ಚೀನಾದಲ್ಲಿದೆ ರೋಬೋಟ್‌ಗಳೇ 10 ನಿಮಿಷಕ್ಕೊಂದು ರೋಬೋಟ್ ತಯಾರಿಸುವ ಕಾರ್ಖಾನೆ!
ರೋಬೋಟ್‌ಗಳನ್ನು ಮನುಷ್ಯ ತಯಾರಿಸಿದ್ದಾಯ್ತು. ಚೀನಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಅದು ಯಾವಾಗಲೂ ಟೆಕ್ನಾಲಜಿಯಲ್ಲಿ ಎಲ್ಲರಿಗಿಂತ ಮುಂದೇ ಇರುತ್ತೆ ಬಿಡಿ. ರೋಬೋಟ್‌ಗಳು ಮನುಷ್ಯರ ಕೆಲಸ ಮಾಡುವುದು ಹೊಸ ವಿಚಾರವೇನಲ್ಲ. ಆದರೆ ರೋಬೋಟ್‌ಗಳೇ ಮತ್ತೊಂದು ರೋಬೋಟ್ ತಯಾರಿಸುವ ಕೆಲಸದಲ್ಲಿ ತೊಡಗಿಕೊಂಡರೆ? ಇದು ಯಾವುದೋ ವೈಜ್ಞಾನಿಕ ಕಾಲ್ಪನಿಕ ಸಿನಿಮಾದ ದೃಶ್ಯವಲ್ಲ. ಚೀನಾದಲ್ಲಿ ಇದು ಈಗ ವಾಸ್ತವವಾಗಿದೆ.
ಚೀನಾದ ಗುಯಾಂಗ್‌ಶಿ ಝುವಾಂಗ್ ಸ್ವಾಯತ್ತ ಪ್ರದೇಶದ ಲಿಯುಝೌನಲ್ಲಿ ಹೊಸದೊಂದು ಹ್ಯೂಮನಾಯ್ಡ್ ರೋಬೋಟ್ ಸ್ಮಾರ್ಟ್ ಫ್ಯಾಕ್ಟರಿ ಆರಂಭವಾಗಿದೆ. ಯುಬಿಟೆಕ್ ರೋಬೋಟಿಕ್ಸ್ ನಿರ್ಮಿಸಿರುವ ಈ ಕಾರ್ಖಾನೆಯಲ್ಲಿ ರೋಬೋಟ್‌ಗಳ ತಯಾರಿಕೆಯ ಹಲವು ಹಂತಗಳಲ್ಲಿ ಮತ್ತಷ್ಟು ರೋಬೋಟ್‌ಗಳನ್ನೇ ಬಳಸಲಾಗುತ್ತಿದೆ.

ಈ ಕಾರ್ಖಾನೆಯ ವಿಶೇಷತೆ ಎಂದರೆ, ಪ್ರತಿ 10 ನಿಮಿಷಕ್ಕೊಂದು ಕೈಗಾರಿಕಾ ಹ್ಯೂಮನಾಯ್ಡ್ ರೋಬೋಟ್ ತಯಾರಿಸುವ ಸಾಮರ್ಥ್ಯ ಇದಕ್ಕಿದೆ. ಕಂಪನಿಯ ಪ್ರಕಾರ, ಕಾರ್ಖಾನೆಯ ವಾರ್ಷಿಕ ಉತ್ಪಾದನಾ ಸಾಮರ್ಥ್ಯ ಸುಮಾರು 10,000 ರೋಬೋಟ್‌ಗಳು.
ಸ್ಮಾರ್ಟ್ ಫ್ಯಾಕ್ಟರಿ
ಸುಮಾರು 14,000 ಚದರ ಮೀಟರ್ ವಿಸ್ತಾರದಲ್ಲಿರುವ ಈ ಕಾರ್ಖಾನೆಯ ಎತ್ತರ 13.8 ಮೀಟರ್. ಇಲ್ಲಿ ಮುಖ್ಯವಾಗಿ ಯುಬಿಟೆಕ್‌ನ ವಾಕರ್ ಎಸ್ ಮತ್ತು ಕ್ರೂಜರ್ ಸರಣಿಯ ಕೈಗಾರಿಕಾ ಹ್ಯೂಮನಾಯ್ಡ್ ರೋಬೋಟ್‌ಗಳನ್ನು ತಯಾರಿಸಲಾಗುತ್ತದೆ. ಈ ಕಾರ್ಖಾನೆಯನ್ನು ಯುಬಿಟೆಕ್ ಮತ್ತು ಸೀಮೆನ್ಸ್ ಡಿಜಿಟಲ್ ಇಂಡಸ್ಟ್ರೀಸ್ ಸಾಫ್ಟ್‌ವೇರ್ ಸಹಭಾಗಿತ್ವದಲ್ಲಿ ನಿರ್ಮಿಸಿವೆ. ಕಾರ್ಖಾನೆಯ ಕಾರ್ಯಾಚರಣೆಯನ್ನು ಯುಬಿಟೆಕ್ 'ಸ್ಮಾರ್ಟ್ ಬ್ರೈನ್' ಎಂದು ಕರೆಯುವ ಡಿಜಿಟಲ್ ವ್ಯವಸ್ಥೆ ನಿರ್ವಹಿಸುತ್ತದೆ.
ಕಾರ್ಖಾನೆಯಲ್ಲಿ ಏನು ಉತ್ಪಾದಿಸಬೇಕು ಎಂಬುದನ್ನು ನಿರ್ಧರಿಸುವುದರಿಂದ ಹಿಡಿದು, ಅಗತ್ಯ ಭಾಗಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು, ಉತ್ಪಾದನಾ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ತಯಾರಾದ ರೋಬೋಟ್‌ಗಳ ಗುಣಮಟ್ಟ ಪರಿಶೀಲಿಸುವವರೆಗೆ ಹಲವು ಕೆಲಸಗಳನ್ನು ಈ ವ್ಯವಸ್ಥೆ ನಿರ್ವಹಿಸುತ್ತದೆ.
ಪ್ರತಿ ರೋಬೋಟ್‌ಗೂ ಪ್ರತ್ಯೇಕ ಸೀರಿಯಲ್ ನಂಬರ್ ನೀಡಲಾಗುತ್ತದೆ. ಇದರಿಂದ ಅದು ಕಾರ್ಖಾನೆಯ ಉತ್ಪಾದನಾ ಪ್ರಕ್ರಿಯೆಯ ಯಾವ ಹಂತದಲ್ಲಿದೆ ಎಂಬುದನ್ನು ಟ್ರ್ಯಾಕ್ ಮಾಡಬಹುದು.
ರೋಬೋಟ್‌ಗಳ ಕೆಲಸವೇನು?
ಇಲ್ಲಿ ರೋಬೋಟ್‌ಗಳು ಕೇವಲ ಸಿದ್ಧವಾದ ಉತ್ಪನ್ನವಾಗಿ ಹೊರಬರುವುದಿಲ್ಲ. ರೋಬೋಟ್‌ಗಳ ತಯಾರಿಕೆಯಲ್ಲೂ ಅವು ಪ್ರಮುಖ ಪಾತ್ರ ವಹಿಸುತ್ತವೆ. ಯುಬಿಟೆಕ್‌ನ ಕ್ರೂಜರ್ ವೈ1 ಮತ್ತು ಕ್ರೂಜರ್ ಎಸ್2 ರೋಬೋಟ್‌ಗಳು ಕಾರ್ಖಾನೆಯಲ್ಲಿ ವಸ್ತುಗಳನ್ನು ಇಳಿಸುವುದು, ಜೋಡಿಸುವುದು, ಉತ್ಪಾದನಾ ವಿಭಾಗಕ್ಕೆ ಅಗತ್ಯ ವಸ್ತುಗಳನ್ನು ಸಾಗಿಸುವುದು ಹಾಗೂ ಅವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವಂತಹ ಕೆಲಸಗಳನ್ನು ಮಾಡುತ್ತವೆ.
ಅಂದರೆ, ಕೆಲವು ರೋಬೋಟ್‌ಗಳು ಮತ್ತಷ್ಟು ರೋಬೋಟ್‌ಗಳನ್ನು ತಯಾರಿಸಲು ಬೇಕಾದ ಬಿಡಿಭಾಗಗಳನ್ನು ಸಿದ್ಧಪಡಿಸುವ ಕೆಲಸದಲ್ಲೇ ತೊಡಗಿಕೊಂಡಿವೆ. ಕಂಪನಿಯ ಪ್ರಕಾರ, ಇಡೀ ವ್ಯವಸ್ಥೆಯನ್ನು ಡಿಜಿಟಲ್ ತಂತ್ರಜ್ಞಾನ ಮತ್ತು ಸ್ವಯಂಚಾಲಿತ ಯಂತ್ರಗಳ ಮೂಲಕ ಅತ್ಯಂತ ಕಡಿಮೆ ಮಾನವ ಮೇಲ್ವಿಚಾರಣೆಯೊಂದಿಗೆ ನಡೆಸಲು ವಿನ್ಯಾಸಗೊಳಿಸಲಾಗಿದೆ.
ಈ ಕಾರ್ಖಾನೆಯಲ್ಲಿ ಕೇವಲ ಹ್ಯೂಮನಾಯ್ಡ್ ರೋಬೋಟ್‌ಗಳಷ್ಟೇ ಕೆಲಸ ಮಾಡುತ್ತಿಲ್ಲ. ಸಹಕಾರದಿಂದ ಕೆಲಸ ಮಾಡುವ ರೋಬೋಟಿಕ್ ಆರ್ಮ್‌ಗಳು, ಚಾಲಕರಿಲ್ಲದ ಲಾಜಿಸ್ಟಿಕ್ಸ್ ವಾಹನಗಳು, ಭಾರ ಎತ್ತುವ ಕೆಲಸಕ್ಕೆ ನೆರವಾಗುವ ಯಂತ್ರಗಳು ಮತ್ತು ತಿರುಗುವ ವರ್ಕ್‌ಟೇಬಲ್‌ಗಳನ್ನೂ ಬಳಸಲಾಗುತ್ತಿದೆ.
ಇವುಗಳ ಸಹಾಯದಿಂದ ಒಂದೇ ಉತ್ಪಾದನಾ ಸಾಲಿನಲ್ಲಿ ವಿವಿಧ ಮಾದರಿಯ ರೋಬೋಟ್‌ಗಳನ್ನು ತಯಾರಿಸಲು ಸಾಧ್ಯವಾಗುತ್ತದೆ. ಪ್ರತಿ ಮಾದರಿಗೂ ಪ್ರತ್ಯೇಕ ಅಸೆಂಬ್ಲಿ ವ್ಯವಸ್ಥೆ ನಿರ್ಮಿಸುವ ಅಗತ್ಯ ಕಡಿಮೆಯಾಗುತ್ತದೆ.
ರೋಬೋಟ್‌ಗಳಿಗೂ 'ಹೆಲ್ತ್ ಚೆಕ್'!
ಕಾರ್ಖಾನೆಯಲ್ಲಿ ರೋಬೋಟ್ ತಯಾರಾಗಿ ಹೊರಬರುವ ಮೊದಲು ಅದಕ್ಕೂ ಒಂದು ರೀತಿಯ 'ಆರೋಗ್ಯ ತಪಾಸಣೆ' ನಡೆಯುತ್ತದೆ. ಯುಬಿಟೆಕ್‌ನ ಪ್ರಕಾರ, ಪ್ರತಿ ಹ್ಯೂಮನಾಯ್ಡ್ ರೋಬೋಟ್ ನಾಲ್ಕು ಗಂಟೆಗೂ ಹೆಚ್ಚು ಕಾಲ ಸಂಪೂರ್ಣ ಯಂತ್ರದ ಪರೀಕ್ಷೆಗೆ ಒಳಗಾಗುತ್ತದೆ. ಅದರ ಚಲನೆ, ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಲಾಗುತ್ತದೆ.
ಇದರ ನಂತರ 360 ಡಿಗ್ರಿ ದೃಶ್ಯ ಪರಿಶೀಲನೆಯೂ ನಡೆಯುತ್ತದೆ. ರೋಬೋಟ್‌ನ ಹೊರಭಾಗವನ್ನು ಎಲ್ಲ ಕೋನಗಳಿಂದ ಪರಿಶೀಲಿಸಿ ಅದರ ಗುಣಮಟ್ಟ ಮತ್ತು ವಿನ್ಯಾಸದಲ್ಲಿ ಯಾವುದೇ ಸಮಸ್ಯೆಗಳಿವೆಯೇ ಎಂಬುದನ್ನು ನೋಡಲಾಗುತ್ತದೆ.
ಕಾರ್ಖಾನೆಯಲ್ಲಿರುವ ಸ್ವಯಂಚಾಲಿತ ಗೋದಾಮೂ ಗಮನ ಸೆಳೆಯುತ್ತದೆ. ಕೇವಲ 65 ಚದರ ಮೀಟರ್ ಪ್ರದೇಶದಲ್ಲಿ 112 ಹ್ಯೂಮನಾಯ್ಡ್ ರೋಬೋಟ್‌ಗಳನ್ನು ಸಂಗ್ರಹಿಸಬಹುದು ಎಂದು ಕಂಪನಿ ಹೇಳಿದೆ.
ಅಸೆಂಬ್ಲಿ, ಪರೀಕ್ಷೆ ಮತ್ತು ಸಂಗ್ರಹಣಾ ವಿಭಾಗಗಳ ನಡುವೆ ರೋಬೋಟ್‌ಗಳು ಮತ್ತು ಅವುಗಳ ಬಿಡಿಭಾಗಗಳನ್ನು ಸಾಗಿಸಲು ಸ್ವಯಂಚಾಲಿತ ಮಾರ್ಗದರ್ಶಿತ ವಾಹನಗಳು, ಚಾಲಕರಿಲ್ಲದ ಫೋರ್ಕ್‌ಲಿಫ್ಟ್‌ಗಳು ಸೇರಿದಂತೆ ಹಲವು ಲಾಜಿಸ್ಟಿಕ್ಸ್ ಯಂತ್ರಗಳನ್ನು ಬಳಸಲಾಗುತ್ತಿದೆ.
ಚೀನಾದ ರೋಬೋಟ್ ಉದ್ಯಮದ ವೇಗ
ಈ ಹೊಸ ಕಾರ್ಖಾನೆ ಆರಂಭವಾಗಿರುವುದು ಚೀನಾ ತನ್ನ ರೋಬೋಟಿಕ್ಸ್ ಉದ್ಯಮವನ್ನು ವೇಗವಾಗಿ ವಿಸ್ತರಿಸುತ್ತಿರುವ ಸಮಯದಲ್ಲಿ. ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, ಜುಲೈ ತಿಂಗಳಲ್ಲಿ ಚೀನಾದಲ್ಲಿ 98,677 ಕೈಗಾರಿಕಾ ರೋಬೋಟ್‌ಗಳು ಉತ್ಪಾದನೆಯಾಗಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ.30.2ರಷ್ಟು ಹೆಚ್ಚಳವಾಗಿದೆ.
2026ರ ಮೊದಲ ಏಳು ತಿಂಗಳಲ್ಲಿ ಕೈಗಾರಿಕಾ ರೋಬೋಟ್‌ಗಳ ಉತ್ಪಾದನೆ 6,35,056 ಘಟಕಗಳಿಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.28.5ರಷ್ಟು ಏರಿಕೆಯಾಗಿದೆ.
ಒಟ್ಟಿನಲ್ಲಿ, ಚೀನಾದ ಈ ಹೊಸ ಕಾರ್ಖಾನೆ ರೋಬೋಟಿಕ್ಸ್ ಕ್ಷೇತ್ರದ ಮುಂದಿನ ಹಂತ ಹೇಗಿರಬಹುದು ಎಂಬುದಕ್ಕೆ ಒಂದು ಕುತೂಹಲಕಾರಿ ಉದಾಹರಣೆಯಾಗಿದೆ. ಮನುಷ್ಯರು ರೋಬೋಟ್‌ಗಳನ್ನು ತಯಾರಿಸುವ ಕಾಲದಿಂದ, ರೋಬೋಟ್‌ಗಳೇ ಮತ್ತಷ್ಟು ರೋಬೋಟ್‌ಗಳನ್ನು ತಯಾರಿಸುವ ಕಾಲದತ್ತ ಕೈಗಾರಿಕಾ ಜಗತ್ತು ಸಾಗುತ್ತಿರುವಂತೆ ಇದು ಕಾಣಿಸುತ್ತದೆ.


Click it and Unblock the Notifications
