ಇಸ್ರೇಲ್ ನಡೆಸಿದ ವಾಯು ದಾಳಿಗೆ ನಿರಾಶ್ರಿತರ ಕೇಂದ್ರದಲ್ಲಿ 50 ಮಂದಿ ಸಾವು?
ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಯುದ್ಧವು ಸಾವಿರಾರು ಅಮಾಯಕರ ಜೀವ ಬಲಿಪಡೆದಿದೆ. ಅದರಲ್ಲೂ 3 ಸಾವಿರಕ್ಕೂ ಹೆಚ್ಚು ಮಕ್ಕಳು ಕಿತ್ತಾಟಕ್ಕೆ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಮಯದಲ್ಲೇ ನಿರಾಶ್ರಿತರ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಬರೋಬ್ಬರಿ 50 ಜನ ಬಲಿಯಾಗಿದ್ದಾರೆ ಅಂತಾ ಗಂಭೀರ ಆರೋಪ ಮಾಡಲಾಗಿದೆ.
ಉತ್ತರ ಗಾಜಾದಲ್ಲಿ ಇಸ್ರೇಲ್ ತನ್ನ ದಾಳಿಯನ್ನು ಭೀಕರಗೊಳಿಸಿ ಹಮಾಸ್ ಉಗ್ರರ ಸುರಂಗ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡ್ತಿದೆ. ಒಂದು ಅಂದಾಜಿನ ಪ್ರಕಾರ ಒಂದೆ ದಿನದಲ್ಲಿ 300 ಜಾಗಗಳ ಮೇಲೆ ದಾಳಿ ಮಾಡಿ, ಹಮಾಸ್ ಉಗ್ರರ ಸುರಂಗಗಳನ್ನು ಈಗ ನಾಶ ಮಾಡುತ್ತಿದೆ ಇಸ್ರೇಲ್ ಸೇನೆ. ಈ ಸಮಯದಲ್ಲಿ ಆಘಾತಕಾರಿ ಹಾಗೂ ಗಂಭೀರ ಆರೋಪ ಕೇಳಿಬಂದಿದೆ. ಗಾಜಾಪಟ್ಟಿ ನಿರಾಶ್ರಿತರು ಇದ್ದ ಶಿಬಿರದ ಮೇಲೆ ಇಸ್ರೇಲ್ ಸೇನೆ ವಾಯುದಾಳಿ ನಡೆಸಿದ್ದು, ಈ ದಾಳಿಯಲ್ಲಿ ಒಂದೇ ಬಾರಿಗೆ 50ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಏನಿದು ಸಾವಿನ ಹಾವು-ಏಣಿ ಆಟ?
ಹಮಾಸ್ ಉಗ್ರರ ವಿರುದ್ಧದ ಕೋಪಕ್ಕೆ ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಿದೆ. ಅದ್ರಲ್ಲೂ ಉತ್ತರ ಗಾಜಾದಲ್ಲಿ ರಕ್ತದ ಕೋಡಿಯೇ ಹರಿಯುತ್ತಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿದ್ದಾಗಲೇ, ಪ್ಯಾಲೆಸ್ತೀನ್ ಪರ 8,306 ಜನ ಈವರೆಗೂ ಮೃತಪಟ್ಟಿದ್ದಾರೆ. ಇಸ್ರೇಲ್ ಕಡೆ ಸಾವಿನ ಸಂಖ್ಯೆ 1400 ದಾಟಿದೆ. ಕೇವಲ 3 ವಾರದ ಹಿಂದೆ ಶುರುವಾದ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ನಡುವಿನ ಯುದ್ಧ ಹತ್ತಿರ ಹತ್ತಿರ 10 ಸಾವಿರ ಜನರ ಜೀವ ಬಲಿ ಪಡೆದಿದೆ. ಇಷ್ಟಾದರೂ ಇಸ್ರೇಲ್ ತನ್ನ ದಾಳಿ ತೀವ್ರಗೊಳಿಸಿದ್ದು ಹಮಾಸ್ ಉಗ್ರರ ಸುರಂಗ ಮಾರ್ಗಗಳನ್ನು ಇಂಚಿಂಚಾಗಿ ನಾಶ ಮಾಡಲು ಮುಂದಾಗಿದೆ. ಹೀಗಿದ್ದಾಗ ಅಮಾಯಕರು ಕೂಡ ಬಲಿಯಾಗಿ, ಜೀವ ಬಿಡುತ್ತಿರುವುದು ಆಕ್ರೋಶ ಮೊಳಗಿಸಿದೆ.
ಸುರಂಗ ಇರುವುದು ಉಗ್ರರಿಗೆ ಮಾತ್ರ!
ಅಷ್ಟಕ್ಕೂ ಇಸ್ರೇಲ್ ವಿರುದ್ಧ ಹೋರಾಡಲು ಹಮಾಸ್ ಉಗ್ರರು ಹಲವು ವರ್ಷದಿಂದ ಭಾರಿ ತಯಾರಿ ನಡೆಸಿದ್ದಂತೆ ಕಾಣುತ್ತಿದೆ. ಹೀಗಾಗಿಯೇ ಬಲಶಾಲಿ ಸುರಂಗ ಮಾರ್ಗಗಳ ಮೂಲಕ ದಾಳಿ ಮಾಡ್ತಿದ್ದಾರೆ ಹಮಾಸ್ ಉಗ್ರರು. ಗಾಜಾಪಟ್ಟಿ ನಗರದ ಉತ್ತರ ಭಾಗದಲ್ಲಿ ಹಮಾಸ್ ಉಗ್ರರು ನೂರಾರು ಕಿಲೋ ಮೀಟರ್ ಸುರಂಗ ಮಾರ್ಗ ನಿರ್ಮಿಸಿದ್ದು, ಇಸ್ರೇಲ್ ವಿರುದ್ಧದ ದಾಳಿಗೆ ಈ ಸುರಂಗಗಳನ್ನ ಬಳಸುತ್ತಿರುವ ಆರೋಪ ಕೇಳಿಬಂದಿತ್ತು. ಇದೀಗ ಖುದ್ದು ಉಗ್ರ ಪಡೆಯ ನಾಯಕರು ಈ ಮಾತನ್ನ ಒಪ್ಪಿಕೊಂಡಿದ್ದಾರೆ. ಆದ್ರೆ ಸುರಂಗ ಮಾರ್ಗ ಇರುವುದು ಉಗ್ರರಿಗೆ ಮಾತ್ರ, ಸಾಮಾನ್ಯ ಜನರಿಗೆ ಅಲ್ಲ ಅಂತಾ ಹೇಳಿರುವುದು ವಿವಾದದ ಕಿಡಿಯನ್ನು ಹೊತ್ತಿಸಿದೆ. ಇದೇ ಸಮಯದಲ್ಲಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ ಮಾಡಿರುವ ಆರೋಪ ಕೇಳಿಬಂದಿದೆ.












Click it and Unblock the Notifications