ಅಮೆರಿಕದ ಕಣ್ಗಾವಲು ವಿಮಾನದಿಂದ ಆರು ಮೀಟರ್ ದೂರದಲ್ಲಿ ಹಾರಿದ ಚೀನಾ ಫೈಟರ್ ಜೆಟ್: ಮಹಾಯುದ್ಧದ ಮುನ್ಸೂಚನೆ?
ಈ ತಿಂಗಳ ಆರಂಭದಲ್ಲಿ ಚೀನಾದ ಫೈಟರ್ ಜೆಟ್ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಕಣ್ಗಾವಲು ವಿಮಾನದಿಂದ ಆರು ಮೀಟರ್ (20 ಅಡಿ) ಅಂತರದಲ್ಲಿ ಹಾರಿದೆ.
ದಕ್ಷಿಣ ಚೀನಾ ಸಮುದ್ರದ ಮೇಲೆ ಈ ಘಟನೆ ನಡೆದಿದೆ ಎಂದು ಯುಎಸ್ ಮಿಲಿಟರಿ ಗುರುವಾರ ತಿಳಿಸಿದೆ.
ಯುಎಸ್ ಇಂಡೋ-ಪೆಸಿಫಿಕ್ ಕಮಾಂಡರ್ ಪ್ರಕಾರ, ಡಿಸೆಂಬರ್ 21ರಂದು ಆರ್‌ಸಿ -135 ವಿಮಾನವನ್ನು ಯುಎಸ್ ಏರ್ ಫೋರ್ಸ್ ಹಾರಿಸುತ್ತಿದ್ದ ಸಂದರ್ಭದಲ್ಲಿ ಚೀನಾದ ಜೆ -11 ಫೈಟರ್ ಜೆಟ್ ಬಂದಿದೆ.
ಇಂತಹ ಅಸುರಕ್ಷಿತ ನಡೆಯನ್ನು ಪ್ರದರ್ಶಿಸಿದ ಚೀನಾ ವಿರುದ್ಧ ಯುಎಸ್ ಕಮಾಂಡರ್ ಹರಿಹಾಯ್ದಿದ್ದಾರೆ. ಈ ಘಟನೆಯ ವಿಡಿಯೊ ಕ್ಲಿಪ್ ಅನ್ನು ಸಹ ಬಿಡುಗಡೆ ಯುಎಸ್ ಬಿಡುಗಡೆ ಮಾಡಿದೆ.

ಚೀನಾದ ಜೆಟ್ ಫೈಟರ್ ಯುಎಸ್‌ನ ದೊಡ್ಡ ಕಣ್ಗಾವಲು ವಿಮಾನದ ಕೆಲವೇ ಕೆಲ ಮೀಟರ್‌ಗಳಷ್ಟು ದೂರದಲ್ಲಿ ಹಾರುವುದನ್ನು ವಿಡಿಯೋದ ತುಣುಕು ತೋರಿಸುತ್ತದೆ.
ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿ ರೂಢಿಗತ ಕಾರ್ಯಾಚರಣೆಗಳನ್ನು ನಡೆಸುತ್ತಿರುವಾಗ ತನ್ನ ವಿಮಾನವು 'ಕಾನೂನುಬದ್ಧವಾಗಿ" ಹಾರುತ್ತಿದೆ ಎಂದು ಯುಎಸ್ ಸ್ಪಷ್ಟಪಡಿಸಿದೆ.
'ಯುಎಸ್ ಇಂಡೋ-ಪೆಸಿಫಿಕ್ ಜಂಟಿ ಪಡೆಯು ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಸಮರ್ಪಿತವಾಗಿದೆ. ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಎಲ್ಲಾ ಹಡಗುಗಳು ಮತ್ತು ವಿಮಾನಗಳ ಸುರಕ್ಷತೆಗೆ ಸಂಬಂಧಿಸಿದಂತೆ ಈ ಪಡೆಯು ಕಾರ್ಯನಿರ್ವಹಿಸುತ್ತದೆ. ಸಮುದ್ರ ಮತ್ತು ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿ ಹಾರಾಟ, ನೌಕಾಯಾನ ಮತ್ತು ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ' ಯುಎಸ್ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

'ಇಂಡೋ-ಪೆಸಿಫಿಕ್ ಪ್ರದೇಶದ ಎಲ್ಲಾ ದೇಶಗಳು ಅಂತರಾಷ್ಟ್ರೀಯ ವಾಯುಪ್ರದೇಶವನ್ನು ಸುರಕ್ಷಿತವಾಗಿ ಮತ್ತು ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಬಳಸಬೇಕೆಂದು ನಾವು ನಿರೀಕ್ಷಿಸುತ್ತೇವೆ' ಎಂದು ಅದು ಹೇಳಿಕೆ ನೀಡಿದೆ.
ಇತ್ತೀಚಿನ ತಿಂಗಳುಗಳಲ್ಲಿ, ಚೀನಾದ ಯುದ್ಧವಿಮಾನದ ಪೈಲಟ್‌ಗಳು ಬೇರೆ ದೇಶಗಳ ವಿಮಾನದ ಸಮೀಪದಲ್ಲಿ ಅಪಾಯಕಾರಿಯಾಗಿ ತಮ್ಮ ಜೆಡ್‌ಗಳನ್ನು ಹಾರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ವಿಶೇಷವಾಗಿ ಹಲವಾರು ಯುಎಸ್ ಮಿತ್ರರಾಷ್ಟ್ರಗಳು, ಈ ಪ್ರದೇಶದ ಸೂಕ್ಷ್ಮ ಸ್ಥಳಗಳಲ್ಲಿ ಗಸ್ತು ತಿರುಗುತ್ತಿವೆ.
ಉತ್ತರ ಕೊರಿಯಾದ ಗಡಿಯಲ್ಲಿ ತನ್ನ ವಿಮಾನಗಳಿಗೆ ಚೀನಾ ಕಿರುಕುಳ ನೀಡುತ್ತಿದೆ ಎಂದು ಜೂನ್ ತಿಂಗಳಲ್ಲಿ ಕೆನಡಾ ಆರೋಪಿಸಿತ್ತು.
ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ 'ಚೀನಾದ ಕಿರುಕುಳ ಅತ್ಯಂತ ತೊಂದರೆದಾಯಕ' ಎಂದು ತಿಳಿಸಿದ್ದರು.
ಚೀನಾವು ಭಾರತಕ್ಕೂ ತೊಂದರೆ ನೀಡುತ್ತಿರುವುದರ ಬಗ್ಗೆ ಕಳೆದ ತಿಂಗಳು ವರದಿಯಾಗಿತ್ತು. ಭಾರತದ ಅರುಣಾಚಲ ಪ್ರದೇಶದ ಗಡಿಗಳಲ್ಲಿ ಚೀನಾ ಗ್ರಾಮಗಳನ್ನು ನಿರ್ಮಿಸಿದೆ ಎಂದು ಮಾಧ್ಯಮಗಳು ಮಾಹಿತಿ ನೀಡಿವೆ. ಇದು ಎರಡೂ ದೇಶಗಳ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದೆ.












Click it and Unblock the Notifications