European Union: ಇರಾನ್‌ಗೆ ದೊಡ್ಡ ಆಘಾತ ನೀಡಿದ ಯುರೋಪ್ ಒಕ್ಕೂಟ, ಯುದ್ಧಕ್ಕೆ ಮೊದಲೇ ಬಿಗ್ ಶಾಕ್
ಮಧ್ಯಪ್ರಾಚ್ಯದ ಹಣೆಬರಹ ಸರಿ ಇಲ್ಲ ಅಂತಾ ಕಾಣುತ್ತದೆ, ಯಾಕಂದ್ರೆ ಪದೇ ಪದೇ ಈ ಭಾಗದಲ್ಲೇ ಯುದ್ಧಗಳು ಆರಂಭ ಆಗುತ್ತಿವೆ. ಒಂದು ಕಡೆ ಇರಾನ್ ಮತ್ತು ಅಮೆರಿಕ ಯಾವುದೇ ಕ್ಷಣದಲ್ಲಿ ಭಾರಿ ರಣಕಾಳಗ ಶುರು ಮಾಡಬಹುದು ಎಂಬ ಆತಂಕ ಆವರಿಸಿದ ಸಮಯದಲ್ಲೇ, ಒಂದೊಂದೇ ದೇಶಗಳು ಇರಾನ್ ಬೆನ್ನಿಗೆ ನಿಲ್ಲುತ್ತಿವೆ. ಇದರ ನಡುವೆ ಅಮೆರಿಕದ ಸ್ನೇಹಿತ ರಾಷ್ಟ್ರಗಳು ಇರಾನ್ ವಿರುದ್ಧ ಈಗ ತೆರಿಗೆ ಸೇರಿ ಹಲವು ನಿರ್ಬಂಧ ಹೇರುತ್ತಿವೆ. ಇಷ್ಟೆಲ್ಲದರ ನಡುವೆ ಇರಾನ್‌ಗೆ ದೊಡ್ಡ ಆಘಾತ ನೀಡಿದ ಯುರೋಪ್ ಒಕ್ಕೂಟ, ಯುದ್ಧಕ್ಕೆ ಮೊದಲೇ ಬಿಗ್ ಶಾಕ್ ಕೊಟ್ಟಿದೆ.
ಯುರೋಪಿಯನ್ ಒಕ್ಕೂಟ ದಿಢೀರ್, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಲು ಒಪ್ಪಿಗೆ ಸೂಚಿಸಿದೆ. ಇರಾನ್ ನೆಲದಲ್ಲಿ ಕೆಲ ದಿನಗಳ ಹಿಂದೆ ಭೀಕರ ಪ್ರತಿಭಟನೆ ಹಾಗೂ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರದಲ್ಲಿ ಪ್ರತಿಭಟನಾಕಾರರ ಮೇಲೆ ಅಮಾನವೀಯ ಕ್ರಮ ಕೈಗೊಂಡಿರುವ ಆರೋಪ ಕೇಳಿಬಂದಿದೆ. ಅಲ್ಲದೆ ಸುಮಾರು 6000ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

ಈ ಕಾರಣ ಮುಂದಿಟ್ಟು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಲು ಒಪ್ಪಿಗೆ ಸೂಚಿಸಲಾಗಿದೆ. ಈ ಮೂಲಕ ಒಂದು ಕಡೆ ಇರಾನ್ ಮೇಲೆ ದಾಳಿ ಮಾಡಲು ಇದೀಗ ಅಮೆರಿಕ ಸೇನೆ ಸಹಿತ ಬಂದಿದ್ದರೆ, ಇನ್ನೊಂದು ಕಡೆ ಯುರೋಪ್ ಒಕ್ಕೂಟ ಕೊಟ್ಟ ಏಟಿಗೆ ನಲುಗಿ ಹೋಗಿದೆ ಇರಾನ್. ಅಲ್ಲದೆ ಆರ್ಥಿಕವಾಗಿ ಸಾಕಷ್ಟು ಸಂಕಷ್ಟ ಎದುರಾಗಿರುವ ಸಮಯದಲ್ಲೇ ಈ ಯುದ್ಧ ಭೀತಿ ಕೂಡ ಇರಾನ್ ನೆಲವನ್ನು ಶೇಕ್ ಮಾಡುತ್ತಿದೆ.
ಇರಾನ್ ದೇಶದ ಸೇನೆಯೇ ಬ್ಯಾನ್!
ಅಂದಹಾಗೆ ಯುರೋಪ್ ಒಕ್ಕೂಟದ ವಿದೇಶಾಂಗ ಸಚಿವಾಲಯ, ಇರಾನ್ ರೆವಲ್ಯೂಷನರಿ ಗಾರ್ಡ್ ಅನ್ನ ಭಯೋತ್ಪಾದಕ ಸಂಘಟನೆ ಎಂದು ಗುರುತಿಸುವ ನಿರ್ಣಾಯಕ ಹೆಜ್ಜೆ ಇಟ್ಟಿದೆ ಎಂದು ಈಗ ತಿಳಿಸಲಾಗಿದೆ. ಅಲ್ಲದೆ ಮತ್ತೊಮ್ಮೆ ನಿಷೇಧ ಮಾಡಿರುವ ಕಾರಣದಲ್ಲಿ ರೆವಲ್ಯೂಷನರಿ ಗಾರ್ಡ್ಸ್ ತಪ್ಪು ಏನು ಎಂಬುದನ್ನ ಕೂಡ ನಮೂದಿಸಲಾಗಿದೆ. ಈ ಮೂಲಕ ಇರಾನ್‌ಗೆ ಇನ್ನಷ್ಟು ಸಂಕಷ್ಟ ಈಗ ಎದುರಾಗಿದ್ದು, ಭವಿಷ್ಯದ ಚಿಂತೆ ಶುರುವಾಗಿ ಹೋಗಿದೆ. ಇನ್ನೊಂದು ಕಡೆ ಚೀನಾ ಇದೀಗ ಇರಾನ್ ಬೆಂಬಲಕ್ಕೆ ಬಂದು ಆಶ್ಚರ್ಯ ಮೂಡುವಂತೆ ಮಾಡಿದೆ.
ಬಹಿರಂಗವಾಗಿ ಇರಾನ್ ಬೆನ್ನಿಗೆ ನಿಂತ ಚೀನಾ
ಚೀನಾ ಮೊದಲಿನಿಂದ ಕೂಡ ಇರಾನ್ ಬೆನ್ನಿಗೆ ನಿಲ್ಲುತ್ತಾ ಬಂದಿದ್ದು, ಸಂಕಷ್ಟದಲ್ಲೂ ಬೆಂಬಲ ನೀಡಿದೆ. ಇರಾನ್ ಸ್ವತಂತ್ರ ಹಾಗೂ ಸಾರ್ವಭೌಮ ರಾಷ್ಟ್ರ ಎಂದು ಚೀನಾ ಕರೆದಿದೆ. ಈ ಬಗ್ಗೆ ವಿಶ್ವಸಂಸ್ಥೆ ಚೀನಾ ರಾಯಭಾರಿ ಫು ಕಾಂಗ್ ಮಹತ್ವದ ಹೇಳಿಕೆಯನ್ನು ಇದೀಗ ನೀಡಿದ್ದಾರೆ. ಪಶ್ಚಿಮ ಏಷ್ಯಾ ಪ್ರಮುಖ ಶಕ್ತಿ ಪೈಪೋಟಿ ಪರಿಣಾಮ ಕುಸ್ತಿಯ ನೆಲ ಆಗಬಾರದು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ. ಈ ಮೂಲಕ ಅನಗತ್ಯ ಘರ್ಷಣೆಗಳು ಬೇಡ ಎಂದು ಹೇಳಿದೆ ಚೀನಾ. ಯಾವುದೇ ಮಿಲಿಟರಿ ಸಾಹಸ ಒಂದು ನಿರ್ದಿಷ್ಟ ಪ್ರದೇಶವನ್ನ ಪ್ರಪಾತಕ್ಕೆ ತಳ್ಳುತ್ತದೆ, ಎಂದು ಚೀನಾ ರಾಯಭಾರಿ ಪ್ರತಿಕ್ರಿಯೆ ನೀಡುವ ಮೂಲಕ ಪರೋಕ್ಷವಾಗಿ ಅಮೆರಿಕಗೆ ಸಂದೇಶ ರವಾನಿಸಿದ್ದಾರೆ.












Click it and Unblock the Notifications