3ನೇ ಮಹಾಯುದ್ಧ ಫಿಕ್ಸ್: ಚೀನಾ ಹಾಕುತ್ತಾ ಮೊದಲ ಬಾಂಬ್?
ಬೀಜಿಂಗ್: ಅದ್ಯಾವ ಘಳಿಗೆಯಲ್ಲಿ ಅಮೆರಿಕ-ತೈವಾನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದವೋ ಗೊತ್ತಿಲ್ಲ, ಅಲ್ಲಿಂದ ಈವರೆಗೆ ಅಂದರೆ 1 ವಾರದಿಂದ ದಕ್ಷಿಣ ಚೀನಾ (China) ಸಮುದ್ರ ಹೊತ್ತಿ ಉರಿಯುತ್ತಿದೆ. ಈಗಾಗಲೇ ತೈವಾನ್‌ಗೆ (Taiwan) ತನ್ನ ತಾಕತ್ ತೋರಿಸಿ ಬೆಚ್ಚಿಬೀಳಿಸಿರುವ ಚೀನಾ, ಯುದ್ಧಕ್ಕೆ ಸಿದ್ಧರಾಗಲು ಕರೆ ನೀಡಿದೆ. ಖುದ್ದು ಚೀನಾ ಅಧ್ಯಕ್ಷರೇ ಈ ಮಾತು ಹೇಳಿದ್ದಾರೆ.
10 ಯುದ್ಧ ನೌಕೆಗಳು ಹಾಗೂ 70ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ತೈವಾನ್ ಸುತ್ತಲೂ ನಿಯೋಜಿಸಿ ಚೀನಾ ಮಿಲಿಟರಿ ಸಮರಾಭ್ಯಾಸ ನಡೆಸಿ ಎಚ್ಚರಿಕೆ ನೀಡಿದ್ದಾಗಿದೆ. ಇಷ್ಟು ಸಾಲದು ಎಂಬಂತೆ ಇದೀಗ ಯುದ್ಧಕ್ಕೆ ಸಿದ್ಧರಾಗಿ ಎಂಬ ಸಂದೇಶವನ್ನು ಚೀನಾ ಅಧ್ಯಕ್ಷ ಜಿನ್‌ಪಿಂಗ್ ನೀಡಿದ್ದಾರೆ. ಜೊತೆಗೆ ಅಮೆರಿಕ ವಿರುದ್ಧ ಸೇಡು ತೀರಿಸಿಕೊಳ್ಳಲು ಇದು ಸರಿಯಾದ ಸಮಯ ಎಂಬುದನ್ನೂ ಚೀನಾ ಸ್ಪಷ್ಟವಾಗಿ ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ. ಹೀಗಾಗಿಯೇ ಬಹಿರಂಗವಾಗಿ ತೈವಾನ್‌ಗೆ ಎಚ್ಚರಿಕೆ ರವಾನಿಸಲಾಗಿದೆ.

ಸೈನಿಕರ ನೇಮಕಾತಿಯಲ್ಲಿ ಬದಲಾವಣೆ
ಯುದ್ಧ ಕಾಲದ ಪರಿಸ್ಥಿತಿಗೆ ತಕ್ಕಂತೆ ಸೈನಿಕರ ನೇಮಕಾತಿಗೂ ಚೀನಾ ಮುಂದಾಗಿದೆ. ಈ ಮೂಲಕ ತೈವಾನ್ ನೆಲಕ್ಕೆ ನುಗ್ಗಿ ದಾಳಿ ನಡೆಸುವ ಮುನ್ಸೂಚನೆ ನೀಡಿದೆ ಚೀನಾ. ಜಗತ್ತಿನಲ್ಲೇ ಅತ್ಯಧಿಕ ಸೈನಿಕರನ್ನು ಹೊಂದಿರುವ ಚೀನಾ, ಬಲಿಷ್ಠವಾಗಿ ತನ್ನ ಮಿಲಿಟರಿ ಕಟ್ಟಿಕೊಂಡಿದೆ. ಅಕಸ್ಮಾತ್ ತೈವಾನ್ ವಿರುದ್ಧ ಯುದ್ಧ ಆರಂಭವಾದರೂ ಅಮೆರಿಕ ಅವರ ಪರ ನಿಲ್ಲಬಹುದು. ಇಂತಹ ಪರಿಸ್ಥಿತಿ ಎದುರಾದರೆ, ಅದನ್ನೆಲ್ಲಾ ಸ್ಪಷ್ಟವಾಗಿ ಎದುರಿಸುವ ಶಕ್ತಿ ಬೇಕು ಎಂಬುದು ಚೀನಾ ಲೆಕ್ಕಾಚಾರವಾಗಿದೆ.
ಪರಿಸ್ಥಿತಿ ಕೈಮೀರಿ ಹೋಗಿದೆ!
ಚೀನಾ-ತೈವಾನ್ ನಡುವೆ ಆಗಾಗ ಯುದ್ಧದ ವಾತಾವರಣ ನಿರ್ಮಾಣ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಗಂಭೀರವಾಗಿದೆ. ಅದರಲ್ಲೂ ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಅಮೆರಿಕಕ್ಕೆ ಭೇಟಿ ನೀಡಿದ ತಕ್ಷಣ ತನ್ನ ಶತ್ರು ರಾಷ್ಟ್ರಕ್ಕೆ ಚೀನಾ ಆಘಾತ ನೀಡಿತ್ತು. ತೈವಾನ್ ಸುತ್ತ ಸಮರಭ್ಯಾಸ ನಡೆಸಿದ ಬಳಿಕ ತೈವಾನ್ ವಿರುದ್ಧ ಯುದ್ಧ ಸಾರಿದರೆ ಹೇಗೆ ದಾಳಿ ಮಾಡುತ್ತೇವೆ ಎಂಬುದರ ವಿಡಿಯೋ ತೋರಿಸಿ ಭಯ ಹುಟ್ಟಿಸಿತ್ತು ಚೀನಾ. ಈಗ ಯುದ್ಧಕ್ಕೆ ಮುಂದಾಗಿದೆ.
ಯುದ್ಧದ ಭೀಕರತೆಗೆ ವಿಡಿಯೋ ಸಾಕ್ಷಿ
ಅಂದಹಾಗೆ ಒಂದು ಸ್ಪೆಷಲ್ ಆನಿಮೇಟೆಡ್ ವಿಡಿಯೋ ಕ್ರಿಯೇಟ್ ಮಾಡಿ, ತಾನು ತೈವಾನ್ ನೆಲವನ್ನು ಹೇಗೆ ನಾಶ ಮಾಡಬಲ್ಲೆ ಎಂಬುದನ್ನ ಚೀನಾ ಸೇನೆ ತೋರಿಸಿದೆ. ಗ್ಲೋಬಲ್ ಟೈಮ್ಸ್ ಈ ವಿಡಿಯೋ ಶೇರ್ ಮಾಡುವ ಮೂಲಕ ತೈವಾನ್ ಮತ್ತು ಅಮೆರಿಕಗೆ ಪರೋಕ್ಷ ಎಚ್ಚರಿಕೆ ರವಾನಿಸಿದೆ. ಚೀನಾದ ಆನಿಮೇಟೆಡ್ ವಿಡಿಯೋ ವೈರಲ್ ಆಗುತ್ತಿದ್ದು, ಪರಿಸ್ಥಿತಿ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಆದರೆ ತೈವಾನ್ ನಾಯಕರಿಂದ ಚೀನಾದ ಈ ನಡೆ ಬಗ್ಗೆ ಅಧಿಕೃತ ಹೇಳಿಕೆ ಲಭ್ಯವಾಗಿಲ್ಲ.

ಅಲ್ಲಿ ಉಕ್ರೇನ್, ಇಲ್ಲಿ ತೈವಾನ್?
ಒಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ತೊಡೆತಟ್ಟಿ ನಿಂತಿದೆ, ಇನ್ನೊಂದು ಕಡೆ ತೈವಾನ್ ವಿರುದ್ಧ ಯುದ್ಧ ಆರಂಭಿಸಲು ಚೀನಾ ಕೂಡ ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ ಮತ್ತೊಂದು ಮಹಾಯುದ್ಧಕ್ಕೆ ಜಗತ್ತು ಸಜ್ಜಾದಂತೆ ಭಾಸವಾಗುತ್ತಿದೆ. ಅಕಸ್ಮಾತ್ ತೈವಾನ್ ವಿರುದ್ಧ ಚೀನಾ ಯುದ್ಧ ಆರಂಭಿಸಿದ್ದೇ ಆದರೆ ಅಮೆರಿಕ ಸುಮ್ಮನೆ ಕೂರುವುದಿಲ್ಲ. ಆಗ ಅನಿವಾರ್ಯವಾಗಿ ದೊಡ್ಡ ಸಂಘರ್ಷ ಏರ್ಪಡುವುದು ಗ್ಯಾರಂಟಿ. ಹೀಗೆ ಕೋಳಿ ಜಗಳ ಮುಂದೆ 3ನೇ ಮಹಾಯುದ್ಧವಾಗಿ ಬದಲಾದರೂ ಅಚ್ಚರಿ ಪಡಬೇಕಿಲ್ಲ.ಈಗಿನ ಬೆಳವಣಿಗೆಗಳು ತೈವಾನ್ ನಿದ್ದೆ ಮಾತ್ರ ಕೆಡಿಸಿಲ್ಲ, ಅಮೆರಿಕದ ನಿದ್ದೆಯೂ ಹಾರಿಹೋಗುವಂತೆ ಮಾಡಿದೆ.












Click it and Unblock the Notifications