ಮಸೀದಿಯಲ್ಲಿ ತ್ರಿಶೂಲಕ್ಕೇನು ಕೆಲಸ: ಮುಸ್ಲಿಂ ಅರ್ಜಿದಾರರು ಪ್ರಮಾದ ಸರಿಪಡಿಸಲಿ ಎಂದ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜ್ಞಾನವಾಪಿ ಮಸೀದಿ ಪ್ರಕರಣದ ಕುರಿತು ಮಾತನಾಡಿದ್ದಾರೆ. ಮಸೀದಿ ಆವರಣದಲ್ಲಿ ತ್ರಿಶೂಲ (ತ್ರಿಶೂಲ) ಏನು ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದ ಅವರು, ಐತಿಹಾಸಿ ಪ್ರಮಾದವನ್ನು ಸರಿಪಡಿಸಲು ಮುಸ್ಲಿಂ ಅರ್ಜಿದಾರರು ಮುಂದಾಗಬೇಕು ಎಂದು ಹೇಳಿದರು.
ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶಿಸಿದ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧದ ಅರ್ಜಿಯ ಕುರಿತು ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪನ್ನು ಆಗಸ್ಟ್ 3 ಕ್ಕೆ ಕಾಯ್ದಿರಿಸಿದೆ. ಇದರ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆದಿತ್ಯನಾಥ್, ಸರ್ಕಾರವು ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತದೆ ಎಂದು ಹೇಳಿದರು. ಮಸೀದಿ ಎಂದು ಕರೆದರೆ ವಿವಾದ ಆಗುತ್ತದೆ, ಮಸೀದಿಯಲ್ಲಿ ತ್ರಿಶೂಲ ಏನ ಮಾಡುತ್ತಿದೆ, ಅಲ್ಲಿ ಜ್ಯೋತಿರ್ಲಿಂಗವಿದೆ, ದೇವಾನುದೇವತೆಗಳು ಇದ್ದಾರೆ ಎಂದು ಹೇಳಿದರು.
ತಪ್ಪಿಗೆ ಪರಿಹಾರ ಮಾಡಿಕೊಳ್ಳಲಿ!
"ಐತಿಹಾಸಿಕ ಪ್ರಮಾದವನ್ನು ಸರಿಪಡಿಸಲು ಮುಸ್ಲಿಂ ಕಡೆಯಿಂದ ಪ್ರಸ್ತಾವನೆ ಬರಬೇಕು ಎಂದು ನಾನು ಭಾವಿಸುತ್ತೇನೆ. ಈ ತಪ್ಪಿಗೆ ನಾವು ಪರಿಹಾರವನ್ನು ಬಯಸುತ್ತೇವೆ" ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದರು. ಸಹೋದರತ್ವ ಮತ್ತು ಸೌಹಾರ್ದತೆಯ ಸಂದೇಶವನ್ನು ನೀಡಲು ಮುಸ್ಲಿಂ ಅರ್ಜಿದಾರರಿಗೆ ಇದು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.
ಸಮೀಕ್ಷೆ ನಡೆಸಲು ತಡೆಯಾಜ್ಞೆ ನೀಡಿದ ಹೈಕೋರ್ಟ್
ಜ್ಞಾನವಾಪಿ ಮಸೀದಿ ಆವರಣದ ಎಎಸ್‌ಐ ಸಮೀಕ್ಷೆಗೆ ಹೈಕೋರ್ಟ್ ಬುಧವಾರ (ಜುಲೈ 26) ತಡೆಯಾಜ್ಞೆ ನೀಡಿದೆ. ವಿಚಾರಣೆಯ ಸಂದರ್ಭದಲ್ಲಿ, ಹಿರಿಯ ಎಎಸ್‌ಐ ಅಧಿಕಾರಿಯೊಬ್ಬರು, ಎಎಸ್‌ಐ ತಂಡವು ಯಾವುದೇ ರೀತಿಯಲ್ಲಿ "ರಚನೆಯನ್ನು (ಮಸೀದಿ) ಧ್ವಂಸ ಮಾಡಲು" ಹೋಗುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿಯ ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಿಟಿಂಕರ್ ದಿವಾಕರ್ ಅವರು ಗುರುವಾರ ಹೆಚ್ಚಿನ ವಿಚಾರಣೆಗಾಗಿ ಮುಂದೂಡಿದರು. ಅಲ್ಲಿಯವರೆಗೂ ಎಎಸ್‌ಐ ಸಮೀಕ್ಷೆಗೆ ತಡೆಯಾಜ್ಞೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಮರುದಿನ ವಿಚಾರಣೆ ಮುಗಿಸಲಾಗಿದ್ದು, ಆಗಸ್ಟ್ 3ಕ್ಕೆ ಆದೇಶವನ್ನು ಕಾಯ್ದಿರಿಸಿದೆ.












Click it and Unblock the Notifications