ತಮಿಳುನಾಡಿಗೆ ಸಿಗಲಿದೆಯೇ ಅಧಿಕ ಕೊರೊನಾ ಲಸಿಕೆಗಳು?
ನವದೆಹಲಿ, ಡಿಸೆಂಬರ್ 14: ಸರ್ಕಾರ ಅನುಮತಿ ನೀಡುತ್ತಿದ್ದಂತೆ ಕೊರೊನಾ ವೈರಸ್ ವಿರುದ್ಧ ಸಾಮೂಹಿಕ ಲಸಿಕೆ ನೀಡಲು ಭಾರತದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಎಲ್ಲೆಲ್ಲೂ ಲಸಿಕೆಗಳ ಶೇಖರಣೆಗೆ ತಯಾರಿ ಸಾಗಿದೆ. ಈ ನಡುವೆ 50 ವರ್ಷದ ಮೇಲ್ಪಟ್ಟವರು ಹೆಚ್ಚಿನ ಜನಸಂಖ್ಯೆಯಲ್ಲಿರುವ ರಾಜ್ಯಕ್ಕೆ ಕೋವಿಡ್ ಲಸಿಕೆಯ ಅಧಿಕ ಡೋಸ್ ಗಳ ಪೂರೈಕೆ ಮಾಡಲಿರುವುದಾಗಿ ತಿಳಿದುಬಂದಿದೆ.
ಸದ್ಯಕ್ಕೆ ಕೊರೊನಾ ಲಸಿಕೆಯನ್ನು ಮೊದಲು ನಾಲ್ಕು ಕೋಟಿ ಆರೋಗ್ಯ ಕಾರ್ಯಕರ್ತರು, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುನ್ನೆಲೆಯಲ್ಲಿರುವ ಕಾರ್ಯಕರ್ತರು, ಪೊಲೀಸರು, 50 ವಯಸ್ಸಿನ ಒಳಗಿನ ಮಧುಮೇಹಿಗಳ ಜೊತೆಗೆ 50ಕ್ಕೂ ಹೆಚ್ಚಿನ ವಯಸ್ಸಿನವರ ಜನಸಂಖ್ಯೆಯನ್ನು ಅಧಿಕ ಮಟ್ಟದಲ್ಲಿ ಹೊಂದಿರುವ ರಾಜ್ಯಗಳಿಗೆ ಕೊರೊನಾ ಲಸಿಕೆಯ ಡೋಸ್ ನೀಡಲು ಸರ್ಕಾರ ಚಿಂತನೆ ನಡೆಸಿರುವುದಾಗಿ ತಿಳಿದುಬಂದಿದೆ.
ಹೀಗಾಗಿ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನಕ್ಕಿಂತ, ತಮಿಳುನಾಡು ಹೆಚ್ಚಿನ ಲಸಿಕೆಗಳನ್ನು ಪಡೆಯಲಿದೆ ಎನ್ನಲಾಗಿದೆ. ಬಿಹಾರದಲ್ಲಿ ಸುಮಾರು 12.3 ಕೋಟಿ ಜನಸಂಖ್ಯೆ ಇದ್ದು, ತಮಿಳುನಾಡಿಗಿಂತ 60% ಹೆಚ್ಚಿನ ಜನಸಂಖ್ಯೆ ಹೊಂದಿದೆ (ತಮಿಳುನಾಡು 7.6 ಕೋಟಿ). ಆದರೆ 50 ವಯಸ್ಸು ಮೇಲ್ಪಟ್ಟ ವಯಸ್ಸಿನವರು ಬಿಹಾರದಲ್ಲಿ 1.8 ಕೋಟಿ ಜನರಿದ್ದು, ತಮಿಳುನಾಡಿನಲ್ಲಿ ಈ ವಯಸ್ಸಿನವರ ಸಂಖ್ಯೆ ಸುಮಾರು 2 ಕೋಟಿ ಇದೆ ಎನ್ನಲಾಗಿದೆ. ಹೀಗಾಗಿ ತಮಿಳುನಾಡಿಗೆ ಹೆಚ್ಚಿನ ಡೋಸ್ ಗಳು ಸಿಗುವ ಚಿಂತನೆ ನಡೆದಿರುವುದಾಗಿ ತಿಳಿದುಬಂದಿದೆ.

ವಯಸ್ಸಿನೊಂದಿಗೆ, ರಕ್ತದೊತ್ತಡ, ಮಧುಮೇಹ, ಹೃದಯ ಕಾಯಿಲೆಯಂಥ ಇನ್ನಿತರ ಆರೋಗ್ಯ ಸಮಸ್ಯೆಗಳಿರುವ ರೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ರಾಜ್ಯಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಿರುವುದಾಗಿ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಕೇರಳದಲ್ಲಿ ಸುಮಾರು ಒಂದು ಕೋಟಿಯಷ್ಟು ಜನ ವಿವಿಧ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವುದಾಗಿ ವರದಿಯಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-20ರ ಪ್ರಕಾರ ಕೇರಳದಲ್ಲಿ ಹೆಚ್ಚಿನ ಮಟ್ಟದ ಜನರಿಗೆ ಮಧುಮೇಹ, ರಕ್ತದೊತ್ತಡ ಇದ್ದು, ಕೇರಳಕ್ಕೂ ಆದ್ಯತೆಯಲ್ಲಿ ಹೆಚ್ಚಿನ ಲಸಿಕೆಗಳು ದೊರೆಯಲಿರುವುದಾಗಿ ತಿಳಿದುಬಂದಿದೆ.












Click it and Unblock the Notifications