ಅನೈತಿಕ ಸಂಬಂಧ, ಗಂಡನ ಮರ್ಮಾಂಗಕ್ಕೆ ಸಂಚಕಾರ
ಜಲಂಧರ್ (ಪಂಜಾಬ್), ಫೆಬ್ರವರಿ 20 : ಗಂಡನ ಅನೈತಿಕ ಸಂಬಂಧದಿಂದ ಬೇಸತ್ತಿದ್ದ ಮಹಿಳೆಯೊಬ್ಬಳು ಆತನ ಮರ್ಮಾಂಗವನ್ನು ಕತ್ತರಿಸಿ, ಶೌಚಾಲಯದಲ್ಲಿ ಸಮಾಧಿ ಮಾಡಿ ತನ್ನ ಆಕ್ರೋಶ ವ್ಯಕ್ತಪಡಿಸಿರುವ ವಿಲಕ್ಷಣ ಘಟನೆ ಸೋಮವಾರ ರಾತ್ರಿ ಜಲಂಧರ್ ನಲ್ಲಿ ನಡೆದಿದೆ.
ಜಲಂಧರದ ಸಹಾಯಕ ಪೊಲೀಸ್ ಕಮಿಷನರ್ ಸತಿಂದರ್ ಕುಮಾರ್ ಪ್ರಕಾರ, ಅನೈತಿಕ ಸಂಬಂಧ ಹೊಂದಿದ್ದನೆನ್ನಲಾಗಿರುವ ಜೋಗಿಂದರ್ ನಗರದ ಆಜಾದ್ ಸಿಂಗ್ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದಾರೆ.
ಕಳೆದ ರಾತ್ರಿ ಆಜಾದ್ ಸಿಂಗ್ ಗಾಢ ನಿದ್ರೆಯಲ್ಲಿದ್ದಾಗ ಆತನ ಹೆಂಡತಿ ಸುಖವಂತ್ ಕೌರ್ ಈ ಕೃತ್ಯವೆಸಗಿದ್ದಾಳೆ. ಮತ್ತೊಬ್ಬ ಮಹಿಳೆಯೊಂದಿಗೆ ಗಂಡ ಆಜಾದ್ ಸಿಂಗ್ ಅನೈತಿಕ ಸಂಬಂಧ ಹೊಂದಿದ್ದುದೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಆಜಾದ್ ಸಿಂಗ್ ಮಲಗಿದ್ದಾಗ ಮೊದಲು ಕಬ್ಬಿಣದ ಸಲಾಕೆಯಿಂದ ಆತನ ತಲೆಗೆ ಕೌರ್ ಹೊಡೆದಿದ್ದಾಳೆ. ಕೂಡಲೆ ಆತ ಪ್ರಜ್ಞೆ ಕಳೆದುಕೊಂಡಿದ್ದಾರೆ. ನಂತರ ಚಾಕು ತೆಗೆದುಕೊಂಡು ಕೌರ್ ತನ್ನ ಗಂಡನ ಮರ್ಮಾಂಗ ಕಚಕ್ ಎನ್ನಿಸಿ, ಶೌಚಾಲಯದೊಳಗೆ ಹಾಕಿ ಫ್ಲಷ್ ಮಾಡಿಬಿಟ್ಟಿದ್ದಾಳೆ.
ವಿಪರೀತ ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಜಾದ್ ಸಿಂಗ್ ಅವರ ತಂದೆ ದಾಖಲಿಸಿರುವ ದೂರಿ ಅನ್ವಯ ಸುಖವಂತ್ ಕೌರ್ ವಿರುದ್ಧ ಕೇಸನ್ನು ದಾಖಲಿಸಲಾಗಿದೆ. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ.












Click it and Unblock the Notifications