Pakistan Election: ಅತ್ತ ಮಾಜಿ ಪ್ರಧಾನಿಗೆ ಜೈಲು, ಇತ್ತ ಚುನಾವಣೆಗೆ ಸಿದ್ಧತೆ!
ಜಗತ್ತೇ ಒಂದು ದಿಕ್ಕಿಗೆ ಸಾಗುತ್ತಿದ್ದರೆ ಪಾಕಿಸ್ತಾನ ಮಾತ್ರ ಯಾವಾಗಲೂ ಪ್ರಪಂಚದ ವಿರುದ್ಧ ದಿಕ್ಕಿಗೆ ಸಾಗುತ್ತದೆ. ಪಾಕಿಸ್ತಾನದಲ್ಲಿ ಎಲ್ಲಾ ಅಸಹಜ ಅಲ್ಲಿ ಅಂದುಕೊಂಡಿದ್ದು ನಡೆಯಲ್ಲ. ಆದರೆ ಅಂದುಕೊಳ್ಳದೇ ಇರುವುದು ಬೇಗ ನಡೆಯುತ್ತದೆ. ಅದರಲ್ಲೂ ಪಾಕ್‌ನ ರಾಜಕೀಯ ವ್ಯವಸ್ಥೆ ಪದೇ ಪದೆ ಚರ್ಚೆಗೆ ಗ್ರಾಸವಾಗುತ್ತಿದೆ. ಈಗಲೂ ಅಷ್ಟೇ ಮಾಜಿ ಪ್ರಧಾನಿ ಅಂದರ್ ಆಗಿರುವಾಗ, ಸಂಸತ್ ಚುನಾವಣೆಗೆ ಹಾಲಿ ಸರ್ಕಾರ ಸಿದ್ಧತೆ ನಡೆಸಿದೆ.
ಇಮ್ರಾನ್ ಖಾನ್ ವಿರುದ್ಧದ ತೋಶಾಖಾನಾ ಭ್ರಷ್ಟಾಚಾರ ಕೇಸ್ ಸಾಬೀತಾಗಿದ್ದು, ಪಾಕಿಸ್ತಾನದ ಮಾಜಿ ಪ್ರಧಾನಿ ಖಾನ್ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹೀಗಾಗಿ ಇಮ್ರಾನ್ ಖಾನ್‌ಗೆ ಜೈಲಲ್ಲಿ ಒಳ್ಳೆಯ ವ್ಯವಸ್ಥೆ ರೆಡಿ ಮಾಡಿದ್ದಾರೆ ಅಧಿಕಾರಿಗಳು. ಈ ಬೆನ್ನಲ್ಲೇ 5 ವರ್ಷ ಇಮ್ರಾನ್ ರಾಜಕೀಯದಲ್ಲಿ ತೊಡಗಿಸಿಕೊಳ್ಳದಂತೆ ಅನರ್ಹಗೊಳಿಸಿದ್ದು, ಹಾಲಿ ಸರ್ಕಾರಕ್ಕೆ ಇದರಿಂದ ರಿಲೀಫ್ ಸಿಕ್ಕಿದೆ. ಆದರೆ ಅಸಲಿ ಮ್ಯಾಟರ್ ಇದಲ್ಲ, ಮಾಜಿ ಪ್ರಧಾನಿಯನ್ನು ಜೈಲಿಗೆ ಕಳಿಸಿ ಹಾಲಿ ಸರ್ಕಾರ ಚುನಾವಣೆಗೆ ಸಿದ್ಧವಾಗಿದ್ದು ಯಾಕೆ? ಎಂಬ ಕುತೂಹಲದ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ. ಹಾಗೇ ದಟ್ಟ ಅನುಮಾನವು ಹುಟ್ಟಿಕೊಳ್ಳುವಂತೆ ಮಾಡಿದೆ.

ಪಾಕ್ ಸಂಸತ್ ವಿಸರ್ಜನೆಗೆ ಕ್ಷಣಗಣನೆ!
ಹೌದು, ಆಗಸ್ಟ್ 9ರಂದು ಸಂಸತ್ ವಿಸರ್ಜನೆ ಮಾಡುವುದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮೊನ್ನೆ ಮಾಹಿತಿ ನೀಡಿದ್ದರು. ಮಹತ್ವದ ಸಂಗತಿ ಏನಂದ್ರೆ ಸಂಸತ್ ಕೆಳಮನೆ ಅವಧಿ ಮುಕ್ತಾಯಕ್ಕೆ 3 ವರ್ಷ ಬಾಕಿ ಇದೆ ಆದರೂ ವಿಸರ್ಜನೆ ಮಾಡುವುದಾಗಿ ಪಾಕ್ ಹಾಲಿ ಪಿಎಂ ಘೋಷಣೆ ಮಾಡಿದ್ದಾರೆ. ವಿಸರ್ಜನೆ ಮಾಡಿದ 90 ದಿನದ ಒಳಗಾಗಿ ಚುನಾವಣೆ ನಡೆವ ನಿರೀಕ್ಷೆ ಇದೆ. ಹೀಗೆ ಒಂದು ಕಡೆ ಪಾಕಿಸ್ತಾನ ಚುನಾವಣೆಗೆ ಸಜ್ಜಾಗುತ್ತಿದ್ದರೆ, ಮತ್ತೊಂದು ಬದಿಗೆ ಮಾಜಿ ಪ್ರಧಾನಿ ಚುನಾವಣೆಗೆ ನಿಲ್ಲದಂತೆ ಮಾಡಲಾಗಿದೆ. ಇದು ಸಹಜವಾಗಿ ಪಾಕಿಸ್ತಾನದ ಇಮ್ರಾನ್ ಖಾನ್ ಅಭಿಮಾನಿಗಳಿಗೆ ಪಿತ್ತ ನೆತ್ತಿಗೇರಿಸಿದೆ.

ಎಲ್ಲಾ ಓಕೆ, ಇಮ್ರಾನ್ ಇಲ್ಲ ಯಾಕೆ?
ಪಾಕಿಸ್ತಾನ ಈಗಾಗಲೇ ಹೊತ್ತಿ ಉರಿಯುತ್ತಿದೆ. ಅದರಲ್ಲೂ ಇಮ್ರಾನ್ ಖಾನ್ ಬಂಧನದ ಬಳಿಕ ತಿಕ್ಕಾಟ ಜೋರಾಗಿದೆ. ಸಂಸತ್ ವಿಸರ್ಜನೆ ಮಾಡುವ ತೀರ್ಮಾನ ಕೈಗೊಂಡು ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಸಂಸತ್ ವಿಸರ್ಜನೆ ಮಾಡುವ ಬಗ್ಗೆ ಪ್ರಧಾನಿ ಶೆಹಬಾಜ್ ಅಧ್ಯಕ್ಷ ಆರೀಫ್ ಅಲವಿಗೆ ಆಗಸ್ಟ್ 9ಕ್ಕೆ ಅಧಿಸೂಚನೆ ಕಳುಹಿಸುವ ಸಾಧ್ಯತೆ ಇದೆ. ಪಾಕಿಸ್ತಾನದ ಸಂವಿಧಾನದ ಪ್ರಕಾರ ಪಾಕ್ ಪ್ರಧಾನಿ ಕಳುಹಿಸಿದ ಅಧಿಸೂಚನೆಗೆ ರಾಷ್ಟ್ರಪತಿ ಮುದ್ರೆ ಬಿದ್ದ ತಕ್ಷಣ ಸಂಸತ್ ವಿಸರ್ಜನೆಯಾಗಲಿದೆ. ಆದರೆ ಇಮ್ರಾನ್ ಖಾನ್ ಸ್ಪರ್ಧೆ ಮಾಡಲು ಆಗದೇ ಇರುವುದು ಈಗ ದೊಡ್ಡ ಗೊಂದಲ ಸೃಷ್ಟಿಸಿದೆ.
90 ದಿನದ ಒಳಗೆ ಎಲೆಕ್ಷನ್?
ಪಾಕಿಸ್ತಾನದ ಸಂವಿಧಾನದ ಪ್ರಕಾರ ಪ್ರಧಾನಿ ಕಳುಹಿಸಿದ ಅಧಿಸೂಚನೆಗೆ ರಾಷ್ಟ್ರಪತಿ ಮುದ್ರೆ ಬಿದ್ದ ಕೂಡಲೇ ಸಂಸತ್ ವಿಸರ್ಜನೆಯಾಗಲಿದೆ. ಅಕಸ್ಮಾತ್ ಅಧ್ಯಕ್ಷರು ಸಹಿ ಮಾಡದಿದ್ದರೂ, ಪ್ರಧಾನಿ ಅಧಿಸೂಚನೆ ಲಭಿಸಿದ 48 ಗಂಟೆಗಳಲ್ಲಿ ಸಂಸತ್ ತಾನಾಗಿಯೇ ವಿಸರ್ಜನೆಯಾಗಲಿದೆ. ಹಾಗೇ ಪಾಕ್ ಸಂವಿಧಾನದ ನಿಯಮದ ಪ್ರಕಾರ, ಅಕಸ್ಮಾತ್ ಸರ್ಕಾರ ಅವಧಿ ಪೂರೈಸಿದರೆ 60 ದಿನದ ಒಳಗೆ ಚುನಾವಣೆ ನಡೆಸಬೇಕು. ಅವಧಿಗೂ ಮುನ್ನ ವಿಸರ್ಜನೆ ಮಾಡಿದರೆ 90 ದಿನ ಸಮಯ ಸಿಗಲಿದೆ. ಹೀಗೆ ಇಮ್ರಾನ್ ಖಾನ್ ಹೊರತು ಈ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

ದಿಢೀರ್ ಇಮ್ರಾನ್ ಜೈಲು ಬದಲಾವಣೆ?
ಒಂದು ಕಡೆ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದರೆ, ಪಾಕಿಸ್ತಾನದಲ್ಲಿ ಇಮ್ರಾನ್ ಬೆಂಬಲಿಗರ ಪಡೆ ಯುದ್ಧಕ್ಕೆ ನಿಂತಿದೆ. ಹೀಗಾಗಿ ಹಿಂಸೆ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನ ಪಾಕಿಸ್ತಾನ ಸರ್ಕಾರ ಕೈಗೊಳ್ಳುತ್ತಿದೆ. ಕೋರ್ಟ್ ಆದೇಶದ ಪ್ರಕಾರ ಇಮ್ರಾನ್ ಖಾನ್ ರಾವಲ್ಪಿಂಡಿಯ ಆದಿಯಾಲಾ ಜೈಲಿನಲ್ಲಿ ಇರಬೇಕಿತ್ತು. ಆದರೆ ಅಟಕ್ ನಗರದ ಜೈಲಿನಲ್ಲಿದ್ದಾರೆ ಅಂತಾ ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಏನೋ ಗುಟ್ಟಾಗಿ ನಡೆಯುತ್ತಿದೆ ಅನ್ನೋ ಅನುಮಾನಕ್ಕೆ ಮತ್ತೆ ಪುಷ್ಠಿ ಸಿಕ್ಕಂತಾಗಿದೆ.











Click it and Unblock the Notifications