ಪುಟಿನ್ ಭೇಟಿಯಾದ ಖಾನ್: ಪಾಕಿಸ್ತಾನಕ್ಕೆ ಅಮೆರಿಕಾ ಎಚ್ಚರಿಕೆ ಸಂದೇಶ
ವಾಶಿಂಗ್ಟನ್, ಫೆಬ್ರವರಿ 24: ಉಕ್ರೇನ್‌ನಲ್ಲಿ ರಷ್ಯಾದ ಕ್ರಮಗಳಿಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸುವುದು ಪ್ರತಿಯೊಂದು "ಜವಾಬ್ದಾರಿಯುತ" ರಾಷ್ಟ್ರದ ಹೊಣೆ ಆಗಿರುತ್ತದೆ ಎಂದು ಉಲ್ಲೇಖಿಸಿರುವ ಯುನೈಟೆಡ್ ಸ್ಟೇಟ್ಸ್ ಪಾಕಿಸ್ತಾನಕ್ಕೆ ಸಂದೇಶವನ್ನು ರವಾನಿಸಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಸ್ಕೋ ಭೇಟಿಗೆ ಪ್ರತಿಕ್ರಿಯಿಸಿದ ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್ ಪ್ರೈಸ್, ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ತನ್ನ ನಿಲುವೇನು ಎಂಬುದನ್ನು ಅಮೆರಿಕವು ಈಗಾಗಲೇ ಪಾಕಿಸ್ತಾನಕ್ಕೆ ತಿಳಿಸಿದೆ ಎಂದಿದ್ದಾರೆ.
Recommended Video
ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಿಗದಿತ ಸಭೆಯ ಬಗ್ಗೆ ಪ್ರಶ್ನೆಗೆ ಅವರು ಉತ್ತರಿಸಿದರು. "ನಾವು ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣದ ಕುರಿತು ನಮ್ಮ ನಿಲುವನ್ನು ಪಾಕಿಸ್ತಾನಕ್ಕೆ ತಿಳಿಸಿದ್ದೇವೆ. ಯುದ್ಧದ ಮೇಲೆ ರಾಜತಾಂತ್ರಿಕತೆಯನ್ನು ಮುಂದುವರಿಸುವ ಪ್ರಯತ್ನಗಳ ಕುರಿತು ನಾವು ತಿಳಿಸಿದ್ದೇವೆ," ಎಂದಿದ್ದಾರೆ.

ವ್ಲಾಡಿಮಿರ್ ಪುಟಿನ್- ಇಮ್ರಾನ್ ಖಾನ್ ಭೇಟಿ:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿಗಾಗಿ ಮಾಸ್ಕೋಗೆ ತೆರಳಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಆರ್ಥಿಕ ಸಹಕಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು. ಪೂರ್ವ ಉಕ್ರೇನ್‌ನ ಕೆಲವು ಭಾಗಗಳಲ್ಲಿ ಮಿಲಿಟರಿ ನಿಯೋಜನೆ ಮಾಡಿದ ರಷ್ಯಾದ ಕ್ರಮವನ್ನು ಯುಎಸ್ ಸೇರಿದಂತೆ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧಿಸಿದ ಕೆಲವೇ ಗಂಟೆಗಳಲ್ಲಿ ಉಭಯ ನಾಯಕರ ಭೇಟಿ ಆಗಿದೆ. ತಾಲಿಬಾನಿ ನಿಯಂತ್ರಿತ ಅಫ್ಘಾನಿಸ್ತಾನದ ಬಗ್ಗೆ ಈ ಎರಡೂ ರಾಷ್ಟ್ರಗಳು ಒಂದೇ ರೀತಿಯ ನಿಲುವು ಹೊಂದಿರುವುದರ ಜೊತೆಗೆ ಪರಸ್ಪರ ಸಹಕಾರ ಮತ್ತು ಕಾಳಜಿಯನ್ನು ಹೊಂದಿವೆ.
ರಷ್ಯಾಗೆ ಪಾಕಿಸ್ತಾನದ ಸೂಚ್ಯ ಅನುಮೋದನೆ:
ಪೂರ್ವ ಉಕ್ರೇನ್‌ನ ಪ್ರತ್ಯೇಕತಾವಾದಿ ಪ್ರದೇಶಗಳಿಗೆ ರಷ್ಯಾದ ಪಡೆಗಳು ಪ್ರವೇಶಿಸಿದ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಮೊದಲ ವಿದೇಶಿ ನಾಯಕ ಇಮ್ರಾನ್ ಖಾನ್ ಆಗಿದ್ದಾರೆ. ಖಾನ್ ಮಾಸ್ಕೋ ಭೇಟಿ - 23 ವರ್ಷಗಳಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿಯ ಮೊದಲ ಭೇಟಿ ಆಗಿದೆ. ಉಕ್ರೇನ್ ಮೇಲೆ ರಷ್ಯಾ ಹೇರಲು ಹೊರಟಿರುವ ನಿರ್ಬಂಧಗಳಿಗೆ ಈ ಭೇಟಿಯು ಪಾಕಿಸ್ತಾನದ ಸೂಚ್ಯ ಅನುಮೋದನೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ:
ಉಕ್ರೇನ್‌ನಲ್ಲಿ ಯುದ್ಧಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ನೀಡಿದ್ದಾರೆ. ನಿರೀಕ್ಷೆಯಂತೆಯೇ ಎರಡೂ ದೇಶಗಳ ಮಧ್ಯೆ ಯುದ್ಧ ನಡೆಯಲಿದೆ. ಉಕ್ರೇನ್ ಸೇನೆಗೆ ಶರಣಾಗುವಂತೆ ಅವರು ಆಗ್ರಹಿಸಿದ್ದಾರೆ. ಇದರಿಂದ ಜಾಗತಿಕ ಮಟ್ಟದಲ್ಲಿ ಭಾರಿ ತಲ್ಲಣ ಉಂಟಾಗಿದೆ. ಈ ಯುದ್ಧವು ಜಗತ್ತಿನಾದ್ಯಂತ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ರಷ್ಯಾದೊಂದಿಗಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರವು ಮಧ್ಯ ರಾತ್ರಿಯಿಂದ ಬೆಳಗ್ಗೆ 7 ಗಂಟೆವರೆಗೆ ಪೂರ್ವ ಉಕ್ರೇನ್‌ನ ವಿಮಾನ ನಿಲ್ದಾಣಗಳನ್ನು ಮುಚ್ಚಲು ಆದೇಶಿಸಿದೆ.
ನ್ಯಾಟೋ ರಾಷ್ಟ್ರಗಳಿಗೆ ಪುಟಿನ್ ಸಂದೇಶ:
ತಮ್ಮ ಉದ್ದೇಶಗಳನ್ನು ಘೋಷಿಸಲು ಪುಟಿನ್ ಅವರು ಟಿವಿಯಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. "ನಾನು ಸೇನಾ ಕಾರ್ಯಾಚರಣೆ ನಡೆಸಲು ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಅವರು ಮಾಸ್ಕೋದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಪ್ರಕಟಣೆ ಹೊರಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಯಾರಾದರೂ ಮಧ್ಯಪ್ರವೇಶ ಮಾಡಿದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಅಮೆರಿಕ ನೇತೃತ್ವದ ನ್ಯಾಟೋ ಮಿತ್ರಕೂಟದ ದೇಶಗಳಿಗೆ ಅವರು ರವಾನಿಸುವ ಎಚ್ಚರಿಕೆಯ ಸಂದೇಶವಾಗಿದೆ.
ರಷ್ಯಾ ಕಂಪನಿ ಮೇಲೆ ಯುಎಸ್ ನಿರ್ಬಂಧ:
ಅಧ್ಯಕ್ಷ ಜೋ ಬಿಡೆನ್ ಅವರು ರಷ್ಯಾದ ನಾರ್ಡ್ ಸ್ಟ್ರೀಮ್ 2 ಗ್ಯಾಸ್ ಪೈಪ್‌ಲೈನ್ ಅನ್ನು ನಿರ್ಮಿಸುವ ಉಸ್ತುವಾರಿ ವಹಿಸಿರುವ ಕಂಪನಿಯ ಮೇಲೆ ನಿರ್ಬಂಧಗಳನ್ನು ವಿಧಿಸಲು ಮುಂದಾದರು, ಕಳೆದ ವರ್ಷ ರಾಷ್ಟ್ರೀಯ ಭದ್ರತಾ ಮನ್ನಾವನ್ನು ಬಳಸಿಕೊಂಡು ಅಂತಹ ಕ್ರಮಗಳನ್ನು ನಿರ್ಬಂಧಿಸಿದ್ದರು.
"ಇಂದು, ನಾನು ನಾರ್ಡ್ ಸ್ಟ್ರೀಮ್ 2 AG ಮತ್ತು ಅದರ ಕಾರ್ಪೊರೇಟ್ ಅಧಿಕಾರಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ನನ್ನ ಆಡಳಿತಕ್ಕೆ ನಿರ್ದೇಶನ ನೀಡಿದ್ದೇನೆ. ಇದು ಉಕ್ರೇನ್‌ನಲ್ಲಿ ರಷ್ಯಾದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ನಮ್ಮ ಆರಂಭಿಕ ನಿರ್ಬಂಧಗಳ ಮತ್ತೊಂದು ಭಾಗವಾಗಿದೆ. ನಾನು ಸ್ಪಷ್ಟಪಡಿಸಿದಂತೆ, ರಷ್ಯಾ ಬಿಕ್ಕಟ್ಟನ್ನು ಮುಂದುವರೆಸಿದರೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಹಿಂಜರಿಯುವುದಿಲ್ಲ," ಎಂದು ಬೈಡೆನ್ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಪೂರ್ವ ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿ ಪ್ರದೇಶಗಳನ್ನು ಸ್ವತಂತ್ರವೆಂದು ಪುಟಿನ್ ಗುರುತಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ವಾರ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ಮೇಲೆ ವಿಧಿಸಿದ ದಂಡಗಳ ಸರಣಿಯ ಒಂದು ಭಾಗವಾಗಿದೆ.












Click it and Unblock the Notifications