ಪರಮಾಣು ಕ್ಷಿಪಣಿ ಒಳಗೆ ಇಂಧನದ ಬದಲು ನೀರು, ಚೀನಾ ಸೇನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು... China Military
ಚೀನಾ ದೈತ್ಯವಾಗಿ ಬೆಳೆದಿರುವ ಹಾಗೂ ಅಮೆರಿಕಗೆ ಪೈಪೋಟಿ ಕೊಡುತ್ತಿರುವ ಬೃಹತ್ ದೇಶವಾಗಿದೆ ಎಂಬುದನ್ನು ಇಡೀ ಜಗತ್ತೇ ಒಪ್ಪಿಕೊಳ್ಳುತ್ತದೆ. ಅದರಲ್ಲೂ ಚೀನಾ ದೇಶದ ಈ ಬೆಳವಣಿಗೆ ಹಿಂದೆ ಕ್ಸಿ ಜಿನ್‌ಪಿಂಗ್ ತಂತ್ರ ಹಾಗೂ ಪ್ರತಿತಂತ್ರ ಕೆಲಸ ಮಾಡಿದೆ. ಆದರೆ ಇಷ್ಟು ಒಳ್ಳೆಯ ಹೆಸರು ಮಾಡಿ ಇಡೀ ಚೀನಾ ಜನತೆಯ ಮನಸ್ಸು ಗೆದ್ದ ಅಧ್ಯಕ್ಷನ ಆಪ್ತನೇ ದೊಡ್ಡ ಭ್ರಷ್ಟಾಚಾರಿ ಎಂದರೆ ನೀವು ನಂಬಲೇ ಬೇಕಾಗಿದೆ. ಯಾಕಂದ್ರೆ ಇದೀಗ ಇಡೀ ಜಗತ್ತು ಬೆಚ್ಚಿಬೀಳುವ ವಿಚಾರಗಳು ಬಯಲಾಗಿದ್ದು, ಚೀನಾ ಸೇನೆಯಲ್ಲಿ ದುಡ್ಡು ಮಾಡಲು ಸೇನಾಧಿಕಾರಿಗಳು ಯಾವೆಲ್ಲಾ ಕುತಂತ್ರ ಮಾಡಿದ್ದರು ಗೊತ್ತೆ?
ಇಡೀ ಜಗತ್ತಿನಲ್ಲೇ ಅತಿದೊಡ್ಡ ಕಮ್ಯುನಿಸ್ಟ್ ಆಡಳಿತದ ದೇಶ ಎಂದು ಹೆಸರು ಮಾಡಿರುವ ಇದೇ ಚೀನಾ ನೆಲದಲ್ಲಿ ಭ್ರಷ್ಟಾಚಾರಕ್ಕೆ ಜಾಗವೇ ಇಲ್ಲ. ಚೀನಾ ನೆಲದಲ್ಲಿ ಭ್ರಷ್ಟಾಚಾರ ಮಾಡಿದವರಿಗೆ ಕಠಿಣ ಶಿಕ್ಷೆ ಪಕ್ಕಾ, ಏಕೆಂದರೆ ಅಲ್ಲಿ ನಿಯಮ ಅಷ್ಟು ಕಠಿಣ. ಹೀಗಿದ್ದರು ಭಯ ಇಲ್ಲದೆ ಭ್ರಷ್ಟಾಚಾರ ಮಾಡಿದ್ದವರು ಕಂಬಿ ಹಿಂದೆ ಬಿದ್ದು ಒದ್ದಾಡುತ್ತಿದ್ದಾರೆ. ಇದೇ ರೀತಿಯಾಗಿ ಚೀನಾ ಸೇನೆಯಲ್ಲಿ ಕೂಡ ಭ್ರಷ್ಟಾಚಾರ & ಅನ್ಯಾಯ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈಗ ನೋಡಿದರೆ ಅದಕ್ಕೆ ಸಾಕ್ಷ್ಯ ಕೂಡ ಲಭ್ಯವಾಗಿದೆ ಎಂದು ಅಮೆರಿಕದ ಗುಪ್ತಚರ ವರದಿಗಳು ಇಡೀ ಜಗತ್ತಿನ ಗಮನ ಸೆಳೆದಿವೆ.

ಪರಮಾಣು ಮಾಹಿತಿ ಸೋರಿಕೆ ಆರೋಪ
ಚೀನಾ ಕೆಲವು ದಿನಗಳ ಹಿಂದಷ್ಟೇ ತನ್ನ ಸೇನೆಯಲ್ಲಿ ಇರುವ ದೊಡ್ಡ ದೊಡ್ಡ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಇಲ್ಲಿ ಪ್ರಮುಖವಾಗಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಪ್ತ ಎಂದು ಗುರುತಿಸಿಕೊಂಡು ದೊಡ್ಡ ದೊಡ್ಡ ಹುದ್ದೆ ಪಡೆದಿದ್ದ ಹಿರಿಯ ಸೇನಾಧಿಕಾರಿ ಜಾಂಗ್ ಯೂಕ್ಸಿ ಬಗ್ಗೆ ಗಂಭೀರ ಆರೋಪ ಮಾಡಲಾಗಿತ್ತು. ಕೊನೆಗೆ ಜಾಂಗ್ ಯೂಕ್ಸಿ ಬಂಧನ ಮಾಡಿ, ವಿಚಾರಣೆ ಕೂಡ ನಡೆಯುತ್ತಿದೆ. ಚೀನಾ ಶತ್ರು ಪಡೆಗೆ ಪರಮಾಣು ಅಸ್ತ್ರದ ಮಾಹಿತಿ ಸೋರಿಕೆ ಮಾಡಿರುವ ಗಂಭೀರ ಆರೋಪ ಜಾಂಗ್ ಯೂಕ್ಸಿ ವಿರುದ್ಧ ಇದೆ. ಆದರೆ ಇದೆಲ್ಲವನ್ನೂ ಮೀರಿಸುವ ಮತ್ತೊಂದು ಭಾರಿ ಸ್ಫೋಟಕ ಆರೋಪ ಇದೀಗ ಬಯಲಾಗಿದೆ.
ಕ್ಷಿಪಣಿಗಳ ಒಳಗೆ ಇಂಧನದ ಬದಲು ನೀರು!
ಪರಮಾಣು ಕ್ಷಿಪಣಿಗಳ ವಿಚಾರದಲ್ಲಿ ಚೀನಾ ತುಂಬಾ ಬಲವಾಗಿದ್ದು, ಅಕಸ್ಮಾತ್ ಶತ್ರು ದೇಶಗಳು ತಂಟೆಗೆ ಬಂದರೆ ಅವರನ್ನು ತಟ್ಟಿಬಿಡುವ ತಾಕತ್ ಹೊಂದಿದೆ. ಹೀಗಿದ್ದರೂ ಸ್ವತಃ ಚೀನಾ ಸೇನೆ ಒಳಗೆ ಇರುವ ಕೆಲವು ಭ್ರಷ್ಟಾಚಾರಿಗಳು ತಮ್ಮದೇ ದೇಶಕ್ಕೆ ಖೆಡ್ಡಾ ತೋಡಿದ್ದರು ಎಂಬ ಆಘಾತಕಾರಿ ಆರೋಪ ಇದೀಗ ಸಾಕ್ಷ್ಯ ಸಮೇತ ಬಯಲಾಗುತ್ತಿದೆ.
ಅಮೆರಿಕ ಗುಪ್ತಚರ ವರದಿಗಳ ಪ್ರಕಾರ ಚೀನಾ ಸೇನೆಯಲ್ಲಿ ಅಧಿಕಾರಿಗಳು ಅದೆಷ್ಟು ಭ್ರಷ್ಟರಾಗಿದ್ದರು ಎಂದರೆ, ಪರಮಾಣು ಕ್ಷಿಪಣಿಗಳ ಒಳಗೆ ಇಂಧನದ ಬದಲು ನೀರು ತುಂಬಿಸಿದ್ದರು ಎಂದು ಆರೋಪ ಮಾಡಲಾಗಿದೆ. ಅಲ್ಲದೆ ಚೀನಾ ಸೇನೆ ದಿಢೀರ್ ಇದೇ ಕ್ಷಿಪಣಿಗಳನ್ನು ನಂಬಿ ಹೋರಾಟಕ್ಕೆ ನಿಂತರೆ ಕ್ಷಿಪಣಿಗಳು ಕೆಲಸಕ್ಕೆ ಬಾರದ ರೀತಿ ಮಾಡಿದ್ದರು ಭ್ರಷ್ಟ ಸೇನಾಧಿಕಾರಿಗಳು, ಎಂಬ ಭಾರಿ ಗಂಭೀರ ಆರೋಪವನ್ನು ಇದೀಗ ಮಾಡಲಾಗಿದೆ.












Click it and Unblock the Notifications