ಪಾಕಿಸ್ತಾನದ ಮೇಲೆ ಹಿಡಿತ ಸಾಧಿಸಿತಾ ಪಾಕ್ ಮಿಲಿಟರಿ?
ಭಾರತದ ನೆರೆ ದೇಶ ಪಾಕಿಸ್ತಾನದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೀಗ ಮತ್ತೆ ಸಾಕ್ಷಿ ಸಿಕ್ಕಿದೆ. ಮೊದಲೇ ಆರ್ಥಿಕವಾಗಿ ಬೀದಿಗೆ ಬಿದ್ದು ನರಳುತ್ತಿರುವ ಪಾಕಿಸ್ತಾನದ ಮೇಲೆ ಅಲ್ಲಿನ ಸೇನೆ ಹಿಡಿತ ಸಾಧಿಸುತ್ತಿದೆಯಾ? ಎಂಬ ಅನುಮಾನ ಮೂಡಿದೆ. ಏಕೆಂದರೆ ಪಾಕಿಸ್ತಾನ ಆರ್ಥಿಕತೆ ಸರಿ ಮಾಡುವ ನೆಪದಲ್ಲಿ ಖುದ್ದು ಪಾಕ್ ಸೇನೆ ಮುಖ್ಯಸ್ಥರೇ ಎಂಟ್ರಿ ಕೊಟ್ಟಿದ್ದಾರೆ. ಹಾಗಾದರೆ ಪಾಕಿಸ್ತಾನದಲ್ಲಿ ಮತ್ತೆ ಸೇನಾ ಆಡಳಿತ ಬರುತ್ತಿದೆಯಾ?
ಪಾಕಿಸ್ತಾನದಲ್ಲಿ ಈಗ ಜನರು ಆರಿಸಿ ಕಳಿಸಿರುವ ಸರ್ಕಾರ ಅಸ್ತಿತ್ವದಲ್ಲಿ ಇಲ್ಲ. ಪಾಕಿಸ್ತಾನದ ಸಂಸತ್ ವಿಸರ್ಜನೆಯಾಗಿ ಹಂಗಾಮಿ ಸರ್ಕಾರ ಅಸ್ತಿತ್ವದಲ್ಲಿ ಇದೆ. ಆದರೆ ಆರ್ಥಿಕ ಸಂಕಷ್ಟ ಪಾಕಿಸ್ತಾನದ ಪರಿಸ್ಥಿತಿಯನ್ನ ಬೀದಿಗೆ ತಳ್ಳಿದೆ. ಇದೀಗ ದಿಢೀರ್ ಪಾಕ್ ಸೇನೆ ಮಧ್ಯ ಪ್ರವೇಶ ಮಾಡಿದೆ. ಪಾಕ್‌ನ ಸೇನಾ ಮುಖ್ಯಸ್ಥ ಜನರಲ್ ಆಸಿಫ್ ಮುನೀರ್ ಉದ್ದಿಮೆ ವಲಯ ಹಾಗೂ ಹಣಕಾಸು ಕ್ಷೇತ್ರದ ತಜ್ಞರ ಜೊತೆಗೆ ಸಭೆ ನಡೆಸಿದ್ದಾರೆ. ಹೀಗೆ ಆರ್ಥಿಕತೆ ನೆಪ ಹಾಕಿಕೊಂಡು ಮತ್ತೊಮ್ಮೆ ಪಾಕಿಸ್ತಾನ ಮಿಲಿಟರಿ ಆಡಳಿತದ ಮುಷ್ಠಿಗೆ ಸಿಲುಕುತ್ತಿದೆಯಾ? ಮುಂದೆ ಓದಿ.

ಪಾಕಿಸ್ತಾನ ಸೇನೆ ಪ್ಲ್ಯಾನ್ ಏನು?
ದಿಢೀರ್ ಮೀಟಿಂಗ್ ಮಾಡಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಆಸಿಫ್ ಮುನೀರ್, ವಿವಿಧ ವಲಯಗಳ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಇದರ ಜೊತೆಗೆ ವಿದೇಶಿ ಬಂಡವಾಳ ತರುವ ವಿಚಾರ ಸೇರಿ ಹಲವು ಅಂಶದ ಬಗ್ಗೆ ಪಾಕ್‌ನ ಸರ್ಕಾರ ಕೈಗೊಳ್ಳಬೇಕಾದ ಕ್ರಮವನ್ನು ಪರಿಶೀಲಿಸಿದ್ದಾರೆ. ಹಾಗೇ ಪಾಕಿಸ್ತಾನದ ಆರ್ಥಿಕತೆ ಸರಿ ಮಾಡಲು ಇನ್ನೊಂದು ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿರುವ ಪಾಕ್‌ನ ಸೇನಾ ಮುಖ್ಯಸ್ಥ ಜನರಲ್ ಆಸಿಫ್ ಮುನೀರ್ ಸಾಲ ಹೇಗೆ ತರುವುದು? ಎಂಬುದನ್ನ ಹೇಳಿ ಕೊಟ್ಟಿದ್ದಾರಂತೆ!
ಹೌದು, ಈಗಾಗಲೇ ಪಾಕಿಸ್ತಾನ ಜಗತ್ತಿನ ಹಲವು ದೇಶಗಳ ಬಳಿ ಸಾಲ ಪಡೆದಿದೆ. ಅದರಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳ ಬಳಿ ಕೂಡ ಬೇಡಿ ಬೇಡಿ ಸಾಲ ಪಡೆದಿದೆ. ಇದೀಗ ಸೌದಿ ಅರೇಬಿಯಾ ಕಡೆಯಿಂದ 25 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ನೆರವು ಸಿಗುವ ಬಗ್ಗೆ ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸಿಫ್ ಮುನೀರ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಜನ ರೊಚ್ಚಿಗೆದ್ದು ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹೀಗೆ ಪ್ರತಿಭಟನೆಗಳು ಭುಗಿಲೆದ್ದ ಬಳಿಕ ಜನರಲ್ ಆಸಿಫ್ ಮುನೀರ್ ಮಹತ್ವದ ಸಭೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

300 ರೂಪಾಯಿ ಗಡಿ ದಾಟಿದೆ ಪೆಟ್ರೋಲ್
ಆರ್ಥಿಕವಾಗಿ ಬೀದಿ ಪಾಲಾಗಿ ನರಳುತ್ತಿರುವ ಪಾಕ್‌ನಲ್ಲಿ ಬಡ ಜನರ ಬದುಕು ನಿತ್ರಾಣವಾಗಿದೆ. ದಿನನಿತ್ಯ ಬೇಕಾಗಿರುವ ವಸ್ತುಗಳು ಕೈಗೆ ಸಿಗ್ತಿಲ್ಲ. ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪಾಕ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ & ಡೀಸೆಲ್ ಬೆಲೆ 300 ರೂಪಾಯಿ ಗಡಿ ದಾಟಿದೆ. ಇದು ಪಾಕಿಸ್ತಾನದ ಸಾಮಾನ್ಯ ಜನರಿಗೆ ಚಳಿ ಜ್ವರ ಬರಿಸಿದೆ. ಕೈಯಲ್ಲಿ ಕಾಸು ಇಲ್ಲದೆ ಅಲ್ಲಿನ ಜನ ಕನಿಷ್ಠ ಜೀವನ ನಡೆಸಲು ಪರದಾಡುತ್ತಿದ್ದಾರೆ. ಹೀಗಿದ್ದಾಗ ಪೆಟ್ರೋಲ್ & ಡೀಸೆಲ್ ಬೆಲೆಯನ್ನ ಭಾರಿ ಏರಿಕೆ ಮಾಡಿ ಜನರನ್ನ ಮತ್ತಷ್ಟು ರೊಚ್ಚಿಗೆಬ್ಬಿಸಿದೆ ಪಾಕಿಸ್ತಾನ ಸರ್ಕಾರ.
ದಿಢೀರ್ ಬೆಲೆ ಹೆಚ್ಚಿಸಿದ ಸರ್ಕಾರ
ಆರ್ಥಿಕ ಶಿಸ್ತು ಇಲ್ಲದೆ ಪಾಕಿಸ್ತಾನ ಈಗ ಒದ್ದಾಡುತ್ತಿದೆ. ಹೀಗೆ ಅಲ್ಲಿನ ಸರ್ಕಾರ ಸಾಮಾನ್ಯ ಜನರ ಮೇಲೆ ಸಾಲ ಹೊರೆ ಹಾಕಲು ಪರೋಕ್ಷವಾಗಿ ಮುಂದಾಗಿದೆ. ಪಾಕ್ ಸರ್ಕಾರ ಮೊನ್ನೆ ದಿಢೀರ್ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ಮಾಡಿದೆ. ದಿಢೀರ್ ಲೀಟರ್ ಪೆಟ್ರೋಲ್ ಬೆಲೆ 14.91 ರೂಪಾಯಿ & ಹೈ ಸ್ಪೀಡ್ ಡೀಸೆಲ್ ಬೆಲೆ ಲೀಟರ್‌ಗೆ 18 ರೂಪಾಯಿ ಹೆಚ್ಚಳ ಮಾಡಿತ್ತು. ಪಾಕ್ ಹಣಕಾಸು ಸಚಿವಾಲಯ ಈ ಆದೇಶ ಹೊರಡಿಸಿತ್ತು. ಹೀಗೆ ಜನರ ಮೇಲೆ ಹೊರೆ ಹೇರುತ್ತಿದ್ದ ಸರ್ಕಾರದ ವಿರುದ್ಧ ಜನರು ರೊಚ್ಚಿಗೆದ್ದು ಪ್ರತಿಭಟನೆ ಆರಂಭಿಸಿದ್ದಾರೆ.












Click it and Unblock the Notifications