ಅಂಟಾರ್ಕ್ಟಿಕಾದಲ್ಲಿ ರಕ್ತ ಹರಿಯುವ ಜಲಪಾತ? ಕೊನೆಗೂ ಬಯಲಾಯ್ತು 100 ವರ್ಷದ ರಹಸ್ಯ!
ಮೊದಲ ನೋಟಕ್ಕೆ ಇದು ಸಿನಿಮಾ ದೃಶ್ಯದಂತೆ ಕಾಣಬಹುದು. ಹಿಮದ ನಡುವೆ ಕೆಂಪು ಬಣ್ಣದ ನೀರು ಹರಿಯುತ್ತಿರುವುದನ್ನು ನೋಡಿದರೆ, ಇದು ರಕ್ತವೇ ಎಂಬ ಪ್ರಶ್ನೆ ಸಹಜ. ಆದರೆ ನಿಜಕ್ಕೂ ಇದು ರಕ್ತವಲ್ಲ. ಇದು ಪ್ರಕೃತಿಯ ಅದ್ಭುತ ವೈಜ್ಞಾನಿಕ ರಹಸ್ಯಗಳಲ್ಲಿ ಒಂದಾದ ಬ್ಲಡ್ ಫಾಲ್ಸ್. ಸುಮಾರು 100 ವರ್ಷಗಳಿಂದ ವಿಜ್ಞಾನಿಗಳನ್ನು ಕಾಡಿದ್ದ ಈ ರಹಸ್ಯಕ್ಕೆ ಈಗ ಹೊಸ ಸಂಶೋಧನೆಗಳು ಸ್ಪಷ್ಟ ಉತ್ತರ ನೀಡಿವೆ.
ರಕ್ತದಂತೆ ಕೆಂಪಾಗಿ ಕಾಣುವುದೇಕೆ?
ಈ ಜಲಪಾತದ ನೀರು ಕೆಂಪಾಗಿರುವುದಕ್ಕೆ ಕಾರಣ ಕಬ್ಬಿಣದ ಅಂಶ. ಬ್ಲಡ್ ಫಾಲ್ಸ್ ನೀರು ಹರಿದುಬರುವ ಗ್ಲೇಶಿಯರ್‌ನ ಆಳದಲ್ಲಿ ಕಬ್ಬಿಣದ ಅಂಶ ಹೆಚ್ಚಿರುವ ಅತ್ಯಂತ ಉಪ್ಪಿನ ನೀರು ಲಕ್ಷಾಂತರ ವರ್ಷಗಳಿಂದ ಸಿಕ್ಕಿಹಾಕಿಕೊಂಡಿದೆ. ಈ ನೀರು ಮೇಲ್ಮೈಗೆ ಬಂದಾಗ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ಕಬ್ಬಿಣ ಪ್ರತಿಕ್ರಿಯಿಸಿ ತುಕ್ಕು ಉಂಟುಮಾಡುತ್ತದೆ. ಇದೇ ಕಾರಣಕ್ಕೆ ನೀರು ಗಾಢ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಕಬ್ಬಿಣದ ವಸ್ತುವಿಗೆ ತುಕ್ಕು ಹಿಡಿಯುವುದಕ್ಕೆ ಹೋಲಿಸಬಹುದು. ತುಕ್ಕು ಕೆಂಪಾಗಿರುವಂತೆ, ಈ ನೀರೂ ಕೆಂಪಾಗಿ ಕಾಣುತ್ತದೆ.

ಅಂಟಾರ್ಕ್ಟಿಕಾ ಭೂಮಿಯ ಅತ್ಯಂತ ಚಳಿಯ ಪ್ರದೇಶಗಳಲ್ಲಿ ಒಂದು. ಆದರೂ ಈ ನೀರು ಹೆಪ್ಪುಗಟ್ಟುವುದಿಲ್ಲ. ಕಾರಣ, ಈ ನೀರಿನಲ್ಲಿ ಉಪ್ಪಿನ ಪ್ರಮಾಣ ಸಾಮಾನ್ಯ ಸಮುದ್ರದ ನೀರಿಗಿಂತಲೂ ಬಹಳ ಹೆಚ್ಚು. ಉಪ್ಪು ಹೆಚ್ಚಾದರೆ ನೀರು ಸುಲಭವಾಗಿ ಹಿಮವಾಗುವುದಿಲ್ಲ. ಇದೇ ಕಾರಣದಿಂದ ಈ ನೀರು ಭೂಮಿಯ ಅತಿ ಚಳಿಯಲ್ಲೂ ದ್ರವರೂಪದಲ್ಲೇ ಉಳಿದು ಹೊರಗೆ ಹರಿಯುತ್ತದೆ.
ಈ ನೀರು ಎಲ್ಲಿಂದ ಬರುತ್ತದೆ?
ಈ ಕೆಂಪು ನೀರಿನ ಮೂಲ ಸುಮಾರು 400 ಮೀಟರ್ ಆಳದಲ್ಲಿರುವ ಒಂದು ಪುರಾತನ ಭೂಗತ ಸರೋವರ. ಸುಮಾರು 15 ಲಕ್ಷ ವರ್ಷಗಳ ಹಿಂದೆ, ಹಿಮನದಿ ಮುಂದಕ್ಕೆ ಚಲಿಸುವಾಗ ಸಮುದ್ರದ ನೀರು ಅದರ ಕೆಳಗೆ ಸಿಕ್ಕಿಹಾಕಿಕೊಂಡಿತು. ಕಾಲಕ್ರಮೇಣ ಆ ನೀರು ಇನ್ನಷ್ಟು ಉಪ್ಪಾಗಿ, ದಟ್ಟವಾದ ಉಪ್ಪುನೀರಾಗಿ ಬದಲಾಯಿತು. ಅದು ಲಕ್ಷಾಂತರ ವರ್ಷಗಳಿಂದ ಹಿಮದ ಕೆಳಗೆ ಬಂಧಿತವಾಗಿಯೇ ಉಳಿದಿದೆ.
1911ರಲ್ಲಿ ಆಸ್ಟ್ರೇಲಿಯಾದ ಭೂವಿಜ್ಞಾನಿ ಗ್ರಿಫಿತ್ ಟೇಯ್ಲರ್ ಈ ಜಲಪಾತವನ್ನು ಮೊದಲ ಬಾರಿಗೆ ಕಂಡುಹಿಡಿದರು. ಆಗ ಕೆಂಪು ಬಣ್ಣಕ್ಕೆ ಕಾರಣ ಪಾಚಿ ಇರಬಹುದು ಎಂದು ಅವರು ಭಾವಿಸಿದ್ದರು. ಆದರೆ ನಂತರದ ಅಧ್ಯಯನಗಳು ಅದು ತಪ್ಪು ಎಂದು ತೋರಿಸಿಕೊಟ್ಟವು. ಕಬ್ಬಿಣಯುಕ್ತ ಉಪ್ಪಿನ ನೀರೇ ಇದಕ್ಕೆ ಕಾರಣ ಎಂಬುದು ಗೊತ್ತಾಯಿತು.
ಆದರೂ ಇನ್ನೊಂದು ಪ್ರಶ್ನೆ ಉಳಿದಿತ್ತು. ಹಿಮದ ಕೆಳಗಿರುವ ನೀರು ಮೇಲ್ಮೈಗೆ ಹೇಗೆ ಬರುತ್ತದೆ? 2017ರಲ್ಲಿ ವಿಜ್ಞಾನಿಗಳು ರಾಡಾರ್ ಬಳಸಿ ಹಿಮನದಿಯ ಒಳಭಾಗವನ್ನು ಪರಿಶೀಲಿಸಿದಾಗ ಸುಮಾರು 300 ಮೀಟರ್ ಉದ್ದದ ಗುಪ್ತ ಕಾಲುವೆಗಳ ಜಾಲ ಕಂಡುಬಂದಿತು. ಈ ಕಾಲುವೆಗಳ ಮೂಲಕ ಒತ್ತಡದಲ್ಲಿರುವ ಉಪ್ಪಿನ ನೀರು ನಿಧಾನವಾಗಿ ಮೇಲ್ಮೈಗೆ ತಲುಪುತ್ತದೆ.
ಈ ವರ್ಷ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಹಿಮದಲ್ಲಿ ಕಾಲಕಾಲಕ್ಕೆ ಉಂಟಾಗುವ ಸಣ್ಣ ಬಿರುಕುಗಳ ಮೂಲಕ ಈ ನೀರು ಹೊರಬಂದು ಬ್ಲಡ್ ಫಾಲ್ಸ್ ಆಗಿ ಹರಿಯುತ್ತದೆ.
ಇನ್ನೊಂದು ಅಚ್ಚರಿ
ಇಲ್ಲಿ ಇನ್ನೂ ಒಂದು ಅಚ್ಚರಿ ಇದೆ. ಹಿಮದ ಕೆಳಗಿರುವ ಈ ಉಪ್ಪಿನ ನೀರಿನಲ್ಲಿ ಕೆಲವು ಬಗೆಯ ಸೂಕ್ಷ್ಮಜೀವಿಗಳು ಜೀವಿಸುತ್ತಿವೆ. ಅವು ಲಕ್ಷಾಂತರ ವರ್ಷಗಳಿಂದ ಸೂರ್ಯನ ಬೆಳಕು, ಗಾಳಿ ಮತ್ತು ಆಮ್ಲಜನಕವಿಲ್ಲದೆ ಬದುಕುತ್ತಿವೆ. ಸಾಮಾನ್ಯವಾಗಿ ಸಸ್ಯಗಳು ಸೂರ್ಯನ ಬೆಳಕಿನಿಂದ ಶಕ್ತಿಯನ್ನು ಪಡೆಯುತ್ತವೆ. ಆದರೆ ಈ ಸೂಕ್ಷ್ಮಜೀವಿಗಳು ಬೆಳಕಿನ ಬದಲು ರಾಸಾಯನಿಕ ಕ್ರಿಯೆಗಳ ಮೂಲಕವೇ ಬದುಕುತ್ತಿವೆ.
ಇದರಿಂದ ವಿಜ್ಞಾನಿಗಳಿಗೆ ಏನು ಪ್ರಯೋಜನ?
ಈ ಸಂಶೋಧನೆ ಭೂಮಿಯಷ್ಟೇ ಅಲ್ಲ, ಬಾಹ್ಯಾಕಾಶ ಅಧ್ಯಯನಕ್ಕೂ ಬಹಳ ಮುಖ್ಯವಾಗಿದೆ. ಯಾಕೆಂದರೆ ಮಂಗಳ ಅಥವಾ ಯುರೋಪಾ ಮುಂತಾದ ಹಿಮದಿಂದ ಆವೃತವಾಗಿರುವ ಗ್ರಹಗಳು ಮತ್ತು ಉಪಗ್ರಹಗಳ ಒಳಭಾಗದಲ್ಲೂ ಇಂತಹ ಪರಿಸ್ಥಿತಿ ಇರಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ. ಹೀಗಾಗಿ, ಬ್ಲಡ್ ಫಾಲ್ಸ್ ಅಧ್ಯಯನವು ಭೂಮಿಯ ಹೊರಗೂ ಜೀವ ಇರಬಹುದೇ ಎಂಬ ಮಹತ್ವದ ಪ್ರಶ್ನೆಗೆ ಉತ್ತರ ಹುಡುಕಲು ಸಹಾಯ ಮಾಡುತ್ತಿದೆ.
Nature is awesome.
— Fascinating History (@Fascinate_Hist) December 22, 2025
"Blood Falls" in Antarctica. pic.twitter.com/Us9BXO4jBY
(ಬರಹ: ಭವಾನಿ ಭಟ್)














Click it and Unblock the Notifications