ರಷ್ಯಾ ಯುದ್ಧ ವಿಮಾನಗಳ ಹಾರಾಟಕ್ಕೆ ತಡೆ ಹಾಕಿದ ಅಮೆರಿಕ
ವಾಷಿಂಗ್ಟನ್, ಜೂನ್ 28 : ರಷ್ಯಾ ಸೇನೆಯ ಯುದ್ಧ ವಿಮಾನಗಳ ಹಾರಾಟಕ್ಕೆ ಅಮೆರಿಕ ತಡೆ ಹಾಕಿದೆ. ಅಮೆರಿಕ-ರಷ್ಯಾ ನಡುವಿನ ಈ ಸಣ್ಣ ವಿವಾದ ವಿಶ್ವದ ಗಮನವನ್ನು ಸೆಳೆಯುತ್ತಿದೆ. ಈಗಾಗಲೇ ಭಾರತ-ಚೀನಾ ಯೋಧರ ಘರ್ಷಣೆ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ.
ಅಲಾಸ್ಕಾ ಬಳಿ ರಷ್ಯಾ ವಾಯುಸೇನೆಯ ಯುದ್ಧವಿಮಾನಗಳ ಹಾರಾಟಕ್ಕೆ ಅಮೆರಿಕ ತಡೆ ಹಾಕಿದೆ. ಅಲಸ್ಕಾ ವಾಯು ರಕ್ಷಣಾ ಒಪ್ಪಂದವನ್ನು ರಷ್ಯಾ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ. ಇದು ಅಮೆರಿ ಮತ್ತು ರಷ್ಯಾ ನಡುವಿನ ಬಿಕ್ಕಟ್ಟಿಗೆ ಕಾರಣವಾಗಲಿದೆಯೇ? ಎಂದು ಕಾದು ನೋಡಬೇಕಿದೆ.
ರಷ್ಯಾದ ನಾಲ್ಕು ಟಿಯು-142 ಎಸ್ ಯುದ್ಧ ವಿಮಾನಗಳು ದಕ್ಷಿಣ ಅಲಸ್ಕಾದ ಅಲ್ಯೂಟಿಯನ್ ದ್ವೀಪದ ಮೇಲೆ ಹಾರಾಟ ನಡೆಸಿವೆ. ಈ ಹಾರಾಟದ ಬಳಿಕ ಅಮೆರಿಕ ಯುದ್ಧ ವಿಮಾನಗಳ ಹಾರಾಟಕ್ಕೆ ತಡೆ ಹಾಕಿದ್ದು, ವಿವಾದಕ್ಕೆ ಕಾರಣವಾಗಿದೆ.

ರಷ್ಯಾದ ಯುದ್ಧ ವಿಮಾನಗಳ ಹಾರಾಟ ಪತ್ತೆಯಾದ ತಕ್ಷಣ ಅಮೆರಿಕ ವಾಯುಸೇನೆಯ ಎಫ್ - 22 ವಿಮಾನಗಳು ರಷ್ಯಾದ ವಿಮಾನಗಳನ್ನು ವಾಪಸ್ ಕಳಿಸುವಲ್ಲಿ ಯಶಸ್ವಿಯಾಗಿವೆ. ರಷ್ಯಾ ವಿಮಾನಗಳು ಅಮೆರಿಕ ಅಥವ ಕೆನಡಾದ ವಾಯುಗಡಿಯನ್ನು ಪ್ರವೇಶ ಮಾಡಿಲ್ಲ ಎಂದು ಅಮೆರಿಕ ವಾಯುಸೇನೆ ಸ್ಪಷ್ಟಪಡಿಸಿದೆ.
ಅಲಸ್ಕಾದ ಅಲ್ಯೂಟಿನ್ ದ್ವೀಪದ ಮೇಲೆ ಹಾರಾಟ ನಡೆಸುವುದು ಅಲಸ್ಕಾ ವಾಯು ರಕ್ಷಣಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಅಮೆರಿಕ ಆರೋಪ ಮಾಡಿದೆ. ಜೂನ್ ತಿಂಗಳಿನಲ್ಲಿ 4 ಬಾರಿಗೆ ಅಮೆರಿಕ ರಷ್ಯಾ ಯುದ್ಧ ವಿಮಾನಗಳ ಹಾರಾಟಕ್ಕೆ ತಡೆಯೊಡ್ಡಿದೆ.












Click it and Unblock the Notifications