ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಗ್ರೇಟರ್ ನೋಯ್ಡಾ, ಏಪ್ರಿಲ್ 27: ಕ್ಯಾಬ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬರ ಮೇಲೆ ಕ್ಯಾಬ್ ಚಾಲಕ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ದೆಹಲಿ ಬಳಿಯ ಗ್ರೇಟರ್ ನೋಯ್ಡಾ ಬಳಿ ನಿನ್ನೆ(ಏ.26) ನಡೆದಿದೆ.
ನಿನ್ನೆ ಸಾಯಂಕಾಲದ ಸಮಯದಲ್ಲಿ ಯುವತಿ ಬುಕ್ ಮಾಡಿದ್ದ ಕ್ಯಾಬ್ ನಲ್ಲಿ ಹತ್ತಿಕೊಳ್ಳುವ ಸಂದರ್ಭದಲ್ಲಿ ಆಗಲೇ ಒಬ್ಬ ಪ್ರಯಾಣಿಕ ಇದ್ದ. ಆ ಪ್ರಯಾಣಿಕನ್ನು ಇಲ್ಲೆ ಹತ್ತಿರ ಬಿಟ್ಟು ನಂತರ ನಿಮ್ಮನ್ನು ಡ್ರಾಪ್ ಮಾಡುವುದಾಗಿ ಚಾಲಕ ಹೇಳಿದ್ದಾನೆ. ಆದರೆ ಆ ಪ್ರಯಾಣಿಕ ಮತ್ತು ಚಾಲಕ ಸೇರಿಯೇ ಮಾಡಿದ ಉಪಾಯವಿದು ಎಂಬುದು ಯುವತಿಗೆ ತಿಳಿದಿಲ್ಲ.
ಕಾರನ್ನು ಹತ್ತಿರದ ಕಾಡಿಗೆ ತೆಗೆದುಕೊಂಡು ಹೋದ ಚಾಲಕ, ಅದಾಗಲೇ ಅಲ್ಲಿಗೆ ಬಂದಿದ್ದ ತನ್ನ ಉಳಿದ ಸ್ನೇಹಿತರೊಂದಿಗೆ ಸೇರಿ ಯುವತಿಗೆ ಆಲ್ಕೋಹಾಲ್ ಕುಡಿಸಿ ಅತ್ಯಾಚಾರ ಎಸಗಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.
ಇತ್ತೀಚೆಗಷ್ಟೇ(ಏ.18) ಗ್ರೇಟರ್ ನೋಯ್ಡಾದಲ್ಲಿಯೇ ಅಪ್ರಾಪ್ತ ಯುವತಿಯ ಮೇಲೆ ಕಾರಿನಲ್ಲಿಯೇ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ದಾಖಲಾಗಿತ್ತು. ಹನ್ನೊಂದನೆ ತರಗತಿ ಓದುತ್ತಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿತ್ತು.












Click it and Unblock the Notifications