Taliban Rules: ಮಹಿಳೆಯರು ಓದಬಾರದು.. ಇದು ತಾಲಿಬಾನ್ ರೂಲ್ಸ್!
ಅದ್ಯಾವ ಘಳಿಗೆಯಲ್ಲಿ ತಾಲಿಬಾನ್ ಸಂಘಟನೆ ಹುಟ್ಟಿಕೊಂಡಿತೋ ಗೊತ್ತಿಲ್ಲ, ಇವರಿಂದಾಗಿ ಅಫ್ಘಾನಿಸ್ತಾನದ ಜನರಿಗೆ ನೆಮ್ಮದಿಯೇ ಇಲ್ಲ. ಅದರಲ್ಲೂ ಮಹಿಳೆಯರು ನೆಮ್ಮದಿಯಾಗಿ, ಸ್ವಾತಂತ್ರ್ಯದಿಂದ ಹೊರಗೆ ಹೋಗಲು ಆಗುತ್ತಿಲ್ಲ. ಇದನ್ನ ಬಿಡಿ ಕನಿಷ್ಠ ಶಿಕ್ಷಣ ಪಡೆಯಲು ಕೂಡ ಆಗುತ್ತಿಲ್ಲ. ಸರಿ ಅಫ್ಘಾನಿಸ್ತಾನದಲ್ಲಿ ಶಿಕ್ಷಣ ಸಿಗಲ್ಲ, ಬೇರೆ ದೇಶಕ್ಕಾದರೂ ಹೋಗಿ ಶಿಕ್ಷಣ ಪಡೆಯೋಣ ಅಂದ್ರೆ ಅಲ್ಲೂ ಮಹಿಳೆಯರಿಗೆ ಅಡ್ಡಿಯಾಗಿದ್ದಾರೆ ಈ ತಾಲಿಬಾನಿಗಳು.
ಹೌದು, ಮಹಿಳೆಯರ ವಿರೋಧಿ ಅಂತಾ ಗುರುತಿಸಿಕೊಂಡಿರುವ ತಾಲಿಬಾನಿ ಸರ್ಕಾರ ವಿಚಿತ್ರ ರೂಲ್ಸ್ ಜಾರಿಗೆ ತರುತ್ತಿದೆ. ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯ ಕಿತ್ತುಕೊಂಡಿದೆ. ಇದರ ಜೊತೆ ಅಪ್ರಾಪ್ತ ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಲು ಬಿಡುತ್ತಿಲ್ಲ. ಕೆಲ ದಿನದ ಹಿಂದಷ್ಟೇ 3ನೇ ತರಗತಿ ಮೇಲ್ಪಟ್ಟ ಶಿಕ್ಷಣವನ್ನ ಬಾಲಕಿಯರಿಂದ ಕಿತ್ತುಕೊಂಡು, ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನೇ ಹೊಸಕಿ ಹಾಕಿತ್ತು ತಾಲಿಬಾನ್ ಆಡಳಿತ. ಇದೀಗ ನೋಡಿದ್ರೆ ಬೇರೆ ದೇಶಕ್ಕೆ ಓದಲು ಹೋಗುತ್ತಿದ್ದ ಹೆಣ್ಣು ಮಕ್ಕಳಿಗೇ ಟಾರ್ಚರ್ ಕೊಟ್ಟ ಆರೋಪ ಈಗ ಕೇಳಿಬಂದಿದೆ.

ಏರ್ಪೋರ್ಟ್‌ಗೆ ಹೋಗಿದ್ದವರು ವಾಪಸ್!
ಅಷ್ಟಕ್ಕೂ ಅವರೆಲ್ಲಾ ಸಾವಿರ ಸಾವಿರ ಕನಸು ಕಂಡು, ತಮ್ಮ ಲಗೇಜ್ ಪ್ಯಾಕ್ ಮಾಡಿದ್ರು. ಹೀಗೆ ಇನ್ನೇನು ವಿದೇಶಕ್ಕೆ ಹೋಗಿ ತಮ್ಮ ಹೊಸ ಬಾಳು ಶುರು ಮಾಡಬೇಕು ಅಂತಿದ್ದರು. ಆದರೆ ವಿದೇಶಕ್ಕೆ ಹೋಗಲು ವಿಮಾನ ಹತ್ತಲು ಬಂದ ಅವರನ್ನು ತಾಲಿಬಾನಿಗಳ ಗ್ಯಾಂಗ್ ಅಡ್ಡ ಹಾಕಿದೆ. ಅಲ್ಲದೆ ಓದಲು ಹೋಗುತ್ತಿದ್ದ ಹೆಣ್ಣು ಮಕ್ಕಳನ್ನ ವಾಪಸ್ ಮನೆಗೆ ಕಳಿಸಿ, ಬೇರೆ ದೇಶಕ್ಕೆ ಹೋಗಿ ನೀವು ಓದುವಂತೆ ಇಲ್ಲ ಎಂದು ಆದೇಶ ನೀಡಿದೆ. ಈಗಾಗಲೇ ತನ್ನ ದೇಶದಲ್ಲಿ ತಾಲಿಬಾನಿ ಗ್ಯಾಂಗ್ ವಿಶ್ವ ವಿದ್ಯಾಲಯಗಳನ್ನೇ ಬಂದ್ ಮಾಡಿದೆ. ಈ ಹೊತ್ತಲ್ಲಿ ಹೊರ ದೇಶಕ್ಕೆ ಹೋಗಿ ಓದಲು ಕೂಡ ಅವಕಾಶ ನೀಡುತ್ತಿಲ್ಲ.
ವಿಮಾನ ನಿಲ್ದಾಣದಲ್ಲಿ ಕೆಟ್ಟೆಚ್ಚರದ ಪರೀಕ್ಷೆ
ತಾಲಿಬಾನ್ ಸರ್ಕಾರ ಹಾಗೂ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಸರ್ಕಾರ ಎರಡೂ ಒಂದೇ ರೀತಿ ಅನ್ನಬಹುದು. ಯಾಕಂದ್ರೆ ಉತ್ತರ ಕೊರಿಯಾ ಸರ್ವಾಧಿಕಾರಿ ನಾಡಲ್ಲಿ ಜನ, ತಮ್ಮ ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಲು ಆಗಲ್ಲ. ಅದೇ ರೀತಿ ತಾಲಿಬಾನಿ ಆಡಳಿತದ ಅಫ್ಘಾನಿಸ್ತಾನ ಕೂಡ ತನ್ನ ದೇಶದ ಪ್ರಜೆಗಳಿಗೆ ಟಾರ್ಚರ್ ಕೊಡುತ್ತಿದೆ. ತಮ್ಮ ದೇಶದಲ್ಲಿನ ಜನರು ಬೇರೆ ದೇಶಕ್ಕೆ ಹೋಗಲು ನೂರಾರು ರೂಲ್ಸ್ ಹಾಕುತ್ತಿದೆ. ಹೀಗಾಗಿ ಅಫ್ಘಾನಿಸ್ತಾನದ ಜನ ನರಕದಿಂದ ಮುಕ್ತಿ ಪಡೆಯಲು ಮುಂದಾಗಿದ್ದಾರೆ. ಆದ್ರೆ ಅದು ವರ್ಕೌಟ್ ಆಗುತ್ತಿಲ್ಲ.

ತಾಲಿಬಾನಿಗಳಿಗೆ ಮಹಿಳೆಯರೇ ಟಾರ್ಗೆಟ್!
ಮಹಿಳೆಯರ ಮೇಲೆ ದಿನಕ್ಕೊಂದು ನಿಷೇಧ ಹೇರುತ್ತಿರುವ ತಾಲಿಬಾನ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಗೂ ಗುರಿಯಾಗಿದೆ. ಆದರೆ ಇದಕ್ಕೆಲ್ಲ ಅವರು ಕೇರ್ ಮಾಡುತ್ತಿಲ್ಲ. ಈ ಕಾರಣಕ್ಕೆ ಸ್ಥಿತಿ ಇನ್ನಷ್ಟು ಕೈಮೀರಿ ಹೋಗುತ್ತಿದೆ. ಅಮೆರಿಕ ಯಾವಾಗ ತಾಲಿಬಾನಿ ಕೈಯಲ್ಲಿ ಅಫ್ಘಾನಿಸ್ತಾನವನ್ನು ಬಿಟ್ಟು ಹೋಯ್ತೋ ಆಗಿನಿಂದಲೇ ಶುರುವಾಗಿದ್ದು ಕಿತ್ತಾಟ. ಅಂದಿನಿಂದ ಇಂದಿನ ತನಕ ಅಲ್ಲಿನ ಜನರಿಗೆ ನೆಮ್ಮದಿ ಇಲ್ಲ, ನೆಮ್ಮದಿಯಾಗಿ ಜೀವನ ಮಾಡಲು ಆಗುತ್ತಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಅಫ್ಘಾನಿಸ್ತಾನದ ಜನರು ಪರದಾಡುತ್ತಿದ್ದಾರೆ.
ತಾಲಿಬಾನ್ ನಾಡಲ್ಲಿ ಭಯಾನಕ ಪರಿಸ್ಥಿತಿ!
ಇದು ಭಯಾನಕ ಎನಿಸಿದರೂ ಸತ್ಯ, ಗರ್ಭಾವಸ್ಥೆಯ ತೊಂದರೆಗಳಿಂದ ಅಫ್ಗಾನಿಸ್ತಾನದಲ್ಲಿ ಪ್ರತಿದಿನ 24 ತಾಯಂದಿರು ಮೃತಪಡುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ಸಂದೇಶ ರವಾನಿಸಿದೆ. ಗರ್ಭಾವಸ್ಥೆಗೆ ಸಂಬಂಧಿಸಿದ ಗುಣಪಡಿಸಬಹುದಾದ ಆರೋಗ್ಯ ಸಮಸ್ಯೆ ಕಾರಣಕ್ಕೆ ಈ ರೀತಿ ಮಹಿಳೆಯರು ಮೃತಪಡುತ್ತಿದ್ದಾರೆ. ಅಪೌಷ್ಟಿಕತೆ, ಆರ್ಥಿಕ ಸಂಕಷ್ಟವು, ಆರೋಗ್ಯ ಸೌಕರ್ಯ ಕೊರತೆ, ಒತ್ತಡ ಹೆಚ್ಚಾಗಿರುವುದು ಗರ್ಭಿಣಿಯರ ಆರೋಗ್ಯವನ್ನ ಮತ್ತೆ ಮತ್ತೆ ಹದಗೆಡಿಸುತ್ತಿದೆ. ಇದರಿಂದ ತಾಯಂದಿರ ಮರಣ ಪ್ರಮಾಣವು ಹೆಚ್ಚಿದೆ ಎಂದು ಮಾಹಿತಿ ನೀಡಲಾಗಿದೆ. ಇದು ಸಾಲದು ಎಂಬಂತೆ ಹೆಣ್ಣುಮಕ್ಕಳ ಶಿಕ್ಷಣವನ್ನೇ ಕಿತ್ತುಕೊಂಡಿದೆ ಈ ತಾಲಿಬಾನಿ ಸರ್ಕಾರ.












Click it and Unblock the Notifications