King Charles III: ಬ್ರಿಟನ್‌ನ ನೂತನ ರಾಜನಾದ 3ನೇ ಕಿಂಗ್ ಚಾರ್ಲ್ಸ್; ಹೇಗಿತ್ತು ಪಟ್ಟಾಭಿಷೇಕ?
ಶನಿವಾರ, ಮೇ 6ರಂದು ಬ್ರಿ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆದ ಐತಿಹಾಸಿಕ ಪಟ್ಟಾಭಿಷೇಕ ಸಮಾರಂಭದಲ್ಲಿ 3ನೇ ಕಿಂಗ್ ಚಾರ್ಲ್ಸ್ ಅಧಿಕೃತವಾಗಿ ಬ್ರಿಟನ್‌ನ ನೂತನ ರಾಜನಾಗಿ ಕಿರೀಟ ಸ್ವೀಕರಿಸಿದರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರ ತಾಯಿ ರಾಣಿ ಎಲಿಜಬೆತ್ ಮರಣದ ನಂತರ ಬ್ರಿಟನ್ ರಾಜನ ಬಿರುದನ್ನು 3ನೇ ಕಿಂಗ್ ಚಾರ್ಲ್ಸ್ ಪಡೆದುಕೊಂಡಿದ್ದರು. ಇದೀಗ ಮೇ 6ರ ಸಂಜೆ ಅಧಿಕೃತವಾಗಿ ಪಟ್ಟಾಭಿಷೇಕ ಮಾಡಲಾಗಿದೆ.

ಎರಡು ಗಂಟೆಗಳ ಕಾಲ ನಡೆದ ಈ ಕಿರೀಟದಾರಣೆಯ ಸಂಪ್ರದಾಯ ಕಾರ್ಯಕ್ರಮದಲ್ಲಿ ಕ್ಯಾಂಟರ್ಬರಿಯ ಆರ್ಚ್ಬಿಷಪ್ ರಾಜನ ತಲೆಯ ಮೇಲೆ ಸೇಂಟ್ ಎಡ್ವರ್ಡ್ ಕಿರೀಟವನ್ನು ಇಟ್ಟರು. 3ನೇ ಕಿಂಗ್ ಚಾರ್ಲ್ಸ್ ನಂತರ, ಅವರ ಪತ್ನಿ ಕ್ಯಾಮಿಲ್ಲಾ ಕೂಡ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಬ್ರಿಟನ್‌ನ ನೂತನ ರಾಣಿಯಾಗಿ ಪಟ್ಟಾಭಿಷೇಕ ಸ್ವೀಕರಿಸಿದರು.
ಈ ವೇಳೆ ಸಮಾರಂಭದಲ್ಲಿ ನೆರೆದಿದ್ದವರು "ದೇವರೆ ರಾಜನನ್ನು ರಕ್ಷಿಸು' ಎಂದು ಹರ್ಷೋದ್ಗಾರ ಕೂಗಿದರು. ನಂತರ ಕಿಂಗ್ ಚಾರ್ಲ್ಸ್ III ""ಯುನೈಟೆಡ್ ಕಿಂಗ್‌ಡಂನ ಜನರನ್ನು "ನ್ಯಾಯ ಮತ್ತು ಕರುಣೆ'ಯೊಂದಿಗೆ ಆಳ್ವಿಕೆ ನಡೆಸಲು ಮತ್ತು ಎಲ್ಲಾ ನಂಬಿಕೆಗಳಿಂದ ಜನರು ಮುಕ್ತವಾಗಿ ಬದುಕಲು ಸುಲಭವಾದ ವಾತಾವರಣವನ್ನು ನಿರ್ಮಿಸುವುದಕ್ಕೆ ಬದ್ಧನಾಗಿದ್ದೇನೆ,'' ಎಂದು ಪ್ರಮಾಣವಚನ ಸ್ವೀಕರಿಸಿದರು.
3ನೇ ಕಿಂಗ್ ಚಾರ್ಲ್ಸ್ ತಮ್ಮ 74ನೇ ವಯಸ್ಸಿನಲ್ಲಿ ಬ್ರಿಟನ್ ರಾಜನ ಸಿಂಹಾಸನವೇರಿದ್ದು, ಈ ಮೂಲಕ ಬ್ರಿಟನ್ ರಾಜನ ಸಿಂಹಾಸನವೇರಿದ ಅತ್ಯಂತ ಹಿರಿಯ ರಾಜ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ವೆಸ್ಟ್‌ಮಿನಿಸ್ಟರ್ ಅಬ್ಬೆ ಕ್ರಿ.ಶ 1066ರಿಂದಲೂ ಪ್ರತಿ ಬ್ರಿಟನ್ ರಾಜರ ಪಟ್ಟಾಭಿಷೇಕ ನಡೆಯುವ ಸ್ಥಳವಾಗಿದೆ. ವಿಲಿಯಂ ದಿ ಕಾಂಕರರ್ ಇದೇ ಸ್ಥಳದಲ್ಲಿ ಮೊದಲ ಬ್ರಿಟನ್ ರಾಜನಾಗಿ ಅಧಿಕಾರ ಸ್ವೀಕರಿಸಿದ್ದರು.
ಇದೀಗ 3ನೇ ಕಿಂಗ್ ಚಾರ್ಲ್ಸ್ ಮತ್ತು ಅವರ ಪತ್ನಿ ರಾಣಿ ಕ್ಯಾಮಿಲ್ಲಾ ಈ ಭವ್ಯ ಸಂಪ್ರದಾಯವನ್ನು ಅನುಸರಿಸಿದ್ದಾರೆ. ಈ ವೇಳೆ ಕ್ರೈಸ್ತ ಧಾರ್ಮಿಕ ಮುಖಂಡರು ಮತ್ತು ಹಿಂದೂ, ಸಿಖ್, ಮುಸ್ಲಿಂ, ಬೌದ್ಧ ಮತ್ತು ಯಹೂದಿ ಸಮುದಾಯಗಳ ಪ್ರತಿನಿಧಿಗಳು ಸಹ ಹಾಜರಿದ್ದರು.
3ನೇ ಕಿಂಗ್ ಚಾರ್ಲ್ಸ್ ಪಟ್ಟಭಿಷೇಕಕ್ಕೆ ಪ್ರಪಂಚದ ಮೂಲೆ ಮೂಲೆಗಳಿಂದ ಅನೇಕ ಅತಿಥಿಗಳು ವೆಸ್ಟ್‌ಮಿನಿಸ್ಟರ್ ಅಬ್ಬೆಗೆ ಆಗಮಿಸಿದ್ದರು. ರಾಜಮನೆತನದ ಸದಸ್ಯರು, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಸೇರಿದಂತೆ ವಿವಿಧ ದೇಶಗಳ ಮುಖ್ಯಸ್ಥರನ್ನು ಸ್ವಾಗತಿಸಲಾಗಿತ್ತು.
ಬ್ರಿಟನ್‌ನ ನೂತನ ರಾಜ-ರಾಣಿಯಾದ 3ನೇ ಕಿಂಗ್ ಚಾರ್ಲ್ಸ್ ಮತ್ತು ಕ್ಯಾಮಿಲ್ಲಾ ಅವರಿಗೆ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್, ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ಪತ್ನಿ ಸೋಫಿ ಟ್ರುಡೊ ಸೇರಿದಂತೆ ಹಲವು ದೇಶದ ಗಣ್ಯರು ಆಗಮಿಸಿ ಶುಭಾಶಯ ಕೋರಿದರು.












Click it and Unblock the Notifications