರಕರಣದಲ್ಲಿ ಬೋರಿಸ್ ಬೆಕರ್ ಅವರಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಆದರೆ, ಆ ಶಿಕ್ಷೆಯನ್ನ ಅಮಾನತುಗೊಳಿಸಿ ಬಳಿಕ ದೊಡ್ಡ ಮೊತ್ತದ ದಂಡ ವಿಧಿಸಿ ಮತ್ತೊಂದ ತೀರ್ಪು ನೀಡಲಾಗಿತ್ತು.
2012ರಿಂದ ಬೋರಿಸ್ ಬೆಕರ್ ಅವರು ಬ್ರಿಟನ್ ದೇಶದಲ್ಲಿ ವಾಸಿಸುತ್ತಿದ್ದಾರೆ. ಖಾಸಗಿ ಬ್ಯಾಂಕೊಂದರಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಸಾಲ ಪಡೆದಿದ್ದರು. 2017ರಲ್ಲಿ ಅವರನ್ನ ದಿವಾಳಿ ಎಂದು ಘೋಷಿಸಲಾಯಿತು.
ಇದೇ ಬ್ಯಾಂಕ್ರಪ್ಟ್ಸಿ ಕೇಸ್ ಸಂಬಂಧ ಬೋರಿಸ್ ಬೆಕರ್ ತಮ್ಮ ಕೆಲ ಆಸ್ತಿಗಳನ್ನ ಮರೆಮಾಚಿದ್ದು ಅವರಿಗೆ ಕುತ್ತಿಗೆ ಬಂದಿದೆ.
ನಿನ್ನೆ ತೀರ್ಪು ನೀಡುವಾಗ ನ್ಯಾಯಾಧೀಶೆ ರೆಬೆಕಾ ಚಾಕ್ಲೀ ಅವರು ಟೆನಿಸ್ ಸ್ಟಾರ್ ಅನ್ನು ತರಾಟೆಗೆ ತೆಗೆದುಕೊಂಡರು. "ನೀವು ತಪ್ಪು ಮಾಡಿದ್ದೀರೆಂಬ ಭಾವನೆಯೇ ನಿಮ್ಮಲ್ಲಿ ಇಲ್ಲ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಬೇರೆಯವರ ಮೇಲೆ ಗೂಬೆ ಕೂರಿಸುತ್ತೀರಿ" ಎಂದು ನ್ಯಾಯಾಧೀಶೆ ತಮ್ಮ ತೀರ್ಪಿನ ವೇಳೆ ಹೇಳಿದರು.
ಬೋರಿಸ್ ಬೆಕರ್ ಅವರು ಈ ಪ್ರಕರಣದಲ್ಲಿ ತಮ್ಮದೇನೂ ತಪ್ಪಿಲ್ಲ. ತನ್ನ ಖಾಸಗಿ ಜೀವನದ ವ್ಯವಹಾರಗಳೆಲ್ಲವನ್ನೂ ಸಲಹೆಗಾರರೇ ನೋಡಿಕೊಳ್ಳುತ್ತಿದ್ದರು. ಅವರನ್ನ ತಾನು ಸಂಪೂರ್ಣ ನಂಬಿದ್ದೆ. ಅದಕ್ಕೆ ಹೀಗೆ ಅಗಿದೆ ಎಂಬುದು ಬೋರಿಸ್ ಅವರ ವಾದವಾಗಿತ್ತು. ಹಾಗೆಯೇ, ತನ್ನ ಹಿಂದಿನ ಹೆಂಡತಿಗೆ ಡಿವೋರ್ಸ್ ಕೊಡುವಾಗ ಬಹಳ ದುಬಾರಿ ಎನಿಸುವಷ್ಟು ಪರಿಹಾರ ಕೊಡಬೇಕಾಯಿತು. ಇದರಿಂದ ಆರ್ಥಿಕವಾಗಿ ನಷ್ಟ ಅನುಭವಿಸಿದೆ ಎಂದು ಬೆಕರ್ ಹೇಳಿಕೊಂಡಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications