ಧಾರಾಕಾರ ಮಳೆ: ವಿಮಾನ ಹಾರಾಟ ರದ್ದು, ಶಾಲೆಗಳಿಗೆ ರಜೆ
ಏಪ್ರಿಲ್ ತಿಂಗಳಲ್ಲಿ ತೀವ್ರ ಶಾಖದ ಅಲೆಯನ್ನು ಎದುರಿಸಿದ ದುಬೈ ಸದ್ಯ ಧಾರಾಕಾರ ಮಳೆಗೆ ತತ್ತರಿಸಿದೆ. ಗುರುವಾರ (ಮೇ 2) ಮುಂಜಾನೆಯಿಂದ ಅಬುಧಾಬಿ ಮತ್ತು ದುಬೈನಲ್ಲಿ ಚಂಡಮಾರುತದೊಂದಿಗೆ ಭಾರೀ ಮಳೆ ಸುರಿಯುತ್ತಿದೆ.
ಅಧಿಕ ಮಳೆಯಿಂದಾಗಿ ಎಲ್ಲೆಡೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಮನೆ, ರಸ್ತೆ, ವಾಹನಗಳು ಜಲಾವೃತಗೊಂಡಿವೆ. ಮೊಣಕಾಲೆತ್ತರಕ್ಕೆ ನೀರು ಉಕ್ಕಿ ಹರಿಯುತ್ತಿದೆ. ಈ ಕಾರಣದಿಂದಾಗಿ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು ದುಬೈನಲ್ಲಿ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಖಲೀಜ್ ಟೈಮ್ಸ್ ಪ್ರಕಾರ, ದುಬೈಗೆ ಒಳಬರುವ ಐದು ವಿಮಾನಗಳನ್ನು ರಾತ್ರಿಯಿಡೀ ತಿರುಗಿಸಲಾಯಿತು. ಜೊತೆಗೆ ಒಂಬತ್ತು ಆಗಮನ ಮತ್ತು ನಾಲ್ಕು ಹೊರಹೋಗುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಎಮಿರೇಟ್ಸ್‌ನ ಹಲವು ವಿಮಾನಗಳನ್ನೂ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ದುಬೈನ ಹಲವು ಸ್ಥಳಗಳು ಜಲಾವೃತ
ಬೆಳಗಿನ ಜಾವ 4 ಗಂಟೆ ಸುಮಾರಿಗೆ ದೇಶದ ಬಹುತೇಕ ಭಾಗಗಳಲ್ಲಿ ಮಳೆಯ ಮೋಡ ಆವರಿಸಿತ್ತು. ಹೀಗಾಗಿ ದೇಶದ ಹವಾಮಾನ ಇಲಾಖೆ ಅಂಬರ್ ದಾರಕಾರಾ ಮಳೆಯ ಅಲರ್ಟ್ ಘೋಷಿಸಿತ್ತು. ಆದರೆ ನಿರೀಕ್ಷೆಗೂ ಮೀರಿದ ಮಳೆಯಾಗುತ್ತಿರುವುದರಿಂದ ದುಬೈನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೇ ಹವಾಮಾನ ಮೇ 3ರವರೆಗೆ ದೇಶದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಹೀಗಾಗಿ ಜನರು ತಮ್ಮ ಮನೆಗಳಲ್ಲಿ ಇರುವಂತೆ ಇಲಾಖೆ ಮನವಿ ಮಾಡಿದೆ.
ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಲಹೆ
ಸ್ಥಳೀಯ ಮಾಧ್ಯಮಗಳ ಪ್ರಕಾರ, ಅಬುಧಾಬಿಯ ಕೆಲವು ಭಾಗಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಜೆಬೆಲ್ ಅಲಿ, ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದುಬೈ ಇಂಡಸ್ಟ್ರಿಯಲ್ ಸಿಟಿ, ದುಬೈ ಇನ್ವೆಸ್ಟ್‌ಮೆಂಟ್ ಪಾರ್ಕ್ ಮತ್ತು ಜುಮೇರಾ ವಿಲೇಜ್ ಟ್ರಯಾಂಗಲ್‌ನಲ್ಲಿ ಬಲವಾದ ಗಾಳಿ ಬೀಸುತ್ತಿದೆ.
ಬುಧವಾರ ದುಬೈ ವಿಮಾನ ನಿಲ್ದಾಣಗಳು ಮತ್ತು ಎರಡು ಸ್ಥಳೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಈ ಬಗ್ಗೆ ಸಲಹೆಗಳನ್ನು ನೀಡಿವೆ. ಇದರಲ್ಲಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೊದಲು ಪ್ರಯಾಯಾಣಿಕರು ವಿಳಂಬದ ಬಗ್ಗೆ ಗಮನಿಸಬೇಕು ಎಂದು ಹೇಳಲಾಗಿದೆ.
ಶಾಲಾ ಕಾಲೇಜುಗಳಿಗೆ ರಜೆ
ದುಬೈನಲ್ಲಿ ಮಳೆ ಪ್ರವಾಹದಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ದುಬೈನಲ್ಲಿ ಮನೆಯಿಂದ ಕೆಲಸ ಮಾಡಲು ಮತ್ತು ದೂರಶಿಕ್ಷಣ ಅಥವಾ ಆನ್‌ಲೈನ್ ಕಲಿಕೆಗೆ ಸೂಚಿಸಲಾಗಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
ಅಬುಧಾಬಿಯಲ್ಲಿ ಕೆಲವು ಸೂಪರ್‌ಮಾರ್ಕೆಟ್‌ಗಳು ಮತ್ತು ರೆಸ್ಟೋರೆಂಟ್‌ಗಳು ಉತ್ಪನ್ನದ ಕೊರತೆಯನ್ನು ಎದುರಿಸುತ್ತಿವೆ, ಅವುಗಳಿಗೆ ದುಬೈನಿಂದ ವಿತರಣೆಗಳನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಏಪ್ರಿಲ್ ತಿಂಗಳಲ್ಲಿ ಅಧಿಕ ಮಳೆ
ಕಳೆದ ಏಪ್ರಿಲ್ ತಿಂಗಳಲ್ಲೂ ದುಬೈನಲ್ಲಿ ಅಧಿಕ ಮಳೆಯಾಗಿದೆ. ಏಪ್ರಿಲ್ 17ರಂದು ಸುರಿದ ಮಳೆಯ ತೀವ್ರತೆಗೆ ರಸ್ತೆಗಳಿಂದ ಹಿಡಿದು ವಿಮಾನ ನಿಲ್ದಾಣಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿದ್ದವು. ಮೆಟ್ರೋ ನಿಲ್ದಾಣ, ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ಅಬುಧಾಬಿ, ದುಬೈ ಮತ್ತು ಅಲ್ ಐನ್‌ನಂತಹ ನಗರಗಳಲ್ಲಿ ಅಧಿಕ ಮಳೆಗೆ ಜನ ತತ್ತರಿಸಿ ಹೋಗಿದ್ದರು. ಕಳೆದ ತಿಂಗಳು ಕಣ್ಣಾಯಿಸಿದಲೆಲ್ಲ ಪ್ರವಾಹದಂತಹ ಪರಿಸ್ಥಿತಿಗಳು ಕಾಣಿಸಿಕೊಂಡಿತ್ತು. ಹಲವು ಪ್ರಮುಖ ಹೆದ್ದಾರಿಗಳು ಮತ್ತು ವಿಮಾನ ನಿಲ್ದಾಣಗಳು ಜಲಾವೃತಗೊಂಡು ವಾಹನ ಸಂಚಾರ ಹಾಗೂ ವಿಮಾನಗಳ ಹಾರಾಟಕ್ಕೂ ತೊಂದರೆಯಾಗಿತ್ತು. ನೆರೆಯ ಒಮಾನ್ ಕೂಡ ಭಾರೀ ಮಳೆಯಿಂದಾಗಿ ಪ್ರವಾಹವನ್ನು ಅನುಭವಿಸಿತ್ತು. ನಗರದ ರಸ್ತೆಗಳೆಲ್ಲವೂ ನದಿಗಳಂತಾಗಿದ್ದವು.
ಏಪ್ರಿಲ್‌ನಲ್ಲಿ ವರುಣನ ಮುನಿಸಿಗೆ 18ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ದುಬೈನಲ್ಲಿ ಎರಡು ದಿನ ಸುರಿದ ಮಳೆಗೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಸ್ಥಗಿತಗೊಂಡು ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುವಂತಾಗಿತ್ತು. ಏಪ್ರಿಲ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 120 ಮಿಮೀ.ಗೂ ಹೆಚ್ಚು ಮಳೆ ದಾಖಲಾಗಿದೆ.
ಬಳಿಕ ಕೊಂಚ ವಿರಾಮ ಪಡೆದಿದ್ದ ಮಳೆ ಸದ್ಯ ಮತ್ತೆ ದುಬೈಯನ್ನು ಮಳೆನೀರಿನಿಂದ ಮುಳುಗಿಸಿ ಬಿಟ್ಟಿದೆ. ಮನೆ, ರಸ್ತೆಗಳು, ವಿಮಾನ ನಿಲ್ದಾಣಗಳಲ್ಲೂ ನೀರು ಹೊಕ್ಕು ಜನ ಪರದಾಡುವಂತಾಗಿದೆ.












Click it and Unblock the Notifications