ಕ್ಯೂಬಾ ಪ್ರಜೆಗಳಿಗೆ ಇಂಧನದ್ದೇ ತಲೆನೋವು, ಅಮೆರಿಕ ಹಾಕಿದ ಒತ್ತಡಕ್ಕೆ ಸಿಲುಕಿ ಒದ್ದಾಟ | Cuba Energy Sector
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಮಾತು ಕೇಳದ ಯಾವುದೇ ದೇಶವನ್ನೂ ಆರಾಮವಾಗಿ ಇರಲು ಬಿಡುತ್ತಿಲ್ಲ. ಅದರಲ್ಲೂ ಅಮೆರಿಕದ ಅಕ್ಕಪಕ್ಕ ಇರುವ ದೇಶಗಳಿಗೆ ಇದೀಗ ಭಯದ ವಾತಾವರಣ ಸೃಷ್ಟಿಯಾಗಿದೆ. ಒಂದೋ ಟ್ರಂಪ್ ಅವರ ಆದೇಶ ಪಾಲನೆ ಮಾಡಬೇಕು, ಇಲ್ಲವಾದರೆ ಮುಂದೆ ಬರುವ ಪರಿಣಾಮ ಎದುರಿಸಲು ಸಜ್ಜಾಗಬೇಕು ಎಂಬ ವಾತಾವರಣ ಇದೆ. ಹೀಗಿದ್ದಾಗ ಕ್ಯೂಬಾ ಪ್ರಜೆಗಳು ಗಾಡಿಗೆ ಪೆಟ್ರೋಲ್ & ಡೀಸೆಲ್ ಇಲ್ಲದೆ ಒದ್ದಾಡುವ ಪರಿಸ್ಥಿತಿ ಈಗ ನಿರ್ಮಾಣ ಆಗಿದೆ. ಇದಕ್ಕೂ ಟ್ರಂಪ್ ಅವರ ಕೋಪವೇ ಕಾರಣ ಆಗಿದ್ದು, ಕೆರಿಬಿಯನ್ ದ್ವೀಪ ಕ್ಯೂಬಾ ನಲುಗಿ ಹೋಗುತ್ತಿದೆ.
ಗ್ರೀನ್‌ಲ್ಯಾಂಡ್, ಕೆನಡಾ, ಯುರೋಪ್ ದೇಶಗಳು ಸೇರಿದಂತೆ ಡೊನಾಲ್ಡ್ ಟ್ರಂಪ್ ಅವರು ಹಲವು ಒಕ್ಕೂಟಗಳ ಜೊತೆಗೆ ಈಗಾಗಲೇ ಒಂದು ಸುತ್ತಿನ ಸಮರ ನಡೆಸಿದ್ದಾರೆ. ಇಂತಹ ವಾತಾವರಣದಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಕ್ಯೂಬಾ ಜೊತೆಗೆ ವ್ಯವಹಾರ ನಡೆಸುವ ದೇಶಗಳ ಮೇಲೆ ಹೊಸ ತೆರಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. ಕ್ಯೂಬಾ ಜೊತೆಗೆ ಕಾನೂನು ಬದ್ಧ ವ್ಯಾಪಾರ ಸಂಬಂಧ ಕಾಪಾಡಿಕೊಳ್ಳಲು ಯತ್ನಿಸುವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಇದರಿಂದ ಹೆದರಿ ಹೋದ ತೈಲ ಸರಬರಾಜು ಮಾಡುವ ದೇಶಗಳು, ದ್ವೀಪರಾಷ್ಟ್ರ ಕ್ಯೂಬಾಗೆ ತೈಲ ಕೊಡಲು ಹಿಂದೇಟು ಹಾಕುತ್ತಿವೆ.

ಕ್ಯೂಬಾ ನೆಲದಲ್ಲಿ ಇಂಧನ ಕಂಟಕ
ಪ್ರಮುಖವಾಗಿ ಅಮೆರಿಕದ ನಿಯಂತ್ರಣದಲ್ಲಿ ಇರುವ ವೆನಿಜುವೆಲಾ ಬಳಿ ಭಾರಿ ದೊಡ್ಡ ಪ್ರಮಾಣದ ತೈಲ ಇದ್ದು, ತನ್ನ ಪಕ್ಕದಲ್ಲೇ ಇರುವ ತೈಲ ಸಂಪತ್ತಿನಿಂದ ಕೂಡ ಕ್ಯೂಬಾ ವಂಚಿತವಾಗಲಿದೆ. ಈ ವಿಚಾರವಾಗಿ ಈಗಾಗಲೇ ವೆನಿಜುವೆಲಾ ತೀಕ್ಷ್ಣ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಕ್ರಮ ಕೈಗೊಂಡರೆ ಎದುರಾಗುವ ಪರಿಣಾಮವನ್ನ ಪರಿಹರಿಸಲು ಇಡೀ ಜಗತ್ತು ಒಂದಾಗುವಂತೆ ಕರೆ ಕೂಡ ನೀಡಿತ್ತು. ಆದರೆ ಎಲ್ಲಾ ತಿಕ್ಕಾಟಗಳ ನಡುವೆ ಕ್ಯೂಬಾ ಇದೀಗ ಇಂಧನ ಇಲ್ಲದೆ ಒದ್ದಾಡಿ ಹೋಗುತ್ತಿದೆ. ಏಕೆಂದರೆ ಕ್ಯೂಬಾ ನೆಲದಲ್ಲಿ ಉತ್ಪಾದನೆ ಆಗುತ್ತಿರುವ ತೈಲ ಯಾವುದಕ್ಕೂ ಈಗ ಸಾಲುತ್ತಿಲ್ಲ.
20 ದಿನಗಳಿಗೆ ಆಗುವಷ್ಟು ತೈಲ ಬಾಕಿ
ಕ್ಯೂಬಾ ದೇಶಕ್ಕೆ ಹೊರಗಿನಿಂದ ಬರುತ್ತಿದ್ದ ಕಚ್ಚಾತೈಲ ಹಾಗೂ ತೈಲ ನಿಂತು ಹೋಗಿರುವ ಕಾರಣ ಸಾಕಷ್ಟು ಸವಾಲು ಎದುರಾಗಿದೆ. ಮತ್ತೊಂದು ಕಡೆ ಕ್ಯೂಬಾ ಸ್ಥಳೀಯವಾಗಿ ಉತ್ಪಾದನೆ ಮಾಡುವ ತೈಲ ಯಾವುದಕ್ಕೂ ಸಾಲುವುದಿಲ್ಲ ಎಂಬಂತೆ ಆಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಕಠಿಣವಾಗಲಿದ್ದು, ಕ್ಯೂಬಾ ಜನರು ಒದ್ದಾಡುವ ಸ್ಥಿತಿ ಎದುರಾಗಲಿದೆ. ಸೂಕ್ತ ತಂತ್ರಜ್ಞಾನ ಇಲ್ಲದೆ ಇಂಧನ ಕ್ಷೇತ್ರದಲ್ಲಿ ಕ್ಯೂಬಾ ಸಂಪೂರ್ಣವಾಗಿ ಬೇರೆ ಬೇರೆ ದೇಶಗಳ ಮೇಲೆ ಅವಲಂಬಿತ ಜೀವನ ನಡೆಸುವ ಅನಿವಾರ್ಯತೆ ಇದೆ.
ಮುಂದಿನ 20 ದಿನಗಳಿಗೆ ಆಗುವಷ್ಟು ತೈಲ ಬಾಕಿ ಉಳಿದಿದ್ದು ಇದರಲ್ಲೇ ದಿನದೂಡುವ ವಾತಾವರಣ ಈಗ ಕ್ಯೂಬಾ ನೆಲದಲ್ಲಿ ಇದೆ. ಹೀಗಾಗಿ ಪೆಟ್ರೋಲ್ ಬಂಕ್‌ಗಳ ಎದುರು ಗಾಡಿಗಳು ಕಿಲೋ ಮೀಟರ್ ಉದ್ದಕ್ಕೆ ಸಾಲುಗಟ್ಟಿ ನಿಲ್ಲುತ್ತಿವೆ. ಈಗಲಾದರೂ ಅಮೆರಿಕ ಅಧ್ಯಕ್ಷರು ತಮ್ಮ ನಿರ್ಧಾರ ಬದಲಾಯಿಸಿ ಕ್ಯೂಬಾ ಇಂಧನ ದಾಹ ತೀರಿಸುತ್ತಾರಾ? ಎಂಬುದನ್ನ ಕಾದು ನೋಡಬೇಕಿದೆ. ಕ್ಯೂಬಾ ಪ್ರಜೆಗಳು ಕೂಡ ಅಮೆರಿಕದ ಈ ನಿರ್ಧಾರದ ವಿರುದ್ಧ ಹಾಗೂ ತಮ್ಮ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಪೆಟ್ರೋಲ್ ಬಂಕ್‌ಗಳ ಎದುರು ದಿನಗಟ್ಟಲೇ ಕಾದು ಕೂತರೂ ಯಾವುದೇ ಪ್ರಯೋಜನ ಆಗುತ್ತಿಲ್ಲ, ಒಂದು ಗಾಡಿಗೆ ಆಗುವಷ್ಟು ಪೆಟ್ರೋಲ್ & ಡೀಸೆಲ್ ಕೂಡ ಸಿಗದಿರುವ ವಾತಾವರಣ ಕ್ಯೂಬಾದಲ್ಲಿ ಎದುರಾಗಿದೆ.












Click it and Unblock the Notifications