Turkey Cave: ಗುಹೆ ಒಳಗೆ ಸಿಲುಕಿ ನರಳಾಡಿದ್ದ ವ್ಯಕ್ತಿ ಕೊನೆಗೆ ಏನಾದ?
ಆತ ಸಾಹಸಿ, ಆತನ ಕೆಲಸವೇ ಅಂತಹದ್ದು. ಆದ್ರೆ ಹೀಗೆ ತನ್ನ ಕೆಲಸ ಮಾಡಲು ಗುಹೆಯ ಒಳಗೆ ಹೋಗಿದ್ದ ಆ ವ್ಯಕ್ತಿಗೆ ಕಂಟಕ ಎದುರಾಗಿತ್ತು. ಅಪಾಯಕ್ಕೆ ಸಿಲುಕಿ ನರಳಾಡಿದ್ದವನು ತನ್ನ ಜೀವ ಹೋಯ್ತು ಅಂತಾ ಅಂದುಕೊಂಡಿದ್ದ. ಹೀಗಿದ್ದಾಗ ಪವಾಡ ಒಂದು ನಡೆದು ಹೋಗಿದೆ. ಹಾಗಾದ್ರೆ ಗುಹೆ ಒಳಗೆ ಸಿಲುಕಿದ್ದ ವ್ಯಕ್ತಿ ಕಡೆಗೆ ಏನಾದ? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.
ಕೆಲವರ ಕೆಲಸ ಸುಲಭವಾಗಿ ಇರುತ್ತೆ, ಮತ್ತೆ ಕೆಲವರ ಕೆಲಸ ಜೀವವನ್ನೇ ಬಲಿಪಡೆಯುತ್ತೆ. ಅದ್ರಲ್ಲೂ ಅನ್ವೆಷಣೆ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳು ಇರುತ್ತವೆ. ಈ ರೀತಿ ಸವಾಲನ್ನು ಇಷ್ಟ ಪಡುವವರೇ ಅನ್ವೇಷಣೆ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರಿಗೆ ಇದು ವೃತ್ತಿ ಆಗಿದ್ರೆ, ಇನ್ನು ಕೆಲವರಿಗೆ ಅನ್ವೇಷಣೆ ಪ್ರವೃತಿ. ಆದರೆ ಈ ಘಟನೆಯಲ್ಲಿ ಅನ್ವೇಷಕನೊಬ್ಬ ಅಪಾಯಕ್ಕೆ ಸಿಲುಕಿ 3 ಸಾವಿರ ಅಡಿ ಆಳದಲ್ಲಿ ಒದ್ದಾಡಿ ಈಗ ಜೀವಂತ ಹೊರಬಂದಿದ್ದಾನೆ. ಹೀಗೆ ಅನ್ವೇಷಕನ ರಕ್ಷಣೆ ಮಾಡಿದ್ದೇ ದೊಡ್ಡ ಸಾಹಸದ ಸಂಗತಿ.

182 ಜನರಿಂದ ರಕ್ಷಣಾ ಕಾರ್ಯ
ಟರ್ಕಿ ಗುಹೆಯೊಂದರಲ್ಲಿ ಅಪಾಯಕ್ಕೆ ಸಿಲುಕಿದ್ದ ಅಮೆರಿಕ ಮೂಲದ ಅನ್ವೇಷಕನನ್ನ, ಒಟ್ಟು 8 ದೇಶಗಳ 182 ಜನರ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಟರ್ಕಿಯ ಟಾರುಸ್ ಎಂಬ ಗುಡ್ಡಗಾಡು ಪ್ರದೇಶದ ಮೋರ್ಕಾ ಗುಹೆಯಲ್ಲಿ ಘಟನೆ ನಡೆದಿದೆ. 40 ವರ್ಷ ವಯಸ್ಸಿನ ಅನ್ವೇಷಕ ಮಾರ್ಕ್ ಡಿಕ್ಕಿ ಎಂಬುವವರನ್ನ ರಕ್ಷಣೆ ಮಾಡಲಾಗಿದೆ. ಆಗಸ್ಟ್ 31ಕ್ಕೆ ಈ ನಿಗೂಢ ಮೋರ್ಕಾ ಗುಹೆ ಅನ್ವೇಷಣೆಗೆ ಹೋಗಿದ್ದ ಡಿಕ್ಕಿ, ಆದರೆ 5 ದಿನದ ಬಳಿಕ 3000 ಅಡಿ ಆಳದಿಂದ ಹೊರಗಿನ ಸಂಪರ್ಕ ಕಳೆದುಕೊಂಡಿದ್ದರು. ಹೀಗಿದ್ದಾಗಲೇ ಆತನ ಮೇಲೆ ನಿಗಾ ವಹಿಸಿದ್ದ ನ್ಯೂ ಜೆರ್ಸಿಯ ಖಾಸಗಿ ಸಂಸ್ಥೆ, ಟರ್ಕಿಯ ರಕ್ಷಣಾ ಪಡೆಗೆ ಮಾಹಿತಿ ನೀಡಿ ಸಹಾಯ ಕೋರಿತ್ತು.
ಒಬ್ಬನ ರಕ್ಷಣೆಗೆ ಬಂದಿದ್ದು ನೂರಾರು ಜನ
ಮೋರ್ಕಾ ಗುಹೆ ಒಂದು ನಿಗೂಢ ಪ್ರದೇಶವಾಗಿದ್ದು, ಇಲ್ಲಿಗೆ ಅನ್ವೆಷಣೆಗೆ ಬಂದವರ ಪೈಕಿ ಸಾಕಷ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಈ ಬಾರಿ ಕೂಡ ಮಾರ್ಕ್ ಡಿಕ್ಕಿ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದರು. ಭಾರಿ ಆಳದಲ್ಲಿ ಸಿಲುಕಿದ್ದ ಡಿಕ್ಕಿ ಅವರನ್ನು ಕರೆತರುವುದು ಸವಾಲಿನ ಕೆಲಸ ಅಂತಾ ಗೊತ್ತಾದ ತಕ್ಷಣ ಇಟಲಿ, ಹಂಗೇರಿ, ಬಲ್ಗೇರಿಯಾ, ಉಕ್ರೇನ್ ಪೋಲ್ಯಾಂಡ್ ಮತ್ತು ಇಂಗ್ಲೆಂಡ್ ಸೇರಿ 8 ದೇಶಗಳ ತಜ್ಞರ 182 ಜನರಿದ್ದ ತಂಡ ಒಟ್ಟಾಗಿ ಒಬ್ಬ ವ್ಯಕ್ತಿಯನ್ನ ರಕ್ಷಣೆ ಮಾಡಿದೆ.

ಗುಹೆಯ ಗೋಡೆ ಕತ್ತರಿಸಿದರು!
ಡಿಕ್ಕಿ ಪತ್ತೆಗಾಗಿ ಕೆಲವು ಕಡೆ ಗುಹೆಯ ಗೋಡೆ ಕತ್ತರಿಸಲಾಗಿದೆ. ಹಾಗೇ ಅನ್ವೇಷಕ ಪತ್ತೆಯಾದ ನಂತರ ಅವರ ಪರಿಸ್ಥಿತಿ ಗಂಭೀರವಾಗಿತ್ತು. ಅನ್ವೇಷಕ ಡಿಕ್ಕಿ ಸುಸ್ತಾಗಿ ಕುಸಿದು ಬಿದ್ದಿದ್ದರು. ರಕ್ತ ಹೀನತೆ ಕೂಡ ಕಾಡುತ್ತಿತ್ತು. ತಕ್ಷಣ ಅಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಲಾಗಿತ್ತು. ಹೀಗೆ ಅನ್ವೇಷಕ ಡಿಕ್ಕಿ ಜೀವ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಡಿಕ್ಕಿ ಹೊರಗೆ ಬರುವ ತನಕ ಕ್ಷಣಕ್ಷಣಕ್ಕೂ ಆತಂಕ ಮನೆ ಮಾಡಿತ್ತು. ಆದ್ರೆ ಎಲ್ಲವೂ ಈಗ ಸರಿ ಹೋಗಿದೆ.
ಹೀಗೆ ಸಾವು ಗೆದ್ದು ಹೊರಗೆ ಬಂದಿದ್ದೇ ತಡ, ಅನ್ವೇಷಕ ಮಾರ್ಕ್ ಡಿಕ್ಕಿ ಅವರು ಹೇಳಿರುವ ಮಾತು ಒಂದೇ 'ಹೋ ದೇವರೆ, ನಾನು ಬದುಕಿದೆ. ಇದೊಂದು ತೀರಾ ಭಯಾನಕ ಅನುಭವ ಆಗಿತ್ತು, ಕೊನೆಗೂ ನಾನು ಮೇಲೆ ಬಂದೆ' ಎಂದಿದ್ದಾರೆ. ಇನ್ನು ಈ ಗುಹೆಯ ಆಳದ ಬಗ್ಗೆ ನೋಡುವುದಾದರೆ, ಮೋರ್ಕಾ ಗುಹೆ ಜಗತ್ತಿನಲ್ಲೇ ಅತಿ ಆಳದ ಗುಹೆಯಾಗಿದ್ದು, ಗರಿಷ್ಠ 4,186 ಅಡಿ ಆಳವಿದೆ ಎನ್ನಲಾಗಿದೆ. ಈಗ ರಕ್ಷಣೆ ಮಾಡಿರುವ ಅನ್ವೇಷಕ ಮಾರ್ಕ್ ಡಿಕ್ಕಿ ಸುಮಾರು 3 ಸಾವಿರ ಅಡಿ ಆಳದಲ್ಲಿ ಸಿಲುಕಿದ್ದರು.












Click it and Unblock the Notifications