ಗಂಗಾ ನದಿಯಲ್ಲಿ ಒಲಂಪಿಕ್ಸ್ ಪದಕ ಎಸೆಯಲು ಭಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ತೀರ್ಮಾನ
ನವದೆಹಲಿ, ಮೇ 30: ಭಾರತದ ಅಗ್ರ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಬಂಧಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ ಎರಡು ದಿನಗಳ ನಂತರ ಆತಂಕಕಾಗಿ ಬೆಳವಣಿಗೆಯೊಂದು ನಡೆಯುತ್ತಿದೆ. ಹರಿದ್ವಾರ ಬಳಿಯ ಗಂಗಾ ನದಿಯಲ್ಲಿ ತಮ್ಮ ಒಲಂಪಿಕ್ಸ್ ಮೆಡಲ್‌ಗಳನ್ನು ಎಸೆಯಲು ಕುಸ್ತಿಪಟುಗಳು ತೀರ್ಮಾನಿಸಿದ್ದಾರೆ.
ಭಾರತದ ಅಗ್ರ ಕುಸ್ತಿಪಟುಗಳಾದ ರಿಯೊ 2016 ರ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಟೋಕಿಯೊ ಒಲಂಪಿಕ್ಸ್ 2020 ರ ಪದಕ ವಿಜೇತ ಭಜರಂಗ್ ಪುನಿಯಾ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಅವರು ತಮ್ಮ ಮೆಡಲ್‌ಗಳನ್ನು ಎಸೆಯುವುದಾಗಿ ಹೇಳಿದ್ದಾರೆ.

ಮಂಗಳವಾರ ( ಮೇ 30 ) ಸಂಜೆ 6 ಗಂಟೆಗೆ ಹರಿದ್ವಾರ ಬಳಿಯ ಗಂಗಾ ನದಿಯಲ್ಲಿ ತಮ್ಮ ಒಲಂಪಿಕ್ಸ್ ಪದಕವನ್ನು ಎಸೆಯಲು ಕುಸ್ತಿಪಟುಗಳು ತೀರ್ಮಾನಿಸಿದ್ದಾರೆ. ಇದಾದ ಬಳಿಕ ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕುಸ್ತಿಪಟುಗಳು ಹೇಳಿದ್ದಾರೆ.
'ಈ ಪದಕಗಳು ನಮ್ಮ ಜೀವನ ಮತ್ತು ಆತ್ಮ. ನಾವು ಅದನ್ನು ಗಂಗಾ ನದಿಯಲ್ಲಿ ಹಾಕಿದ ನಂತರ, ನಾವು ಬದುಕಲು ಯಾವುದೇ ಅರ್ಥವಿಲ್ಲ. ಆದ್ದರಿಂದ ನಾವು ಇಂಡಿಯಾ ಗೇಟ್‌ಗೆ ಬಂದು ಆಮರಣಾಂತ ಉಪವಾಸ ಮಾಡುತ್ತೇವೆ' ಎಂದು ಕುಸ್ತಿಪಟುಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಭಾನುವಾರ ಹೊಸ ಸಂಸತ್ ಭವನದ ಉದ್ಘಾಟನೆ ವೇಳೆ ಸಂಸತ್ತಿನ ಹೊರಗೆ ಮಹಿಳಾ 'ಮಹಾಪಂಚಾಯತ್' ನಡೆಸಲು ಮೆರವಣಿಗೆ ನಡೆಸುತ್ತಿದ್ದರು. ಆದರೆ ಮಾರ್ಗಮಧ್ಯೆ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದರು.

ಆ ನಂತರ ಪೊಲೀಸರು ಅವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದರು ಮತ್ತು ಜಂತರ್ ಮಂತರ್‌ನಲ್ಲಿ ಅವರ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿದರು. ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿವ ಸಮಯದಲ್ಲಿ ಹಿಂಸಾಚಾರವಾಯಿತು. ಕುಸ್ತಿಪಟುಗಳನ್ನು ಅನೇಕ ಪೊಲೀಸರು ಹಿಡಿದು ಎತ್ತುವ ಮತ್ತು ಬಸ್‌ಗಳಲ್ಲಿ ಹಾಕುವ ನಾಟಕೀಯ ಬೆಳವಣಿಗೆ ನಡೆಯಿತು.
'ಮೇ 28 ರಂದು ಏನಾಯಿತು ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ಪೊಲೀಸರು ನಮ್ಮನ್ನು ನಡೆಸಿಕೊಂಡ ಮತ್ತು ಬಂಧಿಸಿದ ರೀತಿಗೆ ನಾವು ನೊಂದಿದ್ದೇವೆ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಪೊಲೀಸರು ಜಂತರ್ ಮಂತರ್‌ನಲ್ಲಿ ನಮ್ಮ ಪ್ರತಿಭಟನಾ ಪ್ರದೇಶವನ್ನು ತೆರವುಗೊಳಿಸಿದ್ದಲ್ಲದೆ, ನಮ್ಮ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ' ಎಂದು ಮೂವರು ಕುಸ್ತಿಪಟುಗಳು ಟ್ವೀಟ್‌ನಲ್ಲಿ ಪತ್ರವನ್ನು ಹಂಚಿಕೊಂಡಿದ್ದಾರೆ.
ಮಹಿಳಾ ಕ್ರೀಡಾಪಟುಗಳು ತಮ್ಮ ವಿರುದ್ಧ ನಡೆದ ಲೈಂಗಿಕ ಕಿರುಕುಳಕ್ಕೆ ನ್ಯಾಯ ಕೇಳುವ ಮೂಲಕ ಏನಾದರೂ ಅಪರಾಧ ಮಾಡಿದ್ದಾರೆಯೇ? ನಮ್ಮನ್ನು ಕ್ರಿಮಿನಲ್‌ಗಳಂತೆ ನಡೆಸಿಕೊಳ್ಳಲಾಗಿದೆ ಎಂದು ಕುಸ್ತಿಪಟುಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

'ಈ ದೇಶದಲ್ಲಿ ಏನೂ ಉಳಿದಿಲ್ಲ ಎಂದು ನಮಗೆ ಅನಿಸುತ್ತದೆ. ನಾವು ದೇಶಕ್ಕಾಗಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಗೆದ್ದ ಕ್ಷಣಗಳ ಬಗ್ಗೆ ಯೋಚಿಸಿದಾಗ, ನಾವು ಏಕೆ ಗೆದ್ದಿದ್ದೇವೆ ಎಂದು ನಾವು ಆಶ್ಚರ್ಯ ಪಡುತ್ತೇವೆ. ನಮ್ಮ ಕುತ್ತಿಗೆಗೆ ನೇತಾಡುವ ಪದಕಗಳಿಗೆ ಯಾವುದೇ ಅರ್ಥವಿಲ್ಲ ಎಂದು ನಾವು ಭಾವಿಸುತ್ತೇವೆ' ಎಂದು ತಿಳಿಸಿದ್ದಾರೆ.
'ಪದಕಗಳನ್ನು ಯಾರಿಗೆ ಹಿಂದಿರುಗಿಸಬೇಕೆಂದು ನಾವು ಪರಿಗಣಿಸಿದ್ದೇವೆ. ಸ್ವತಃ ಮಹಿಳೆಯಾಗಿರುವ ರಾಷ್ಟ್ರಪತಿಗೆ ನಮ್ಮ ಪದಕಗಳನ್ನು ನೀಡಬೇಕೇ? ಅವರು ನಮ್ಮಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದ್ದಾರೆ. ಆದರೆ ನಮ್ಮ ಕಷ್ಟದ ಬಗ್ಗೆ ಏನನ್ನೂ ಅವರು ಮಾತನಾಡಿಲ್ಲ' ಎಂದೂ ಅವರು ನೋವು ಹಂಚಿಕೊಂಡಿದ್ದಾರೆ.

ಒಲಂಪಕ್ಸ್ ಪದಕ ಗೆದ್ದ ಸಂದರ್ಭದಲ್ಲಿ ನಮ್ಮನ್ನು ಅವರ ಹೆಣ್ಣುಮಕ್ಕಳು ಎಂದು ಕರೆಯುವ ಪ್ರಧಾನಿಗೆ ಅವರನ್ನು ಹಿಂತಿರುಗಿಸಬೇಕೇ? ಅದು ಸಾಧ್ಯವಿಲ್ಲ. ನಾವು ಪ್ರತಿಭಟನೆ ಆರಂಭಿಸಿದಾಗಿನಿಂದ ನಾವು ಹೇಗಿದ್ದೇವೆ ಎಂದು ಒಮ್ಮೆಯೂ ಅವರು ನಮ್ಮನ್ನು ಕೇಳಲಿಲ್ಲ. ವಾಸ್ತವವಾಗಿ, ನಾವು ಪ್ರತಿಭಟಿಸುತ್ತಿರುವ ವ್ಯಕ್ತಿ, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಸಂಸತ್ತಿನ ಉದ್ಘಾಟನೆಗೆ ಆಹ್ವಾನಿಸಲಾಯಿತು ಎಂದೂ ಕುಸ್ತಿಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications