2,300 ವರ್ಷ ಹಳೆಯ ಗ್ರೈನ್ ವೈನ್ ಪತ್ತೆ : ಸಮಾಧಿಯೊಳಗೆ ಕಂಚಿನ ಮಡಕೆಯಲ್ಲಿ ಸಂರಕ್ಷಿಸಲಾಗಿರುವ ಮದ್ಯ
ಈ ಭೂಮಿಯನ್ನು ಅಗೆಯುತ್ತಾ ಹೋದಂತೆ ಹಿಂದಿನ ಕಾಲದ ಅದೆಷ್ಟೋ ವಸ್ತುಗಳು, ಅವಶೇಷಗಖು ಸಿಕ್ಕಿವೆ. ದೇವರ ಮೂರ್ತಿಗಳು, ಆ ಕಾಲದಲ್ಲಿ ಬಳಸುತ್ತಿದ್ದ ಪಾತ್ರೆಗಳು, ಒಡವೆಗಳು ಹೀಗೆ ಅನೇಕ ವಸ್ತುಗಳನ್ನು ಮಣ್ಣಿನ ಅಡಿಯಿಂದ ಹೊರ ತೆಗೆಯಲಾಗಿದೆ. ಕೆಲವು ಕಡೆಗಳಲ್ಲಿ ನಮ್ಮ ಪೂರ್ವಜರು ಹೂತು ಇಟ್ಟಿರುವ ನಿಧಿ ಇದೆ ಎಂದು ಕೂಡಾ ಹೇಳಲಾಗುತ್ತದೆ.
ಇದೀಗ ಸುಮಾರು 2 ಸಾವಿರ ವರ್ಷಗಳ ಹಳೆಯ ಇತಿಹಾಸ ಇರುವ ವೈನ್ ಭೂಮಿಯೊಳಗೆ ಸಿಕ್ಕಿದೆ. ಸಮಾಧಿಯ ಒಳಗೆ ವೈನ್ ಅನ್ನು ಸಂರಕ್ಷಿಸಿ ಇಟ್ಟಿರುವುದನ್ನು ಪುರಾತತ್ವ ಇಲಾಖೆ ಪತ್ತೆ ಮಾಡಿದೆ.

2,300 ವರ್ಷಗಳಷ್ಟು ಹಳೆಯ ವೈನ್
ಹೌದು, ಚೀನಾದ ಪುರಾತತ್ತ್ವಜ್ಞರು 2,300 ವರ್ಷಗಳಷ್ಟು ಹಳೆಯದಾದ ಧಾನ್ಯದ ವೈನ್ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ. ವಾಯುವ್ಯ ಚೀನಾದ ನಿಂಗ್ಕ್ಸಿಯಾ ಹುಯಿ ಸ್ವಾಯತ್ತ ಪ್ರದೇಶದಲ್ಲಿ ಈ ವೈನ್ ಪತ್ತೆಯಾಗಿದೆ. ಇದು ಕ್ರಿ.ಪೂ. 475-221ರ ಅವಧಿಗೆ ಸೇರಿದ ವೈನ್ ಎಂದೇ ಹೇಳಲಾಗ್ತಿದೆ. ಅರಿಸ್ಟಾಟಲ್‌ನ ಕಾಲದ - ಕಿನ್ ರಾಜ್ಯಕ್ಕೆ ಸೇರಿದ ಸಮಾಧಿಯಲ್ಲಿ ಈ ವೈನ್ ಅ ನ್ನು ಸಮಾಧಿಯ ಒಳಗೆ ಹುದುಗಿ ಇಡಲಾಗಿತ್ತು.
ಕ್ವಿಂಗ್ ರಾಜ್ಯದ ಸಮಾಧಿಯು ನಿಂಗ್ಕ್ಸಿಯಾದ ಗುಯುವಾನ್ ನಗರದ ಯುವಾನ್‌ಝೌ ಜಿಲ್ಲೆಯ ಕಿನ್ ಗ್ರೇಟ್ ವಾಲ್ ಬಳಿ ಇದೆ. ಅಲ್ಲಿ ವಾರಿಂಗ್ ಸ್ಟೇಟ್ಸ್ ಅವಧಿಯ 183 ಪ್ರಾಚೀನ ಸಮಾಧಿಗಳನ್ನು ಉತ್ಖನನ ಮಾಡಲಾಗಿದೆ. ಉತ್ಖನನದ ವೇಳೆ ಸಿಕ್ಕಿದ ಸಮಾಧಿಯ ಒಳಗೆಯೇ ಈ ಧಾನ್ಯದ ವೈನ್ ಕೂಡಾ ಸಿಕ್ಕಿದೆ.
ಬೆಳ್ಳುಳ್ಳಿ ಆಕಾರದ ಮಡಕೆಯಲ್ಲಿ ಸಂರಕ್ಷಣೆ
ಈ ಸಮಾಧಿಯಲ್ಲಿ ಕಿನ್ ಶೈಲಿಯ ಕಂಚಿನ ಬೆಳ್ಳುಳ್ಳಿ ಆಕಾರದ ಮಡಕೆಯಿಂದ ಬರೋಬ್ಬರಿ 3,740 ಮಿಲಿಲೀಟರ್‌ಗಳಷ್ಟು ಪ್ರಾಚೀನ ದ್ರವ ಅವಶೇಷಗಳನ್ನು ಪತ್ತೆ ಹಚ್ಚಲಾಗಿದೆ. ಕಂಚಿನ ಪಾತ್ರೆಯ ಎರಡು-ಪದರದ ಸೀಲಿಂಗ್ ವಿಧಾನ, ಒಳಗೆ ಬಟ್ಟೆ ಮತ್ತು ಹೊರಗೆ ಜೇಡಿ ಮಣ್ಣು ಬಳಸಿದ್ದರಿಂದ ಇದು ಇಂದಿಗೂ ಆವಿಯಾಗದೆ ಉಳಿದಿದೆ. 2,000 ವರ್ಷಗಳಿಗೂ ಹೆಚ್ಚು ಹಳೆಯದಾದ ವೈನ್ ಸ್ವಲ್ಪವೂ ಆವಿಯಾಗದೆ ಉಳಿದಿರುವುದು ಅಶ್ಚರ್ಯವೇ ಸರಿ. ಇದು ಚೀನಾದ ಕಿನ್ ರಾಜ್ಯ-ಯುಗದ ಆಲ್ಕೋಹಾಲ್ ಅವಶೇಷವಾಗಿದೆ ಎನ್ನುವುದು ಸಂಶೋಧನೆಯಲ್ಲಿ ಹೇಳಲಾಗಿದೆ.
ಸಂಶೋಧನೆಗೆ ಒಳಗಾದ ವೈನ್
ಪ್ರಾಚೀನ ವೈನ್‌ನ ಪಾಕವಿಧಾನ ಮತ್ತು ಕುದಿಸುವ ತಂತ್ರಗಳನ್ನು ನಿಖರವಾಗಿ ಡಿಕೋಡ್ ಮಾಡಲು, ನಿಂಗ್ಕ್ಸಿಯಾ ಇನ್‌ಸ್ಟಿಟ್ಯೂಟ್ ಆಫ್ ಕಲ್ಚರಲ್ ರೆಲಿಕ್ಸ್ ಅಂಡ್ ಆರ್ಕಿಯಾಲಜಿ ಮತ್ತು ಸ್ಕೂಲ್ ಆಫ್ ಕಲ್ಚರಲ್ ಹೆರಿಟೇಜ್‌ನ ಜಂಟಿ ಪುರಾತತ್ತ್ವ ಶಾಸ್ತ್ರದ ಸಂಶೋಧನಾ ತಂಡವು ಸಂಶೋಧನೆ ನಡೆಸಿದೆ. ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು, ತಂಡವು ಅಧ್ಯಯನವನ್ನು ನಡೆಸಿದೆ.
24 ರೀತಿಯ ಆರ್ಗ್ಯಾನಿಕ್ ಆಸಿಡ್ಸ್
ಇಲ್ಲಿ ಸಮಾಧಿಯಿಂದ ಹೊರತೆಗೆಯಲಾದ ದ್ರವ ಅವಶೇಷಗಳಲ್ಲಿ 24 ರೀತಿಯ ಆರ್ಗ್ಯಾನಿಕ್ ಆಸಿಡ್ಸ್ ಅನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಸಾವಯವ ಆಮ್ಲಗಳು ಮತ್ತು ಅವುಗಳ ಉತ್ಪನ್ನಗಳು, ಅಮೈನೋ ಆಮ್ಲಗಳು ಮತ್ತು ಅವುಗಳ ಉತ್ಪನ್ನಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ಈ ವೈನ್‌ನಲ್ಲಿ ಇರುವುದು ಪತ್ತೆಯಾಗಿದೆ. ಸಾವಯವ ಆಮ್ಲಗಳ ಮೂಲಕ ಕೃತಕವಾಗಿ ಹುದುಗಿಸಿ ಅಂದರೆ ಫರ್ಮೆಂಟ್ ಮಾಡಿ ಈ ವೈನ್ ಅನ್ನು ತಯಾರಿಸಲಾಗಿದೆ. ಇದು ಚೀನೀ ಹಳದಿ ವೈನ್ ಹುವಾಂಗ್‌ಜಿಯುಗೆ ಸಮಾನಾಗಿದೆ ಎಂದು ಹೇಳಲಾಗಿದೆ. ಈ ದ್ರವವು ಧಾನ್ಯ-ಆಧಾರಿತ ಆಲ್ಕೊಹಾಲ್ಯುಕ್ತ ಪಾನೀಯ ಎನ್ನುವುದು ಸಂಶೋಧನೆಯಲ್ಲಿ ದೃಢಪಟ್ಟಿದೆ.
ಕ್ವಿನ್ ಜನರು 2,000 ವರ್ಷಗಳ ಹಿಂದೆ ಧಾನ್ಯ-ಆಧಾರಿತ ಫರ್ಮಂಟೇಶನ್ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದರು. ಇವರು ಸ್ಯಾಕರಿಫಿಕೇಶನ್ ಮತ್ತು ಫರ್ಮಂಟೇಶನ್ ಅನ್ನು ಒಟ್ಟೊಟ್ಟಿಗೆ ಮಾಡುತ್ತಿದ್ದರು.
ಇದು ಚೀನಾದ ಪ್ರಾಚೀನ ಧಾನ್ಯ ವೈನ್ ಸಂಪ್ರದಾಯದ ಹೊಸ ಪುರಾವೆಗಳನ್ನು ನೀಡುತ್ತದೆ. ಕೃಷಿ, ಆಹಾರ ಸಂಸ್ಕೃತಿ ಮತ್ತು ಕ್ವಿನ್-ಪೂರ್ವ ಅವಧಿಯ ಕರಕುಶಲತೆಯ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.


Click it and Unblock the Notifications
