ನಾಯಿಗಳಿಗೂ ನಿರ್ಬಂಧ; ಶಾಂಘೈನಲ್ಲಿ ಹೇಗಿದೆ ಕೋವಿಡ್ ಲಾಕ್‌ಡೌನ್!?
ಶಾಂಘೈ, ಮಾರ್ಚ್ 29: 'ಹೋದ್ಯಾ ಪಿಶಾಚಿ ಅಂದ್ರೆ, ಬಂದೆ ಗವಾಕ್ಷೀಲಿ ಎನ್ನುವ ಗಾದೆ' ಮಾತು ತುಂಬಾ ಹಳೆಯದ್ದು. ಈಗದೇ ಗಾದೆಮಾತು ಕೋವಿಡ್-19 ಸಾಂಕ್ರಾಮಿಕ ಪಿಡುಗಿಗೂ ಹೊಂದಿಕೊಳ್ಳುವ ಹಾಗೆ ಕಾಣುತ್ತಿದೆ. ಇಡೀ ಜಗತ್ತಿಗೆ ನರಕ ತೋರಿಸಿದ ಕೊರೊನಾವೈರಸ್, ಚೀನಾದಲ್ಲಿ ಮತ್ತೊಮ್ಮೆ ತಲೆ ಎತ್ತಿದೆ.
ಚೀನಾದ ಅತಿದೊಡ್ಡ ನಗರವಾಗಿರುವ ಶಾಂಘೈನಲ್ಲಿ ಲಾಕ್‌ಡೌನ್ ನಿಯಮಗಳು ಬಲು ಕಟ್ಟುನಿಟ್ಟು ಆಗುತ್ತಿವೆ. ಶ್ವಾನಗಳನ್ನು ಕರೆದುಕೊಂಡು ವಾಕಿಂಗ್ ಹೋಗುವಂತಿಲ್ಲ. ಅಷ್ಟೇ ಯಾಕೆ, ಸಾರ್ವಜನಿಕರು ಮನೆಗಳಿಂದ ಹೊರ ಬರುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಚೀನಾದ ಪುದೊಂಗ್ ಜಿಲ್ಲೆಯಲ್ಲಿ ಜನರು ಮನೆಗಳಿಂದ ಹೊರ ಬರುವಂತಿಲ್ಲ. ಕೋವಿಡ್-19 ಸೋಂಕಿನ ವೈದ್ಯಕೀಯ ಪರೀಕ್ಷೆಗಾಗಿ ಮಾತ್ರ ಜನರು ಹೊರ ಬರುವುದಕ್ಕೆ ಅವಕಾಶ ನೀಡಲಾಗುತ್ತಿದೆ.

ಶಾಂಘೈ ನಗರದಲ್ಲಿ ಕೊರೊನಾವೈರಸ್ ಹಾವಳಿ
ಚೀನಾದ ಶಾಂಘೈ ನಗರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 4477 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಶಾಂಘೈನಾದ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಶಾಂಘೈನಲ್ಲಿ ಕೋವಿಡ್-19 ಏರಿಕೆದೆ ಬಿಎ.2 ರೂಪಾಂತರಿ ಕಾರಣ
ಶಾಂಘೈ ನಗರದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರಲು ಬಿಎ.2 ಎಂಬ ಉಪ ರೂಪಾಂತರಿ ವೈರಸ್ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ 2019ರ ಕೊನೆಯಲ್ಲಿ ಮಧ್ಯ ಚೀನಾದ ನಗರವಾದ ವುಹಾನ್‌ನಲ್ಲಿ ಮೊದಲು ಪತ್ತೆಯಾದ ಸಾಂಕ್ರಾಮಿಕ ರೋಗದಿಂದ ಇಡೀ ಜಗತ್ತು ತತ್ತರಿಸಿ ಹೋಗಿದೆ.
ಸಾರ್ವಜನಿಕ ಮಾರುಕಟ್ಟೆಗಳಲ್ಲಿ ಆಹಾರ ಖರೀದಿಸುವುದಕ್ಕೆ ಜನರು ಭಯಪಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ತಾಜಾ ಮಾಂಸ ಮತ್ತು ತರಕಾರಿಗಳ ಕೊರತೆಯ ಬಗ್ಗೆ ಕೆಲವು ನಿವಾಸಿಗಳು ಆನ್‌ಲೈನ್ ವೇದಿಕೆಯಲ್ಲಿ ದೂರಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳು ಆಹಾರ ಸರಬರಾಜುಗಳನ್ನು ಸುಸೂತ್ರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಜಿಮ್ನಾಷಿಯಂ ಮತ್ತು ಪ್ರದರ್ಶನ ಕೇಂದ್ರಗಳನ್ನು ರೋಗಿಗಳ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಅದಾಗ್ಯೂ, ಅವರಲ್ಲಿ ಹೆಚ್ಚಿನವರು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದು ತಿಳಿದು ಬಂದಿದೆ.

ಕಾಂಪೌಂಡ್‌ಗಳಲ್ಲಿ ನಡೆದಾಡುವುದಕ್ಕೂ ನಿರ್ಬಂಧ
ಈ ಹಿಂದೆ ತಮ್ಮ ಕಟ್ಟಡಗಳ ಲಾಬಿಗೆ ಹೋಗಲು ಮತ್ತು ಅವರ ಕಾಂಪೌಂಡ್‌ಗಳ ತೆರೆದ ಪ್ರದೇಶಗಳ ಸುತ್ತಲೂ ನಡೆದುಕೊಂಡು ಹೋಗುವುದಕ್ಕೆ ನಿವಾಸಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ, ಮಂಗಳವಾರದಿಂದ ಕೋವಿಡ್-19 ಸೋಂಕು ಹರಡುವಿಕೆ ಸರಪಳಿಯನ್ನು ಕತ್ತರಿಸುವ ನಿಟ್ಟಿನಲ್ಲಿ ನಿವಾಸಿಗಳು ಹಜಾರಗಳು, ಗ್ಯಾರೇಜ್‌ಗಳು ಅಥವಾ ತಮ್ಮ ವಸತಿ ಕಾಂಪೌಂಡ್‌ಗಳ ತೆರೆದ ಪ್ರದೇಶಗಳಲ್ಲಿ ನಡೆಯುವುದನ್ನು ನಿಷೇಧಿಸಲಾಗಿದೆ ಎಂದು ಶಾಂಘೈ ಮುನಿಸಿಪಲ್ ಹೆಲ್ತ್ ಕಮಿಷನ್‌ನ ಅಧಿಕಾರಿ ವೂ ಕಿಯಾನ್ಯು ಹೇಳಿದ್ದಾರೆ.

ವಿಶ್ವದಲ್ಲಿ ಹೇಗಿದೆ ಕೊವಿಡ್-19 ಲೆಕ್ಕಾಚಾರ?
ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 483,919,388 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,152,872 ಮಂದಿ ಪ್ರಾಣ ಬಿಟ್ಟಿದ್ದಾರೆ. 418,161,489 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 59,605,027 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.












Click it and Unblock the Notifications