ಸಮುದ್ರದಲ್ಲಿ ದೋಣಿ ಮುರಿದು ದಿಕ್ಕು ತಪ್ಪಿದ ನಾವಿಕ, ತಿಂಗಳ ನಂತ್ರ ಬದುಕಿ ಬಂದಿದ್ದೇ ರೋಚಕ
ನಾನು ಸಾವಿಗೆ ಹೆದರುವುದಿಲ್ಲ, ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಸಾಯಲೇ ಬೇಕು. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎನ್ನುವ ಮಾತನ್ನು ನೀವೂ ಕೇಳಿರಬಹುದು. ಯಾವತ್ತೋ ಬರೋ ಸಾವಿಗೆ ಹೆದರಿ ಇಂದಿನ ಖುಷಿ ಯಾಕೆ ಹಾಳು ಮಾಡಿಕೊಳ್ಳಬೇಕು ಅಂತ ಮಾತನಾಡುವವರು ಬಹಳಷ್ಟು ಮಂದಿ ಇರುತ್ತಾರೆ. ಬಾಯಿ ಮಾತಿಗೆ ಸಾವೆಂದರೆ ಭಯ ಇಲ್ಲ ಎನ್ನಬಹುದು. ಆದರೆ, ಸಾವು ಕಣ್ಣ ಮುಂದೆ ಬಂದು ನಿಂತಾಗ? ಬದುಕುವ ಎಲ್ಲಾ ಪ್ರಯತ್ನಕ್ಕೆ ಇಳಿದು ಬಿಡುತ್ತೇವೆ. ಕೊನೆ ಕ್ಷಣದವರೆಗೂ ಹೋರಾಡುತ್ತೇವೆ.
ಇಲ್ಲೊಬ್ಬ ವ್ಯಕ್ತಿ ಸಾಗರದ ಮಧ್ಯೆ ಸಿಲುಕಿಕೊಂಡಿದ್ದರು. ದೂರ ದೂರದವರೆಗೆ ಅವರ ಕಣ್ಣಿಗೆ ಕಾಣಿಸುತ್ತಿದ್ದದ್ದು ಬರೀ ನೀರು. ಯಾರಾದರೂ ಬರಬಹುದು, ಸಹಾಯ ಮಾಡಬಹುದು ಎನ್ನುವ ಸಣ್ಣ ಆಸೆಯೂ ಇರಲಿಲ್ಲ. ನೀರಿನ ಮಧ್ಯೆ ಒಬ್ಬನೇ ಸಿಲುಕಿಕೊಂಡು ಪ್ರತಿ ಕ್ಷಣವೂ ಬದುಕಿಗಾಗಿ ಹೋರಾಡಿದ್ದಾನೆ.

ಕ್ಯಾಲಿಫೋರ್ನಿಯಾ ನಿವಾಸಿ ಕೈ ಸಾಟೊ ಸಣ್ಣ ಹಾಯಿದೋಣಿಯಲ್ಲಿ ಸಮುದ್ರಯಾನಕ್ಕೆ ಹೊರಟವರು. ಆದರೆ ತನ್ನ ಪ್ರಯಾಣ ಇಷ್ಟೊಂದು ಭಯಾನಕವಾಗಿಬಹದು ಎನ್ನುವುದನ್ನು ಅವರು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. 30 ದಿನ ಅನುಭವಿಸಿದ್ದು ನಿತ್ಯ ನರಕ.
ಕ್ಯಾಟಲಿನಾ ದ್ವೀಪದಲ್ಲಿ ಪ್ರಾರಂಭವಾದ ಪ್ರಯಾಣ
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಕೈ ಸಾಟೊ ಜೂನ್ 7 ರಂದು ಕ್ಯಾಲಿಫೋರ್ನಿಯಾದ ಕ್ಯಾಟಲಿನಾ ದ್ವೀಪದಿಂದ ಸಣ್ಣ ಹಾಯಿದೋಣಿ ಹತ್ತುತ್ತಾರೆ. ಆರಂಭದಲ್ಲಿ, ಎಲ್ಲವೂ ಸರಿಯಾಗಿಯೇ ಇತ್ತು. ಆದ್ರೆ ಎರಡು ವಾರಗಳ ನಂತರ, ಅವನ ದೋಣಿಯ ಮಾಸ್ಟ್ ಮುರಿದುಹೋಗುತ್ತದೆ. ಹೀಗಾಗಿ ದೋಣಿ ನಿಯಂತ್ರಣಕ್ಕೆ ಸಿಗುವುದಿಲ್ಲ. ಮಾಸ್ಟ್ ಮುರಿದ ಕಾರಣ ಎತ್ತ ಸಾಗಬೇಕು ಎನ್ನುವ ದಾರಿಯೂ ಗೊತ್ತಾಗಲಿಲ್ಲ. ಸುಮ್ಮನೆ ನೀರಿನ ಮೇಲೆ ತೇಲಿಕೊಂಡು ಹೋದದ್ದು ಮಾತ್ರ. ಗೊತ್ತು ಗುರಿ ಇಲ್ಲದೆ ದೋಣಿ ಸಾಗಿದ್ದೇ ಆಯಿತು. ಇಷ್ಟರಲ್ಲಿ ದೋಣಿಯ ಇಂಧನ ಕೂಡಾ ಖಾಲಿಯಾಯಿತು. ಯಾರನ್ನಾದರೂ ಸಂಪರ್ಕಿಸೋಣ ಎಂದರೆ ಮೊಬೈಲ್ ಫೋನಿನ ಬ್ಯಾಟರಿ ಕೂಡಾ ಡೆಡ್. ಎತ್ತ ಹೋಗುವುದು ಯಾರನ್ನು ಕರೆಯುವುದು ಯಾವುದಕ್ಕೂ ಉತ್ತರವೇ ಇಲ್ಲ.
ಕೈ ಸಮುದ್ರದ ಮಧ್ಯದಲ್ಲಿ ಏಕಾಂಗಿ:
ಸಮುದ್ರದ ಅಲೆಗಳ ಮೇಲೆ ತೇಲುತ್ತಾ ತೇಲುತ್ತಾ ಈ ಸಣ್ಣ ದೋಣಿ ದೊಡ್ಡ ಹಡಗುಗಳು ಬರುವ ಮಾರ್ಗವನ್ನು ಮೀರಿ ಹೋಗಿಯಾಗಿತ್ತು. ಎಲ್ಲವೂ ಕೈ ಮೀರಿ ಹೋಗಿದೆ ಎನ್ನುವ ಸತ್ಯ ಕೈ ಸಾಟೊಗೆ ತಿಳಿಯಿತು. ತಾನು ಬಂದಿರುವ ದೂರ ನೋಡಿದರೆ ಯಾರೂ ತನ್ನ ಬಳಿ ಬರುವುದು ಸಾಧ್ಯವೇ ಇಲ್ಲ ಎನ್ನುವಂತಾಗಿತ್ತು. ಎದ್ದು ನಿಂತರೆ ಸುತ್ತಲೂ ಕಾಣುವ ನೀರು, ಕಣ್ಣೆತ್ತಿದರೆ ಆಕಾಶ ಅಷ್ಟೇ. ಏನು ಮಾಡುವುದಕ್ಕೂ ದಿಕ್ಕೇ ತೋಚದ ಪರಿಸ್ಥಿತಿ. ಮೊದ ಮೊದಲು ಅಳುವುದು ಬಿಟ್ಟರೆ ತಾನೇನು ಮಾಡಲು ಸಾಧ್ಯ ಎನ್ನುವಂತಾಗಿತ್ತು ಕೈ ಸಾಟೊ ಸ್ಥಿತಿ. ಆದರೆ ಸಾವನ್ನು ಸುಲಭವಾಗಿ ಒಪ್ಪಿಕೊಳ್ಳುವುದು ಕೂಡಾ ಇಷ್ಟವಿರಲಿಲ್ಲ. ಬದುಕಿ ಉಳಿಯಲೇ ಬೇಕು ಮತ್ತೆ ತನ್ನ ಗುರಿ ತಲುಪಲೇ ಬೇಕು ಎನ್ನುವ ಹಠದಿಂದ ಪ್ರಯತ್ನ ಆರಂಭಿಸುತ್ತಾನೆ.
ಕೆಟ್ಟು ಹೋದ ದೋಣಿಯನ್ನು ದುರಸ್ತಿ ಮಾಡುವುದಕ್ಕೆ ಮುಂದಾಗುತ್ತಾನೆ. ಪಿವಿಸಿ ಪೈಪ್ ಮತ್ತು ಕಯಾಕ್ ಪ್ಯಾಡಲ್ ಬಳಸಿ, ದೋಣಿಯ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಮಾಡಿಕೊಳ್ಳುತ್ತಾನೆ. ಈಗ ದೋಣಿ ಒಂದು ದಿಕ್ಕಿನಲ್ಲಿ ಮುಂದೆ ಚಲಿಸುತ್ತದೆ. ಹೀಗೆ ಸಾಗುತ್ತಾ ಸಾಗುತ್ತಾ ಯಾವುದಾದರೂ ದೊಡ್ಡ ಹಡಗಿನ ಕಣ್ಣಿಗೆ ಬಿದ್ದರೆ ಸಾಕು ಎನ್ನುವ ಯೋಚನೆ ಕೈ ಸಾಟೊ ಅವರದ್ದಾಗಿತ್ತು.
ಸಣ್ಣ ಮೀನುಗಳೇ ಆಹಾರ:
ಇಷ್ಟು ದಿನ ಸಮುದ್ರದಲ್ಲಿ ಬದುಕುವುದು ಸುಲಭದ ಮಾತಲ್ಲ. ಜೊತೆಯಲ್ಲಿ ತಂದ ಆಹಾರ ಸಾಮಗ್ರಿಗಳೆಲ್ಲಾ ಖಾಲಿಯಾಗಿತ್ತು. ಓಟ್ ಮೀಲ್ ತಿಂದು ದಿನಗಟ್ಟಲೆ ಬದುಕುಳಿದರು. ಜೊತೆಗೆ ಸಮುದ್ರದಲ್ಲಿ ಸಿಕ್ಕ ಸಣ್ಣ ಮೀನು ಮತ್ತು ಸ್ಕ್ವಿಡ್ ಗಳನ್ನು ತಿಂದು ಹಸಿವು ನೀಗಿಸುತ್ತಿದ್ದರು. ಆಹಾರಕ್ಕೆನೋ ವ್ಯವಸ್ಥೆ ಆಯಿತು ಎನ್ನುವಾಗ ಕುಡಿಯುವ ನೀರಿಗೆ ಏನು ಮಾಡುವುದು. ನೀರ ಮೇಲೆಯೇ ಇದ್ದರೂ ಆ ನೀರಿನ ಒಂದು ತೊಟ್ಟು ಕುಡಿಯುವುದೂ ಸಾಧ್ಯವಿಲ್ಲ. ಸಮುದ್ರದ ತೇವಾಂಶದಿಂದ ಬರುವ ನೀರನ್ನು ಬಕೆಟ್‌ನಲ್ಲಿ ಸಂಗ್ರಹಿಸಿ ಅದನ್ನೇ ನೆಕ್ಕಿ ಬಾಯಾರಿಕೆ ನೀಗಿಸುತ್ತಿದ್ದರು. ಈ ರೀತಿ ತಾನು ಬದುಕಿ ಉಳಿಯುವುದಕ್ಕೆ ಏನು ಮಾಡಬೇಕೋ ಎಲ್ಲಾ ಪ್ರಯತ್ನ ಮಾಡುತ್ತಾರೆ.
ಕೊನೆಗೂ ದಡ ಸೇರಿದ ಸ್ಯಾಟೋ:
ಒಂದು ತಿಂಗಳಿಗೂ ಹೆಚ್ಚು ಕಾಲ ಸಮುದ್ರದಲ್ಲಿ ಅಲೆದಾಡಿದ ನಂತರ, ಕೊನೆಗೂ ಅದೃಷ್ಟ ಬದಲಾಯಿತು. ಕ್ಯಾಲಿಫೋರ್ನಿಯಾ ಮತ್ತು ಹವಾಯಿ ನಡುವಿನ ಹಡಗು ಮಾರ್ಗವನ್ನು ತಲುಪುವಲ್ಲಿ ಯಶಸ್ವಿಯಾಗುತ್ತಾರೆ. ಹವಾಯಿಗೆ ತೆರಳುತ್ತಿದ್ದ ಕಾರ್ಗೋ ಶಿಪ್‌ನ ಕಣ್ಣಿಗೆ ಇವರ ಈ ಕೆಟ್ಟು ಹೋಗಿರುವ ದೋಣಿ ಬೀಳುತ್ತದೆ. ಹಡಗಿನ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಅವರನ್ನು ಸುರಕ್ಷಿತವಾಗಿ ಮೇಲೆತ್ತುತ್ತಾರೆ. ನಂತರ ತಿನ್ನುವುದಕ್ಕೆ ಆಹಾರ, ಕುಡಿಯುವುದಕ್ಕೆ ನೀರು, ಬಟ್ಟೆ ಎಲ್ಲವನ್ನೂ ನೀಡುತ್ತಾರೆ.
ಇನ್ನೂ ಬಿಟ್ಟಿಲ್ಲ ಸಮುದ್ರಯಾನದ ಆಸೆ:
ಈ ಅಪಾಯಕಾರಿ ಅನುಭವದ ನಂತರವೂ ಕೈ ಸಾಟೋಗೆ ಇನ್ನೂ ಸಮುದ್ರಯಾನದ ಆಸೆ ಕಡಿಮೆಯಾಗಿಲ್ಲ. ಮತ್ತೊಮ್ಮೆ ನೌಕಾಯಾನ ಮಾಡುವುದಾಗಿ ಹೇಳುತ್ತಾರೆ. ಆದರೆ ಮುಂದಿನ ಬಾರಿ ಸುರಕ್ಷಿತ ಮತ್ತು ದೊಡ್ಡ ದೋಣಿಯನ್ನು ತೆಗೆದುಕೋಮಡು ಸಮುದ್ರಕ್ಕೆ ಇಳಿಯುವ ಯೋಚನೆ ಇದೆಯಂತೆ.


Click it and Unblock the Notifications
