35 ಸಾವಿರ ಕೋಟಿ ಸಾಲ ತೆಗೆದುಕೊಂಡ ಪಾಕ್‌ಗೆ ಸಂಕಷ್ಟ: ಅಮೇರಿಕಾಗೆ ತಲೆಬಿಸಿ!
Baloch Liberation Front: ಅಮೇರಿಕಾದ ಬೆಂಬಲದಿಂದ ಹಾಗೂ ಚೀನಾದ ಸಹಕಾರದಿಂದ ಚೇತರಿಸಿಕೊಳ್ಳಬಹುದು ಎಂದು ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಇದೀಗ ಆತಂಕ ಎದುರಾಗಿದೆ. ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಗಲಭೆ ಹಾಗೂ ಬಾಂಬ್ ದಾಳಿಗಳು ಮುಂದುವರಿದಿವೆ. ಇದೀಗ ಈಚೆಗೆ ಇಲ್ಲಿ ನಡೆದಿರುವ ಭೀಕರ ಆತ್ಮಹತ್ಯಾ ದಾಳಿಯನ್ನು ನಡೆಸಿರುವುದು ತಾನೇ ಎಂದು ಬಲೂಚ್ ಲಿಬರೇಶನ್ ಫ್ರಂಟ್ (BLF) ಹೇಳಿದೆ. ಇದು ಪಾಕಿಸ್ತಾನಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಬದಲಾಗಿದೆ.
ಹೌದು ಪಾಕಿಸ್ತಾನದಿಂದ ಬಲೂಚಿಸ್ತಾನ್ ಪ್ರದೇಶವನ್ನು ಪ್ರತ್ಯೇಕ ಮಾಡಬೇಕು ಹಾಗೂ ಬಲೂಚಿಸ್ತಾನ್ ಪ್ರತ್ಯೇಕ ರಾಷ್ಟ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಬಲೂಚ್ ಲಿಬರೇಶನ್ ಫ್ರಂಟ್ (BLF) ಒತ್ತಾಯಿಸುತ್ತಿದ್ದು, ಪಾಕಿಸ್ತಾನದ ಸೇನೆಯನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ದಾಳಿ ಮಾಡುತ್ತಿದೆ. ಇದೀಗ ಪಾಕಿಸ್ತಾನದ ನೊಕುಂದಿ ಪ್ರದೇಶದ ಫ್ರಾಂಟಿಯರ್ ಕಾರ್ಪ್ಸ್ (ಎಫ್‌ಸಿ) ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಭೀಕರ ದಾಳಿಯನ್ನು ಮಾಡಲಾಗಿದೆ.

ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಅರೆಸೈನಿಕ ಪಡೆ ಪ್ರಧಾನ ಕಚೇರಿಯ ಪ್ರವೇಶದ್ವಾರದಲ್ಲಿ ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ)ಯ ಮಹಿಳಾ ಆತ್ಮಹತ್ಯಾ ಬಾಂಬರ್ ಒಬ್ಬರು ತನ್ನನ್ನು ತಾವು ಸ್ಫೋಟಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ದೀರ್ಘ ಗುಂಡಿನ ಚಕಮಕಿಯಲ್ಲಿ ಆರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಪಾಕಿಸ್ತಾನದ ಅಧಿಕಾರಿಗಳ ಪ್ರಕಾರ, ಭಾನುವಾರ ರಾತ್ರಿ ಚಾಗೈ ಜಿಲ್ಲೆಯ ನೊಕುಂಡಿ ಪಟ್ಟಣದಲ್ಲಿರುವ ಫ್ರಾಂಟಿಯರ್ ಕಾರ್ಪ್ಸ್ (ಎಫ್‌ಸಿ) ಪ್ರಧಾನ ಕಚೇರಿಯ ಮುಖ್ಯ ದ್ವಾರದಲ್ಲಿ ಮಹಿಳೆಯೊಬ್ಬರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ. ನಂತರ ಬಿಎಲ್‌ಎ ಬಾಂಬರ್ ಅನ್ನು ಜಿನಾಟಾ ರಫೀಕ್ ಎಂದು ಗುರುತಿಸಿ ಆಕೆಯ ಫೋಟೋವನ್ನು ಪ್ರಸಾರ ಮಾಡಿದೆ.
ಸ್ಫೋಟವಾದ ಕೆಲವೇ ಕ್ಷಣಗಳಲ್ಲಿ ಆರು ಉಗ್ರರು ಈ ಕೇಂದ್ರಕ್ಕೆ ನುಗ್ಗುವುದಕ್ಕೆ ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಸೇನೆ ಹಾಗೂ ಬಲೂಚ್ ಲಿಬರೇಶನ್ ಫ್ರಂಟ್ ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ಪ್ರವೇಶದ್ವಾರದ ಬಳಿ ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಬಲೂಚಿಸ್ತಾನ್‌ನಲ್ಲಿ ಅತ್ಯಂತ ಸಕ್ರಿಯ ಮತ್ತು ಹೆಚ್ಚು ಶಸ್ತ್ರಸಜ್ಜಿತ ಉಗ್ರ ಸಂಘಟನೆ ಎಂದು ಪರಿಗಣಿಸಲಾದ ಬಿಎಲ್‌ಎ ಮಹಿಳಾ ಆತ್ಮಹತ್ಯಾ ಬಾಂಬರ್ ಬಳಕೆ ಮಾಡಿರುವುದು ಇದು ಮೂರನೇ ಬಾರಿ ಎಂದು ಹೇಳಲಾಗಿದೆ.
ಹೆಚ್ಚಿದ ಸಂಘರ್ಷ: ತಪ್ಪದ ಸಂಕಷ್ಟ
ಇನ್ನು ಪಾಕಿಸ್ತಾನವು ಈಗಾಗಲೇ ಆರ್ಥಿಕ ದಿವಾಳಿಯಾಗಿದ್ದು, ಈಗಷ್ಟೇ ಅಮೇರಿಕಾ ಹಾಗೂ ಚೀನಾದ ಬೆಂಬಲದಿಂದ ಚೇತರಿಸಿಕೊಳ್ಳುತ್ತಿದೆ. ಆದರೆ ಬಲೂಚ್ ಲಿಬರೇಶನ್ ಫ್ರಂಟ್ ಉಗ್ರರು ಪಾಕಿಸ್ತಾನಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಬದಲಾಗಿದ್ದಾರೆ. ಇದೀಗ ದಾಳಿ ನಡೆದಿರುವ ಪ್ರದೇಶವು ವಿದೇಶಿ ಹೂಡಿಕೆಗೆ ಅತ್ಯಂತ ಸುರಕ್ಷಿತ ಪ್ರದೇಶ ಎಂದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಹೇಳಿಕೊಂಡಿತ್ತು.
ಇದೀಗ ಇದೇ ಜಾಗವನ್ನು ಗುರಿಯಾಗಿಸಿಕೊಂಡು ಬಲೂಚ್ ಲಿಬರೇಶನ್ ಫ್ರಂಟ್ ದಾಳಿ ಮಾಡಿದೆ. ರಿಕೊ ಡಿಕ್ ಮತ್ತು ಸೈಂದಕ್ ಗಣಿಗಾರಿಕೆ ಯೋಜನೆಗೆ ಪಾಕಿಸ್ತಾನ ಮುಂದಾಗಿತ್ತು. ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೂಡಿಕೆಗೆ ಉತ್ಸುಕರಾಗಿದ್ದು, ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಆಹ್ವಾನಿಸಿದ್ದರು.
ರೆಕೊ ಡಿಕ್ ಗಣಿ ವಿಶ್ವದ ಅತಿದೊಡ್ಡ ಚಿನ್ನ - ತಾಮ್ರದ ಗಣಿಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನೇ ಗುರಿಯಾಗಿಸಿಕೊಂಡು ಬಲೂಚ್ ಲಿಬರೇಶನ್ ಫ್ರಂಟ್ ಭಾರೀ ದಾಳಿ ಮಾಡಿದೆ. ಕೋಟ್ಯಾಂತರ ರೂಪಾಯಿ ಸಾಲ ಪಡೆಯುವ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಆಘಾತ ಎದುರಾಗಿದೆ.












Click it and Unblock the Notifications