Ukraine War: ಪುಟಿನ್ ಮನೆ ಮೇಲೆ ಉಕ್ರೇನ್ ದಾಳಿ ಆರೋಪ, ರೊಚ್ಚಿಗೆದ್ದ ಅಮೆರಿಕ ಅಧ್ಯಕ್ಷರು!
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಬಿರುಗಾಳಿ ಭುಗಿಲೆದ್ದು, ಎರಡೂ ದೇಶಗಳ ಮತ್ತಷ್ಟು ದಾಳಿಗೆ ಮುಂದಾಗಿವೆ. ಹೀಗಿದ್ದಾಗ ನೇರವಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮನೆ ಮೇಲೆಯೇ ದಾಳಿ ಮಾಡಿರುವ ಉಕ್ರೇನ್ ಹೊಸ ಆತಂಕ ಹುಟ್ಟುಹಾಕಿತ್ತು. ಈಗಾಗಲೇ ಕೈಮೀರಿ ಹೋಗಿರುವ ಈ ಯುದ್ಧವನ್ನು ಕಂಟ್ರೋಲ್ ಮಾಡಲು ಒದ್ದಾಡುವ ಸಮಯದಲ್ಲೇ ಉಕ್ರೇನ್ ನಡೆಸಿದ ದಾಳಿಗೆ ಅಮೆರಿಕ ಖಂಡನೆ ವ್ಯಕ್ತಪಡಿಸಿದೆ. ಇದರ ಜೊತೆಗೆ ಪುಟಿನ್ ಮನೆ ಮೇಲೆ ಉಕ್ರೇನ್ ದಾಳಿ ಆರೋಪ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿರುವುದು ಏನು ಗೊತ್ತೆ?
ಅಷ್ಟಕ್ಕೂ ಇಲ್ಲಿ ನಡೆದಿರುವುದು ಏನು ಎಂದರೆ, ಉತ್ತರ ರಷ್ಯಾದ ಪುಟಿನ್ ಅವರ ಮನೆಯ ಮೇಲೆ ಡ್ರೋನ್ ಮೂಲಕ ದಾಳಿ ಮಾಡಲಾಗಿತ್ತು. ಆದರೆ ಈ ದಾಳಿಯಲ್ಲಿ ಉಕ್ರೇನ್ ಪಾತ್ರ ಇದ್ದು, ಈ ರೀತಿಯಾಗಿ ದಾಳಿ ಮಾಡುವ ಮೂಲಕ ಯುದ್ಧದ ಕಿಚ್ಚಿಗೆ ಪೆಟ್ರೋಲ್ ಸುರಿದಿದೆ ಉಕ್ರೇನ್ ಎನ್ನುವ ಆರೋಪ ಮಾಡಲಾಗಿದೆ. ಅಲ್ಲದೆ ರಷ್ಯಾ ಮತ್ತು ಉಕ್ರೇನ್ ನಡುವೆ ಸಂಧಾನ ಮಾಡಿಸಲು ಒಂದು ಕಡೆ ಅಮೆರಿಕ ಪರದಾಡುತ್ತಿರುವ ಸಮಯದಲ್ಲೇ ಇಂತಹ ಘಟನೆ ನಡೆದಿದ್ದು ಭಾರಿ ಚರ್ಚೆಗೆ ಕೂಡ ವೇದಿಕೆ ಒದಗಿಸಿದೆ. ಇದೇ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಕೂಡ ಉಕ್ರೇನ್ ನಡೆ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.

ಉಕ್ರೇನ್ ನಡೆಗೆ ಟ್ರಂಪ್ ಆಕ್ರೋಶ
ಕೆಲವು ದಿನಗಳ ಹಿಂದಷ್ಟೇ ಪುಟಿನ್ ಅವರಿಗೆ ಮರಣ ನೀಡು ಎಂದು ಪ್ರಾರ್ಥಿಸಲು ಪರೋಕ್ಷವಾಗಿ ಉಕ್ರೇನ್ ಜನರಿಗೆ ಅಲ್ಲಿನ ಅಧ್ಯಕ್ಷ ಝೆಲೆನ್ಸ್ಕಿ ಒತ್ತಾಯ ಮಾಡಿದ್ದರು ಎಂಬ ಆರೋಪ ಕೇಳಿಬಂದು ತಲ್ಲಣ ಎಬ್ಬಿಸಿತ್ತು. ಈ ಘಟನೆ ಬೆನ್ನಲ್ಲೇ ದಿಢೀರ್ ಪುಟಿನ್ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಈ ಬಗ್ಗೆ ಪ್ರಕ್ರಿಯೆ ನೀಡಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ದಾಳಿ ಮಾಡಲು ಪ್ರಯತ್ನಿಸಿದೆ ಎಂದು ಆರೋಪ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್ ಅವರು, ನನಗೆ ಅದು ಇಷ್ಟವಿಲ್ಲ & ಇದು ಒಳ್ಳೆಯದೂ ಅಲ್ಲ ಎಂದಿದ್ದಾರೆ. ಹಾಗೇ ರಷ್ಯಾದ ಅಧ್ಯಕ್ಷ ಪುಟಿನ್ ಅವರಿಂದ ನಾನು ಈ ಬಗ್ಗೆ ತಿಳಿದುಕೊಂಡೆ. ನಾನು ಅದರ ಬಗ್ಗೆ ತುಂಬಾ ಕೋಪಗೊಂಡಿದ್ದೆ ಎಂದಿದ್ದಾರೆ ಡೊನಾಲ್ಡ್ ಟ್ರಂಪ್. ಈ ರೀತಿ ಅಮೆರಿಕ ಉಲ್ಟಾ ಹೊಡೆದಿರುವುದು ಸಹಜವಾಗಿ ಉಕ್ರೇನ್‌ಗೆ ಭಯ ತರಿಸಿದೆ.
ಯುದ್ಧ ನಿಲ್ಲಿಸುವ ವಿಚಾರ ಪ್ರಸ್ತಾಪ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಾತನ್ನು ಮುಂದುವರಿಸಿ, ಇದು ಅತ್ಯಂತ ಸೂಕ್ಷ್ಮ ಸಮಯ. ಆಕ್ರಮಣಕಾರಿ ರೀತಿ ವರ್ತನೆ ತೋರಿಸುವುದು ಸರಿ ಅಲ್ಲ ಎನ್ನುವ ಮೂಲಕ ಉಕ್ರೇನ್ ನಡೆಗೆ ಟ್ರಂಪ್ ಅವರು ಬೇಸರ ಹೊರ ಹಾಕಿದ್ದಾರೆ. ಇಷ್ಟೆಲ್ಲದರ ನಡುವೆಯೇ ಟ್ರಂಪ್ ಖುದ್ದು ಕರೆ ಮಾಡಿ ರಷ್ಯಾ ಅಧ್ಯಕ್ಷ ಪುಟಿನ್ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ನಮ್ಮ ಎದುರು ಮುಳ್ಳಿನಂತಹ ಸಮಸ್ಯೆಗಳು ಇವೆ ಎಂದು ಹೇಳುವ ಮೂಲಕ ಡೊನಾಲ್ಡ್ ಟ್ರಂಪ್ ಅವರು ಇದೀಗ ಉಕ್ರೇನ್ ಯುದ್ಧ ನಿಲ್ಲಿಸುವ ವಿಚಾರ ಪ್ರಸ್ತಾಪ ಮಾಡಿದ್ದಾರೆ.












Click it and Unblock the Notifications