ಯುದ್ಧದಲ್ಲಿ ತನ್ನದೇ ದೇಶದ ಪ್ರಜೆಗಳನ್ನು ಕೊಂದು ಹಾಕಿದೆ ಈ ದೇಶ
ಯುದ್ಧ ಅಂದ್ರೆ ಹಿಂಸೆ, ರಕ್ತಪಾತ, ನೋವು, ಯಾತನೆ. ಇದನ್ನು ಬಿಟ್ಟು ಎದುರಾಳಿಗಳಿಗೆ ಶತ್ರುಗಳನ್ನು ಸೋಲಿಸಿ, ಸಾಯಿಸುವ ಹಪಾಹಪಿ. ಆದ್ರೆ ವಿಪರ್ಯಾಸ ಎನ್ನುವಂತೆ ಹೀಗೆಲ್ಲಾ ಯುದ್ಧ ನಡೆಯುವಾಗ ಅಮಾಯಕರೇ ಬಲಿಯಾಗುತ್ತಾರೆ. ಯಾರದ್ದೋ ತಪ್ಪಿಗೆ ಇನ್ಯಾರೋ ಜೀವ ಬಿಡುತ್ತಾರೆ. 1ನೇ ಮಹಾಯುದ್ಧ ಹಾಗೂ 2ನೇ ಮಹಾಯುದ್ಧ ಮನುಷ್ಯರಿಗೆ ಬುದ್ಧಿ ಕಲಿಸಿದ್ದರೂ ಮನುಷ್ಯ ಬದಲಾಗಿಲ್ಲ, 2023ನೇ ವರ್ಷದಲ್ಲೂ ಮನುಷ್ಯ ಯುದ್ಧ ದಾಹಕ್ಕಾಗಿ ಜೀವ ತೆಗೆಯುತ್ತಿದ್ದಾನೆ.
ಇದೀಗ ಜಗತ್ತಿನಲ್ಲಿ 2 ಬಹುದೊಡ್ಡ ಯುದ್ಧಗಳು ನಡೆಯುತ್ತಿದ್ದು, ಒಂದು ಯುದ್ಧ ರಷ್ಯಾ & ಉಕ್ರೇನ್ ನಡುವೆ ಧಗಧಗಿಸುತ್ತಿದೆ. ಇನ್ನೊಂದು ಕಡೆ ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಬಡಿದಾಟ ನಡೆಯುತ್ತಿದೆ. ಹೀಗಾಗಿ ಜಗತ್ತು ಮತ್ತೊಂದು ಮಹಾಯುದ್ಧಕ್ಕೆ, ಅಂದ್ರೆ 3ನೇ ಮಹಾಯುದ್ಧಕ್ಕೆ ತಯಾರಿ ಮಾಡಿಕೊಳ್ಳುತ್ತಿದೆಯಾ? ಅನ್ನೋ ಅನುಮಾನ ಮೂಡಿದೆ. ಇದೇ ಸಮಯದಲ್ಲಿ ಇಸ್ರೇಲ್ ಸೇನೆ ಬಹುದೊಡ್ಡ ಎಡವಟ್ಟು ಮಾಡಿಕೊಂಡಿದೆ. ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವಾಗ, ಇಸ್ರೇಲ್ ಸೇನೆ ತನ್ನದೇ ದೇಶದ ಪ್ರಜೆಗಳನ್ನ ಕೂಡ ಕೊಂದು ಹಾಕಿರುವ ಆರೋಪ ಕೇಳಿಬಂದಿದೆ.

ತಪ್ಪು ಒಪ್ಪಿಕೊಂಡ ಇಸ್ರೇಲ್ ಸೇನೆ
ಹೌದು, ಈ ಮಾತು ಕೇಳಲು ತುಂಬಾ ನೋವಾಗುತ್ತದೆ. ಯಾಕಂದ್ರೆ ಉಗ್ರರ ವಶದಲ್ಲಿ ನಿತ್ಯ ನರಳುತ್ತಿರುವ ಪ್ರಜೆಗಳನ್ನ ಸ್ವತಃ ಇಸ್ರೇಲ್ ಸೇನೆ ಹತ್ಯೆ ಮಾಡಿದೆಯಂತೆ. ಇಸ್ರೇಲ್ ಸೇನೆಯು ಆಕಸ್ಮಿಕವಾಗಿ ತನ್ನದೇ ದೇಶದ ಮೂವರು ಪ್ರಜೆಗಳನ್ನು ಹತ್ಯೆ ಮಾಡಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ವಕ್ತಾರರು ತಿಳಿಸಿದ್ದಾರೆ. ಇದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ್ದು ಹೀಗೆ ಈ ಸುದ್ದಿ ಹೊರ ಬೀಳುತ್ತಿದ್ದಂತೆ ಅಕ್ರೋಶದ ಕಟ್ಟೆ ಒಡೆದಿದೆ. ಹಾಗೇ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಹಾಗಾದರೆ ಈ ದುರ್ಘಟನೆ ನಡೆದಿದ್ದು ಯಾವಾಗ? ಮುಂದೆ ಓದಿ.
ಉಗ್ರರು ಹೊತ್ತೊಯ್ದಿದ್ದ ಪ್ರಜೆಗಳ ಹತ್ಯೆ
ಹಮಾಸ್ ಉಗ್ರರ ನೆಲೆ, ಗಾಜಾ ನಗರದ ಒಳಗಡೆ ಶೋಧ ಕಾರ್ಯಾಚರಣೆ ನಡೆಸುವಾಗ ಇಸ್ರೇಲ್ ಸೇನೆಗೆ ಮೂವರು ಕಂಡುಬಂದಿದ್ದರು ಎನ್ನಲಾಗಿದೆ. ಆದ್ರೆ ಇವರು ಭಯೋತ್ಪಾದಕರು ಅಂತ ಇಸ್ರೇಲ್ ಸೇನೆ ತಪ್ಪಾಗಿ ಭಾವಿಸಿ, ಗುಂಡು ಹಾರಿಸಿದೆ ಎಂದು ಆರೋಪ ಮಾಡಲಾಗಿದೆ. ಇದೇ ಘಟನೆ ಸಂಚಲನ ಸೃಷ್ಟಿ ಮಾಡಿದ್ದು, ಹಮಾಸ್ ವಿರುದ್ಧ ಹೋರಾಟದ ವೇಳೆ ಮತ್ತೊಂದು ತಲೆನೋವು ಇಸ್ರೇಲ್ ಸೇನೆಗೆ ಎದುರಾಗಿದೆ. ಅ. 7ರ ದಾಳಿಯಲ್ಲಿ ಹಮಾಸ್ ಬಂಡುಕೋರರ ವಶವಾಗಿದ್ದ ಒತ್ತೆಯಾಳನ್ನು ಸ್ವತಃ ಇಸ್ರೇಲ್ ಸೇನೆ ಹತ್ಯೆ ಮಾಡಿರುವ ಆರೋಪ ಇದಾಗಿದೆ.
ಯುದ್ಧ ಶುರುವಾಗಿ 2 ತಿಂಗಳು
ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು ಇಸ್ರೇಲ್ ವಿರುದ್ಧ ಬರೋಬ್ಬರಿ 5,000 ರಾಕೆಟ್ ಉಡಾಯಿಸಿದ್ರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಶಸ್ತ್ರಾಸ್ತ್ರ & ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದ ಇಸ್ರೇಲ್ ಹಮಾಸ್ ಉಗ್ರರ ವಿರುದ್ಧ ಯುದ್ಧವನ್ನ ಘೋಷಿಸಿತ್ತು ಹೀಗೆ ಇಬ್ಬರ ಮಧ್ಯೆ ಕುಸ್ತಿ ಶುರುವಾಗಿ ಬರೋಬ್ಬರಿ 70 ದಿನ ಕಳೆದಿದೆ. ಹೀಗಿದ್ದಾಗಲೇ ಇಸ್ರೇಲ್ ಸೇನೆ ಇಂತಹ ಎಡವಟ್ಟು ಮಾಡಿಕೊಂಡು ಸ್ವತಃ ತಮ್ಮ ದೇಶದ ಒತ್ತೆಯಾಳುಗಳ ಹಮಾಸ್ ಉಗ್ರರ ನೆಲೆಯಲ್ಲಿ ಹತ್ಯೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

18,500ಕ್ಕೂ ಹೆಚ್ಚು ಜನರು ಬಲಿ
ಹಮಾಸ್ ತಪ್ಪಿಗೆ ಕಳೆದ 70 ದಿನದಿಂದ ಗಾಜಾದಲ್ಲಿ ಸಾಮಾನ್ಯ ಜನರು ನರಳುತ್ತಿದ್ದು ಈಗಾಗಲೇ 18,500ಕ್ಕೂ ಹೆಚ್ಚು ಜನ ಯುದ್ಧಕ್ಕೆ ಬಲಿಯಾಗಿದ್ದಾರೆ. ಈ ನಡುವೆ ಇಸ್ರೇಲ್ 1,200 ಜನರನ್ನ ಕಳೆದುಕೊಂಡಿದೆ. ಈ ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಅಮೆರಿಕ ಅಡ್ಡಿ ಮಾಡುತ್ತಿದೆ ಎನ್ನುವ ಆರೋಪಗಳ ನಡುವೆ, ಗಾಜಾಪಟ್ಟಿ ಜೊತೆಗೆ ಇಸ್ರೇಲ್ ಸೇನೆ ವೆಸ್ಟ್ ಬ್ಯಾಂಕ್ ಮೇಲೆಯೂ ಭಾರಿ ದಾಳಿ ನಡೆಸಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಒತ್ತೆಯಾಳುಗಳನ್ನ ಹಮಾಸ್ ಉಗ್ರ ಪಡೆಯ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಬರುವ ಬದಲು, ಮಿಸ್ಟೇಕ್ ಆಗಿ ಕೊಲೆ ಮಾಡಿ ಈಗ ಸಂಕಷ್ಟಕ್ಕೆ ಸಿಲುಕಿದೆ ಇಸ್ರೇಲ್ ಸೇನೆ.












Click it and Unblock the Notifications