Deadliest Pandemics: ಭಾರತ ಸೇರಿ ವಿಶ್ವದ ಇತಿಹಾಸದಲ್ಲಿ ಅತೀ ಹೆಚ್ಚು ಜನರನ್ನು ಬಲಿ ಪಡೆದ ಮಹಾಮಾರಿಗಳು! ಇವು

ಮಾನವ ಇತಿಹಾಸದಲ್ಲಿ ಯುದ್ಧಗಳು, ಬರಗಾಲಗಳು ಮತ್ತು ಪ್ರಕೃತಿ ವಿಕೋಪಗಳು ಕೋಟ್ಯಂತರ ಜನರ ಬದುಕನ್ನು ಬದಲಿಸಿವೆ. ಆದರೆ ಕಣ್ಣಿಗೆ ಕಾಣದ ವೈರಸ್, ಬ್ಯಾಕ್ಟೀರಿಯಾ ಮತ್ತು ಇತರ ರೋಗಕಾರಕಗಳು ಕೂಡ ಇಡೀ ನಾಗರಿಕತೆಗಳ ದಿಕ್ಕನ್ನೇ ಬದಲಿಸಿದ ಉದಾಹರಣೆಗಳಿವೆ. ನಮಗೆ ಗೊತ್ತಿರುವುದು ಕೋವಿಡ್ 19 ಒಂದೇ. ಯಾಕೆಂದರೆ ನಾವು ನೋಡಿದ್ದು ಅದನ್ನು ಮಾತ್ರ. ಆದರೆ ಅದಕ್ಕಿಂತಲೂ ಭಯಂಕರವಾದ ರೀತಿಯಲ್ಲಿ ಜನರನ್ನು ಬಲಿ ಪಡೆದ ಮಾರಿಗಳಿವೆ.

ಒಂದು ಸಣ್ಣ ಸೋಂಕು ಕೆಲವೇ ದಿನಗಳಲ್ಲಿ ಸಾವಿರಾರು ಜನರಿಗೆ ಹರಡುತ್ತಿತ್ತು. ವೈದ್ಯಕೀಯ ಸೌಲಭ್ಯಗಳು ಇಲ್ಲದ ಕಾಲದಲ್ಲಿ ಇಂತಹ ರೋಗಗಳನ್ನು ತಡೆಯುವುದು ಬಹುತೇಕ ಅಸಾಧ್ಯವಾಗಿತ್ತು. ಕೆಲವು ಮಹಾಮಾರಿಗಳು ನಗರಗಳನ್ನೇ ಖಾಲಿ ಮಾಡಿದ್ದರೆ, ಇನ್ನೂ ಕೆಲವು ಸಾಮ್ರಾಜ್ಯಗಳ ಆರ್ಥಿಕತೆ ಮತ್ತು ರಾಜಕೀಯ ವ್ಯವಸ್ಥೆಯನ್ನೇ ದುರ್ಬಲಗೊಳಿಸಿದವು. ಇತಿಹಾಸದಲ್ಲಿ ಅತಿ ಹೆಚ್ಚು ಸಾವುಗಳಿಗೆ ಕಾರಣವಾದ ಕೆಲವು ಭೀಕರ ರೋಗಗಳು ಇಲ್ಲಿವೆ.

Deadliest Pandemics in History

1. ಕಾಲರಾ ಮಹಾಮಾರಿ

1846ರಿಂದ 1860ರ ಅವಧಿಯಲ್ಲಿ ಕಾಲರಾ ಹಲವು ದೇಶಗಳಿಗೆ ವ್ಯಾಪಿಸಿತು. ಈ ಅವಧಿಯಲ್ಲಿ ಕನಿಷ್ಠ 10 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಕಲುಷಿತ ನೀರಿನ ಮೂಲಕ ಕಾಲರಾ ಹರಡುತ್ತಿತ್ತು. ನಗರಗಳಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆ ಸೋಂಕು ವೇಗವಾಗಿ ಹರಡಲು ಪ್ರಮುಖ ಕಾರಣವಾಗಿತ್ತು. ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ಉತ್ತರ ಅಮೆರಿಕದ ಹಲವು ಭಾಗಗಳು ಇದರ ಪರಿಣಾಮಕ್ಕೆ ಒಳಗಾದವು.

2. ಬ್ಯೂಬೋನಿಕ್ ಪ್ಲೇಗ್

ಬ್ಯೂಬೋನಿಕ್ ಪ್ಲೇಗ್ ಇತಿಹಾಸದಲ್ಲಿ ಹಲವು ಬಾರಿ ದೊಡ್ಡ ಮಟ್ಟದ ಸಾವುಗಳಿಗೆ ಕಾರಣವಾಗಿದೆ. 1629ರಿಂದ 1631ರವರೆಗೆ ಇಟಲಿಯ ಹಲವು ನಗರ-ರಾಜ್ಯಗಳಲ್ಲಿ ಹರಡಿದ ಪ್ಲೇಗ್ ಸುಮಾರು 10 ಲಕ್ಷ ಜನರನ್ನು ಬಲಿ ಪಡೆಯಿತು. ಇದು ಮುಖ್ಯವಾಗಿ ಸೋಂಕಿತ ಇಲಿಗಳು ಮತ್ತು ಅವುಗಳ ಮೇಲೆ ಇರುವ ಚಿಗಟಗಳ ಮೂಲಕ ಹರಡುತ್ತಿತ್ತು.

3. 1889ರ ಏಷ್ಯಾಟಿಕ್ ಫ್ಲೂ

1889ರಲ್ಲಿ ಜಗತ್ತಿನಾದ್ಯಂತ ಹರಡಿದ ಈ ಸಾಂಕ್ರಾಮಿಕ ರೋಗದಿಂದ ಸುಮಾರು 10 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಆ ಕಾಲದಲ್ಲಿ ರೈಲು ಮತ್ತು ಹಡಗುಗಳಂತಹ ವೇಗದ ಸಾರಿಗೆ ವ್ಯವಸ್ಥೆಗಳು ಅಭಿವೃದ್ಧಿಯಾಗಿದ್ದವು. ಇದರಿಂದ ಜನರ ಸಂಚಾರ ಹೆಚ್ಚಾಗಿ, ರೋಗವೂ ಬೇಗನೆ ವಿವಿಧ ದೇಶಗಳಿಗೆ ಹರಡಿತು.

4. ನೇಪಲ್ಸ್ ಪ್ಲೇಗ್

1656ರಿಂದ 1658ರವರೆಗೆ ದಕ್ಷಿಣ ಇಟಲಿಯಲ್ಲಿ ಬ್ಯೂಬೋನಿಕ್ ಪ್ಲೇಗ್ ಭೀಕರವಾಗಿ ಹರಡಿತು. ಸುಮಾರು 12.5 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ನೇಪಲ್ಸ್ ನಗರವೊಂದರಲ್ಲೇ ಸುಮಾರು 2 ಲಕ್ಷ ಜನರು ಸಾವನ್ನಪ್ಪಿದರು. ಜನಸಂಖ್ಯೆಯ ದಟ್ಟಣೆ ಮತ್ತು ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗದ ಪರಿಸ್ಥಿತಿ ಈ ದುರಂತವನ್ನು ಇನ್ನಷ್ಟು ಗಂಭೀರಗೊಳಿಸಿತು.

5. ಜಪಾನ್‌ನ ಸ್ಮಾಲ್‌ಪಾಕ್ಸ್

ಕ್ರಿ.ಶ. 8ನೇ ಶತಮಾನದಲ್ಲಿ ಸ್ಮಾಲ್‌ಪಾಕ್ಸ್ ಜಪಾನ್‌ನಲ್ಲಿ ಭೀಕರ ಪರಿಣಾಮ ಬೀರಿತು. ಸುಮಾರು 20 ಲಕ್ಷ ಜನರು ಮೃತಪಟ್ಟಿದ್ದು, ಅದು ಅಂದಿನ ಜಪಾನ್‌ನ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗವಾಗಿತ್ತು ಎಂದು ಅಂದಾಜಿಸಲಾಗಿದೆ. ಈ ಮಹಾಮಾರಿಯಿಂದ ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೂ ದೊಡ್ಡ ಪರಿಣಾಮ ಉಂಟಾಯಿತು.

6. ಪರ್ಷಿಯನ್ ಪ್ಲೇಗ್

1772ರಲ್ಲಿ ಇಂದಿನ ಇರಾನ್ ಪ್ರದೇಶದಲ್ಲಿ ಮತ್ತೊಂದು ಬ್ಯೂಬೋನಿಕ್ ಪ್ಲೇಗ್ ಹರಡಿತು. ಸುಮಾರು 20 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ವ್ಯಾಪಾರ ಮತ್ತು ಯಾತ್ರೆಗಳ ಮೂಲಕ ರೋಗ ವೇಗವಾಗಿ ಹರಡಿತು. ಮಹಾಮಾರಿಯ ಅತ್ಯಂತ ಭೀಕರ ಸಮಯದಲ್ಲಿ ದಿನಕ್ಕೆ ಸುಮಾರು ಸಾವಿರ ಸಾವುಗಳು ಸಂಭವಿಸಿದ್ದವು ಎಂಬ ಅಂದಾಜುಗಳಿವೆ.

7. 1576ರ ಕಕೊಲಿಜ್ಟ್ಲಿ ಮಹಾಮಾರಿ

1576ರಿಂದ 1580ರವರೆಗೆ ಮೆಕ್ಸಿಕೊದಲ್ಲಿ ಹರಡಿದ ಕಕೊಲಿಜ್ಟ್ಲಿ ಮಹಾಮಾರಿ ಸುಮಾರು 20ರಿಂದ 25 ಲಕ್ಷ ಜನರನ್ನು ಬಲಿ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಅರ್ಧದಷ್ಟು ಜನಸಂಖ್ಯೆಯೇ ನಾಶವಾಗಿತ್ತು. ಈ ರೋಗಕ್ಕೆ ಕಾರಣವಾದ ನಿಖರ ರೋಗಕಾರಕ ಯಾವುದು ಎಂಬುದು ಇಂದಿಗೂ ಸಂಪೂರ್ಣವಾಗಿ ಖಚಿತವಾಗಿಲ್ಲ.

8. ರಷ್ಯಾದ ಟೈಫಸ್ ಮಹಾಮಾರಿ

1918ರಿಂದ 1922ರವರೆಗೆ ರಷ್ಯಾದಲ್ಲಿ ಟೈಫಸ್ ಭೀಕರವಾಗಿ ಹರಡಿತು. ಸುಮಾರು 20ರಿಂದ 30 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಮೊದಲ ವಿಶ್ವಯುದ್ಧ ಮತ್ತು ರಷ್ಯಾದ ನಾಗರಿಕ ಯುದ್ಧದ ಕಾರಣ ಲಕ್ಷಾಂತರ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರು. ಇದರಿಂದ ಸೋಂಕು ಮತ್ತಷ್ಟು ವೇಗವಾಗಿ ಹರಡಿತು.

9. ಹಾಂಕಾಂಗ್ ಫ್ಲೂ

1968ರಲ್ಲಿ ಎಎಚ್3ಎನ್2 ಎಂಬ ಇನ್‌ಫ್ಲುಯೆನ್ಸಾ ವೈರಸ್‌ನಿಂದ ಹಾಂಕಾಂಗ್ ಫ್ಲೂ ಮಹಾಮಾರಿ ಆರಂಭವಾಯಿತು. ಜಗತ್ತಿನಾದ್ಯಂತ ಸುಮಾರು 10ರಿಂದ 40 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಆಗಿದ್ದರೂ, ದೊಡ್ಡ ಸಂಖ್ಯೆಯ ರೋಗಿಗಳನ್ನು ನೋಡಿಕೊಳ್ಳುವಲ್ಲಿ ಆಸ್ಪತ್ರೆಗಳಿಗೆ ಭಾರಿ ಒತ್ತಡ ಎದುರಾಯಿತು.

10. 1957ರ ಏಷ್ಯನ್ ಫ್ಲೂ

1957ರಲ್ಲಿ ಹರಡಿದ ಈ ಮಹಾಮಾರಿಗೆ ಇನ್‌ಫ್ಲುಯೆಂಜಾ ಎಎಚ್2ಎನ್2 ವೈರಸ್ ಕಾರಣವಾಗಿತ್ತು. ಜಗತ್ತಿನಾದ್ಯಂತ ಸುಮಾರು 10ರಿಂದ 40 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಶಾಲೆಗಳು, ಸೇನಾ ಶಿಬಿರಗಳು ಮತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳಿಂದ ಸೋಂಕು ವೇಗವಾಗಿ ಹರಡಿತು. ಈ ಮಹಾಮಾರಿಯ ನಂತರ ಲಸಿಕೆ ಅಭಿವೃದ್ಧಿ ಮತ್ತು ಜಾಗತಿಕ ರೋಗ ನಿಗಾ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಯಿತು.

11. ಮೆಕ್ಸಿಕೊದ ಸ್ಮಾಲ್‌ಪಾಕ್ಸ್ ಮಹಾಮಾರಿ

1500ರ ದಶಕದ ಆರಂಭದಲ್ಲಿ ಸ್ಪ್ಯಾನಿಷ್‌ರ ಆಗಮನದ ನಂತರ ಮೆಕ್ಸಿಕೊದಲ್ಲಿ ಸ್ಮಾಲ್‌ಪಾಕ್ಸ್ ವೇಗವಾಗಿ ಹರಡಿತು. ಸುಮಾರು 50ರಿಂದ 80 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಅಂದಿನ ಜನಸಂಖ್ಯೆಯ ಸುಮಾರು ಶೇ.23ರಿಂದ 37ರಷ್ಟು ಜನರನ್ನು ಈ ರೋಗ ಬಲಿ ಪಡೆದಿರಬಹುದು. ಹೊಸ ರೋಗಕಾರಕವೊಂದು ರೋಗನಿರೋಧಕ ಶಕ್ತಿ ಇಲ್ಲದ ಜನಸಮುದಾಯಕ್ಕೆ ಪ್ರವೇಶಿಸಿದಾಗ ಎಂತಹ ದೊಡ್ಡ ದುರಂತ ಸಂಭವಿಸಬಹುದು ಎಂಬುದಕ್ಕೆ ಇದು ಪ್ರಮುಖ ಉದಾಹರಣೆಯಾಗಿದೆ.

12. ಆಂಟೊನೈನ್ ಪ್ಲೇಗ್

ಕ್ರಿ.ಶ. 165ರಿಂದ 180ರವರೆಗೆ ರೋಮನ್ ಸಾಮ್ರಾಜ್ಯದಲ್ಲಿ ಭೀಕರ ರೋಗ ಹರಡಿತು. ಇದನ್ನು ಸಾಮಾನ್ಯವಾಗಿ ಆಂಟೊನೈನ್ ಪ್ಲೇಗ್ ಎಂದು ಕರೆಯಲಾಗುತ್ತದೆ. ಇದು ಸ್ಮಾಲ್‌ಪಾಕ್ಸ್ ಅಥವಾ ಮೀಸಲ್ಸ್ ಆಗಿರಬಹುದು ಎಂದು ಇತಿಹಾಸಕಾರರು ಮತ್ತು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಸುಮಾರು 50ರಿಂದ 1 ಕೋಟಿ ಜನರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಸೈನಿಕರು, ರೈತರು ಮತ್ತು ಸಾಮಾನ್ಯ ಜನರ ಮೇಲೆ ರೋಗದ ಪರಿಣಾಮ ಬೀರಿದ್ದರಿಂದ ರೋಮನ್ ಸಾಮ್ರಾಜ್ಯದ ಸೇನೆ ಮತ್ತು ಆರ್ಥಿಕ ವ್ಯವಸ್ಥೆಯೂ ದುರ್ಬಲವಾಯಿತು.

13. 1545ರ ಕಕೊಲಿಜ್ಟ್ಲಿ ಮಹಾಮಾರಿ

1545ರಿಂದ 1548ರವರೆಗೆ ಮೆಕ್ಸಿಕೊದಲ್ಲಿ ಸಂಭವಿಸಿದ ಕಕೊಲಿಜ್ಟ್ಲಿ ಮಹಾಮಾರಿ ಇನ್ನೂ ಭೀಕರವಾಗಿತ್ತು. ಸುಮಾರು 50ರಿಂದ 150 ಲಕ್ಷ ಜನರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಶೇ.80ರಷ್ಟು ಜನಸಂಖ್ಯೆ ನಾಶವಾಗಿರಬಹುದು. ಬಲವಂತದ ದುಡಿಮೆ, ಅಪೌಷ್ಟಿಕತೆ ಮತ್ತು ತೀವ್ರ ಬರಗಾಲದಂತಹ ಪರಿಸ್ಥಿತಿಗಳು ಜನರನ್ನು ರೋಗಕ್ಕೆ ಹೆಚ್ಚು ತುತ್ತಾಗುವಂತೆ ಮಾಡಿದ್ದವು.

14. ಮೂರನೇ ಪ್ಲೇಗ್ ಮಹಾಮಾರಿ

1855ರಲ್ಲಿ ಆರಂಭವಾದ ಮೂರನೇ ಪ್ಲೇಗ್ ಮಹಾಮಾರಿ ಹಲವು ದೇಶಗಳಲ್ಲಿ ಹರಡುತ್ತಾ ಸುಮಾರು 1960ರವರೆಗೆ ಮುಂದುವರಿಯಿತು. ಈ ಅವಧಿಯಲ್ಲಿ ಸುಮಾರು 1.2ರಿಂದ 1.5 ಕೋಟಿ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಜಾಗತಿಕ ವ್ಯಾಪಾರದ ಮೂಲಕ ಪ್ಲೇಗ್ ಹಲವು ದೇಶಗಳಿಗೆ ತಲುಪಿತು. ನಂತರ ವಿಜ್ಞಾನಿಗಳು ಈ ರೋಗಕ್ಕೆ ಯೆರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾ ಕಾರಣ ಎಂದು ಗುರುತಿಸಿದರು. ಇಲಿಗಳ ನಿಯಂತ್ರಣ, ಬಂದರುಗಳಲ್ಲಿ ತಪಾಸಣೆ ಮತ್ತು ಸೋಂಕಿತ ಪ್ರದೇಶಗಳಲ್ಲಿ ಕ್ವಾರಂಟೈನ್ ಮುಂತಾದ ಕ್ರಮಗಳು ಜಾರಿಗೆ ಬಂದವು.

15. ಕೋವಿಡ್-19 ಮಹಾಮಾರಿ

2019ರ ಕೊನೆಯಲ್ಲಿ ಆರಂಭವಾದ ಕೋವಿಡ್-19 ಮಹಾಮಾರಿ ಕೆಲವೇ ತಿಂಗಳಲ್ಲಿ ಜಗತ್ತಿನ ಬಹುತೇಕ ದೇಶಗಳಿಗೆ ಹರಡಿತು. ಅಧಿಕೃತ ದಾಖಲೆಗಳ ಪ್ರಕಾರ ಜಗತ್ತಿನಾದ್ಯಂತ 71 ಲಕ್ಷ ಜನರು ಮೃತಪಟ್ಟಿರುವ ಅಂದಾಜು ಇದೆ. ಈ ಮಹಾಮಾರಿ ಆಧುನಿಕ ಜಗತ್ತಿನ ಆರೋಗ್ಯ ವ್ಯವಸ್ಥೆಯ ಮೇಲಿರುವ ಒತ್ತಡವನ್ನು ಸ್ಪಷ್ಟವಾಗಿ ತೋರಿಸಿತು. ಲಸಿಕೆ ಲಭ್ಯತೆ, ವಯಸ್ಸು, ಆರೋಗ್ಯ ಸ್ಥಿತಿ ಮತ್ತು ದೇಶದಿಂದ ದೇಶಕ್ಕೆ ಬದಲಾಗಿದ್ದ ವೈದ್ಯಕೀಯ ಸೌಲಭ್ಯಗಳು ಸಾವಿನ ಪ್ರಮಾಣದ ಮೇಲೆ ಪರಿಣಾಮ ಬೀರಿದವು.

16. ಬ್ಲ್ಯಾಕ್ ಡೆತ್

1346ರಿಂದ 1353ರವರೆಗೆ ಯುರೋಪ್, ಏಷ್ಯಾ ಮತ್ತು ಉತ್ತರ ಆಫ್ರಿಕಾದಲ್ಲಿ ಹರಡಿದ ಬ್ಲ್ಯಾಕ್ ಡೆತ್ ಮಾನವ ಇತಿಹಾಸದ ಅತ್ಯಂತ ಭೀಕರ ಮಹಾಮಾರಿಗಳಲ್ಲಿ ಒಂದು. ಬ್ಯೂಬೋನಿಕ್ ಪ್ಲೇಗ್‌ನಿಂದ ಉಂಟಾದ ಈ ಮಹಾಮಾರಿಯಲ್ಲಿ ಸುಮಾರು 2.5ರಿಂದ 5 ಕೋಟಿ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಯುರೋಪಿನ ಜನಸಂಖ್ಯೆಯ ಸುಮಾರು ಶೇ.30ರಿಂದ 60ರಷ್ಟು ಜನರನ್ನು ಇದು ಬಲಿ ಪಡೆದಿರಬಹುದು. ಇದರ ಪರಿಣಾಮವಾಗಿ ಕಾರ್ಮಿಕರ ಕೊರತೆ ಉಂಟಾಯಿತು. ಆರ್ಥಿಕ ವ್ಯವಸ್ಥೆ, ಕೃಷಿ, ವ್ಯಾಪಾರ ಮತ್ತು ಸಾಮಾಜಿಕ ಸಂಬಂಧಗಳಲ್ಲೂ ದೊಡ್ಡ ಬದಲಾವಣೆಗಳು ಸಂಭವಿಸಿದವು.

17. ಎಚ್‌ಐವಿ/ ಏಡ್ಸ್

1981ರಿಂದ ಜಗತ್ತಿನಲ್ಲಿ ಗುರುತಿಸಲ್ಪಟ್ಟ ಎಚ್‌ಐವಿ/ ಏಡ್‌ಸ್ ಮಹಾಮಾರಿ ಇಂದಿಗೂ ಮುಂದುವರಿದಿದೆ. 2025ರ ಅಂತ್ಯದ ವೇಳೆಗೆ ಸುಮಾರು 4.4 ಕೋಟಿ ಜನರು ಈ ರೋಗದಿಂದ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಎಚ್‌ಐವಿ ಸೋಂಕಿಗೆ ಸಂಪೂರ್ಣ ಚಿಕಿತ್ಸೆ ಇನ್ನೂ ಇಲ್ಲದಿದ್ದರೂ, ಆಂಟಿರೆಟ್ರೋವೈರಲ್ ಔಷಧಿಗಳು ಸೋಂಕಿತರ ಜೀವನವನ್ನು ಹಲವು ವರ್ಷಗಳವರೆಗೆ ಆರೋಗ್ಯಕರವಾಗಿ ಮುಂದುವರಿಸಲು ನೆರವಾಗುತ್ತಿವೆ. ಆದರೆ ಚಿಕಿತ್ಸೆಯ ಲಭ್ಯತೆಯಲ್ಲಿ ದೇಶಗಳ ನಡುವೆ ಇರುವ ಅಸಮಾನತೆ ಇನ್ನೂ ದೊಡ್ಡ ಸವಾಲಾಗಿದೆ.

18. ಜಸ್ಟಿನಿಯನ್ ಪ್ಲೇಗ್

ಕ್ರಿ.ಶ. 541ರಿಂದ 549ರವರೆಗೆ ಉತ್ತರ ಆಫ್ರಿಕಾ, ಯುರೋಪ್ ಮತ್ತು ಪಶ್ಚಿಮ ಏಷ್ಯಾದಲ್ಲಿ ಜಸ್ಟಿನಿಯನ್ ಪ್ಲೇಗ್ ಹರಡಿತು. ಇದು ಕೂಡ ಬ್ಯೂಬೋನಿಕ್ ಪ್ಲೇಗ್‌ನ ಒಂದು ಪ್ರಮುಖ ಮಹಾಮಾರಿಯಾಗಿತ್ತು. ಸಾವಿನ ಸಂಖ್ಯೆಯ ಅಂದಾಜುಗಳು ಬಹಳ ಭಿನ್ನವಾಗಿದ್ದು, ಸುಮಾರು 1.5 ಕೋಟಿಯಿಂದ 10 ಕೋಟಿವರೆಗೆ ಹೇಳಲಾಗಿದೆ. ರೈತರು ಮತ್ತು ಸೈನಿಕರ ಕೊರತೆಯಿಂದ ಬೈಜಾಂಟೈನ್ ಸಾಮ್ರಾಜ್ಯದ ಆರ್ಥಿಕತೆ ಮತ್ತು ಸೇನಾ ಸಾಮರ್ಥ್ಯಕ್ಕೆ ದೊಡ್ಡ ಹೊಡೆತ ಬಿತ್ತು.

19. 1918ರ ಸ್ಪ್ಯಾನಿಷ್ ಫ್ಲೂ

ಮಾನವ ಇತಿಹಾಸದ ಅತ್ಯಂತ ಭೀಕರ ಮಹಾಮಾರಿಗಳಲ್ಲಿ 1918ರ ಇನ್‌ಫ್ಲುಯೆಂಜಾ ಮಹಾಮಾರಿಯೂ ಒಂದು. ಇದನ್ನು ಸಾಮಾನ್ಯವಾಗಿ 'ಸ್ಪ್ಯಾನಿಷ್ ಫ್ಲೂ' ಎಂದು ಕರೆಯಲಾಗುತ್ತದೆ. 1918ರಿಂದ 1920ರವರೆಗೆ ಮೂರು ಪ್ರಮುಖ ಅಲೆಗಳಲ್ಲಿ ಹರಡಿದ ಈ ರೋಗಕ್ಕೆ ಇನ್‌ಫ್ಲುಯೆಂಜಾ ಎಎಚ್1ಎನ್1 ವೈರಸ್ ಕಾರಣವಾಗಿತ್ತು. ಸುಮಾರು 1.7 ಕೋಟಿಯಿಂದ 10 ಕೋಟಿ ಜನರು ಮೃತಪಟ್ಟಿರಬಹುದು ಎಂದು ಅಂದಾಜು. ಕುತೂಹಲಕಾರಿ ಸಂಗತಿಯೆಂದರೆ, ಈ ರೋಗಕ್ಕೆ 'ಸ್ಪ್ಯಾನಿಷ್ ಫ್ಲೂ' ಎಂಬ ಹೆಸರು ಬಂದಿದ್ದು ಅದು ಸ್ಪೇನ್ನಲ್ಲಿ ಆರಂಭವಾದ ಕಾರಣದಿಂದಲ್ಲ. ಮೊದಲ ವಿಶ್ವಯುದ್ಧದ ಸಮಯದಲ್ಲಿ ಹಲವು ದೇಶಗಳು ಸೋಂಕಿನ ಸುದ್ದಿಯನ್ನು ಸೆನ್ಸಾರ್ ಮಾಡುತ್ತಿದ್ದವು. ಆದರೆ ಸ್ಪೇನ್ ತಟಸ್ಥವಾಗಿದ್ದ ಕಾರಣ ಅಲ್ಲಿನ ಮಾಧ್ಯಮಗಳು ರೋಗದ ಬಗ್ಗೆ ಹೆಚ್ಚು ವರದಿ ಮಾಡಿದ್ದವು. ಹೀಗಾಗಿ ಇದು 'ಸ್ಪ್ಯಾನಿಷ್ ಫ್ಲೂ' ಎಂಬ ಹೆಸರಿನಿಂದ ಪ್ರಸಿದ್ಧಿಯಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+