ಗೊಂದಲಗಳಿಗೆ ತೆರೆ, ಹಾರ್ದಿಕ್ ಪಟೇಲ್ ಬೆಂಬಲ ಕಾಂಗ್ರೆಸಿಗೆ
ಅಹಮದಾಬಾದ್, ನವೆಂಬರ್ 2: ಪಾಟೀದಾರ್ ಅನಾಮತ್ ಆಂದೋಲನ ಸಮಿತಿ (ಪಾಸ್) ಸಂಚಾಲಕ ಮುಂದಾಳು ಹಾರ್ದಿಕ್ ಪಟೇಲ್ ಕೊನೆಗೂ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಡಿಸೆಂಬರ್ ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಹಾರ್ದಿಕ್ ಪಟೇಲ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಪಟೇಲರ ಮೀಸಲಾತಿ ಹೋರಾಟಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದರಿಂದ ತಾವು ಕಾಂಗ್ರೆಸ್ ಬೆಂಬಲಿಸುತ್ತಿರುವುದಾಗಿ 24 ವರ್ಷದ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಸರಕಾರಿ ಉದ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ಪಾಟೀದಾರರಿಗೆ ಮೀಸಲಾತಿ ನೀಡಬೇಕು ಎಂದು ಹಾರ್ದಿಕ್ ಪಟೇಲ್ ಕಾಂಗ್ರೆಸ್ ಮುಂದೆ ತಮ್ಮ ಅಹವಾಲು ಇಟ್ಟಿದ್ದರು. ಪಟೇಲ್ ಬೇಡಿಕೆಯನ್ನು ಕಾಂಗ್ರೆಸ್ ಇನ್ನೂ ಇಡೇರಿಸಿಲ್ಲ. ಹೀಗಿದ್ದೂ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಬೆಂಬಲಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಸೌರಾಷ್ಟ್ರದಲ್ಲಿ ಬಹಿರಂಗ ಸಭೆ
ಸೌರಾಷ್ಟ್ರದಲ್ಲಿ ಇಂದು ಪ್ರವಾಸ ನಡೆಸಿದ ನಂತರ ಮಾತನಾಡಿದ ಅವರು, "ನಾನು ನನ್ನ ಸಮುದಾಯಕ್ಕೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಮತ ಹಾಕಿ ಎಂದು ಕೇಳುತ್ತಿದ್ದೇನೆ. ಹೀಗಾಗಿ ಬಿಜೆಪಿಯನ್ನು ನೆಲಕುರುಳಿಸಲು ಸಮುದಾಯ ನಿರ್ಧರಿಸಿದೆ," ಎಂದು ಹೇಳಿದರು.
ಹಾಗಂಥ ಹಾರ್ದಿಕ್ ಪಟೇಲ್ ತಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. "ಜನರು ಬುದ್ಧಿವಂತರು. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಿರಿ ಎಂದ ತಕ್ಷಣ ಅವರಿಗೆ ಯಾರಿಗೆ ಮತದಾನ ಮಾಡಬೇಕು ಎಂಬುದು ಗೊತ್ತಿದೆ," ಎಂದು ಹೇಳಿದ್ದಾರೆ.

ಪಟೇಲ್ ಸಮುದಾಯದವರಿಂದ ಆರೋಪ
ಆದರೆ ಹಾರ್ದಿಕ್ ಪಟೇಲ್ ವಿರುದ್ಧ ಪಾಟೀದಾರರ ಇತರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಹಿಂದುಳಿದ ವರ್ಗಗಳ ಪಟ್ಟಿಗೆ ಪಟೇಲ್ ಸಮುದಾಯವನ್ನು ಸೇರಿಸಬೇಕು ಎಂಬ ಬೇಡಿಕೆಯನ್ನು ಕೈಬಿಟ್ಟು ಹಾರ್ದಿಕ್ ವೈಯಕ್ತಿಕ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಅಲ್ಪೇಶ್ ಠಾಕೂರ್
ಇತ್ತೀಚೆಗಷ್ಟೇ ಠಾಕೂರ್ ಸಮುದಾಯದ ಅಲ್ಪೇಶ್ ಠಾಕೂರ್ ರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿತ್ತು. ಗುಜರಾತ್ ಮತದಾರರಲ್ಲಿ ಹಿಂದುಳಿದ ಠಾಕೂರ್ ಸಮಮುದಾಯದವರು ಶೇಕಡಾ 40ರಷ್ಟಿದ್ದು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅಲ್ಪೇಶ್ ಠಾಕೂರ್ ಮೀಸಲಾತಿಯನ್ನು ಮೇಲ್ವರ್ಗದ ಪಟೇಲರ ಜತೆ ಹಂಚಿಕೊಳ್ಳುವುದನ್ನು ವಿರೋಧಿಸಿದ್ದಾರೆ.

ಕಾಂಗ್ರೆಸ್ ಸೇರದ ಜಿಗ್ನೇಶ್
ಗುಜರಾತ್ ನ ಮೂವರು ಯುವ ನಾಯಕರಾದ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೆವಾನಿಗೆ ಕಾಂಗ್ರೆಸ್ ಗಾಳ ಹಾಕಿದೆ. ಇದರಲ್ಲಿ ಜಿಗ್ನೇಶ್ ಮೇವಾನಿ ಮಾತ್ರ ನೇರವಾಗಿ ಕಾಂಗ್ರೆಸ್ ಆಫರ್ ತಿರಸ್ಕರಿಸಿದ್ದಾರೆ.
ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14ರಂದು ಎರಡು ಸುತ್ತಿನ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಮತಎಣಿಕೆ ಕಾರ್ಯ ನಡೆಯಲಿದೆ.












Click it and Unblock the Notifications