Europe Violent Protest: ಬೆಲೆ ಏರಿಕೆ ಸಂಕಷ್ಟ: ಯುರೋಪ್ ರಣರಂಗ

87 ವರ್ಷ ವಯಸ್ಸಿನ ವೃದ್ಧೆಯನ್ನು ಸ್ಪೇನಿನ ಆಕೆಯ ಮನೆಯಿಂದ ಸ್ಟ್ರೆಚರ್ ಮೂಲಕ ಹೊರತರುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಆಕೆಯ ಮನೆ ಮಾಲೀಕ ಓರ್ವ ಹೂಡಿಕೆ ಕಂಪನಿಯನ್ನು ಹೊಂದಿದ್ದ. ಬೇರೆಯವರು ಲಾಭ ಮಾಡಿಕೊಳ್ಳುವ ಸಲುವಾಗಿ ಷೇರುಗಳನ್ನು ಖರೀದಿಸುವಂತೆ ಆತನ ಕಂಪನಿ ಮನೆಗಳನ್ನು ಖರೀದಿಸುತ್ತಿತ್ತು. ಆತನ ಕಂಪನಿ ಏಕಾಏಕಿ ವೃದ್ಧೆಯ ಮನೆ ಬಾಡಿಗೆಯನ್ನು ಬರೋಬ್ಬರಿ 230% ಹೆಚ್ಚಿಸಿತು! ಆಕೆಗೆ ಇಷ್ಟೊಂದು ಬಾಡಿಗೆ ಪಾವತಿಸುವ ಶಕ್ತಿ ಇರಲಿಲ್ಲ. ನ್ಯಾಯಾಲಯಕ್ಕೆ ತೆರಳಿದಾಗ ಅಲ್ಲೂ ವೃದ್ಧೆಗೆ ಸೋಲಾಯಿತು. ಆಕೆಯನ್ನು ಮನೆಯಿಂದ ಹೊರ ಹಾಕಿದ ಕೇವಲ ಎರಡು ವಾರಗಳ ಬಳಿಕ ಆಕೆ ಮೃತಪಟ್ಟರು.

ಈ ಒಂದು ಘಟನೆ ಸ್ಪೇನಿನಾದ್ಯಂತ ಜನರನ್ನು ಆಕ್ರೋಶಿತರಾಗಿಸಿತು. ಸ್ಪೇನ್ ಜನರು ಈಗ ಕಡಿಮೆ ಬಾಡಿಗೆ ಮತ್ತು ಮನೆಯಿಂದ ಹೊರ ಹಾಕುವುದಕ್ಕೆ ನಿಷೇಧ ಹೇರಲು ಆಗ್ರಹಿಸುತ್ತಿದ್ದು, ಇಂತಹ ಕಂಪನಿಗಳು ಮನೆಗಳನ್ನು ಖರೀದಿಸುವುದಕ್ಕೆ ಸಂಪೂರ್ಣ ನಿಷೇಧ ಹೇರುವಂತೆ ಆಗ್ರಹಿಸುತ್ತಿದ್ದಾರೆ.

Europe Violent Protests

ಮೃತ ವೃದ್ಧೆಯ ಕಥೆ ಬೆಂಕಿ ಹಬ್ಬಿಸಿದ ಹಲವು ಕಿಡಿಗಳಲ್ಲಿ ಒಂದಷ್ಟೇ. ಗಂಭೀರ ಉದ್ವಿಗ್ನತೆ ಈಗ ಯುರೋಪಿನಾದ್ಯಂತ ಹಬ್ಬುತ್ತಿದ್ದು, ಫ್ರಾನ್ಸ್, ಇಟಲಿ, ಬೆಲ್ಜಿಯಂ, ಪೋರ್ಚುಗಲ್, ಸ್ಪೇನ್ ಮತ್ತು ಅಲ್ಬೇನಿಯಾಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಜರ್ಮನಿ, ಗ್ರೀಸ್ ಮತ್ತು ಆಸ್ಟ್ರಿಯಾಗಳಲ್ಲೂ ಪ್ರತಿಭಟನೆಗಳು ಹಬ್ಬಬಹುದು ಎನ್ನುವ ಎಚ್ಚರಿಕೆ ನೀಡಲಾಗಿದೆ.

ದುಬಾರಿ ಜೀವನ ವೆಚ್ಚ, ನಿರ್ವಹಣೆ

ಮೂರು ರೀತಿಯ ಒತ್ತಡಗಳು ಜನರನ್ನು ಹೋರಾಟದ ಹಾದಿಗೆ ಇಳಿಯುವಂತೆ ಮಾಡಿವೆ. ಮೊದಲನೆಯದು ದೈನಂದಿನ ಜೀವನ ವೆಚ್ಚ. ಆಗಸ್ಟ್ 2021ರಿಂದ ಆಗಸ್ಟ್ 2026ರ ನಡುವೆ, ಯುರೋಪಿನಾದ್ಯಂತ ಆಹಾರ ಮತ್ತು ಪಾನೀಯಗಳ ಬೆಲೆ ಬಹುತೇಕ 34% ಹೆಚ್ಚಳ ಕಂಡಿದೆ. ಆದರೆ, ಅಲ್ಲಿ ಸಂಬಳಗಳು ಮಾತ್ರ ವೆಚ್ಚಕ್ಕೆ ಹೋಲಿಸಿದರೆ ಹೆಚ್ಚಾಗಿಲ್ಲ. ತಿಂಗಳು ಪೂರ್ತಿ ಕಷ್ಟಪಟ್ಟು ದುಡಿದರೂ ಬರುವ ಆದಾಯ ಮೂಲಭೂತ ಖರ್ಚುಗಳಿಗೂ ಸಾಕಾಗುತ್ತಿಲ್ಲ. ದಿನಸಿ ಬೆಲೆಯೇ ವಿಪರೀತವಾಗಿ ಹೆಚ್ಚಾದಾಗ, ವಿದ್ಯುತ್ ಬಿಲ್‌ನಿಂದ ಶಾಲಾ ಫೀಸ್‌ಗಳ ತನಕ ಎಲ್ಲವನ್ನೂ ಹೊಂದಿಸುವುದು ಕಷ್ಟಕರವಾಗುತ್ತದೆ. ಆದ್ದರಿಂದಲೇ ಪ್ರತಿಭಟನಾಕಾರರು ಈಗ ಹೆಚ್ಚಿನ ವೇತನ ಮತ್ತು ಪಿಂಚಣಿಗಾಗಿ ಆಗ್ರಹಿಸುತ್ತಿದ್ದಾರೆ.

ಇನ್ನು ಎರಡನೇ ಕಾರಣವೆಂದರೆ ಮನೆ. ಮನೆ ದರಗಳು 2017ರ ಬಳಿಕ ದುಪ್ಪಟ್ಟಾಗಿದ್ದು, ಬಾಡಿಗೆಯೂ ವಿಪರೀತವಾಗಿದೆ. ಒಂದು ಕಾಲದಲ್ಲಿ ಸ್ವಂತ ಮನೆ ಖರೀದಿಸುವುದು ಯುರೋಪಿನ ಯುವಕರಿಗೆ ಜೀವನದ ಸಹಜ ಹೆಜ್ಜೆಯಾಗಿತ್ತು. ಆದರೆ ಇಂದು ಮನೆ ಖರೀದಿ ಕೈಮೀರಿದ ಕನಸಾಗಿದೆ.

ಮೂರನೆಯ ಕಾರಣವೆಂದರೆ, ದುರ್ಬಲ ಸಾರ್ವಜನಿಕ ಸೇವೆಗಳು. ಬೆಲ್ಜಿಯಂನ ಯುವಜನರು ಹೆಚ್ಚುತ್ತಿರುವ ಶೈಕ್ಷಣಿಕ ವೆಚ್ಚದ ಕುರಿತು ಆತಂಕಿತರಾಗಿದ್ದಾರೆ. ಫ್ರಾನ್ಸ್‌ನ ಯುವಜನತೆ ತಮ್ಮ ಶಾಲಾ ಕಾಲೇಜುಗಳ ದುರವಸ್ಥೆಯ ಕುರಿತು ದೂರುತ್ತಿದ್ದಾರೆ. ಅಲ್ಬೇನಿಯಾದಲ್ಲೂ ಇದೇ ದೂರುಗಳಿವೆ. ಅವರ ಬೇಡಿಕೆ ಸರಳ: ಉತ್ತಮ ತರಗತಿಗಳು, ಸಾರ್ವಜನಿಕ ಸೇವೆಗಳು, ಮತ್ತು ಜನರ ಮಾತಿಗೆ ಕಿವಿಗೊಡುವ ಸರ್ಕಾರ.

ವಿಭಿನ್ನ ರೀತಿಯ ಪ್ರತಿಭಟನೆಗಳು

ಯುರೋಪಿನಾದ್ಯಂತ, ಈ ಸಮಾನ ಆಕ್ರೋಶವೇ ವಿಭಿನ್ನ ರೀತಿಗಳಲ್ಲಿ ಪ್ರಕಟವಾಗಿದೆ. ಕೆಲವೆಡೆ ಶಾಂತಿಯುತ ಮೆರವಣಿಗೆಗಳು ನಡೆದಿವೆ. ಇನ್ನುಳಿದ ಕಡೆಗಳಲ್ಲಿ ರಸ್ತೆ‌ ಹಿಂಸಾಚಾರಗಳ ರೂಪ ಪಡೆದಿವೆ.

ಇನ್ನು ಪೋರ್ಚುಗಲ್‌ನಲ್ಲಿ 2015ರಿಂದ 2024ರ ನಡುವೆ ಮನೆ ದರಗಳು 124% ಹೆಚ್ಚಳವಾಗಿದ್ದು, ಇದು ಯುರೋಪಿಯನ್ ಒಕ್ಕೂಟದ ಸರಾಸರಿಯ ದುಪ್ಪಟ್ಟಾಗಿದೆ. ಶನಿವಾರ, ರಾಜಧಾನಿ ಲಿಸ್ಬನ್‌ನಲ್ಲಿ ಸೇರಿದ ನೂರಾರು ಜನರು ಕೈಗೆಟುಕುವ ದರದ ಮನೆಗಳು, ಉತ್ತಮ ವೇತನ ಮತ್ತು ಉತ್ತಮ ಜೀವನಮಟ್ಟಕ್ಕಾಗಿ ಆಗ್ರಹಿಸಿದ್ದರು. ಪ್ರತಿಭಟನಾಕಾರರ ಸಂದೇಶ ಎಲ್ಲೆಡೆಯೂ ಒಂದೇ ಆಗಿದ್ದು, ಜನರಿಗೆ ತಾವು ವಾಸಿಸುವ ನಗರಗಳಲ್ಲಿ ಜೀವನ ನಡೆಸಲು ಸಾಧ್ಯವಾಗಬೇಕಿದೆ.

ಹಲವೆಡೆ ಜನಾಕ್ರೋಶ ಹಿಂಸಾಚಾರದ ರೂಪ ಪಡೆದಿದೆ. ಶನಿವಾರ ಇಟಲಿಯ ಮಿಲಾನ್ ನಗರದಲ್ಲಿ ಜೀವನ ವೆಚ್ಚದ ಕುರಿತು ನಡೆದ ಮೆರವಣಿಗೆ ದಂಗೆಯ ರೂಪ ಪಡೆಯಿತು. ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿ, ಮಳಿಗೆಗಳನ್ನು ದೋಚಿ, ಕಾರುಗಳಿಗೆ ಬೆಂಕಿ ಹಚ್ಚಿ, ಪೊಲೀಸ್ ತಡೆಗೋಡೆಗಳನ್ನು ಸುಟ್ಟುಹಾಕಿದರು. ಬಳಿಕ ದೊಂಬಿ ವಿವಿಧ ನಗರಗಳಿಗೆ ಹಬ್ಬಿದ್ದು, 28 ಜನರು ಬಂಧನಕ್ಕೊಳಗಾಗಿದ್ದಾರೆ.

ಬೆಲ್ಜಿಯಂನಲ್ಲು ಆತಂಕದ ವಾತಾವರಣ

ವಾರಾಂತ್ಯದಲ್ಲಿ ಬೆಲ್ಜಿಯಂ ಸಹ ಇಂತಹದ್ದೇ ಚಿತ್ರಣಕ್ಕೆ ಸಾಕ್ಷಿಯಾಯಿತು. ರಾಜಧಾನಿ ಬ್ರುಸೆಲ್ಸ್ ನಗರದಲ್ಲಿ, ಯುವ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲೆಸೆದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಪ್ರಯೋಗಿಸಿದರು. ಅಲ್ಲಿ ಜೀವನ ವೆಚ್ಚದ ಹೆಚ್ಚಳದೊಡನೆ, ಹೆಚ್ಚುತ್ತಿರುವ ಶೈಕ್ಷಣಿಕ ವೆಚ್ಚವೂ ಆಕ್ರೋಶಕ್ಕೆ ಕಾರಣವಾಗಿತ್ತು. ಬೆಲ್ಜಿಯಂ ಆಂತರಿಕ ಸಚಿವರಂತೂ ಇದು ಪ್ರತಿಭಟನೆಯೇ ಅಲ್ಲ, ಹಿಂಸಾಚಾರ ಎಂದಿದ್ದಾರೆ.

ಫ್ರಾನ್ಸ್ ಅತ್ಯಂತ ತೀಕ್ಷ್ಣವಾದ ಉದ್ವಿಗ್ನತೆಗಳನ್ನು ಕಂಡಿತು. ಉರಿಯುತ್ತಿದ್ದ ಫ್ರಾನ್ಸ್ ಬೀದಿಗಳು ಮತ್ತು ಹೊಡೆದಾಟಗಳು ವಿಶ್ವಾದ್ಯಂತ ಸುದ್ದಿಯಾದವು. ಬಹಳಷ್ಟು ಜನರು ಈ ಆಕ್ರೋಶ ಕೇವಲ ಫ್ರಾನ್ಸ್‌ಗೆ ಸೀಮಿತ ಎಂದುಕೊಂಡಿದ್ದರು. ಆದರೆ, ವಾಸ್ತವ ಚಿತ್ರಣ ಭಿನ್ನವಾಗಿತ್ತು.

ಅತ್ಯಂತ ತೀವ್ರ ಹೋರಾಟ ಅಲ್ಬೇನಿಯಾದಲ್ಲಿ ನಡೆದಿದೆ. ರಾಜಧಾನಿ ತಿರಾನಾದಲ್ಲಿ ಪ್ರತಿಭಟನೆಗಳು ಏಳನೇ ದಿನಕ್ಕೆ ಕಾಲಿಟ್ಟಿವೆ. ಆರಂಭದಲ್ಲಿ ಶೈಕ್ಷಣಿಕ ವೆಚ್ಚ ಮತ್ತು ವಿಶ್ವವಿದ್ಯಾಲಯಗಳ ದುಸ್ಥಿತಿಯ ವಿರುದ್ಧ ಆರಂಭಗೊಂಡಿದ್ದ ಹೋರಾಟ, ಕ್ರಮೇಣ ಸರ್ಕಾರ ವಿರೋಧಿಯಾಗಿ ಪರಿಣಮಿಸಿತು. ಭ್ರಷ್ಟಾಚಾರ, ನಿರುದ್ಯೋಗ ಮತ್ತು ಗುಣಮಟ್ಟದ ಕುಸಿತಗಳೂ ಹೋರಾಟಕ್ಕೆ ಕಾರಣಗಳಾದವು.

ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದ್ದು, ಸಾರ್ವಜನಿಕರು ಪೊಲೀಸರೊಡನೆಯೂ ಸೆಣಸಾಡಿದ್ದಾರೆ. ಸರ್ಕಾರದ ಮುಖ್ಯಸ್ಥ, ಪ್ರಧಾನಿ ಎದಿ ರಾಮಾ ರಾಜೀನಾಮೆ ನೀಡಬೇಕು ಎನ್ನುವುದು ಅವರ ಪ್ರಮುಖ ಆಗ್ರಹವಾಗಿದೆ. ಆದರೆ ಪ್ರಧಾನಿ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಇಂತಹ ಬೇಡಿಕೆಗಳೊಡನೆ ಸರ್ಕಾರ ಮಾತುಕತೆಗೆ ತೊಡಗಿದರೆ ಸರ್ಕಾರ ಕುಸಿದಿದೆ ಎಂದೇ ಅರ್ಥ ಎಂದವರು ಹೇಳಿದ್ದಾರೆ. ಅಲ್ಬೇನಿಯಾ ಹಿಂದೆಯೂ ಇಂತಹ ಉದ್ವಿಗ್ನತೆಗಳನ್ನು ಕಂಡಿದ್ದು, ಅದರಿಂದ ಚೇತರಿಸಿಕೊಳ್ಳಲು ವರ್ಷಗಳೇ ಬೇಕಾಗಿದ್ದವು.

ಪ್ರತಿಯೊಂದು ದೇಶವೂ ಅದರದೇ ಆದ ರಾಜಕಾರಣ ಮತ್ತು ನಿರ್ದಿಷ್ಟ ಬೇಡಿಕೆಗಳನ್ನು ಹೊಂದಿದೆ. ಆದರೆ, ಆಳದಲ್ಲಿರುವ ಭಾವನೆಗಳು ಬಹುತೇಕ ಒಂದೇ ಆಗಿವೆ. ಜನರ ವೆಚ್ಚ ಹೆಚ್ಚಾಗಿದ್ದು, ಆದಾಯ ಕಡಿಮೆಯಾಗಿದೆ. ಪರಿಸ್ಥಿತಿ ಇಂದಲ್ಲ ನಾಳೆ ಸುಧಾರಿಸಬಹುದು ಎಂದು ಅವರು ಬಹಳಷ್ಟು ಸಮಯ ಕಾದಿದ್ದಾರೆ. ಒಂದು ವೇಳೆ ಯುರೋಪಿಯನ್ ಸರ್ಕಾರಗಳು ಆಹಾರ ಬೆಲೆಗಳು, ಬಾಡಿಗೆ ಮತ್ತು ಸಂಬಳಗಳನ್ನು ತಕ್ಷಣವೇ ಸರಿಪಡಿಸದಿದ್ದರೆ, ಫ್ರಾನ್ಸಿನ ಹೋರಾಟ ಫ್ರಾನ್ಸ್‌ಗೆ ಮಾತ್ರವೇ ಸೀಮಿತವಾಗುವುದಿಲ್ಲ. ಫ್ರಾನ್ಸ್ ಹೋರಾಟ ಯುರೋಪಿನ ಉದ್ವಿಗ್ನತೆಯ ಆರಂಭದ ಅಧ್ಯಾಯವಷ್ಟೇ ಆಗಿರಲಿದೆ!

ಬರಹ: ಗಿರೀಶ್ ಲಿಂಗಣ್ಣ

ಗಿರೀಶ್ ಲಿಂಗಣ್ಣ -ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ (ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+