Brahmaputra: ಭಾರತಕ್ಕೆ ಮತ್ತೊಂದು ತಲೆನೋವು ತಂದ ಚೀನಾ, ವಿಶ್ವದಲ್ಲೇ ಬೃಹತ್ ಅಣೆಕಟ್ಟು ನಿರ್ಮಾಣ!
China India dam dispute: ಸದಾ ಒಂದಿಲ್ಲೊಂದು ವಿಷಯದಲ್ಲಿ ಭಾರತದೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಚೀನಾ ಇದೀಗ ಭಾರತಕ್ಕೆ ಮತ್ತೊಂದು ತಲೆನೋವು ತರಲು ಮುಂದಾಗಿದೆ. ಚೀನಾ ಹಾಗೂ ಭಾರತದ ನಡುವೆ ಉಂಟಾಗಿದ್ದ ಗಡಿ ವಿವಾದ ಈಚೆಗಷ್ಟೇ ಅಂತ್ಯ ಕಂಡಿದೆ. ಇದರ ಬೆನ್ನಲ್ಲೇ ಬ್ರಹ್ಮಪುತ್ರನದಿಗೆ ಅಡ್ಡವಾಗಿ ವಿಶ್ವದ ದೊಡ್ಡ ಅಣೆಕಟ್ಟೆ ನಿರ್ಮಾಣ ಮಾಡುವುದಕ್ಕೆ ಚೀನಾ ಮುಂದಾಗಿದೆ. ಚೀನಾ ದೇಶವು ಭಾರತದೊಂದಿಗೆ ಬಹುತೇಕ ಕ್ಯಾತೆಯನ್ನು ತೆಗೆಯುತ್ತಲ್ಲೇ ಬಂದಿದೆ. ಗಡಿ ಸಂಘರ್ಷ ಶಮನ ಮಾಡುವುದಕ್ಕೆ ಚೀನಾ ಹಾಗೂ ಭಾರತ ಸಹಮತ ಸೂಚಿಸಿದ್ದವು. ಎಲ್ಲವೂ ಬಗೆಹರಿದಿದೆ. ಎರಡೂ ದೇಶಗಳ ನಡುವೆ ವಿದೇಶಾಂಗ ವ್ಯವಹಾರ ಹಾಗೂ ವಾಣಿಜ್ಯ ಸೇರಿದಂತೆ ಎಲ್ಲಾ ವಿಷಯವೂ ಸರಿ ಹೋಗುತ್ತಿದೆ ಎನ್ನುವಾಗಲೇ ಹೊಸ ವಿವಾದವೊಂದು ಶುರುವಾಗಿದೆ.
ಬ್ರಹ್ಮಪುತ್ರನದಿ ಏಷ್ಯಾದ ಹಲವು ದೇಶಗಳಲ್ಲಿ ಹರಿಯುತ್ತದೆ. ಬ್ರಹ್ಮಪುತ್ರನದಿಗೆ ಪರಿಣಾಮ ಬೀರುವಂತೆ ಯಾವುದಾದರೂ ಒಂದೊಂದು ಯೋಜನೆಗಳನ್ನು ಜಾರಿ ಮಾಡಲು ಮುಂದಾಗುವ ಮೂಲಕ ಚೀನಾ ದೇಶವು ಭಾರತಕ್ಕೆ ತಲೆನೋವು ಕೊಡುತ್ತಲ್ಲೇ ಇದೆ. ಚೀನಾದ ಯಾರ್ಲಂಗ್ ಜಾಂಗ್‌ಬೋ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ದೊಡ್ಡ ಜಲಾಶಯದ ನೀರನ್ನು ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ಬಳಸಿಕೊಳ್ಳುವ ಮೂಲಕ ಭಾರತ ಹಾಗೂ ಬಾಂಗ್ಲಾದೇಶಕ್ಕೆ ಈ ಹಿಂದೆ ಚೀನಾ ತಲೆನೋವು ತಂದಿತ್ತು. ಯಾಕೆಂದರೆ ಈ ನದಿಯೇ ಭಾರತದಲ್ಲಿ ಬ್ರಹ್ಮಪುತ್ರ ಹಾಗೂ ಬಾಂಗ್ಲಾದೇಶದಲ್ಲಿ ಜಮುನಾ ನದಿಯಾಗಿ ಹರಿಯುತ್ತದೆ. ಆದರೆ, ಈಗ ಬ್ರಹ್ಮಪುತ್ರ ನದಿಗೆ ಅಡ್ಡವಾಗಿ ವಿಶ್ವದಲ್ಲೇ ದೊಡ್ಡ ಅಣೆಕಟ್ಟೆ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿರುವುದಾಗಿ ಚೀನಾ ಹೇಳಿಕೊಂಡಿದೆ.

ಚೀನಾದ ಈ ನಿರ್ಧಾರ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ, ನಾವು ಎಲ್ಲಾ ವೈಜ್ಞಾನಿಕ ಪರಿಶೀಲನೆ ಮಾಡಿದ ಮೇಲೆಯೇ ಈ ಅಣೆಕಟ್ಟು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದೇವೆ. ಇದರಿಂದ ಭಾರತ ಹಾಗೂ ಬಾಂಗ್ಲಾದೇಶದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದೂ ಹೇಳಲಾಗಿದೆ. ಭಾರತ - ಚೀನಾ ಗಡಿಗೆ ಸಮೀಪವಾಗಿರುವ ಟಿಬೆಟ್‌ನಲ್ಲಿ ಬ್ರಹ್ಮಪುತ್ರನದಿಗೆ ಅಡ್ಡವಾಗಿ ಬೃಹತ್ ಅಣೆಕಟ್ಟು ನಿರ್ಮಿಸಲು ನಿರ್ಧರಿಸಲಾಗಿದೆ.
ಬ್ರಹ್ಮಪುತ್ರ ನದಿಯು ಟಿಬೆಟ್‌ನಲ್ಲಿ ಉಗಮವಾಗುತ್ತದೆ. ಅಲ್ಲಿಂದ ಇದು ಭಾರತದ ಅರುಣಾಚಲ ಪ್ರದೇಶ, ಅಸ್ಸಾಂಗೆ ಬರುತ್ತದೆ. ಅಸ್ಸಾಂನ ಮೂಲಕ ಬಾಂಗ್ಲದೇಶಕ್ಕೆ ಹರಿಯುತ್ತದೆ. ಈಶಾನ್ಯ ಭಾರತದ ಕೃಷಿ ಹಾಗೂ ವಾಣಿಜ್ಯ ಚಟುವಟಿಕೆಗಳಲ್ಲಿ ಈ ನದಿ ಪ್ರಧಾನ ಪಾತ್ರವನ್ನು ವಹಿಸಿದೆ.
ಭಾರತ ಹೇಳಿದ್ದೇನು: ಚೀನಾದ ಮೆಗಾ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರವು ಪ್ರತಿಕ್ರಿಯಿಸಿದೆ. ಭಾರತವು ಚೀನಾದ ಈ ಯೋಜನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿಯೂ. ಅಗತ್ಯ ಸಂದರ್ಭದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿಯೂ ಹೇಳಿದೆ. ಈ ವಿಷಯವನ್ನು ಭಾರತ ಚೀನಾದೊಂದಿಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಯೋಜನೆಯಿಂದ ಭಾರತದ ಮೇಲಾಗುವ ಪರಿಣಾಮವೇನು ?
ಚೀನಾದ ಈ ಬೃಹತ್ ಅಣೆಕಟ್ಟಿನಿಂದ ಮುಂದಿನ ದಿನಗಳಲ್ಲಿ ಭಾರತದ ವಿವಿಧ ರಾಜ್ಯಗಳ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಬ್ರಹ್ಮಪುತ್ರ ನದಿ ಭಾರತದ ಜೀವನಾಡಿಯಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಕೃಷಿ ಪ್ರಧಾನವಾಗಿಯೂ ಇದೆ. ಅಲ್ಲದೆ ಈ ಯೋಜನೆಯಿಂದಾಗಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಬರಗಾಲ ಹಾಗೂ ಬೃಹತ್ ಪ್ರವಾಹ ಸೃಷ್ಟಿಯಾಗುವ ಆತಂಕ ಇದೆ. ಹೀಗಾಗಿ ಭಾರತ ತನ್ನ ಕಳವಳವನ್ನು ದಾಖಲಿಸಿದೆ. ಅಷ್ಟೇ ಅಲ್ಲ ಈ ಉದ್ದೇಶಿತ ಯೋಜನೆಯಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸುವಂತೆಯೂ ಹೇಳಿದೆ.












Click it and Unblock the Notifications