ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಖಮೇನಿ ಮತ್ತು ಕುಟುಂಬಸ್ಥರೂ ಸಾವು, 40 ದಿನ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ಟೆಹ್ರಾನ್: ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಸಮರವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಟೆಹ್ರಾನ್‌ನಲ್ಲಿ ನಡೆದ ವಾಯುದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕುಟುಂಬದ ಸದಸ್ಯರು ಬಲಿಯಾಗಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ದೃಢಪಡಿಸಿವೆ. ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆಗಳಾದ 'ಫಾರ್ಸ್' (Fars) ಮತ್ತು ಐಆರ್‌ಐಬಿ (IRIB) ವರದಿಗಳ ಪ್ರಕಾರ ಶನಿವಾರ ನಡೆದ ದಾಳಿಯಲ್ಲಿ ಖಮೇನಿ ಅವರ ಪುತ್ರಿ, ಮೊಮ್ಮಗು, ಅಳಿಯ ಮತ್ತು ಸೊಸೆ ಮೃತಪಟ್ಟಿದ್ದಾರೆ.
ಖಮೇನಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದ ಸರಣಿ ಬಾಂಬ್ ದಾಳಿಗಳ ಸಂದರ್ಭದಲ್ಲಿ ಇವರೆಲ್ಲರೂ ಒಂದೇ ಸ್ಥಳದಲ್ಲಿದ್ದರು ಎಂದು ತಿಳಿದುಬಂದಿದೆ. "ನಮ್ಮ ರಾಷ್ಟ್ರದ ನಾಯಕನ ಕುಟುಂಬದ ಸದಸ್ಯರ ಹುತಾತ್ಮರಾಗಿರುವುದು ಇಡೀ ದೇಶಕ್ಕೆ ತುಂಬಲಾರದ ನಷ್ಟ" ಎಂದು ಇರಾನ್ ರಾಷ್ಟ್ರೀಯ ದೂರದರ್ಶನ ಶೋಕ ವ್ಯಕ್ತಪಡಿಸಿದೆ. ಖಮೇನಿ ಅವರ ಕುಟುಂಬದ ಸದಸ್ಯರ ಸಾವನ್ನು ಇರಾನ್ ಅಧಿಕೃತವಾಗಿ ಒಪ್ಪಿಕೊಂಡಿದ್ದರೂ, ಖಮೇನಿ ಅವರ ಸ್ಥಿತಿಯ ಬಗ್ಗೆ ಆರಂಭದಲ್ಲಿ ಭಿನ್ನ ವರದಿಗಳು ಬಂದಿದ್ದವು.

ಆದರೆ, ಮಾರ್ಚ್ 1ರ ಭಾನುವಾರ ಬೆಳಿಗ್ಗೆ ಇರಾನ್ ಸರ್ಕಾರಿ ಮಾಧ್ಯಮವು 86 ವರ್ಷದ ಅಯತೊಲ್ಲಾ ಅಲಿ ಖಮೇನಿ ಅವರು ಕೂಡ ದಾಳಿಯಲ್ಲಿ 'ಹುತಾತ್ಮ'ರಾಗಿದ್ದಾರೆ ಎಂದು ಘೋಷಿಸಿದೆ. ದೇಶಾದ್ಯಂತ 40 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ.ಟೆಹ್ರಾನ್‌ನಲ್ಲಿರುವ ಖಮೇನಿ ಅವರ ಭದ್ರತಾ ಕಾಂಪೌಂಡ್ ಮೇಲೆ ಸುಮಾರು 30ಕ್ಕೂ ಹೆಚ್ಚು ಬಾಂಬ್‌ಗಳನ್ನು ಹಾಕಲಾಗಿದ್ದು, ಇಡೀ ಪ್ರದೇಶವು ಧ್ವಂಸಗೊಂಡಿದೆ.
ಖಮೇನಿ ಅವರ ನಿಧನದ ನಂತರ ಇರಾನ್‌ನಲ್ಲಿ ಅಧಿಕಾರದ ಶೂನ್ಯತೆ ಸೃಷ್ಟಿಯಾಗಿದ್ದು, ರೆವಲ್ಯೂಷನರಿ ಗಾರ್ಡ್ಸ್ (IRGC) ಹೊಸ ನಾಯಕನನ್ನು ನೇಮಿಸಲು ತುರ್ತು ಸಭೆಗಳನ್ನು ನಡೆಸುತ್ತಿದೆ. ಖಮೇನಿ ಮತ್ತು ಕುಟುಂಬದವರ ಸಾವಿನ ಸುದ್ದಿ ಹರಡುತ್ತಿದ್ದಂತೆ, ಇರಾನ್‌ನ ಕೆಲವು ನಗರಗಳಲ್ಲಿ ಜನರು ಬೀದಿಗಿಳಿದು ಸಂಭ್ರಮಾಚರಣೆ ಮಾಡುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಖಮೇನಿ ಅವರ ಕುಟುಂಬದ ನಿಕಟ ಮೂಲಗಳನ್ನು ಸಂಪರ್ಕಿಸಿದ ನಂತರ, ಅವರ ಪುತ್ರಿ, ಅಳಿಯ ಮತ್ತು ಮೊಮ್ಮಗು "ಹುತಾತ್ಮ"ರಾಗಿರುವುದನ್ನು ಇರಾನ್‌ನ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ. ಖಮೇನಿ ಅವರಿಗೆ ಒಟ್ಟು ಆರು ಮಕ್ಕಳಿದ್ದು (ಮೂವರು ಪುತ್ರಿಯರು), ಈ ದಾಳಿಯಲ್ಲಿ ಮೃತಪಟ್ಟವರು ಯಾರು ಎಂಬ ಬಗ್ಗೆ ಸದ್ಯಕ್ಕೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಖಮೇನಿ ಅವರ ನಿವಾಸದ ಮೇಲಿನ ಭೀಕರ ಬಾಂಬ್ ದಾಳಿಯ ಸಂದರ್ಭದಲ್ಲಿ ಇವರೆಲ್ಲರೂ ಜೊತೆಗಿದ್ದರು ಎಂದು ತಿಳಿದುಬಂದಿದೆ.
ಟ್ರಂಪ್ ಅಧಿಕೃತ ಹೇಳಿಕೆ
ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ 'ಟ್ರೂತ್ ಸೋಷಿಯಲ್' ಖಾತೆಯಲ್ಲಿ ಖಮೇನಿ ಸಾವಿನ ಬಗ್ಗೆ ಹಂಚಿಕೊಂಡಿರುವ ಸಂದೇಶವು ಜಾಗತಿಕವಾಗಿ ಸಂಚಲನ ಮೂಡಿಸಿದೆ. "ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬನಾದ ಖಮೇನಿ ಈಗ ಇಲ್ಲ. ಇದು ಇರಾನ್ ಜನತೆಗೆ ಮಾತ್ರವಲ್ಲದೆ, ಆತನ ಗೂಂಡಾಪಡೆಯಿಂದ ಹತ್ಯೆಗೀಡಾದ ಜಗತ್ತಿನ ಎಲ್ಲಾ ಮುಗ್ಧ ಜನರಿಗೆ ಸಿಕ್ಕ ನ್ಯಾಯವಾಗಿದೆ" ಎಂದು ಟ್ರಂಪ್ ಬರೆದಿದ್ದಾರೆ. ಇರಾನ್‌ನ ಭದ್ರತಾ ವ್ಯವಸ್ಥೆಯನ್ನು ಮೀರಿ ಅತ್ಯಾಧುನಿಕ ಟ್ರ್ಯಾಕಿಂಗ್ ತಂತ್ರಜ್ಞಾನದ ಮೂಲಕ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇರಾನ್ ಜನತೆಗೆ ತಮ್ಮ ದೇಶವನ್ನು ಮರಳಿ ಪಡೆಯಲು ಇದು "ಅತ್ಯುತ್ತಮ ಮತ್ತು ಏಕೈಕ ಅವಕಾಶ" ಎಂದು ಟ್ರಂಪ್ ಬಣ್ಣಿಸಿದ್ದಾರೆ. ಇರಾನ್‌ನ ಸಶಸ್ತ್ರ ಪಡೆಗಳು ಯುದ್ಧ ನಿಲ್ಲಿಸಿ ಜನಸಾಮಾನ್ಯರೊಂದಿಗೆ ಕೈಜೋಡಿಸಬೇಕೆಂದು ಅವರು ಕರೆ ನೀಡಿದ್ದಾರೆ. ಅಲ್ಲದೆ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯಾಗುವವರೆಗೆ ಅಥವಾ ಗುರಿ ತಲುಪುವವರೆಗೆ ಈ ನಿಖರವಾದ ಬಾಂಬ್ ದಾಳಿಗಳು ವಾರವಿಡೀ ನಿರಂತರವಾಗಿ ಮುಂದುವರಿಯಲಿವೆ ಎಂದೂ ಎಚ್ಚರಿಸಿದ್ದಾರೆ. ಖಮೇನಿ ಅವರ ಸಾವಿನ ಬೆನ್ನಲ್ಲೇ ಇರಾನ್ ಸರ್ಕಾರವು ದೇಶಾದ್ಯಂತ 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಮತ್ತು 7 ದಿನಗಳ ಸಾರ್ವಜನಿಕ ರಜೆಯನ್ನು ಘೋಷಿಸಿದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (IRGC) ಈ ದಾಳಿಗೆ ಪ್ರತಿಯಾಗಿ "ಇತಿಹಾಸದಲ್ಲೇ ಅತ್ಯಂತ ಭೀಕರ ಪ್ರತೀಕಾರ" ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.












Click it and Unblock the Notifications