ಚೀನಾದಿಂದ ಭಯಾನಕ ಅಸ್ತ್ರ: ತೈವಾನ್ ಕಥೆ ಉಡೀಸ್?
ತೈಪೆ: ಶತ್ರುಗಳ ಎದೆ ಬಗೆಯಲು ಚೀನಾ ತೊಡೆತಟ್ಟಿ ನಿಂತಿರುವಂತೆ ಕಾಣುತ್ತಿದೆ. ಈ ಕಾರಣಕ್ಕೆ ತೈವಾನ್ ವಿಚಾರವಾಗಿ ಇಷ್ಟು ದಿನ ತಣ್ಣಗಿದ್ದ ಚೀನಾ, ಕಳೆದ 1 ತಿಂಗಳಿಂದ ಉಗ್ರರೂಪ ತಾಳಿದೆ. 1 ದಿನದ ಹಿಂದಷ್ಟೇ ತೈವಾನ್ ಗಡಿಗೆ 38 ಯುದ್ಧ ವಿಮಾನ, 6 ಯುದ್ಧನೌಕೆ ನುಗ್ಗಿಸಿದ್ದ ಚೀನಾ ಸೇನೆ ಭಯಾನಕ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿರುವಂತೆ ಸಂದೇಶ ಸಿಕ್ಕಿದೆ.
ಹೌದು, ಚೀನಾ ರೊಚ್ಚಿಗೆದ್ದಿದೆ. ಅಮೆರಿಕ ವಿರುದ್ಧದ ಸಿಟ್ಟಲ್ಲಿ ಏನೇನೋ ಮಾಡಲು ಹೋಗುತ್ತಿದೆ. ಬೇಡ ಬೇಡ ಅಂದ್ರೂ ತೈವಾನ್ ನಾಯಕರು ಅಮೆರಿಕ ಜೊತೆಗೆ ಸ್ನೇಹ ಬೆಸೆಯಲು ಮುಂದಾದ ಪರಿಣಾಮ ಭೀಕರ ಸಮರಕ್ಕೆ ಚೀನಾದ ಸೇನೆ ಸಿದ್ಧತೆ ನಡೆಸಿದೆ. ಇದರ ಮೊದಲ ಭಾಗವಾಗಿ ತೈವಾನ್ (Taiwan) ಗಡಿಯನ್ನ ಆಕ್ರಮಿಸಿಕೊಳ್ಳುತ್ತಿದೆ. ದ್ವೀಪರಾಷ್ಟ್ರದ ಸುತ್ತಲೂ ತನ್ನ ನೌಕಾಪಡೆ ಯುದ್ಧನೌಕೆ ಹಾಗೂ ಯುದ್ಧ ವಿಮಾನಗಳನ್ನ ರವಾನಿಸಿರುವ ಚೀನಾ, ಮತ್ತಷ್ಟು ಭೀಕರ ಅಸ್ತ್ರಗಳನ್ನ ತೈವಾನ್ ಗಡಿಗೆ ಸಾಗಿಸುತ್ತಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಲಾಂತರ್ಗಾಮಿ ನೌಕೆಗಳು ಉಡೀಸ್!
ಚೀನಾ ಬಳಿ ಅದೆಷ್ಟೋ ಭಯಾನಕ ವೆಪನ್ಸ್ ಇದೆ. ಅದರಲ್ಲೂ ಸಬ್ ಮರಿನ್ ಅಥವಾ ಜಲಾಂತರ್ಗಾಮಿ ನೌಕೆಗಳನ್ನೂ ಉಡಾಯಿಸಬಲ್ಲ ಅಸ್ತ್ರಗಳು ವಿನಾಶಕಾರಿ. ಇದೀಗ ಚೀನಾ ತನ್ನ Z-9 ಹೆಲಿಕಾಪ್ಟರ್‌ಗಳನ್ನ ತೈವಾನ್ ಗಡಿಗೆ ನುಗ್ಗಿಸಿದೆ. Z-9 ಹೆಲಿಕಾಪ್ಟರ್ ಬಳಸಿಕೊಂಡು ತೈವಾನ್‌ಗೆ ಖಡಕ್ ವಾರ್ನಿಂಗ್ ಕೊಡುತ್ತಿದೆ. ಮತ್ತೊಂದು ಕಡೆ ಅಕಸ್ಮಾತ್ ಅಮೆರಿಕ ತನ್ನ ಜಲಾಂತರ್ಗಾಮಿ ನೌಕೆಗಳನ್ನ ತೈವಾನ್ ರಕ್ಷಣೆಗೆ ಕಳುಹಿಸಿದರೆ ಇದು ಉಪಯೋಗಕ್ಕೆ ಬರಲಿ ಎಂಬ ರಣತಂತ್ರ ಕೂಡ ಚೀನಾ ಸೇನೆಗೆ ಇರಬಹುದು.
ಸಮಸ್ಯೆ ಶುರುವಾಗಿದ್ದು ಎಲ್ಲಿಂದ?
ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಈಗಲೂ ಕಿತಾಪತಿ ಮಾಡುತ್ತಿದೆ. ಪದೇಪದೆ ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದಷ್ಟೇ ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನು ಪ್ರಯಾಣಿಸಿಕೊಂಡು ಹೋಗಿತ್ತು ಅಮೆರಿಕ. ಇದಾದ ಬಳಿಕ ಚೀನಾ ತನ್ನ ಶಕ್ತಿ ಏನು ಅನ್ನೋದನ್ನ ತನ್ನ ಶತ್ರು ರಾಷ್ಟ್ರ ತೈವಾನ್‌ಗೆ ತೋರಿಸುತ್ತಲೇ ಇದೆ. ತೈವಾನ್ ವಿರುದ್ಧ ನೇರವಾಗಿ ತೊಡೆತಟ್ಟಿ, ರಣವೀಳ್ಯ ನೀಡಿದೆ ಚೀನಾ. ಹೀಗಾಗಿ ತೈವಾನ್ ಮತ್ತು ಚೀನಾ ಗಡಿಯಲ್ಲಿ ಯಾರೂ ಊಹಿಸದ ಸ್ಥಿತಿ ನಿರ್ಮಾಣವಾಗಿದೆ.

ತೈವಾನ್ ವಿನಾಶಕ್ಕೆ ಚೀನಾ ಮುನ್ನುಡಿ?
ಚೀನಾ 1 ದಿನದ ಹಿಂದೆ ತೈವಾನ್ ಗಡಿಗೆ ನುಗ್ಗಿಸಿದ್ದ ಯುದ್ಧ ವಿಮಾನಗಳು ಮತ್ತು ಡ್ರೋನ್ ಶಕ್ತಿಶಾಲಿ ಹಾಗೂ ವಿನಾಶಕಾರಿ ಎಂದು ಗುರುತಿಸಿಕೊಂಡಿವೆ. ಎಸ್‌ಯು-30, ಎರಡು ಜೆ-16 ಹಾಗೂ ಟಿಬಿ-001 ಕಂಡು ತೈವಾನ್ ಬೆಚ್ಚಿಬಿದ್ದಿತ್ತು. ಈ ಶಾಕ್ ತಡೆದುಕೊಳ್ಳಲು ತೈವಾನ್ ತವಕಿಸುವಾಗಲೇ ಮತ್ತೊಂದು ಆಘಾತ ನೀಡಿದೆ ಚೀನಾ ಸೇನೆ. ಈ ತಿಂಗಳ ಆರಂಭದಲ್ಲೂ ತೈವಾನ್ ಬೆಚ್ಚಿಬೀಳುವಂತೆ ಮಾಡಿತ್ತು ಚೀನಾ. ಹೆಚ್ಚುಕಮ್ಮಿ ಆದರೆ ಯುದ್ಧಕ್ಕೆ ನಾವು ಸಿದ್ಧ ಎಂದು ಚೀನಾ ನೇರವಾಗಿ ಎಚ್ಚರಿಕೆ ನೀಡುತ್ತಿದೆ.
ತೈವಾನ್‌ಗೆ ಉಗ್ರರೂಪ ತೋರಿಸಿದ ಚೀನಾ
ಇತ್ತೀಚೆಗೆ ಸೋರಿಯಕೆಯಾಗಿದ್ದ ಅಮೆರಿಕದ ರಹಸ್ಯ ದಾಖಲೆಗಳಲ್ಲಿ ಚೀನಾ ಮತ್ತು ತೈವಾನ್, ಜಪಾನ್ ವಿಚಾರ ಕೂಡ ಪಸ್ತಾಪವಾಗಿತ್ತು. ತನ್ನ ಸಮಾನ ಶತ್ರುಗಳ ವಿರುದ್ಧ ಚೀನಾ 'ಬ್ರಹ್ಮಾಸ್ತ್ರ' ಸಿದ್ಧಗೊಳಿಸಿದೆ ಎಂದು ಅಮೆರಿಕದ ಗುಪ್ತಚರ ವರದಿ ತಿಳಿಸಿತ್ತು. ಆ ಪ್ರಕಾರ ಚೀನಾ ತಯಾರಿಸಿರುವ WZ-8 ಸೂಪರ್ ಸಾನಿಕ್ ಡ್ರೋನ್ ಮೂಲಕ ಜಪಾನ್, ಅಮೆರಿಕ & ತೈವಾನ್ ಎದೆ ನಡುಗಿಸಿತ್ತು. ಇಷ್ಟೆಲ್ಲಾ ಘಟನೆಗಳು ನಡೆದು ಕೆಲವೇ ದಿನ ಕಳೆದಿದೆ ಅಷ್ಟೇ, ಅಷ್ಟರಲ್ಲಿ ಚೀನಾ ಮತ್ತೊಮ್ಮೆ ತೈವಾನ್‌ಗೆ ತನ್ನ ಉಗ್ರ ರೂಪ ತೋರಿಸುತ್ತಿದೆ.

ಅತ್ತ ರಷ್ಯಾ ಮತ್ತು ಉಕ್ರೇನ್ ಒಬ್ಬರಿಗೊಬ್ಬರು ಬಾಂಬ್ ಎಸೆಯುತ್ತಾ, ಶೆಲ್ ದಾಳಿ ಮಾಡುತ್ತಾ ವಿನಾಶದ ಮುನ್ಸೂಚನೆ ನೀಡುತ್ತಿವೆ. ಇನ್ನೊಂದು ಕಡೆ ತೈವಾನ್ ಮತ್ತು ಚೀನಾ ಗಡಿಯಲ್ಲೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಜಗತ್ತಿನಾದ್ಯಂತ ಸಂಚಲನ ಸೃಷ್ಟಿಮಾಡಿದೆ. ಈವರೆಗೂ ಅಮೆರಿಕ ಮಾತ್ರ ತೈವಾನ್ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡಿಲ್ಲ. ಮತ್ತೊಂದು ಕಡೆ ಚೀನಾ ಮತ್ತಷ್ಟು ಬಲವಾಗಿ ತೈವಾನ್ ಸುತ್ತಲೂ ಸೇನೆ ನಿಯೋಜಿಸುತ್ತಿದೆ.












Click it and Unblock the Notifications