ಹದಗೆಟ್ಟ ಲಸಿಕೆ ವ್ಯವಸ್ಥೆ: ಗ್ರಾಮಗಳಲ್ಲಿ ಕೋವಿಡ್ ಸೋಂಕು ಹೆಚ್ಚಳ
ನವದೆಹಲಿ, ಜೂ.07: ಹಳ್ಳಿಗಳಿಗಳಲ್ಲಿ ವಾಸಿಸುವ ಕೋಟ್ಯಂತರ ಜನರಿಗಿಂತ ಅಧಿಕವಾಗಿ ನಗರದಲ್ಲಿ ವಾಸಿಸುತ್ತಿರುವ ಭಾರತೀಯರು ಕೋವಿಡ್ -19 ಲಸಿಕೆಯನ್ನು ಪಡೆಯುತ್ತಿದ್ದಾರೆ. ಸರ್ಕಾರ ಈ ಅಂಕಿ ಅಂಶವು ದೇಶದಲ್ಲಿ ಚಾಲನೆಯಲ್ಲಿರುವ ಲಸಿಕೆ ಅಭಿಯಾನದಲ್ಲಿ ಹೆಚ್ಚುತ್ತಿರುವ ಅಸಮಾನತೆಯನ್ನು ಎತ್ತಿ ತೋರಿಸುತ್ತಿದೆ.
ಈಗಾಗಲೇ ಭಾರತದಲ್ಲಿ ಲಸಿಕೆ ಹಂಚಿಕೆ ವಿಚಾರದಲ್ಲಿ ಅಸಮಾನತೆ ಸಮಸ್ಯೆಯಿದೆಯೇ ಎಂಬ ಪ್ರಶ್ನೆಯು ಕೆಲವೊಂದು ವಿದ್ಯಮಾನಗಳಿಂದಾಗಿ ಹುಟ್ಟಿತ್ತು. ಕೊರೊನಾ ಲಸಿಕೆ ವಿಚಾರದಲ್ಲಿ ರಾಜ್ಯ ಕೇಂದ್ರಗಳ ನಡುವೆ ವಾಕ್ಸಮರ, ಗೊಂದಲ ಸೃಷ್ಟಿಯಾಗಿದ್ದು ಕೇಂದ್ರ ಸರ್ಕಾರವನ್ನು ಕೋರ್ಟ್‌ಗಳು ತರಾಟೆಗೆ ತೆಗೆದುಕೊಂಡಿದೆ. ಈ ನಡುವೆ ದೇಶದ ದೊಡ್ಡ ನಗರಗಳಲ್ಲಿ ಕೇವಲ ಒಂಬತ್ತು ಕಾರ್ಪೊರೇಟ್ ಆಸ್ಪತ್ರೆಗಳಿಗೆ ಮೇ ತಿಂಗಳಲ್ಲಿ ಖಾಸಗಿ ವಲಯಕ್ಕೆ ಮೀಸಲಾದ ಕೋವಿಡ್ -19 ಲಸಿಕೆ ದಾಸ್ತಾನುಗಳಲ್ಲಿ ಶೇ. 50 ರಷ್ಟು ಸರಬರಾಜು ಆಗಿದೆ ಎಂದು ವರದಿ ತಿಳಿಸಿತ್ತು. ಇದರಿಂದಾಗಿ ಖಾಸಗಿ ಸರ್ಕಾರಿ ವಲಯಗಳಲ್ಲಿ ಲಸಿಕೆ ಹಂಚಿಕೆ ವಿಚಾರದಲ್ಲಿ ಅಸಮಾನತೆಯ ಬಗ್ಗೆ ಸುದ್ದಿಯಾಗಿತ್ತು.
9 ಖಾಸಗಿ ಆಸ್ಪತ್ರೆಗಳಿಗೆ ಶೇ. 50 ಕೋವಿಡ್ ಲಸಿಕೆ - ಹುಟ್ಟಿದೆ ಅಸಮಾನತೆ ಪ್ರಶ್ನೆ
ಇದೀಗ ಗ್ರಾಮೀಣ ಹಾಗೂ ನಗರದಲ್ಲಿ ಕೊರೊನಾ ಲಸಿಕೆ ನೀಡಿಕೆ ವಿಚಾರದಲ್ಲಿ ಅಸಮಾನತೆಯು ಚರ್ಚೆಗೆ ಗ್ರಾಸವಾಗಿದೆ. ಭಾರತದ ಕಡಿಮೆ ಅಭಿವೃದ್ಧಿ ಹೊಂದಿದ 114 ಜಿಲ್ಲೆಗಳಲ್ಲಿ ಕೇವಲ 230 ಲಕ್ಷ ಪ್ರಮಾಣವನ್ನು ನೀಡಲಾಗಿದೆ. ನವದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು, ಹೈದರಾಬಾದ್, ಪುಣೆ, ಥಾಣೆ ಮತ್ತು ನಾಗ್ಪುರಗಳಲ್ಲಿ ಒಂಬತ್ತು ಪ್ರಮುಖ ನಗರಗಳಲ್ಲಿ ಒಟ್ಟು ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿವೆ.

ಖಾಸಗಿ ಆಸ್ಪತ್ರೆ ಹೊಂದಿರುವ ನಗರದ ಜನರಿಗೆ ಅನುಕೂಲ
ಕಳೆದ ತಿಂಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಯಸ್ಕರಿಗೆ ಲಸಿಕೆಗಳ ಖಾಸಗಿ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ ನಂತರ ಅಸಮಾನತೆಯ ಚರ್ಚೆಗೆ ಇನ್ನಷ್ಟು ಬಲಬಂದಿತ್ತು. ಈ ಖಾಸಗಿ ರಂಗಕ್ಕೆ ಲಸಿಕೆ ಮಾರಾಟಕ್ಕೆ ನೀಡಿದ ಅವಕಾಶವು ದೊಡ್ಡ ಖಾಸಗಿ ಆಸ್ಪತ್ರೆಗಳನ್ನು ಹೊಂದಿರುವ ನಗರಗಳ ನಿವಾಸಿಗಳಿಗೆ ಅನುಕೂಲಕರವಾಗಿದೆ. ಆದರೆ ಆ ನಗರದಲ್ಲೇ ವಾಸಿಸುವ ಮಧ್ಯಮ, ಬಡ ಜನರಿಗೆ ಈ ಲಸಿಕೆ ಕೈಗೆಟ್ಟುಕದ ತುತ್ತಾಗಿ ಪರಿಣಮಿಸಿದೆ. ಮೇ ಮೊದಲ ನಾಲ್ಕು ವಾರಗಳಲ್ಲಿ ಒಂಬತ್ತು ನಗರಗಳಲ್ಲಿ ಗ್ರಾಮೀಣ ಜಿಲ್ಲೆಗಳಿಗಿಂತ ಶೇ. 16 ರಷ್ಟು ಅಧಿಕ ಲಸಿಕೆ ನೀಡಲಾಗಿದೆ ಎಂದು ಸರ್ಕಾರದ ಕೋ-ವಿನ್ ವ್ಯಾಕ್ಸಿನೇಷನ್ ಪೋರ್ಟಲ್ ತೋರಿಸುತ್ತದೆ.

ಗ್ರಾಮದ ಜನರು ಹೇಳಿದ್ದಿಷ್ಟು..
"ನಗರದ ನನ್ನ ಸ್ನೇಹಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗಿದೆ. ನಾನು ಕೂಡಾ ಲಸಿಕೆಗೆ ಹಣ ಪಾವತಿಸಲು ಸಿದ್ದನಿದ್ದೇನೆ. ಆದರೆ ನನಗೆ ಲಸಿಕೆ ಡೋಸ್ ದೊರೆಯಲ್ಲ. ಲಾಕ್‌ಡೌನ್ ಕಾರಣ ನಾನು ಜಿಲ್ಲೆಯ ಗಡಿಯನ್ನು ದಾಟಲಾಗುವುದಿಲ್ಲ" ಎಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ 38 ವರ್ಷದ ರೈತ ಅತುಲ್ ಪವಾರ್ ಹೇಳಿದ್ದಾರೆ.
ಸರ್ಕಾರದ ಮಾರ್ಗಸೂಚಿ: ಕೊರೊನಾ ರೋಗಿಗಳು ಈ ಔಷಧಿಗಳನ್ನು ತೆಗೆದುಕೊಳ್ಳುವಂತಿಲ್ಲ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ
ಭಾರತದಲ್ಲಿ ಲಸಿಕೆ ಅಸಮಾನತೆಯ ಬಗ್ಗೆ ವರದಿಗಳು ಆಗುತ್ತಿದ್ದಂತೆ ಈ ಬಗ್ಗೆ ಪ್ರಕಟಣೆ ಬಿಡುಗಟೆ ಮಾಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತದಲ್ಲಿ ಲಸಿಕೆ ಅಸಮಾನತೆಯ ವರದಿಗಳು ನಿಖರವಾದುದ್ದಲ್ಲ. ಇದು ಬರೀ ಊಹಾತ್ಮಾಕ ವರದಿ. ಉದಾರೀಕೃತ ಬೆಲೆ ಮತ್ತು ವೇಗವರ್ಧಿತ ರಾಷ್ಟ್ರೀಯ ಕೊರೊನಾ ಲಸಿಕೆ ಅಭಿಯಾನ ತಂತ್ರವು ಸಮಾನತೆಯನ್ನು ಖಾತ್ರಿಗೊಳಿಸುತ್ತದೆ ಎಂದು ತಿಳಿಸಿದೆ. ಹಾಗೆಯೇ ಕಡಿಮೆ ಖಾಸಗಿ ಆಸ್ಪತ್ರೆಗಳನ್ನು ಹೊಂದಿರುವ ರಾಜ್ಯಗಳು ತಮ್ಮ ಲಸಿಕೆ ಅಭಿಯಾನದ ಸ್ಥಿತಿಯನ್ನು ಪರಿಶೀಲಿಸುವಂತೆ ಮತ್ತು ಕೆಲವು ಸರ್ಕಾರಿ ಆಸ್ಪತ್ರೆಗಳನ್ನು ಅಗತ್ಯವಿದ್ದರೆ ಲಸಿಕೆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರೋತ್ಸಾಹಿಸುವಂತೆ ಸಚಿವಾಲಯ ಹೇಳಿದೆ.

ಕಂಪನಿಗಳಿಂದ ತಮ್ಮ ಉದ್ಯೋಗಿಗಳಿಗೆ ಲಸಿಕೆ ನೀಡಿಕೆ
ದೇಶದಲ್ಲಿ ಲಸಿಕೆ ಅಸಮಾನತೆ ಕಾಣಿಸಿಕೊಂಡ ಬೆನ್ನಲ್ಲೇ ಹಲವಾರು ಕಂಪನಿಗಳು ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ತಾವೇ ಲಸಿಕೆ ನೀಡಿಸುವ ಕಾರ್ಯ ಆರಂಭ ಮಾಡಿದೆ. ಪ್ರಮುಖ ಅಂತಾರಾಷ್ಟ್ರೀಯ ಮತ್ತು ದೇಶೀಯ ಸಂಸ್ಥೆಗಳಾದ ಮೈಕ್ರೋಸಾಫ್ಟ್, ಪೆಪ್ಸಿ, ಅಮೆಜಾನ್, ರಿಲಯನ್ಸ್ ಇಂಡಸ್ಟ್ರೀಸ್, ಅದಾನಿ ಗ್ರೂಪ್ ಮತ್ತು ಟಾಟಾ ಮೋಟಾರ್ಸ್ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ತಮ್ಮಉದ್ಯೋಗಿಗಳಿಗೆ ಲಸಿಕೆ ನೀಡಿಕೆ ಕಾರ್ಯಕ್ರಮ ನಡೆಸಿದೆ. ಈ ಹೆಚ್ಚಿನ ಕಂಪನಿಗಳ ಕಚೇರಿಯು ಬೃಹತ್ ಖಾಸಗಿ ಆಸ್ಪತ್ರೆಗಳು ಇರುವ ನಗರ ಕೇಂದ್ರಗಳಲ್ಲಿವೆ.
ಜೂನ್ 21ರಿಂದ ರಾಜ್ಯಗಳಿಗೆ ಕೇಂದ್ರದಿಂದಲೇ ಉಚಿತ ಲಸಿಕೆ ಪೂರೈಕೆ: ಮೋದಿ

ಕೇಂದ್ರ ಸರ್ಕಾರದ ವಿರುದ್ದ ಸುಪ್ರೀಂ ಕೋರ್ಟ್ ತರಾಟೆ
ಈಗಾಗಲೇ ಲಸಿಕೆಯು ಸರ್ಕಾರಿ ಕೇಂದ್ರಗಳಲ್ಲಿ ಬಡವರಿಗೆ ದೊರೆಯುತ್ತಿಲ್ಲ, ಖಾಸಗಿ ಆಸ್ಪತ್ರೆಗಳಲ್ಲಿ ಅಷ್ಟು ಬೆಲೆ ತೆತ್ತು ಲಸಿಕೆ ಹಾಕಿಸಿಕೊಳ್ಳಲು ಬಡವರಿಂದ ಸಾಧ್ಯವಿಲ್ಲ ಎಂಬ ವಿಚಾರವು ಚರ್ಚೆಯಾಗುತ್ತಿದೆ. ಈ ನಡುವೆ ದೇಶದ ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಲಸಿಕೆ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡಿದೆ. ನಗರ, ಗ್ರಾಮೀಣ ಪ್ರದೇಶಕ್ಕೆ ಲಸಿಕೆಯನ್ನು ಒದಗಿಸುವಂತೆ ಆದೇಶಿಸಿದೆ. "ಖಾಸಗಿ ಆಸ್ಪತ್ರೆಗಳು ದೇಶಾದ್ಯಂತ ಸಮಾನವಾಗಿ ಇಲ್ಲ. ಹೆಚ್ಚಾಗಿ ದೊಡ್ಡ ಜನಸಂಖ್ಯೆ ಹೊಂದಿರುವ ದೊಡ್ಡ ನಗರಗಳಲ್ಲಿ ಮಾತ್ರವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿರುವ ಕಾರಣ ಗ್ರಾಮೀಣ ಪ್ರದೇಶದ ಜನರಿಗೆ ಲಸಿಕೆ ದೊರೆಯುತ್ತಿಲ್ಲ. ನಗರದ ಜನರಿಗೆ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಲಭ್ಯವಿರುತ್ತದೆ" ಎಂದು ಹೇಳಿತ್ತು. ಇನ್ನು ಇದೇ ವೇಳೆ "ಖಾಸಗಿ ಆಸ್ಪತ್ರೆಗಳು ತಮ್ಮ ಉದ್ಯೋಗಿಗಳಿಗೆ ಲಸಿಕೆ ನೀಡಲು ಬಯಸುವ ಖಾಸಗಿ ಸಂಸ್ಥೆಗಳಿಗೆ ನೇರವಾಗಿ ಲಾಭದಾಯಕ ವ್ಯವಹಾರ ನಡೆಸಿ ಲಸಿಕೆ ನೀಡಬಹುದು" ಎಂದು ಹೇಳಿತ್ತು.
(ಒನ್‌ಇಂಡಿಯಾ ಸುದ್ದಿ)