Donald Trump: ಭಾರತದ ವಿರುದ್ದ ಡೊನಾಲ್ಡ್ ಟ್ರಂಪ್ ತೆರಿಗೆ ಯುದ್ದ, ಭವಿಷ್ಯದಲ್ಲಿ ಭಾರಿ ಸಂಕಷ್ಟ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಳ್ಳುತ್ತಿರುವ ನಿರ್ಧಾರಗಳು ಸಾಕಷ್ಟು ದೊಡ್ಡ, ದೊಡ್ಡ ಪರಿಣಾಮ ಬೀರುತ್ತಿವೆ. ಅದರಲ್ಲೂ ಭಾರತದ ವಿರುದ್ಧ ಡೊನಾಲ್ಡ್ ಟ್ರಂಪ್ ಇದೀಗ ತೆರಿಗೆ ಯುದ್ಧವನ್ನೇ ಸಾರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಭಾರತ ರಫ್ತು ಮಾಡುವ ವಸ್ತುಗಳ ವಿರುದ್ಧ ಅತಿಹೆಚ್ಚು ಪ್ರಮಾಣದ ತೆರಿಗೆ ಹೇರಿಕೆ ಮಾಡುತ್ತಿರುವ ಅಮೆರಿಕದ ಟ್ರಂಪ್ ಸರ್ಕಾರ, ಅದೇ ಭಾರತಕ್ಕೆ ಕಳುಹಿಸುವ ವಸ್ತುಗಳ ಮೇಲೆ ಕಡಿಮೆ ತೆರಿಗೆ ಹಾಕಿ ಎಂಬ ದೊಡ್ಡ ಡಿಮ್ಯಾಂಡ್ ಇಡುತ್ತಿದೆ.
ಅಮೆರಿಕ & ಭಾರತದ ನಡುವೆ ಲಕ್ಷ ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದ್ದು, ಈ ಮೂಲಕ ಎರಡೂ ದೇಶಗಳು ಅತ್ಯಂತ ಗಟ್ಟಿಯಾದ ವ್ಯಾಪಾರ ಸಂಬಂಧವನ್ನು ಹೊಂದಿದ್ದವು. ಆದರೆ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರ ಚೇರ್ ಮೇಲೆ ಕುಳಿತ ನಂತರ ಮನಸ್ಸಿಗೆ ಬಂದ ರೀತಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬ ಆರೋಪ ಇದೆ. ಹೀಗಾಗಿ ಭಾರತದ ವಿರುದ್ಧ ಈಗ ಅತಿಹೆಚ್ಚು ತೆರಿಗೆ ಹೇರಿಕೆ ಮಾಡುತ್ತಿರುವ ಆಕ್ರೋಶ ಮೊಳಗಿದೆ. ಹೀಗಿದ್ದಾಗಲೇ ಅಮೆರಿಕ & ಭಾರತದ ನಡುವಿನ ವ್ಯಾಪಾರ ಭವಿಷ್ಯದ ಮೇಲೆ ಇದೀಗ ಮಂಕು ಕವಿದಿದೆ.

ಭಾರತದ ವಿರುದ್ಧ ಮುನಿಸು ಏಕೆ?
ಕೆನಡಾ, ಯುರೋಪ್, ಮೆಕ್ಸಿಕೋ, ಚೀನಾ ನಂತರ ಭಾರತದ ವಿರುದ್ಧ ಕೂಡ ತೆರಿಗೆ ಯುದ್ಧ ಸಾರಿದ್ದರು ಡೊನಾಲ್ಡ್ ಟ್ರಂಪ್. ಈ ವಿಚಾರ ಕೇಳಿ ಈಗಾಗಲೇ ಕೆನಡಾ, ಯುರೋಪ್ & ಚೀನಾ ಸರಿಯಾಗಿ ತಿರುಗೇಟು ನೀಡಿವೆ. ಹೀಗಾಗಿ ಸೈಲೆಂಟ್ ಆಗಿರುವ ಡೊನಾಲ್ಡ್ ಟ್ರಂಪ್ ಹೊಸ ರಾಗ ಶುರು ಮಾಡಿದ್ದಾರೆ. ಆದರೆ ಭಾರತದ ವಿರುದ್ಧ ಮಾತ್ರ ತಮ್ಮ ವರಸೆ ಬದಲಿಸದ ಅಮೆರಿಕ ಅಧ್ಯಕ್ಷ, ಹೆಚ್ಚಿನ ತೆರಿಗೆ ಮೂಲಕ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಭಾರತ ಸರ್ಕಾರ ಕೂಡ ಅಮೆರಿಕದ ನೂತನ ತೆರಿಗೆ ನೀತಿ ಬಗ್ಗೆ ಅಸಮಾಧಾನ ಹೊಂದಿದ್ದು, ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಭವಿಷ್ಯದಲ್ಲಿ ಭಾರತ & ಅಮೆರಿಕದ ನಡುವಿನ ಸಂಬಂಧ ಇದೇ ವಿಚಾರಕ್ಕೆ ಹಳಸಿ ಹೋಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಹಾಗೇ ಮತ್ತೊಂದು ಕಡೆ ರಷ್ಯಾ ಜೊತೆಗೆ ಕೈಜೋಡಿಸಲು ಇದು ಸರಿಯಾದ ಸಮಯ ಎಂಬ ಸಲಹೆ ಕೂಡ ಕೇಳಿ ಬಂದಿದೆ.
ಸಾಮಾನ್ಯ ಜನರಿಗೆ ತೆರಿಗೆ ಭಾರ?
ಒಟ್ನಲ್ಲಿ ಡೊನಾಲ್ಡ್ ಟ್ರಂಪ್‌ರ ನಿರ್ಧಾರಗಳ ವಿರುದ್ಧ ಇಡೀ ಜಗತ್ತೇ ರೊಚ್ಚಿಗೆದ್ದು ಕೂತಿದ್ದು, ಮುಂದಿನ ದಿನಗಳಲ್ಲಿ ಎರಡೂ ಕಡೆ ತೆರಿಗೆ ಯುದ್ಧ ಶುರುವಾದರೆ ಅದರಿಂದ ಬೆಲೆ ಪ್ರಮಾಣ ಏರಿಕೆ ಕಾಣಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಹೀಗೆ ಬೆಲೆ ಏರಿಕೆ ಪರಿಣಾಮ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಲಿದ್ದು, ಅಮೆರಿಕದ ಸರ್ಕಾರ ಇದನ್ನು ಪರಿಗಣಿಸಲಿ ಎನ್ನುತ್ತಿದೆ ಅಂತಾರಾಷ್ಟ್ರೀಯ ಸಮುದಾಯ.












Click it and Unblock the Notifications