
ಕೆನಡಾದಲ್ಲಿ ಭಗವದ್ಗೀತೆ ಪಾರ್ಕ್ ಮೇಲೆ ದಾಳಿ; ಭಾರತ ಖಂಡನೆ, ಬ್ರಾಂಪ್ಟನ್ ಮೇಯರ್ ಸ್ಪಷ್ಟನೆ
ನವದೆಹಲಿ, ಅ. 3: ಕೆನಡಾದ ಬ್ರಾಂಪ್ಟನ್‌ನಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದ ಭಗವದ್ ಗೀತಾ ಉದ್ಯಾನವನದ ನಾಮಫಲಕವನ್ನು ದುಷ್ಕರ್ಮಿಗಳು ಭಾನುವಾರ ಹಾಳುಗೆಡವಿದ ಘಟನೆ ನಡೆದಿದೆ. ಕೆನಡಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಮುದಾಯದ ಮೇಲೆ ನಡೆಯುತ್ತಾ ಬಂದಿರುವ ದ್ವೇಷ ಪ್ರಕರಣಗಳ ಮುಂದುವರಿಕೆ ಭಾಗವಾಗಿ ಈ ಘಟನೆ ನಡೆದಿದೆಯಾ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಭಾರತ ಸರಕಾರ ಈ ಘಟನೆಯನ್ನು ಬಲವಾಗಿ ಖಂಡಿಸಿದೆ.
ಬ್ರಾಂಪ್ಟನ್ ನಗರದಲ್ಲಿರುವ ಶ್ರೀ ಭಗವದ್ ಗೀತಾ ಪಾರ್ಕ್‌ನಲ್ಲಿ ಹೆಚ್ಚಿನ ಅನಾಹುತ ಆಗಿದ್ದಂತಿಲ್ಲ. ನಾಮಫಲಕದಲ್ಲಿರುವ ಹೆಸರನ್ನು ದುಷ್ಕರ್ಮಿಗಳು ತಿರುಚಿರುವ ಅಥವಾ ವಿರೂಪಗೊಳಿಸಿದ್ದಾರೆ ಎಂಬುದು ಆರೋಪ.
ಕೆನಡಾದ ಹಿಂದೂ ದೇವಾಲಯ ಧ್ವಂಸ: ತನಿಖೆಗೆ ಮೇಯರ್ ಆದೇಶ
"ಬ್ರಾಂಪ್ಟನ್‌ನಲ್ಲಿರುವ ಶ್ರೀ ಭಗವದ್ ಗೀತಾ ಪಾರ್ಕ್‌ನಲ್ಲಿ ನಡೆದ ದ್ವೇಷ ಅಪರಾಧ ಘಟನೆಯನ್ನು ನಾವು ಖಂಡಿಸುತ್ತೇವೆ. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೆನಡಾದ ಅಧಿಕಾರಿಗಳು ಮತ್ತು ಪೀಲ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತೇವೆ," ಎಂದು ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಟ್ವೀಟ್ ಮಾಡಿದ್ದಾರೆ.
|
ಪೊಲೀಸ್ ಹೇಳಿಕೆ
ಆದರೆ, ಭಾರತ ಸರಕಾರದ ಈ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಅಲ್ಲಿನ ಅಧಿಕಾರಿಗಳು ಮತ್ತು ಮೇಯರ್ ನೀಡಿದ ಹೇಳಿಕೆಗಳಿಂದ ತಿಳಿದುಬರುತ್ತದೆ.
ಭಗವದ್ ಗೀತಾ ಪಾರ್ಕ್‌ನ ಯಾವುದೇ ಭಾಗಕ್ಕಾಗಲೀ ಅಥವಾ ನಮಫಲಕಕ್ಕಾಲೀ ಹಾನಿಯಾಗಿರುವ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ ಎಂದು ಪೀಲ್ ರೀಜನ್ ಪೊಲೀಸ್ ಇಲಾಖೆ ಹೇಳಿದೆ.
ಭಾರತೀಯ ರಾಯಭಾರಿ ಕಚೇರಿ ಮಾಡಿರುವ ಟ್ವೀಟ್‌ನ ಎರಡು ಚಿತ್ರಗಳಲ್ಲಿ ಒಂದರಲ್ಲಿನ ನಾಮಫಲಕದಲ್ಲಿ ಹೆಸರು ಕಾಣುತ್ತಿಲ್ಲ. ದುಷ್ಕರ್ಮಿಗಳು ಹೆಸರನ್ನು ಅಳಿಸಿಹಾಕಿ ವಿರೂಪಗೊಳಿಸಿದ್ದಾರೆ ಎಂಬುದು ಆರೋಪ. ಆದರೆ, ಅಕ್ಷರ ಇಲ್ಲದೆ ಕೇವಲ ಚಿಹ್ನೆ ಇರುವ ನಾಮಫಲಕದ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದ್ದು, ಅದು ತಾತ್ಕಾಲಿಕ ಚಿಹ್ನೆ ಎಂದು ಹೇಳಿದೆ.
ಕೆನಡಾ ಬ್ರಾಂಪ್ಟಾನ್ ನಗರದ ಪ್ರಮುಖ ಉದ್ಯಾನವನಕ್ಕೆ ಭಗವದ್ಗೀತೆ ಹೆಸರು
|
ಬ್ರಾಂಪ್ಟನ್ ಮೇಯರ್ ಹೇಳಿಕೆ
ಬ್ರಾಂಪ್ಟನ್ ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ಕೂಡ ಇದೇ ಅಭಿಪ್ರಾಯ ಪುನರುಚ್ಚರಿಸಿದ್ಧಾರೆ. "ಇತ್ತೀಚೆಗೆ ಬಿಡುಗಡೆಯಾದ ಶ್ರೀ ಭಗವದ್ ಗೀತಾ ಪಾರ್ಕ್‌ನಲ್ಲಿ ದಾಳಿಯಾಗಿದೆ ಎಂದು ನಿನ್ನೆ ವರದಿಗಳು ಬಂದಿದ್ದವು. ನಾವು ಕೂಡಲೇ ತನಿಖೆ ನಡೆಸಿದೆವು. ಖಾಯಂ ಆಗಿ ನಾಮಫಲಕ ತಯಾರಾಗುವವರೆಗೂ ಖಾಲಿ ಫಲಕವನ್ನು ಹಾಕಲಾಗಿರುವುದು ತಿಳಿದುಬಂದಿದೆ. ಈ ಬೆಳವಣಿಗೆಯಿಂದ ಸಮಾಧಾನವಾಗಿದೆ. ಈ ವಿಚಾರವನ್ನು ನಮ್ಮ ಗಮನಕ್ಕೆ ತಂದ ಸಮುದಾಯಕ್ಕೆ ಧನ್ಯವಾದ ಹೇಳುತ್ತೇವೆ. ಬ್ರಾಂಪ್ಟನ್ ನಗರ ಪ್ರತಿಯೊಬ್ಬರಿಗೂ ಸುರಕ್ಷಿತ ಸ್ಥಳ ಎಂಬುದು ಖಚಿತಗೊಂಡಿದೆ," ಎಂದು ಮೇಯರ್ ಪ್ಯಾಟ್ರಿಕ್ ಬ್ರೌನ್ ತಿಳಿಸಿದ್ಧಾರೆ.

ಚಂದ್ರ ಆರ್ಯ ಹೇಳಿಕೆ
ಈ ಘಟನೆ ಏನೇ ಇರಲಿ, ಕೆನಡಾದಲ್ಲಿ ಭಾರತೀಯ ಸಮುದಾಯವನ್ನು ಗುರಿಯಾಗಿಸಿ ಈ ಹಿಂದೆ ಹಲವು ಅಪರಾಧ ಘಟನೆಗಳು ನಡೆದಿರುವುದು ವರದಿಯಾಗಿವೆ. ಕೆನಡಾದಲ್ಲಿ ಸಂಸದರಾಗಿರುವ ಭಾರತೀಯ ಮೂಲದ ಚಂದ್ರ ಆರ್ಯ ಕೂಡ ಈ ಆರೋಪವನ್ನು ಪುನರುಚ್ಚರಿಸುತ್ತಾರೆ. ಇತ್ತೀಚೆಗೆ ಹಿಂದೂ ದೇವಸ್ಥಾನಗಳ ಮೇಲೆ ಗರಿಯಾಗಿಸಿ ಹಲವು ಘಟನೆಗಳು ನಡೆದಿವೆ ಎಂದು ಚಂದ್ರ ಆರ್ಯ ಅಭಿಪ್ರಾಯಪಟ್ಟಿದ್ದಾರೆ.

ಹಿಂದಿನ ಘಟನೆಗಳು
ಸೆಪ್ಟೆಂಬರ್ 15ರಂದು ಸ್ವಾಮಿನಾರಾಯಣ್ ಮಂದಿರದ ಮೇಲೆ ಖಲಿಸ್ತಾನಿ ಉಗ್ರರು ದಾಳಿ ಮಾಡಿದ್ದರು. ಈ ದೇವಸ್ಥಾನದ ಗೋಡೆಯ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆದು ಹೋಗಿದ್ದರು.
ಅದಾದ ಬಳಿಕ ಕೆನಡಾದಲ್ಲಿ ಖಲಿಸ್ತಾನಿ ಸಂಘಟನೆಗಳು ಪ್ರತ್ಯೇಕ ಖಲಿಸ್ತಾನ್ ದೇಶ ರಚನೆ ಬಗ್ಗೆ ರೆಫರೆಂಡಮ್ (ಜನಾಭಿಪ್ರಾಯ ಸಂಗ್ರಹ) ಆಯೋಜಿಸಿದ್ದರು. ಭಾರತ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಕೆನಡಾ ಸರಕಾರ ಮೌನ ವಹಿಸಿತ್ತು. ರೆಫರೆಂಡಮ್ ಆದ ಬಳಿಕ ಪ್ರತಿಕ್ರಿಯಿಸಿದ ಕೆನಡಾ ಸರಕಾರ, ಈ ರೆಫರೆಂಡಮ್ ಅನ್ನು ತಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸಮಜಾಯಿಷಿ ನೀಡಿತು.
ಇದಾದ ನಂತರ ಭಾರತ ಸರಕಾರ ಕೆನಡಾದಲ್ಲಿ ನಡೆಯುವ ವಿದ್ಯಮಾನಗಳ ಮೇಲೆ ನಿಗಾ ಇರಿಸುತ್ತಿದೆ. ಇಲ್ಲಿರುವ ಮತ್ತು ಇಲ್ಲಿಗೆ ಹೋಗುವ ಭಾರತೀಯ ಸಮುದಾಯದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡುತ್ತಿದೆ.
(ಒನ್ಇಂಡಿಯಾ ಸುದ್ದಿ)