Zumba Dance: ಜುಂಬಾ ಡ್ಯಾನ್ಸ್‌ಗೆ ಮುಸ್ಲಿಂ ಸಮುದಾಯದಿಂದ ವಿರೋಧ, ಕಾರಣವೇನು ?
Zumba Dance: ನೆರೆಯ ಕೇರಳ ರಾಜ್ಯದಲ್ಲಿ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ತೆಗೆದುಕೊಂಡಿರುವ ನಿರ್ಧಾರವೊಂದು ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಕೇರಳ ಶಿಕ್ಷಣ ಇಲಾಖೆಯು ಮಾದಕ ದ್ರವ್ಯ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದೆ. ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಶಾಲಾ - ಕಾಲೇಜು ಮಕ್ಕಳು ಈ ರೀತಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿ ಬಂದಿವೆ.
ಅಲ್ಲದೇ ಶಾಲಾ - ಕಾಲೇಜುಗಳಲ್ಲಿ ಮಕ್ಕಳು ಹೆಚ್ಚು ಒತ್ತಡ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕೇರಳದ ಶಾಲೆಗಳಲ್ಲಿ ಹೈ-ಎನರ್ಜಿ ಫಿಟ್‌ನೆಸ್ ಕಾರ್ಯಕ್ರಮವನ್ನು ಆಯೋಜಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಜುಂಬಾ ಡ್ಯಾನ್ಸ್ ಅನ್ನು ಕೇರಳ ಸರ್ಕಾರ ಪರಿಚಯಿಸಿದೆ. ಆದರೆ ಇದಕ್ಕೆ ಮುಸ್ಲಿಂ ಸಮುದಾಯವು ತೀವ್ರ ವಿರೋಧ ವ್ಯಕ್ತಪಡಿಸಿದೆ.

ಕೇರಳ ಸರ್ಕಾರವು ಶಾಲಾ ಮಕ್ಕಳಿಗೆ ಶಿಕ್ಷಣದ ಭಾಗವಾಗಿ Zumba Dance ಕಲಿಸುವ ನಿರ್ಧಾರಕ್ಕೆ ಮುಸ್ಲಿಂ ಸಮುದಾಯದಿಂದ ವಿರೋಧ ವ್ಯಕ್ತವಾಗಿದೆ. ಇದು ಮುಸ್ಲಿಂ ಸಮುದಾಯದ ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಕೆಲವರು ವಾದಿಸಿದ್ದಾರೆ. ಡ್ಯಾನ್ಸ್ ಹಾಗೂ ಏರೋಬಿಕ್ ಚಲನೆಗಳನ್ನು ಒಳಗೊಂಡಿರುವ ಹಾಗೂ ಸಂಗೀತ ಸಂಯೋಜನೆಯನ್ನು Zumba Dance ಒಳಗೊಂಡಿದೆ. ಈ ಡ್ಯಾನ್ಸ್ ಮಾಡುವುದರಿಂದ ಮಕ್ಕಳಲ್ಲಿ ಒತ್ತಡ ಕಡಿಮೆ ಆಗಲಿದೆ ಅಲ್ಲದೇ ಮಕ್ಕಳು - ಯವ ಸಮೂಹ ಡ್ರಗ್ಸ್‌ನಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಬಹುದು ಎನ್ನುವುದು ಕೇರಳ ಸರ್ಕಾರದ ಲೆಕ್ಕಾಚಾರವಾಗಿತ್ತು. ಆದರೆ, ಇದೀಗ ಕೇರಳ ಸರ್ಕಾರದ ಲೆಕ್ಕಾಚಾರ ತಲೆಕೆಳಗಾಗಿದೆ.
ಯುವಜನರಲ್ಲಿ ಮಾದಕ ದ್ರವ್ಯ ಸೇವನೆಯ ಅಪಾಯವನ್ನು ಇದು ಕಡಿಮೆ ಮಾಡಲಿದೆ ಎನ್ನುವ ಸಲಹೆಯ ಮೇರೆ ಇದನ್ನು ಶಾಲೆಗಳಲ್ಲಿ ಕಲಿಸುವುದಕ್ಕೆ ನಿರ್ಧರಿಸಲಾಗಿತ್ತು. ಈ ಶೈಕ್ಷಣಿಕ ವರ್ಷದಿಂದಲೇ ಕೇರಳದ ಶಾಲೆಗಳಲ್ಲಿ ಜುಂಬಾ ತರಬೇತಿಯನ್ನು ನೀಡಲು ಪ್ರಾರಂಭಿಸಲಾಗಿದೆ. ಆದರೆ, ಇದಕ್ಕೆ ಕೇರಳದ ಮುಸ್ಲಿಂ ಸಮುದಾಯವು ವಿರೋಧ ವ್ಯಕ್ತಪಡಿಸಿದೆ.
ಮುಸ್ಲಿಂ ಸಮುದಾಯದಿಂದ ವಿರೋಧ: ಇನ್ನು ಕೇರಳದ ವಿವಿಧ ಮುಸ್ಲಿಂ ಸಮುದಾಯದಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಜುಂಬಾ ಡ್ಯಾನ್ಸ್ ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಕೇರಳ ಸುನ್ನಿ ಯುವಜನ ಸಂಘ ಹೇಳಿದೆ. ಈ ಸಂಬಂಧ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು. ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಲಾಗಿದೆ. ಕೆಲವು ಪೋಷಕರು ಸಹ ಈ ನಿರ್ಧಾರವನ್ನು ಪರಾಮರ್ಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಉನ್ನತ ಶಿಕ್ಷಣ ಸಚಿವ ಆರ್ ಬಿಂದು ಅವರು ಕೇರಳ ಸರ್ಕಾರದ ಈ ಹೊಸ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಡ್ಯಾನ್ಸ್‌ನಿಂದಾಗಿ ಮಾನಸಿಕ ಹಾಗೂ ದೈಹಿಕ ಶಕ್ತಿ ಹೆಚ್ಚಾಗಲಿದೆ. ಅಲ್ಲದೇ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಾವು 21ನೇ ಶತಮಾನದಲ್ಲಿ ಇದ್ದೇವೆ. ನಾವಿನ್ನೂ 19ನೇ ಶತಮಾನದಲ್ಲಿ ಇಲ್ಲ. ನಾವು ಈಗಿನ ಕಾಲಕ್ಕೆ ತಕ್ಕಂತೆ ಯೋಚಿಸಬೇಕು ಎಂದು ಅವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications