ಸಲಿಂಗಿಗಳ ಮದುವೆಗೆ ಒಪ್ಪಿಗೆ ನೀಡಿದ ಆಸ್ಟ್ರೇಲಿಯಾ ಸರಕಾರ
ಸಿಡ್ನಿ, ಡಿಸೆಂಬರ್ 7: ಏಕ ಲಿಂಗಿಗಳ ನಡುವಿನ ಮದುವೆಗೆ ಆಸ್ಟ್ರೇಲಿಯಾ ಸಂಸತ್ ಒಪ್ಪಿಗೆ ನೀಡಿದೆ. ಇಂದು ನಡೆದ ಐತಿಹಾಸಿಕ ಮತಗಣನೆಯಲ್ಲಿ ಮಸೂದೆಯ ಪರ 154 ಮತಗಳು ಬಿದ್ದಿದ್ದರೆ ಮಸೂದೆ ವಿರುದ್ಧ 4 ಮತಗಳು ಬಿದ್ದಿವೆ.
ಸಂಸತ್ ನಲ್ಲಿ ಬರೋಬ್ಬರಿ 29 ಗಂಟೆಗಳ ಚರ್ಚೆ, 118 ಸುದೀರ್ಘ ಭಾಷಣಗಳ ನಂತರ ಈ ಮಸೂದೆ ಅಂಗೀಕಾರ ಪಡೆದುಕೊಂಡಿದೆ.
"ಇದು ಆಸ್ಟ್ರೇಲಿಯಾ. ಇಲ್ಲಿ ಎಲ್ಲರಿಗೂ ಗೌರವಯುತ ಮೋಹ, ಪ್ರೀತಿ, ವೈವಿಧ್ಯತೆ ತುಂಬಿದ ಜೀವನ ಸಿಗಲಿದೆ," ಎಂದು ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ ಬುಲ್ ಸದನದಲ್ಲಿ ಮಸೂದೆ ಮಂಡಿಸಿ ಮಾತನಾಡಿದರು.

"ಇದು ಆಸ್ಟ್ರೇಲಿಯನ್ನರಿಗೆ ಶ್ರೇಷ್ಠ ದಿನ, ಇದು ಎಲ್ಲರಿಗೂ ಸಂಬಂಧಿಸಿದ್ದು," ಎಂದು ಅವರು ಹೇಳಿದರು.
ಸದನದಲ್ಲಿ ಮಸೂದೆ ಪಾಸಾಗುತ್ತಿದ್ದಂತೆ ಜನಪ್ರತಿನಿಧಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಈ ಮಸೂದೆಯಲ್ಲಿ ಗಂಡು ಮತ್ತು ಹೆಣ್ಣು ನಡುವಿನ ಬಂಧವನ್ನು 'ಮದುವೆ' ಎನ್ನುವ ಹೇಳಿಕೆಯಿಂದ ಇಬ್ಬರ ನಡುವಿನ ಒಂದಾಗುವಿಕೆ ಎಂದು ಬದಲಾಯಿಸಲಾಗಿದೆ.
ಸದ್ಯ ಮಸೂದೆ ಪಾಸಾಗಿದ್ದು ಇನ್ನು ಕೆಲವು ಪ್ರಕ್ರಿಯೆಗಳು ಮುಗಿದ ನಂತರ ಈ ಕಾನೂನು ಜಾರಿಗೆ ಬರಲಿದೆ. ಇದಾಗಿ ತಿಂಗಳೊಳಗೆ ಮೊದಲ ಮದುವೆ ನಡೆಯಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications