Chandrayaan-3: ತಾಳಿದವನು ಬಾಳಿಯಾನು.. ಅವಸರವೇ ಅಪಾಯಕ್ಕೆ ಕಾರಣ!
ಜಗತ್ತು ವೈಜ್ಞಾನಿಕ ಲೋಕದಲ್ಲಿ ಬೆಳೆದಂತೆಲ್ಲ ಮನುಷ್ಯರ ಜೀವನ ಕೂಡ ಬದಲಾಗುತ್ತಿದೆ. ಅದ್ರಲ್ಲೂ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆ ಮನುಷ್ಯರಿಗೆ ಹೊಸ ಭವಿಷ್ಯದ ಜೊತೆ ಹೊಸ ಭೂಮಿ ಹುಡುಕಲು ಸಹಾಯ ಮಾಡುತ್ತಿದೆ. ನಿನ್ನೆ ಬಾಹ್ಯಾಕಾಶ ಲೋಕದ ವಿಜ್ಞಾನಿಗಳು ಕಂಬನಿ ಮಿಡಿದಿದ್ದರು, ರಷ್ಯಾದ 'ಲುನಾ-25' ಮೂನ್ ಲ್ಯಾಂಡರ್ ಛಿದ್ರವಾಗಿದ್ದೆ ಇದಕ್ಕೆ ಕಾರಣವಾಗಿತ್ತು. ಆದರೆ ಒಂದು ಸೋಲು ಮಾನವರಿಗೆ ಹಿನ್ನಡೆ ತಂದಿದ್ದು ಹೇಗೆ? ಮಾಹಿತಿ ಇಲ್ಲಿದೆ.
ಅತ್ತ ಭಾರತದ 'ಚಂದ್ರಯಾನ-3' ಒಂದೊಂದೇ ಮೆಟ್ಟಿಲುಗಳನ್ನ ಏರುತ್ತಾ ತನ್ನ ಗುರಿಯ ಕಡೆಗೆ ಪ್ರಯಾಣ ನಡೆಸಿದೆ. ಆದರೆ ಭಾರತಕ್ಕಿಂತ ಸುಮಾರು ಒಂದು ತಿಂಗಳು ತಡವಾಗಿಯೇ ನೌಕೆ ಉಡಾಯಿಸಿದರೂ ರಷ್ಯಾ ಭಾರತಕ್ಕಿಂತ ಮೊದಲು ಲ್ಯಾಂಡರ್ ಇಳಿಸಲು ಸಜ್ಜಾಗಿತ್ತು. ಕೊನೇ ಹಂತಕ್ಕೆ ಬಂದಿದ್ದ ರಷ್ಯಾ ಯೋಜನೆ ದಿಢೀರ್ ಛಿದ್ರ ಛಿದ್ರವಾಗಿದೆ. ರಷ್ಯಾಗೆ ಮಾತ್ರ ಈ ಸೋಲು ಚಿಂತೆ ತರಿಸಿಲ್ಲ, ಜೊತೆಯಲ್ಲೇ ಬಾಹ್ಯಾಕಾಶ ಲೋಕಕ್ಕೆ ಬೇಸರ ಮೂಡಿಸಿದೆ. ಹಾಗಾದ್ರೆ ರಷ್ಯಾ ಚಂದ್ರನ ಮೇಲೆ ಕಾಲಿಡಲು ಸೋತಿದ್ದು ನಮಗೆ ಹೇಗೆ ನಷ್ಟ ಮಾಡುತ್ತೆ? ಬನ್ನಿ ತಿಳಿಯೋಣ.

ಚಂದ್ರನ ಮೇಲೆ ನೀರು ಹುಡುಕುವ ಸರ್ಕಸ್
ರಷ್ಯಾ 'ಲುನಾ-25' ಮೂಲಕ ಮನುಷ್ಯರ ಭವಿಷ್ಯ ರೂಪಿಸುವ ಯೋಜನೆಗೆ ಸಜ್ಜಾಗಿತ್ತು. ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ ಇಳಿಸಿ ಸುಮಾರು 15 ಸೆಂಟಿಮೀಟರ್ ಆಳಕ್ಕೆ ಅಗೆದು, ಚಂದ್ರನ ದಕ್ಷಿಣ ಭಾಗದಲ್ಲಿ ಇರುವ ನೀರನ್ನು ಹುಡುಕಲು ಮುಂದಾಗಿತ್ತು. ಆದ್ರೆ ಎಲ್ಲವೂ ಅಂದುಕೊಂಡ ರೀತಿಯೇ ನಡೆದು, ಇನ್ನೇನು ಲ್ಯಾಂಡರ್ ಇಳಿಸುವ ಸಂದರ್ಭಕ್ಕೆ ಆಘಾತ ಎದುರಾಗಿತ್ತು. ಬರೋಬ್ಬರಿ 50 ವರ್ಷ ಬಳಿಕ ರಷ್ಯ ಚಂದ್ರನ ಅಧ್ಯಯನಕ್ಕೆ ಅಂತಾ ಲುನಾ-25 ಕಳುಹಿಸಿತ್ತು. ಆದರೆ ಕೊನೆಗೂ ಯಶಸ್ಸು ಸಿಗಲಿಲ್ಲ, ಇದರ ಜೊತೆಗೆ ಭವಿಷ್ಯ ರೂಪಿಸಬಹುದಾಗಿದ್ದ ಯೋಜನೆ ಸೋಲು ಕಂಡು ಮನುಷ್ಯರಿಗೆ ನಷ್ಟವಾಗಿದೆ.
ರಷ್ಯಾ ಗೆದ್ದಿದ್ದರೆ ಮನುಷ್ಯರಿಗೆ ಅನುಕೂಲ
ಈಗಿರುವ ಮಾಹಿತಿ ಪ್ರಕಾರ ರಷ್ಯಾ ತನ್ನ ಯೋಜನೆಯಲ್ಲಿ ಸಕ್ಸಸ್ ಆಗಿದ್ದರೆ, 'ಲುನಾ-25' ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಬಹುದಿತ್ತು. ಹೇಗೆಂದರೆ ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿ ಮನುಷ್ಯರನ್ನ ಅಧ್ಯಯನಕ್ಕೆ ಕಳುಹಿಸಲು ಸಾಕಷ್ಟು ಅಡೆತಡೆ ಇದೆ. ಅದ್ರಲ್ಲೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನೀರು ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯೂ ದೊಡ್ಡ ಸಮಸ್ಯೆಯಾಗಿದೆ. ನೂರಾರು ಕೋಟಿ ಖರ್ಚು ಮಾಡಿ ವಿಜ್ಞಾನಿಗಳಿಗೆ ಆಕಾಶದಲ್ಲಿ ಊಟ, ನೀರು, ತಿಂಡಿ ಕಳಿಸಬೇಕಿದೆ.
ಪರಿಸ್ಥಿತಿ ಹೀಗಿದ್ದಾಗ ರಷ್ಯಾ ಬಾಹ್ಯಾಕಾಶ ಯೋಜನೆಯಾದ ಲುನಾ-25 ಯಶಸ್ವಿಯಾಗಿದ್ದರೆ ಗಗನಯಾನ ಕೈಗೊಳ್ಳುವ ವಿಜ್ಞಾನಿಗಳಿಗೆ ಚಂದ್ರನ ಮೂಲಕ ನೀರು ಪೂರೈಸುವ ಚಿಂತನೆ ನಡೆದಿತ್ತು. ಹಾಗೇ ಮನುಷ್ಯರನ್ನ ಚಂದ್ರನ ಮೇಲೆ ಕಳುಹಿಸಿ ಅಧ್ಯಯನ ನಡೆಸಲು ಕೂಡ ಯೋಜಿಸಲಾಗಿತ್ತು. ಆದರೆ ಎಲ್ಲಾ ಬುಡಮೇಲಾಗಿ ಹೋಗಿದೆ. ತಾಂತ್ರಿಕ ಸಮಸ್ಯೆ ಕಾರಣ ಈ ರೀತಿ ರಷ್ಯಾ ಲ್ಯಾಂಡರ್ ಕ್ರಾಷ್ ಆಗಿದೆ ಎನ್ನಲಾಗಿದೆ. ಇಲ್ಲಿ ತನಕ ನಿಖರವಾದ ಕಾರಣ ಮಾತ್ರ ತಿಳಿದುಬಂದಿಲ್ಲ, ತನಿಖೆ ನಡೆಯುತ್ತಿದೆ.

ಮೈನಸ್ 230 ಡಿಗ್ರಿ ಉಷ್ಣಾಂಶ!
ವಿಜ್ಞಾನಿಗಳಿಗೆ ಕುತೂಹಲ ಕೆರಳಿಸಿರುವ ಚಂದ್ರನ ಭಾಗವೆಂದರೆ ಅದು ದಕ್ಷಿಣ ಧ್ರುವ ಮಾತ್ರ. ಏಕೆಂದರೆ ಚಂದ್ರನ ದಕ್ಷಿಣ ಧ್ರುವ ವಿಸ್ಮಯಗಳ ಖಜಾನೆ ಇದ್ದಂತೆ. ಈ ಭಾಗದಲ್ಲಿ ಉಷ್ಣಾಂಶ ಮೈನಸ್ 230 ಡಿಗ್ರಿಗಿಂತ ಕಡಿಮೆ ಇದೆ. ಬೆಳಕನ್ನೇ ಕಾಣದ ಎಷ್ಟೊಂದು ಪ್ರದೇಶಗಳು ಇಲ್ಲಿವೆ. ಚಂದ್ರಯಾನ-1 ಯೋಜನೆ ಚಂದ್ರನ ಮೇಲೆ ನೀರಿದೆ ಎಂದು ಮೊದಲ ಬಾರಿ ತಿಳಿಸಿತ್ತು. ಹೀಗೆ ಭಾರತ 2008ರಲ್ಲಿ ಚಂದ್ರನ ಮೇಲೆ ನೀರು ಕಂಡುಹಿಡಿದ ನಂತರ, ಜಗತ್ತಿನ ಬಾಹ್ಯಾಕಾಶ ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಆರಂಭಿಸಲು ಯೋಜನೆ ರೂಪಿಸಿ ಸಿದ್ಧತೆ ನಡೆಸುತ್ತಿದ್ದಾರೆ. ಇದೀಗ ಭಾರತ ಕೂಡ ದಕ್ಷಿಣ ಧ್ರುವದಲ್ಲೇ ವಿಕ್ರಮ್ ಲ್ಯಾಂಡರ್ ಇಳಿಸಲು ತೀರ್ಮಾನಿಸಿದೆ. ಆದರೆ ರಷ್ಯಾ ಸೋಲು ಬೇಸರ ಮೂಡಿಸಿದೆ.
ಚಂದ್ರನ ಸಮೀಪಕ್ಕೆ ಭಾರತದ ಲ್ಯಾಂಡರ್
ಈಗ ಭಾರತದ ವಿಕ್ರಮ್ ಲ್ಯಾಂಡರ್ ಚಂದ್ರನಿಗೆ ಅತ್ಯಂತ ಸಮೀಪ ಇರುವ 134 ಕಿಮೀ ದೂರದ ಕಕ್ಷೆ ತಲುಪಿದೆ. ಇಲ್ಲಿಂದ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡಿಂಗ್‌ಗೆ ಇಸ್ರೋ ಪ್ರಯತ್ನಿಸಲಿದೆ. 25 ಕಿಲೋ ಮೀಟರ್ x 134 ಕಿಲೋ ಮೀಟರ್ ಕಕ್ಷೆ ಚಂದ್ರನ ಅತಿ ಸಮೀಪದ ಕಕ್ಷೆಯಾಗಿದ್ದು ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆಗಸ್ಟ್ 23ರಂದು ನಡೆಯಲಿದೆ. ಹೀಗೆ ಜಗತ್ತು ಭಾರತದ ಕಡೆ ಕಣ್ಣಿಟ್ಟು ಕಾಯುತ್ತಿದೆ. ಇದೇ ಸಂದರ್ಭದಲ್ಲಿ ರಷ್ಯಾಗೆ ಶಾಕ್ ಸಿಕ್ಕಿರುವುದು ಬಾಹ್ಯಾಕಾಶ ಲೋಕಕ್ಕೆ ಬೇಸರ ತರಿಸಿದೆ. ಆದರೂ ರಷ್ಯಾ ಇದನ್ನ ಸ್ಪರ್ಧಾತ್ಮಕವಾಗಿ ಸ್ವೀಕರಿಸಿದ್ದು, ಅಲ್ಲಿ ಸೋಲಿಗೆ ಕಾರಣ ಏನು ಎಂಬ ಹುಡುಕಾಟದಲ್ಲಿದೆ.
ಮತ್ತೊಮ್ಮೆ ಪುಟಿದೇಳಲು ರಷ್ಯಾ ಸಜ್ಜು
ಭಾರತ ಮತ್ತು ರಷ್ಯಾ ಸಂಬಂಧ ಚೆನ್ನಾಗೇ ಇದೆ. ಮುಂದೆಯೂ ರಷ್ಯಾ ಜೊತೆಗೆ ಭಾರತದ ಸಂಬಂಧ ಹೀಗೆಯೇ ಮುಂದುವರಿಯಲಿದೆ. ಹೀಗಾಗಿ ರಷ್ಯಾ ಮತ್ತು ಭಾರತ ಚಂದ್ರಯಾನ ಮೂಲಕ ಜಿದ್ದಿಗೆ ಬಿದ್ದಿರಲಿಲ್ಲ. ರಷ್ಯಾ ಈ ಮೊದಲೇ ಪ್ಲ್ಯಾನ್ ಮಾಡಿದ್ದಂತೆ ತನ್ನ ನೌಕೆ ಉಡಾಯಿಸಿತ್ತು. ಆದರೆ ಲ್ಯಾಂಡರ್ ಸೋಲು ಕಂಡಿರುವುದು ಸಹಜವಾಗಿ ರಷ್ಯಾ ವಿಜ್ಞಾನಿ ಬಳಗಕ್ಕೆ ಆಘಾತ ನೀಡಿದೆ. ಹೀಗಾಗಿ ಜಗತ್ತು ಕೂಡ ರಷ್ಯಾ ವಿಜ್ಞಾನಿಗಳಿಗೆ ಸಮಾಧಾನದ ಪಾಠ ಹೇಳಿದ್ದು, ಮತ್ತೊಮ್ಮೆ ಪುಟಿದೇಳಲು ರಷ್ಯಾ ಸಜ್ಜಾಗಿದೆ.

ಚಂದ್ರನ ಮೇಲೆ ಲ್ಯಾಂಡಿಂಗ್ ಹೇಗೆ?
ಈ ಬಾರಿ ಇಸ್ರೋ ಅಂತ್ಯಾಧುನಿಕ ತಂತ್ರಜ್ಞಾನ ಬಳಸಿ ಚಂದ್ರನ ಯೋಜನೆಗೆ ಸಿದ್ಧತೆ ನಡೆಸಿತ್ತು. ಹೀಗಾಗಿ 'ಚಂದ್ರಯಾನ-3' ಲ್ಯಾಂಡರ್ ಹೈಫೈ ಆಗಿದೆ. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೂಡ ಅತ್ಯಾಧುನಿಕ ತಂತ್ರಜ್ಞಾನವೇ ಆಗಿದೆ. ಇದು ವಿಕ್ರಮ್ ಲ್ಯಾಂಡರ್ ತನಗಾಗಿ ಸರಿಯಾದ ಮತ್ತು ಸಮತಟ್ಟು ಲ್ಯಾಂಡಿಂಗ್ ಸ್ಥಳ ಹುಡುಕಲು ಸಹಾಯ ಮಾಡುತ್ತೆ. ಕ್ಯಾಮೆರಾದ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಎಲ್ಲಿ ಇಳಿಯುತ್ತಿದೆ? ಹೇಗೆ ಇಳಿಯುತ್ತಿದೆ? ಅನ್ನೋದನ್ನ ಸಂಪೂರ್ಣವಾಗಿ ಭೂಮಿಯಿಂದ ವೀಕ್ಷಣೆ ಮಾಡಬಹುದು.
ಕಳೆದ ಬಾರಿ ಭಾರತ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗಲೆ ಸ್ವಲ್ಪ ಎಡವಟ್ಟಾಗಿತ್ತು. ಹೀಗೆ ಸಣ್ಣ ಸಮಸ್ಯೆ ಇಡೀ ಯೋಜನೆ ಹಾಳು ಮಾಡಿತ್ತು. ಇದೇ ಕಾರಣಕ್ಕೆ ಎಚ್ಚರಿಕೆ ವಹಿಸಲಾಗಿದ್ದು, ಲ್ಯಾಂಡರ್ ಇಳಿಸುವ ಪ್ರತಿಕ್ಷಣ ಇಸ್ರೋಗೆ ಗೊತ್ತಾಗಲಿದೆ. ಈ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೆಲಸವು ಏನೆಂದರೆ ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸುತ್ತೆ. ಹಾಗೂ ಲ್ಯಾಂಡರ್‌ನ ಅಪಾಯ ಪತ್ತೆ ಮತ್ತು ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿದೆ. ಜೊತೆಗೆ ಲೇಸರ್ ಆಲ್ಟಿಮೀಟರ್ (LASA), ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಈ ಪೇಲೋಡ್ ಒಟ್ಟಿಗೆ ಕೆಲಸ ಮಾಡುತ್ತದೆ. ಇನ್ನು 2 ದಿನದಲ್ಲಿ ಶತಕೋಟಿ ಭಾರತೀಯರ ಕನಸು ನನಸಾಗಲಿದೆ.












Click it and Unblock the Notifications