ಡ್ರ್ಯಾಗನ್ ಚೀನಾ ರೂಪಿಸಿದ ತಂತ್ರಕ್ಕೆ ಭಾರತದ ಪ್ರತಿತಂತ್ರ!
ನವದೆಹಲಿ: ಭಾರತದ ವಿರುದ್ಧ ಚೀನಾ ನಡೆಸುತ್ತಿರುವ ತಂತ್ರಕ್ಕೆ ಸರಿಯಾಗಿ ಪ್ರತಿತಂತ್ರ ರೂಪಿಸಲು ಭಾರತೀಯ ಸೇನೆ ಸಜ್ಜಾಗಿದೆ. ಶ್ರೀಲಂಕಾ ನಾಯಕರನ್ನು ಬುಟ್ಟಿಗೆ ಹಾಕಿಕೊಂಡು, ಭಾರತದ ಸುತ್ತ ಚೀನಾ (China) ಬಲೆ ಎಣೆಯುತ್ತಿದೆಯಾ? ಎಂಬ ಅನುಮಾನದ ನಡುವೆ ಖಡಕ್ ರಿಯಾಕ್ಷನ್ ನೀಡಲು ಭಾರತ ಸಜ್ಜಾಗಿದೆ. ಇದಕ್ಕಾಗಿ ಭಾರತೀಯ ಸೇನೆಯ ಉನ್ನತಾಧಿಕಾರಿಗಳು ಚರ್ಚೆ ಆರಂಭಿಸಿದ್ದಾರೆ.
ಶ್ರೀಲಂಕಾ ಸಾಲದ ಸುಳಿಗೆ ಸಿಲುಕಿ ಚೀನಾ ಕೈಗೆ ಸಿಲುಕಿರುವುದು ಗೊತ್ತಿರುವ ಸಂಗತಿ. ಪರಿಸ್ಥಿತಿ ಹೀಗಿರುವಾಗ ಚೀನಾ ಮಾತು ಕೇಳದೆ ಶ್ರೀಲಂಕಾಗೆ ಬೇರೆ ದಾರಿ ಇಲ್ಲ. ತನ್ನ ಪ್ರಮುಖ ಬಂದರು ಪ್ರದೇಶ ಹಂಬಂಟೋಟ ಪೋರ್ಟ್ ಅನ್ನು ಚೀನಾಗೆ ಈಗಾಗಲೇ ಬಾಡಿಗೆ ಕೊಟ್ಟಿದೆ ಶ್ರೀಲಂಕಾ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶ್ರೀಲಂಕಾದಲ್ಲಿ ರಾಡಾರ್ ಕೇಂದ್ರ ಸ್ಥಾಪಿಸಲು ಚೀನಾ ಮುಂದಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿತ್ತು. ಈ ಸುದ್ದಿ ಭಾರತಕ್ಕೆ ತಲುಪಿದ ತಕ್ಷಣ ಭಾರತೀಯ ಸೇನೆ ಅಲರ್ಟ್ ಆಗಿದೆ. ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಸೇನಾ ಕಮಾಂಡರ್‌ಗಳ ಸಮ್ಮೇಳನ ಭಾರತೀಯ ಸೇನೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿಯೇ ಈ ಸಮ್ಮೇಳನದ ಬಗ್ಗೆ ಇಡೀ ಜಗತ್ತಿನ ಗಮನ ನೆಟ್ಟಿರುತ್ತದೆ. ಇದೀಗ ಈ ಬಾರಿಯ ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಚೀನಾ ವಿಚಾರವೇ ಪ್ರಮುಖವಾಗಿ ಚರ್ಚೆಗೆ ಬಂದಿದೆಯಂತೆ. ಭಾರತದ ನೆರೆ ರಾಷ್ಟ್ರಗಳಲ್ಲಿ ಚೀನಾ ನಡೆಸುತ್ತಿರುವ ಸೇನಾ ಚಲನವಲನದ ಬಗ್ಗೆ ಸೇನಾಧಿಕಾರಿಗಳ ನಡುವೆ ಮಾತುಕತೆ ನಡೆಯಲಿದೆ. ಅದರಲ್ಲೂ ಶ್ರೀಲಂಕಾ ನೆಲದಲ್ಲಿ ರಾಡಾರ್ ಸ್ಥಾಪನೆಗೆ ಚೀನಾ ಸಿದ್ಧತೆ ನಡೆಸುತ್ತಿದೆ ಎಂಬ ವಿಚಾರ ಸಂಚಲನ ಸೃಷ್ಟಿಸಿದೆ.
ರಾಡಾರ್ ಸ್ಥಾಪಿಸಿದರೆ ಏನಾಗುತ್ತದೆ?
ಚೀನಾ ರಾಡಾರ್ ಕೇಂದ್ರವನ್ನ ಶ್ರೀಲಂಕಾ ನೆಲದಲ್ಲಿ ಸ್ಥಾಪಿಸಿದರೆ, ಭಾರತದ ದಕ್ಷಿಣ ಭಾಗದ ಮೇಲೆ ಹದ್ದಿನ ಕಣ್ಣಿಡಲಿದೆ. ಅದರಲ್ಲೂ ತಮಿಳುನಾಡಿನ ಕೂಡಂಕುಳಂ ಹಾಗೂ ಕಲ್ಪಾಕಂ ಅಣುಸ್ಥಾವರಗಳ ಮೇಲೂ ಚೀನಾ ದೃಷ್ಟಿ ನೆಡಲು ಇದರಿಂದ ಸಾಧ್ಯವಾಗಲಿದೆ. ಪ್ರಮುಖವಾಗಿ ಭಾರತೀಯ ಸೇನೆ ಹಿಂದೂ ಮಹಾಸಾಗರದ ಮೇಲೆ ಹೊಂದಿರುವ ಹಿಡಿತ ತಪ್ಪಿಸುವುದೇ ಚೀನಾ ಉದ್ದೇಶವಾಗಿದೆ ಎಂದು ಆರೋಪಿಸಲಾಗುತ್ತಿದೆ. ಹಂಬಂಟೋಟ ಬಂದರನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಜೊತೆಗೆ ರಾಡಾರ್ ಕೇಂದ್ರವನ್ನೂ ಶ್ರೀಲಂಕಾ ನೆಲದಲ್ಲೇ ಸ್ಥಾಪಿಸಿ ಭಾರತದ ಕಾಟ ಕೊಡುವುದು ಚೀನಾ ಲೆಕ್ಕಾಚಾರ.
ಭಾರತಕ್ಕೆ ಎದುರಾಗಬಹುದು ಕಂಟಕ
ಶ್ರೀಲಂಕಾದಲ್ಲಿ ಚೀನಾ ರಾಡಾರ್ ಕೇಂದ್ರ ಸ್ಥಾಪಿಸಲು ಯಶಸ್ವಿಯಾದರೆ, ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ಮೇಲೆ ಕೂಡ ಕಣ್ಣು ಬೀಳಲಿದೆ. ಭಾರತದ ಜಲಾಂತರ್ಗಾಮಿ ನೌಕೆಗಳು ಹಾಗೂ ಯುದ್ಧ ನೌಕೆಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕಡೆ ಚಲಿಸಿದರೂ ಚೀನಾಗೆ ಗೊತ್ತಾಗಲಿದೆ. ಈ ಮೂಲಕ ಭಾರತದ ಹಿಡಿತದಲ್ಲಿರುವ ಪ್ರದೇಶಗಳು ಕೂಡ ಚೀನಾ ಕಣ್ಣಿಗೆ ಬೀಳಲಿವೆ. ಸುಲಭವಾಗಿ ದಕ್ಷಿಣ ಭಾರತದ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನು ಗುರುತಿಸಲಿದೆ ಚೀನಾ.

ಶ್ರೀಲಂಕಾದಲ್ಲಿ ರಾಡಾರ್ ಸ್ಥಾಪಿಸುವುದರಿಂತ ಭಾರತದ ಮೇಲೆ ಮಾತ್ರವಲ್ಲ, ಅಮೆರಿಕದ ಸೇನೆ ಮೇಲೂ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ಚೀನಾ ಲೆಕ್ಕಾಚಾರ. ಹಿಂದೂ ಮಹಾಸಾಗರದ ವಿಚಾರದಲ್ಲಿ ಚೀನಾಗೆ ಬಿಸಿ ಮುಟ್ಟಿಸುವ ಅಮೆರಿಕಗೆ ಈ ಮೂಲಕ ಪಾಠ ಕಲಿಸುವುದು ಚೀನಾ ಲೆಕ್ಕಾಚಾರ. ಹೀಗಾಗಿ ಹೇಗಾದರೂ ಮಾಡಿ ಶ್ರೀಲಂಕಾ ಸರ್ಕಾರದ ಮನವೊಲಿಸಿ, ದ್ವೀಪರಾಷ್ಟ್ರದ ನೆಲದಲ್ಲಿ ರಾಡಾರ್ ಸ್ಥಾಪಿಸಲು ಸರ್ಕಸ್ ಮಾಡುತ್ತಿದೆ ಚೀನಾ.
ಚೀನಾ ಅದೆಷ್ಟೇ ಚಾಣಾಕ್ಷತನದಿಂದ ಭಾರತದ ವಿರುದ್ಧ ಬಲೆ ಎಣೆಯುತ್ತಿದ್ದರೂ, ಭಾರತ ಇದಕ್ಕೆಲ್ಲಾ ಪ್ರತಿತಂತ್ರ ರೂಪಿಸುತ್ತಿದೆ. ಬೀಜಿಂಗ್ ನಡೆಸುತ್ತಿರುವ ಕುತಂತ್ರವನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದೇ ಕಾರಣಕ್ಕೆ ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಇದೇ ವಿಚಾರವನ್ನು ಪ್ರಮುಖವಾಗಿ ಚರ್ಚೆ ಮಾಡಲಾಗುತ್ತಿದೆ. ಒಟ್ನಲ್ಲಿ ಚೀನಾಗೆ ಈಗ ಬಿಸಿ ಮುಟ್ಟಿಸಿದರೆ ಮಾತ್ರ ಪರಿಸ್ಥಿತಿ ನಿಯಂತ್ರಣ ಸಾಧ್ಯ ಎಂಬ ವಿಚಾರವನ್ನ ಭಾರತ ಅರಿತಂತೆ ಕಾಣುತ್ತಿದೆ.












Click it and Unblock the Notifications