India-EU ವ್ಯಾಪಾರಕ್ಕೆ ಹೊಸ ವೇಗ: ಫ್ರಾನ್ಸ್‌ನ ಮಾರ್ಸಿಲ್ಲೆ ಪೋಸ್ ಬಂದರು ಜೊತೆ ಅದಾನಿ ಪೋರ್ಟ್ಸ್ ಐತಿಹಾಸಿಕ ಒಪ್ಪಂದ
ನವದೆಹಲಿ: ಭಾರತ ಮತ್ತು ಯುರೋಪ್ ನಡುವಿನ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (APSEZ), ಫ್ರಾನ್ಸ್‌ನ ಪ್ರಖ್ಯಾತ ಮಾರ್ಸಿಲ್ಲೆ ಪೋಸ್ ಬಂದರಿನೊಂದಿಗೆಕಾರ್ಯತಂತ್ರದ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿವೆ. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಅಡಿಯಲ್ಲಿ ಈ ಸಹಭಾಗಿತ್ವವು ಜಾಗತಿಕ ಸಾರಿಗೆ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದು ಎರಡು ರಾಷ್ಟ್ರಗಳ ನಡುವಿನ ಬೆಳೆಯುತ್ತಿರುವ ಆರ್ಥಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. 2023ರ ಜಿ20 ಶೃಂಗಸಭೆಯಲ್ಲಿ ಘೋಷಿಸಲಾದ IMEC ಕಾರಿಡಾರ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ.

ಪ್ರಮುಖ ಬಂದರುಗಳ ಸಂಪರ್ಕ
ಈ ಒಪ್ಪಂದದ ಪ್ರಕಾರ, ಅದಾನಿ ಸಮೂಹದ ಮುಂದ್ರಾ ಮತ್ತು ಹಜೀರಾ ಬಂದರುಗಳು ಭಾರತದಿಂದ ಪಶ್ಚಿಮ ಏಷ್ಯಾಕ್ಕೆ ಪ್ರಮುಖ ಪೂರ್ವಾಭಿಮುಖ ದ್ವಾರಗಳಾಗಿ ಕಾರ್ಯ ನಿರ್ವಹಿಸಲಿವೆ. ಇತ್ತ ಫ್ರಾನ್ಸ್‌ನ ಮಾರ್ಸಿಲ್ಲೆ ಪೋಸ್ ಬಂದರು ಯುರೋಪ್‌ನ ಪಶ್ಚಿಮ ದ್ವಾರವಾಗಿ ಕಾರ್ಯ ನಿರ್ವಹಿಸಲಿದೆ. ಈ ಬಂದರು ವಾರ್ಷಿಕ ಸುಮಾರು 70 ಮಿಲಿಯನ್ ಟನ್ ಸರಕು ನಿರ್ವಹಣಾ ಸಾಮರ್ಥ್ಯವನ್ನು ಹೊಂದಿದ್ದು, ಭಾರತೀಯ ಉತ್ಪನ್ನಗಳಿಗೆ ಯುರೋಪಿಯನ್ ಮಾರುಕಟ್ಟೆಯನ್ನು ಸುಲಭವಾಗಿ ತಲುಪಲು ಇದು ನೆರವಾಗಲಿದೆ.
ಸುಸ್ಥಿರ ಮತ್ತು ಡಿಜಿಟಲ್ ವ್ಯಾಪಾರ
ಕೇವಲ ಸರಕು ಸಾಗಣೆ ಮಾತ್ರವಲ್ಲದೆ, ಬಂದರುಗಳ ಡಿಜಿಟಲೀಕರಣ, ಸೈಬರ್ ಭದ್ರತೆ ಮತ್ತು ಪರಿಸರ ಸ್ನೇಹಿ ಪರ್ಯಾಯ ಇಂಧನಗಳ ಬಳಕೆಯ ಬಗ್ಗೆಯೂ ಎರಡೂ ಸಂಸ್ಥೆಗಳು ಒತ್ತು ನೀಡಲಿವೆ. ಮುಂದ್ರಾ ಮತ್ತು ಮಾರ್ಸಿಲ್ಲೆ ಫೋಸ್ ನಡುವೆ 'ಗ್ರೀನ್ ಮ್ಯಾರಿಟೈಮ್ ಕಾರಿಡಾರ್' ಅಭಿವೃದ್ಧಿಪಡಿಸುವ ಮೂಲಕ ಹಡಗು ಯಾನದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಯೋಜಿಸಲಾಗಿದೆ. ಇದಲ್ಲದೆ, ಕಾರಿಡಾರ್ ಉದ್ದಕ್ಕೂ ಇರುವ ಬಂದರುಗಳ ನಡುವೆ ಸಹಕಾರವನ್ನು ಹೆಚ್ಚಿಸಲು 'IMEC ಪೋರ್ಟ್ಸ್ ಕ್ಲಬ್' ಸ್ಥಾಪಿಸಲು ನಿರ್ಧರಿಸಲಾಗಿದೆ.
ಅದಾನಿ ಪೋರ್ಟ್ಸ್ ಸಿಇಒ ಅಶ್ವಿನಿ ಗುಪ್ತಾ ಮಾತನಾಡಿ, "ಈ ಒಪ್ಪಂದವು ಭಾರತದ ಬಂದರುಗಳನ್ನು ಯುರೋಪ್‌ಗೆ ಸಂಪರ್ಕಿಸುವ ಮಹತ್ವದ ಹೆಜ್ಜೆ. ಇದರಿಂದ ಪೂರೈಕೆ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲಿದೆ," ಎಂದರು. ಮಾರ್ಸಿಲ್ಲೆ ಫೋಸ್ ಬಂದರಿನ ಸಿಇಒ ಹೆರ್ವೆ ಮಾರ್ಟೆಲ್ ಅವರು, "ಏಷ್ಯಾ ಮತ್ತು ಯುರೋಪ್ ನಡುವೆ ಹೆಚ್ಚು ದಕ್ಷ ಮತ್ತು ಸುಸ್ಥಿರ ಲಾಜಿಸ್ಟಿಕ್ಸ್ ಸಂಪರ್ಕವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ," ಎಂದು ತಿಳಿಸಿದರು.
ಅದಾನಿ ಪೋರ್ಟ್ಸ್ ಪ್ರಸ್ತುತ ಭಾರತದಲ್ಲಿ 15 ಬಂದರುಗಳನ್ನು ನಿರ್ವಹಿಸುತ್ತಿದ್ದು, 2030ರ ವೇಳೆಗೆ ತನ್ನ ಸಾಮರ್ಥ್ಯವನ್ನು 1 ಬಿಲಿಯನ್ ಟನ್‌ಗೆ ಹೆಚ್ಚಿಸುವ ಗುರಿ ಹೊಂದಿದೆ. ಈ ನೂತನ ಒಪ್ಪಂದವು ಜಾಗತಿಕ ವ್ಯಾಪಾರ ಭೂಪಟದಲ್ಲಿ ಭಾರತದ ಸ್ಥಾನಮಾನವನ್ನು ಮತ್ತಷ್ಟು ಎತ್ತರಿಸಲಿದೆ.












Click it and Unblock the Notifications