ನೀವೆಲ್ಲ ಕಣ್ಣರಳಿಸುವ ಸುದ್ದಿಯೊಂದು ಕೊರೊನಾ ತವರು ವುಹಾನ್ ನಿಂದ ಬಂದಿದೆ!
ಬೀಜಿಂಗ್, ಮಾರ್ಚ್ 22: ಇಂದು ಇಡೀ ವಿಶ್ವಕ್ಕೆ ಮಹಾ ಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ (ಕೋವಿಡ್-19) ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಗರದಲ್ಲಿ. ಮಾರಕ ಕೊರೊನಾ ವೈರಸ್ ನಿಂದಾಗಿ ಕಳೆದ ಮೂರು ತಿಂಗಳಿನಿಂದ ಹೆಣಗಾಡುತ್ತಿದ್ದ ವುಹಾನ್ ನಗರದಿಂದ ಇಂದು ನೀವೆಲ್ಲರೂ ಕಣ್ಣರಳಿಸುವ ಸುದ್ದಿಯೊಂದು ಹೊರಬಿದ್ದಿದೆ.
ಅದೇನಪ್ಪಾ ಅಂದ್ರೆ, ಕೊರೊನಾ ವೈರಸ್ ತವರೂರು ವುಹಾನ್ ನಲ್ಲಿ ಹೊಸ ಕೊರೊನಾ ಸೋಂಕಿತ ಪ್ರಕರಣ ದಾಖಲಾಗಿ ನಾಲ್ಕು ದಿನಗಳು ಕಳೆದಿವೆ.!
ಹೌದು, ಮಾರ್ಚ್ 18 ರಿಂದ (ಸತತ ನಾಲ್ಕು ದಿನಗಳ ಕಾಲ) ಮಾರ್ಚ್ 21 ರವರೆಗೂ ವುಹಾನ್ ನಗರದಲ್ಲಿ ಹೊಸದಾಗಿ ಯಾವುದೇ ಕೊರೊನಾ ಶಂಕಿತ ಅಥವಾ ಸೋಂಕಿತ ಪ್ರಕರಣಗಳು ದಾಖಲಾಗಿಲ್ಲ.

46 ಪ್ರಕರಣಗಳು ದಾಖಲು
ಸಾಂಕ್ರಾಮಿಕ ಪಿಡುಗು ಕೋವಿಡ್-19 ಗೆ ಮೊದಲು ಕೇಂದ್ರ ಸ್ಥಾನವಾಗಿದ್ದ ಚೀನಾದಲ್ಲೀಗ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿದೆ. ಕೊರೊನಾ ಸೋಂಕು ಹರದಡಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಬಳಿಕ ಚೀನಾ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ 46 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 45 ಪ್ರಕರಣಗಳು ವಿದೇಶಗಳಿಂದ ಬಂದವರದ್ದೇ ಆಗಿದೆ.

ಆರು ಸಾವು
ಕೊರೊನಾ ವೈರಸ್ ಸೋಂಕಿನಿಂದ ಚೀನಾದಲ್ಲಿ ಸಾವನ್ನಪ್ಪುವವರ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ. ನಿನ್ನೆ (ಮಾರ್ಚ್ 21) ಚೀನಾದಲ್ಲಿ ಆರು ಮಂದಿ ಮಾತ್ರ ಕೋವಿಡ್-19 ನಿಂದಾಗಿ ಮೃತಪಟ್ಟಿದ್ದಾರೆ.

ಚೀನಾದ ಅಂಕಿ-ಅಂಶ
ಚೀನಾದಲ್ಲಿ ಇಲ್ಲಿಯವರೆಗೂ ಒಟ್ಟು 81,054 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆ ಆಗಿವೆ. ಅದರಲ್ಲಿ ಈಗಾಗಲೇ 3,261 ಮಂದಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. 72,440 ಮಂದಿ ಕೊರೊನಾ ವೈರಸ್ ವಿರುದ್ಧ ಹೋರಾಡಿ ಸಾವನ್ನೇ ಗೆದ್ದು ಬಂದಿದ್ದಾರೆ.

ವಿಶ್ವದ ಅಂಕಿ-ಅಂಶ
ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕಿತರು : 304,990
ವಿಶ್ವದಾದ್ಯಂತ ಕೊರೊನಾ ಸೋಂಕಿನಿಂತ ಮೃತಪಟ್ಟವರು : 13,004
ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವವರು : 94,800
ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು : 9,382












Click it and Unblock the Notifications