ಕಡೆಗೂ ಕೊರೊನಾಗೆ ಸಿಕ್ತು ಮದ್ದು: ರೋಗ ಗೆದ್ದವರ ರಕ್ತವೇ ಇದಕ್ಕೆ ಗುದ್ದು!
ಇಡೀ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಈವರೆಗೂ 34 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಚೀನಾದ ವುಹಾನ್ ನಲ್ಲಿ ಮೊದಲು ಕಂಡುಬಂದ ನೋವೆಲ್ ಕೊರೊನಾ ವೈರಸ್ ಇದೀಗ ವಿಶ್ವದಾದ್ಯಂತ ಹಬ್ಬಿದೆ.
ಕೊರೊನಾದಿಂದ ಜರ್ಜರಿತಗೊಂಡಿರುವ ವಿಶ್ವಕ್ಕೆ ಸಮಾಧಾನ ತರುವ ಸಂಶೋಧನೆಯೊಂದು ಅದೇ ಚೀನಾದಿಂದಲೇ ಹೊರ ಬಿದ್ದಿದೆ. ಮಾರಣಾಂತಿಕ ಕೋವಿಡ್-19ಗೆ ತಕ್ಕ ಲಸಿಕೆ ಸಿದ್ಧವಾಗದಿದ್ದರೂ, ಅದರ ವಿರುದ್ದ ಸಮರ್ಥ ಹೋರಾಟ ರೂಪಿಸಿ ಜೀವವನ್ನುಳಿಸಿಕೊಳ್ಳಬಲ್ಲ ರೋಗ ನಿರೋಧಕ ವ್ಯವಸ್ಥೆಯೊಂದನ್ನ ಚೀನಾ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
'ಮುಳ್ಳನ್ನು ಮುಳ್ಳನಿಂದಲೇ ತೆಗಿ' ಎನ್ನುವ ಮಾತನ್ನೇ ಪಾಲಿಸಿರುವ ಚೀನಾ ವೈದ್ಯರು ಕೊರೊನಾ ಸೋಂಕನ್ನು ಗೆದ್ದು ಬಂದಿರುವ ರೋಗಿಗಳ ರಕ್ತವನ್ನೇ ಈಗ ಮದ್ದಾಗಿ ಬಳಸಲಾರಂಭಿಸಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸಿರುವ ವೈದ್ಯ ವಿಜ್ಞಾನಿಗಳು ರೋಗದಿಂದ ಗುಣಮುಖರಾಗಿರುವ 'ಹೈಪರ್ ಇಮ್ಯೂನ್' ವ್ಯಕ್ತಿಗಳ ರಕ್ತ ಮಾದರಿ ಸಂಗ್ರಹಿಸಿ ಅದರಲ್ಲಿನ ಶಕ್ತಿಯುತ ಪ್ಲಾಸ್ಮಾ ಕಣಗಳನ್ನು ಒಂದುಗೂಡಿಸಿ ಈಗ ಸೋಂಕಿನ ವಿರುದ್ದ ಹೋರಾಡಲು ನಿಂತಿರುವ ರೋಗಿಗಳಿಗೆ ನೀಡಲುದ್ದೇಶಿಸಿದ್ದಾರೆ.
ಆ ಮೂಲಕ ಅವರಲ್ಲೂ ರೋಗ ನಿರೋಧ ವ್ಯವಸ್ಥೆಯನ್ನು ಬಲಪಡಿಸಿ ಸಾವಿನ ಮನೆ ಬಾಗಿಲಿಂದ ಹೊರತಂದು ನಿಲ್ಲಿಸುವ ಸಾಹಸಕ್ಕೆ ವೈದ್ಯ ವಿಜ್ಞಾನಿಗಳು ಮುಂದಾಗಿದ್ದಾರೆ.

ಚೀನಾದಲ್ಲೇ ಪ್ರಯೋಗ
ಕೋವಿಡ್-19 ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವವರಿಂದ ರಕ್ತದ ಪ್ಲಾಸ್ಮಾ ಪಡೆದು ಮೊದಲ ಹಂತದ ಪರೀಕ್ಷಾರ್ಥವಾಗಿ ಚೀನಾದ ವೈದ್ಯ ವಿಜ್ಞಾನಿಗಳು ವೆಂಟಿಲೇಟರ್ ನಲ್ಲಿದ್ದ ಐವರು ರೋಗಿಗಳಿಗೆ ಮೇಲೆ ಪ್ರಯೋಗಿಸಿದ್ದಾರೆ. ಇದು ಫಲಪ್ರದವಾಗಿದ್ದು ಹೊಸ ಆಶಾಕಿರಣ ಹುಟ್ಟಿಸಿದೆ.

ಸಾವಿನ ಸಂಖ್ಯೆ ಕಮ್ಮಿ ಆಗಲಿದೆ
ಹೊಸ ಪ್ರಯೋಗದಿಂದ ರೋಗಿಗಳಲ್ಲಿ ರೋಗ ನಿರೋಧಕ ವ್ಯವಸ್ಥೆ ಬಲಗೊಳ್ಳಲಿದೆ. ಇದು ರೋಗಿಗಳನ್ನು ವೆಂಟಿಲೇಟರ್ ಗಳಿಂದ ದೂರವಿಡುವಷ್ಟು ಶಕ್ತವಾಗಿದೆ. ಕೃತಕ ಉಸಿರಾಟವಿಲ್ಲದೆ ರೋಗಿಗಳು ಬದುಕುವುದೇ ಆದಲ್ಲಿ, ಸಾವಿಗೀಡಾಗುವವರ ಸಂಖ್ಯೆ ಕಮ್ಮಿ ಆಗಲಿದೆ. ಒಮ್ಮೆ ರೋಗಿ ಗುಣಮುಖರಾದರೆ, ತಿಂಗಳಿನಿಂದ ವರ್ಷಗಳವರೆಗೂ ರಕ್ತದಲ್ಲಿ anti-bodies ಇರುತ್ತದೆ.

ಇತಿಹಾಸ ಸೂಚಿಸಿ ಕೊಟ್ಟ ಪರಿಹಾರ
ಪ್ರಾಚೀನ ವೈದ್ಯಕೀಯ ಪದ್ಧತಿಯಲ್ಲಿ 'ಪ್ಲಾಸ್ಮಾ ಇನ್ಫ್ಯೂಶನ್ಸ್' (ಪ್ಲಾಸ್ಮಾ ಪೂರೈಕೆ) ಜಾರಿಯಲ್ಲಿತ್ತು ಎಂಬ ಮಾಹಿತಿ ಇದೆ. ರೋಗಿಯನ್ನು ವೈರಾಣುಗಳ ವಿರುದ್ಧದ ಹೋರಾಟಕ್ಕೆ ಸಜ್ಜುಗೊಳಿಸಲು ಈ ಪದ್ಧತಿಯನ್ನು ಬಳಸಲಾಗುತ್ತಿತ್ತು. 1918 ರಲ್ಲಿ ಕಂಡ ಸಾಂಕ್ರಾಮಿಕ ರೋಗ ಸ್ಪ್ಯಾನಿಶ್ ಫ್ಲೂ ವಿರುದ್ಧವೂ ಇದೇ ತಂತ್ರ (ಪ್ಲಾಸ್ಮಾ ಪೂರೈಕೆ) ಬಳಸಿ ರೋಗಿಗಳ ಪ್ರಾಣ ಉಳಿಸಲಾಗಿತ್ತು.

ಪ್ಲಾಸ್ಮಾ ದಾನಿಗಳ ನಿರೀಕ್ಷೆಯಲ್ಲಿ ವಿಜ್ಞಾನಿಗಳು
ಕೋವಿಡ್-19 ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿರುವವರ ರಕ್ತದ ಪ್ಲಾಸ್ಮಾದಲ್ಲಿ Anti-Bodies ಇರಲಿದ್ದು, ಅವು ಸೋಂಕಿನ ವಿರುದ್ಧ ಹೋರಾಡುತ್ತವೆ. ಅಂತಹ 'ಹೈಪರ್ ಇಮ್ಯೂನ್' ವ್ಯಕ್ತಿಗಳನ್ನು ಗುರುತಿಸಿ, ಅವರಿಂದ ಪ್ಲಾಸ್ಮಾ ಪಡೆದು ಚಿಕಿತ್ಸೆಗೆ ಬಳಕೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ವೈದ್ಯ ವಿಜ್ಞಾನಿಗಳು ಸಮರ್ಥ ಪ್ಲಾಸ್ಮಾ ದಾನಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಚೀನಾ ಪ್ರಯೋಗದತ್ತ ಯು.ಕೆ ಆಸಕ್ತಿ
ಚೀನಾ ಕಂಡುಕೊಂಡಿರುವ 'ಪ್ಲಾಸ್ಮಾ' ಪ್ರಯೋಗ ಹಾದಿಯನ್ನ ಅನುಸರಿಸಲು ಯು.ಕೆ ಉತ್ಸುಕವಾಗಿದೆ. ಇದಕ್ಕಾಗಿ ಎರಡು ಕ್ಲಿನಿಕಲ್ ಟ್ರಯಲ್ ನಡೆಸಲು ಗ್ಲಾಸ್ಗೋವ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಪ್ರೊ.ಡೇವಿನ್ ಟಾಪ್ಪಿನ್ ಮುಂದಾಗಿದ್ದಾರೆ.

ಕ್ಲಿನಿಕಲ್ ಟ್ರಯಲ್ ಅನಿವಾರ್ಯ
''ಕ್ಲಿನಿಕಲ್ ಟ್ರಯಲ್ ನಡೆಸುವುದು ಅವಶ್ಯಕ. ಇಲ್ಲಾಂದ್ರೆ ಅದರ ಪರಿಣಾಮ ನಮಗೆ ಗೊತ್ತಾಗುವುದಿಲ್ಲ. ಇತಿಹಾಸದಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದು ದಾಖಲಾಗಿದೆ. ಚೀನಾದಲ್ಲೂ ಉತ್ತಮ ಫಲಿತಾಂಶ ಸಿಕ್ಕಿದೆ. ಆದರೂ, ನಮ್ಮ ದೃಢೀಕರಣಕ್ಕಾಗಿ ಪ್ರಯೋಗ ಅನಿವಾರ್ಯ'' ಎಂದು ಪ್ರೊ.ಡೇವಿನ್ ಟಾಪ್ಪಿನ್ ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications