ಬೆಂಗಳೂರು ಸೇರಿ ಭಾರತದ ಪ್ರಮುಖ ನಗರಗಳ ಮೇಲೆ ಟ್ರಂಪ್ ಕಣ್ಣು: ಈ ಕ್ಷೇತ್ರಕ್ಕೆ ಹೊಸ ಸಂಕಷ್ಟ ?
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಭಾರತದ ಮೇಲೆ ಭಾರೀ ಸುಂಕವನ್ನು ವಿಧಿಸಿದ್ದು, ಇದರಿಂದ ಭಾರತದ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಭಾರತವು ರಷ್ಯಾ - ಚೀನಾದೊಂದಿಗೆ ಸೇರಿ ಆರ್ಥಿಕ ಕ್ಷೇತ್ರದ ಮೇಲೆ ಪೆಟ್ಟು ಬೀರದಂತೆ ತಂತ್ರರೂಪಿಸುತ್ತಿದೆ. ಆದರೆ, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಕ್ಷೇತ್ರದ ಮೇಲೆ ಪರಿಣಾಮ ಬೀರುವಂತಹ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎನ್ನುವ ಮುನ್ಸೂಚನೆ ಸಿಕ್ಕಿದೆ. ಒಂದೊಮ್ಮೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇ ಆದರೆ ಬೆಂಗಳೂರಿನ ಮೇಲೆ ಭಾರೀ ಪರಿಣಾಮ ಬೀರಲಿದೆ.
ಹೌದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ - ರಷ್ಯಾ ಮತ್ತು ಚೀನಾ ಒಂದಾಗುತ್ತಿರುವುದನ್ನು ಕೆಂಗಣಿನಿಂದಲೇ ನೋಡುತ್ತಿದ್ದಾರೆ. ಆದರೆ ಭಾರತದ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿರುವಂತೆ ಕಾಣಿಸುತ್ತಿದೆ. ಇದೀಗ ಬೆಂಗಳೂರು ಸೇರಿ ಭಾರತದ ಐಟಿ - ಬಿಟಿ ಕ್ಷೇತ್ರದ ಮೇಲೆ ಡೊನಾಲ್ಡ್ ಟ್ರಂಪ್ ಕಣ್ಣು ಬಿದ್ದಿದೆ. ಭಾರತೀಯ ಸರಕುಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸಿದ ಮೇಲೆಯೂ ಭಾರತವು ಇದನ್ನು ನಿಭಾಯಿಸಿಕೊಂಡು ಹೋಗುತ್ತಿದೆ. ರಷ್ಯಾ ಮತ್ತು ಚೀನಾದ ಜೊತೆ ಸೇರಿ ಹೊಸ ತಂತ್ರ ರೂಪಿಸುತ್ತಿರುವಾಗಲೇ ಟ್ರಂಪ್ ಹೊಸ ಶಾಕ್ ಕೊಡುವುದಕ್ಕೆ ಮುಂದಾಗಿದ್ದಾರೆ.

ಅಮೆರಿಕಾ ಭಾರತದ ಐಟಿ ಸೇವೆಗಳ ಮೇಲಿನ ಸಂಭಾವ್ಯ ಸುಂಕಗಳನ್ನು ವಿಧಿಸುವುದಕ್ಕೆ ಮುಂದಾಗುತ್ತಿದೆ ಎಂದು ಹೇಳಲಾಗಿದೆ. ಈಗಾಗಲೇ ಐಟಿ ಕ್ಷೇತ್ರದಲ್ಲಿ ಎಐ ಬಂದಿರುವುದು ಸವಾಲಾಗಿ ಪರಿಣಮಿಸಿದೆ. ಇದರೊಂದಿಗೆ ಇದೀಗ ಐಟಿ ವಲಯದ ವಿದೇಶಿ ಕೆಲಸಗಾರರು ಮತ್ತು ಹೊರಗುತ್ತಿಗೆ ವ್ಯವಹಾರದ ಮೇಲೆ ಕಣ್ಣಿರಿಸಿದ್ದಾರೆ ಎಂದು ಹೇಳಲಾಗಿದೆ. H-1B ವೀಸಾ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿನೆ ಮಾಡುವುದಾಗಿಯೂ ಹೇಳಲಾಗಿದೆ. ಅಲ್ಲದೇ ಇದರೊಂದಿಗೆ ಗ್ರೀನ್ ಕಾರ್ಡ್ ಹೊಂದಿರುವವರು ಮತ್ತು ತಾತ್ಕಾಲಿಕ ವೀಸಾ ಅಡಿಯಲ್ಲಿ ಕೆಲಸ ಮಾಡುತ್ತಿರುವವರ ವಿಷಯವೂ ಚರ್ಚೆ ಆಗಿದೆ ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ ಭಾರತದ ಮೇಲೆ ಶೇ 50ರಷ್ಟು ತೆರಿಗೆ ವಿಧಿಸಿ, ಭಾರತದ ವ್ಯಾಪಾರ ಕ್ಷೇತ್ರವನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಇದರ ನಡುವೆ ಐಟಿ ಕ್ಷೇತ್ರದ ಮೇಲೂ ಒಂದೊಮ್ಮೆ ಸುಂಕವನ್ನು ವಿಧಿಸಿದರೆ ಭಾರೀ ಸಂಕಷ್ಟ ಎದುರಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದ ಅತ್ಯಂತ ಮಹತ್ವದ ರಫ್ತು ಕ್ಷೇತ್ರದ ಮೇಲೆ ಅಮೆರಿಕಾದ ನಿರ್ಧಾರ ಪರಿಣಾಮ ಬೀರುವ ಸಾಧ್ಯತೆ ಇದೆ.
ಜ್ಯಾಕ್ ಪೊಸೊಬಿಕ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಎಲ್ಲಾ ಹೊರಗುತ್ತಿಗೆಗೆ ಸಂಬಂಧಿಸಿದಂತೆ ಯುಎಸ್ ಸುಂಕ ವಿಧಿಸಬೇಕು ಮತ್ತು ವಿದೇಶಗಳಲ್ಲಿ ಯುಎಸ್‌ಗೆ ರಿಮೋಟ್ ಆಗಿ ಸೇವೆ ಸಲ್ಲಿಸುತ್ತಿರುವ ನಿರ್ದಿಷ್ಟ ಕ್ಷೇತ್ರದ ಮೇಲೆ ತೆರಿಗೆ ವಿಧಿಸಬೇಕು ಎಂದಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಯುಎಸ್‌ನ ಐಟಿ ವಲಯದ ಮೇಲೆ ಭಾರತದ ಬೆಂಗಳೂರು, ಹೈದರಾಬಾದ್, ದೆಹಲಿ - ಎನ್‌ಸಿಆರ್ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳು ಅವಲಂಬಿಸಿವೆ. ಹೀಗಾಗಿ, ಐಟಿ ವಲಯದ ಮೇಲೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಳ್ಳುವ ನಿರ್ಧಾರವು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications