4,00,000 ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಅನುಮೋದನೆ ಕೊಟ್ಟ ಪಾಕಿಸ್ತಾನದಿಂದ ನಾವು ಪಾಠ ಕಲಿಯಬೇಕಿಲ್ಲ: ಭಾರತ
ಭಾರತವು ಪಾಕಿಸ್ತಾನದ ಮೇಲೆ "ಆಪರೇಷನ್ ಸಿಂಧೂರ ಕಾರ್ಯಾಚರಣೆ" ನಡೆಸಿದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ವಾಕ್ಸಮರ ಮುಂದುವರಿದಿದೆ. ಭಾರತವು ಪಾಕಿಸ್ತಾನಕ್ಕೆ ಎಲ್ಲಾ ಕ್ಷೇತ್ರಗಳಲ್ಲೂ ತಿರುಗೇಟು ನೀಡುತ್ತಿದೆ. ಭಾರತವನ್ನು ಗುರಿಯಾಗಿಸಿಕೊಂಡು ಈಚೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನೀಡಿದ್ದ ಹೇಳಿಕೆ ಭಾರೀ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ಜನ್ಮವನ್ನು ಭಾರತ ಜಾಲಾಡಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆದ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಏರ್ಪಟ್ಟಿದೆ. ಪಾಕಿಸ್ತಾನವು ಭಾರತದ ವಿರುದ್ಧದ ಯುದ್ಧದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದರೂ, ಯುದ್ಧದಲ್ಲಿ ಭಾರತದ ಯುದ್ಧ ವಿಮಾನಗಳು ಹಾನಿಯಾಗಿವೆ ಎನ್ನುವ ಹಸಿಹಸಿ ಸುಳ್ಳನ್ನು ಹೇಳಿಕೊಂಡಿತ್ತು. ಇದೀಗ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲೇ ಮುಖಭಂಗವಾಗಿದೆ.

ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ತನ್ನದೇ ದೇಶದ ಜನರ ಮೇಲೆ ಬಾಂಬ್ ದಾಳಿ ನಡೆಸುವ ಮತ್ತು ವ್ಯವಸ್ಥಿತ ನರಮೇಧ ನಡೆಸುವ ದೇಶವೆಂದರೆ ಅದು ಪಾಕಿಸ್ತಾನ ಎಂದು ಭಾರತ ಹೇಳಿದೆ. "ಮಹಿಳೆಯರು, ಶಾಂತಿ ಹಾಗೂ ಭದ್ರತೆ" ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ನಡೆದ ಮುಕ್ತ ಚರ್ಚೆ ವೇಳೆ ಭಾರತವು ಪಾಕಿಸ್ತಾನಕ್ಕೆ ಈ ತೀಕ್ಷ್ಣ ಪ್ರತ್ಯುತ್ತರವನ್ನು ಕೊಟ್ಟಿದೆ. ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್ ಅವರು, ಪಾಕಿಸ್ತಾನವು 1971ರಲ್ಲಿ ಆಪರೇಷನ್ ಸರ್ಚ್‌ಲೈಟ್ ಎಂದು ನಡೆಸಿತು. ತನ್ನದೇ ಸೈನ್ಯದಿಂದ ಅವರದ್ದೇ ದೇಶದ 4 ಲಕ್ಷ ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ಸಾಮೂಹಿಕ ಅತ್ಯಾಚಾರ ನಡೆಸುವುದಕ್ಕೆ ಅನುಮೋದನೆ ಕೊಡಲಾಗಿತ್ತು ಎಂದಿದ್ದಾರೆ.
ಇದರೊಂದಿಗೆ ಪ್ರತಿ ವರ್ಷ ನನ್ನ ದೇಶದ ವಿರುದ್ಧ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪಾಕ್‌ನಿಂದ ಯಾವುದೇ ಸತ್ಯಾಂಶವೂ ಇಲ್ಲದ ಟೀಕೆಗಳನ್ನು ನಾವು ಕೇಳುತ್ತಿದ್ದೇವೆ ಎಂದೂ ಇದೇ ಸಂದರ್ಭದಲ್ಲಿ ಟೀಕೆ ಮಾಡಲಾಗಿದೆ. ತಮ್ಮದೇ ದೇಶದ ಜನರ ಮೇಲೆ ಬಾಂಬ್ ದಾಳಿಗಳನ್ನು ಮಾಡುವ ಹಾಗೂ ವ್ಯವಸ್ಥಿತವಾಗಿ ನರಮೇಧ ಮಾಡುವಂತಹ ದೇಶದಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಅತಿಶಯೋಕ್ತಿಯಿಂದ ಕೂಡಿದ ವಿಷಯಗಳನ್ನು ಹೇಳುವ ಮೂಲಜ ಜಗತ್ತನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
1971ರ ಮಾರ್ಚ್ 25ರಂದು ಆಪರೇಷನ್ ಸರ್ಚ್‌ಲೈಟ್ ಹೆಸರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಸಾರ್ವಜನಿಕರ ಮೇಲೆ ಸಾಮೂಹಿಕ ಹತ್ಯೆ ನಡೆದಿತ್ತು. ಮಹಿಳೆಯರು, ಶಾಂತಿ ಮತ್ತು ಭದ್ರತೆ ಕಾರ್ಯಸೂಚಿಯಲ್ಲಿ ಭಾರತದ ದಾಖಲೆ ಕಳಂಕರಹಿತವಾಗಿದೆ ಎಂದೂ ಹರೀಶ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಷಯ ಚರ್ಚೆ: ಇನ್ನು ಭಾರತವು ಈ ರೀತಿ ಪಾಕಿಸ್ತಾನಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುವುದಕ್ಕೆ ಮುಖ್ಯ ಕಾರಣ ಪಾಕಿಸ್ತಾನವು ತನ್ನ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯ ಪ್ರಸ್ತಾಪಿಸಿರುವುದೇ ಆಗಿದೆ. ಭಾರತವು ದೇಶದ ಮಹಿಳೆಯರ ಗುಂಪಿನಿಂದ ಕಾಶ್ಮೀರಿ ಮಹಿಳೆಯರನ್ನು ಹೊರಗೆ ಇರಿಸಿದ್ದು, ಶಾಂತಿ ಮತ್ತು ಭದ್ರತಾ ಕಾರ್ಯಸೂಚಿಯನ್ನು ತನ್ನ ನ್ಯಾಯವ್ಯವಸ್ಥೆಯಿಂದ ಅಳಿಸಿಹಾಕಿದೆ ಎನ್ನುವ ಗಂಭೀರವಾದ ಆರೋಪವನ್ನು ಪಾಕಿಸ್ತಾನಿ ಪ್ರತಿನಿಧಿ ಹೇಳಿಕೆಗೆ ಭಾರತ ತಿರುಗೇಟು ಕೊಟ್ಟಿದೆ.












Click it and Unblock the Notifications