Breaking: ಭಾರತೀಯ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಕೊಟ್ಟ ಚೀನಾ ಸರ್ಕಾರ!
ನವದೆಹಲಿ, ಆಗಸ್ಟ್ 22: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ನಿರ್ಬಂಧದ ಬೇಲಿ ಹಾಕಿದ್ದ ಚೀನಾ ಸರ್ಕಾರ ಇದೀಗ ಭಾರತೀಯ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಬೀಜಿಂಗ್‌ನಲ್ಲಿ ಜಾರಿಗೊಳಿಸಿದ್ದ ಕಟ್ಟುನಿಟ್ಟಿನ ಕೋವಿಡ್-19 ನಿರ್ಬಂಧಗಳಿಂದ ಎರಡು ವರ್ಷ ಮನೆಯಲ್ಲೇ ಲಾಕ್ ಆಗಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನೀಡುವುದಕ್ಕೆ ಚೀನಾ ಸರ್ಕಾರವು ಯೋಜನೆಯೊಂದನ್ನು ಪ್ರಕಟಿಸಿದೆ. ಇದರ ಜೊತೆಗೆ ವ್ಯಾಪಾರಿ ವೀಸಾಗಳು ಸೇರಿದಂತೆ ವಿವಿಧ ವರ್ಗಗಳಲ್ಲಿ ಭಾರತೀಯರಿಗೆ ಪ್ರಯಾಣದ ಪರವಾನಗಿ ಸಿಗಲಿದೆ.
"ಭಾರತೀಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು! ನಿಮ್ಮ ತಾಳ್ಮೆಯು ಸಾರ್ಥಕವಾಗಿದೆ. ನಾನು ನಿಜವಾಗಿಯೂ ನಿಮ್ಮ ಉತ್ಸಾಹ, ಸಂತೋಷವನ್ನು ಹಂಚಿಕೊಳ್ಳಬಲ್ಲೆ. ನಿಮ್ಮೆಲ್ಲರಿಗೂ ಚೀನಾಗೆ ಮರಳಿ ಸ್ವಾಗತ!," ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಏಷ್ಯನ್ ವ್ಯವಹಾರಗಳ ಇಲಾಖೆ ಕೌನ್ಸಿಲರ್ ಜಿ ರೊಂಗ್ ಟ್ವೀಟ್ ಮಾಡಿದ್ದಾರೆ.

ಚೀನಾ ಸರ್ಕಾರದ ಪ್ರಕಟಣೆಯಲ್ಲಿ ಏನಿದೆ?
ಭಾರತೀಯ ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಚೀನಾದಲ್ಲಿ ಕೆಲಸ ಮಾಡುವವರ ಕುಟುಂಬಗಳಿಗೆ ವೀಸಾಗಳನ್ನು ನೀಡಲಾಗುತ್ತದೆ ಎಂದು ದೆಹಲಿಯಲ್ಲಿ ಇರುವ ಚೀನಾದ ರಾಯಭಾರ ಕಚೇರಿಯ ವಿವರವಾದ ಪ್ರಕಟಣೆಯನ್ನು ಹೊರಡಿಸಿದೆ. ಈ ಪ್ರಕಟಣೆಯ ಪ್ರಕಾರ, ಹೊಸದಾಗಿ-ದಾಖಲಾದ ವಿದ್ಯಾರ್ಥಿಗಳು ಮತ್ತು ತಮ್ಮ ಅಧ್ಯಯನವನ್ನು ಪುನರಾರಂಭಿಸಲು ಚೀನಾಕ್ಕೆ ಹಿಂದಿರುಗುವ ವಿದ್ಯಾರ್ಥಿಗಳು ಸೇರಿದಂತೆ ಉನ್ನತ ಶೈಕ್ಷಣಿಕ ಶಿಕ್ಷಣಕ್ಕಾಗಿ ದೀರ್ಘಾವಧಿಯ ಅಧ್ಯಯನ ಮುಂದುವರಿಸಲು ಚೀನಾಕ್ಕೆ ಹೋಗಲು ಉದ್ದೇಶಿಸಿರುವ ವಿದ್ಯಾರ್ಥಿಗಳಿಗೆ X1-ವೀಸಾವನ್ನು ನೀಡಲಾಗುತ್ತದೆ.

ಚೀನಾದ ಕಡೆಗೆ ಮುಖ ಮಾಡುತ್ತಿರುವ ವಿದ್ಯಾರ್ಥಿಗಳು
ಕೋವಿಡ್-19 ನಿರ್ಬಂಧದಿಂದ ವೀಸಾ ಸಿಗದೇ ಭಾರತದಲ್ಲೇ 23,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಾಕ್ ಆಗಿದ್ದರು. ಈ ಪೈಕಿ ಬಹುಪಾಲು ಮಂದಿ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೇ ಆಗಿದ್ದಾರೆ ಎಂದು ವರದಿಯಾಗಿದೆ. ತಮ್ಮ ಅಧ್ಯಯನವನ್ನು ಮುಂದುವರಿಸಲು ಬಯಸುವವರು ತಕ್ಷಣವೇ ಮರಳುವಂತೆ ಚೀನಾ ಸರ್ಕಾರ ಹೇಳಿದ ಬೆನ್ನಲ್ಲೇ ನೂರಾರು ವಿದ್ಯಾರ್ಥಿಗಳು ತಮ್ಮ ಹೆಸರನ್ನು ರಿಜಿಸ್ಟರ್ ಮಾಡುತ್ತಿದ್ದಾರೆ.
ಭಾರತವಷ್ಟೇ ಅಲ್ಲದೇ ಇತ್ತೀಚಿನ ವಾರಗಳಲ್ಲಿ ಶ್ರೀಲಂಕಾ, ಪಾಕಿಸ್ತಾನ, ರಷ್ಯಾ ಮತ್ತು ಹಲವಾರು ಇತರ ದೇಶಗಳಿಂದ ವಿದ್ಯಾರ್ಥಿಗಳು ಈಗಾಗಲೇ ಚಾರ್ಟರ್ಡ್ ವಿಮಾನಗಳಲ್ಲಿ ಚೀನಾಗೆ ತಲುಪಿದ್ದಾರೆ. ಕೋವಿಡ್ ವೀಸಾ ನಿಷೇಧದಿಂದಾಗಿ ಚೀನಾಕ್ಕೆ ಪ್ರಯಾಣಿಸಲು ಸಾಧ್ಯವಾಗದ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳಿಗೆ ವೀಸಾಗಳನ್ನು ನೀಡಲಾಗುವುದು ಎಂದು ದೆಹಲಿಯಲ್ಲಿ ಇರುವ ಚೀನಾ ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ ಸೋಮವಾರದ ಪ್ರಕಟಿಸಲಾಗಿದೆ.

ಚೀನಾದ ವೀಸಾಗೆ ಅರ್ಜಿ ಸಲ್ಲಿಸಲು ಏನು ಬೇಕಾಗುವುದು?
ಹೊಸ ವಿದ್ಯಾರ್ಥಿಗಳು ಚೀನಾದ ವಿಶ್ವವಿದ್ಯಾನಿಲಯದಿಂದ ನೀಡಲಾದ ಮೂಲ ಪ್ರವೇಶ ಪತ್ರವನ್ನು ಸಲ್ಲಿಸಬೇಕು. ಹಳೆಯ ವಿದ್ಯಾರ್ಥಿಗಳು ಚೀನಾದ ವಿಶ್ವವಿದ್ಯಾನಿಲಯ ನೀಡಿದ 'ಕ್ಯಾಂಪಸ್‌ಗೆ ಹಿಂತಿರುಗುವ ಪ್ರಮಾಣಪತ್ರ'ವನ್ನು ಸಲ್ಲಿಸಬೇಕು. ಅಧಿಕೃತ ಮೂಲಗಳ ಪ್ರಕಾರ, 1,000 ಕ್ಕೂ ಹೆಚ್ಚು ಹಳೆಯ ಭಾರತೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಮರು-ಸೇರುವುದಕ್ಕಾಗಿ ಮರಳಲು ಇಚ್ಛಿಸಿದ್ದಾರೆ. ಈ ವಿದ್ಯಾರ್ಥಿಗಳ ಮನವಿಯನ್ನು ಪ್ರಕ್ರಿಯೆಗೊಳಿಸುತ್ತಿರುವ ವಿಶ್ವವಿದ್ಯಾಲಯಗಳು ವೀಸಾಗಳಿಗೆ ಅರ್ಜಿ ಸಲ್ಲಿಸಲು ಪ್ರಮಾಣಪತ್ರಗಳನ್ನು ನೀಡುತ್ತವೆಯೇ ಎಂಬುದನ್ನು ನೋಡಬೇಕಿದೆ.
ಇದರ ಮಧ್ಯೆ ಎರಡು ದೇಶಗಳ ನಡುವೆ ನೇರ ವಿಮಾನಗಳಿಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಈ ಹಿಂದೆ ಜುಲೈನಲ್ಲಿ ಚೀನಾದಲ್ಲಿ ಕೆಲಸ ಮಾಡುವ ಭಾರತೀಯ ಉದ್ಯೋಗಿಗಳ ಕುಟುಂಬದ ಸದಸ್ಯರಿಗೆ ಚೀನಾ ಅನುಮತಿ ನೀಡಿತ್ತು. ಈ ವೇಳೆ ಹಲವರು ಸಾಮಾನ್ಯ ಟಿಕೆಟ್ ದರಕ್ಕಿಂತ ಹೆಚ್ಚುಪಟ್ಟು ಹಣ ಪಾವತಿಸಿ ಮೂರನೇ ದೇಶಗಳ ಮೂಲಕ ಚೀನಾ ತಲುಪಿದ್ದರು.

ಯಾರಿಗೆ ಯಾವ ವೀಸಾ ನೀಡುತ್ತೆ ಚೀನಾ?
ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಸೋಮವಾರ ಘೋಷಿಸಿದ ವೀಸಾಗಳ ಪಟ್ಟಿಯಲ್ಲಿ ಸಿಬ್ಬಂದಿಗೆ ನೀಡಲಾದ ಸಿ-ವೀಸಾ ಕೂಡ ಸೇರಿದೆ. ರಾಯಭಾರ ಕಚೇರಿಯಿಂದ ಘೋಷಿಸಲಾದ ವರ್ಗಗಳು ಹೀಗಿವೆ. ವಾಣಿಜ್ಯ ಮತ್ತು ವ್ಯಾಪಾರ ಉದ್ದೇಶಕ್ಕಾಗಿ ಹೋಗುವವರಿಗೆ M-ವೀಸಾ ನೀಡಲಾಗುತ್ತದೆ. ವಿನಿಮಯ, ಭೇಟಿ, ಅಧ್ಯಯನ ಮತ್ತು ಪ್ರವಾಸದ ರೀತಿಯ ವಾಣಿಜ್ಯೇತರ ಉದ್ದೇಶಕ್ಕಾಗಿ ಚೀನಾಗೆ ಹೋಗಲು ಬಯಸುವವರಿಗೆ F-ವೀಸಾವನ್ನು ನೀಡಲಾಗುತ್ತದೆ. ಅದೇ ರೀತಿ ಚೀನಾದಲ್ಲಿ ಉದ್ಯೋಗ ಮಾಡುವವರಿಗೆ Z-ವೀಸಾವನ್ನು ನೀಡಲಾಗುತ್ತದೆ.












Click it and Unblock the Notifications