ಮದುವೆಯ ಮೊದಲ ರಾತ್ರಿಯೇ ನೀನು ಇಷ್ಟವಿಲ್ಲ ಎಂದ ವಧು: ಎರಡು ವರ್ಷ ಕೋರ್ಟ್‌ಗೆ ಅಲೆದಾಟ, ನಂತರ ಆಗಿದ್ದೇನು ?!
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಹೆಣ್ಣಾಗಲಿ, ಗಂಡಾಗಲಿ ತನ್ನ ಮದುವೆ ಬಗ್ಗೆ, ಬಾಳ ಸಂಗಾತಿ ಬಗ್ಗೆ ತುಂಬಾ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಮದುವೆ ದಿನವೇ ಆ ಕನಸಿನ ಗೋಪುರ ಕುಸಿದು ಬಿದ್ದರೆ? ಇಲ್ಲೊಬ್ಬ ವ್ಯಕ್ತಿಯ ಜೀವನದಲ್ಲಿ ಇಂಥದ್ದೇ ಘಟನೆ ನಡೆದಿದೆ. ಮದುವೆ ನಿಶ್ಚಯವಾಗಿ ಎಂಟು ತಿಂಗಳ ನಂತರ ಮದುವೆಯಾಗಿದೆ. ಆ ಎಂಟು ತಿಂಗಳಲ್ಲಿ ಅವರಿಬ್ಬರು ನಡೆಸಿದ ಮಾತುಕತೆಗಳೆಷ್ಟೋ, ಕೈ ಕೈ ಹಿಡಿದು ನಡೆಸಿದ ಸುತ್ತಾಟವೆಷ್ಟೋ? ಎಂಟು ತಿಂಗಳಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಇಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದೆ ಎನ್ನುವಂತೆಯೂ ಕಾಣುತ್ತಿತ್ತು. ಆದರೆ ಮದುವೆಯ ಮೊದಲ ದಿನವೇ ಕಂಡ ಕನಸುಗಳೆಲ್ಲಾ ಕಮರಿ ಹೋಗಿದೆ.
ನಿಶ್ಚಿತಾರ್ಥದ ಎಂಟು ತಿಂಗಳ ನಂತರ ಮದುವೆ
ಇದೀಗ ಈ ಯುವಕನ ಕತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ಯುವಕನ ಜೀವನದ ಅತ್ಯಂತ ದುಃಖಕರ ಘಟನೆಯನ್ನು ವಿವರಿಸಲಾಗಿದೆ. ಮೊದಲೇ ಹೇಳಿದ ಹಾಗೆ ಇವರಿಬ್ಬರ ನಿಶ್ಚಿತಾರ್ಥವಾದ ಎಂಟು ತಿಂಗಳ ನಂತರ ಮದುವೆ ದಿನ ನಿಗದಿಯಾಗಿದೆ. ಅಲ್ಲಿಯವರೆಗೆ ಇಬ್ಬರೂ ಬಹಳಷ್ಟು ಮಾತನಾಡಿದ್ದಾರೆ, ಸುತ್ತಾಡಿದ್ದಾರೆ. ಆ ವೇಳೆ ಹುಡುಗಿ ಮದುವೆಗೂ ಮುನ್ನ ಯಾವುದೇ ರೀತಿಯ ದೈಹಿಕ ಸಂಬಂಧಗಳನ್ನು ಇರಿಸಿಕೊಳ್ಳುವುದು ಬೇಡ ಎಂದಿದ್ದಳಂತೆ. ಹುಡುಗ ಕೂಡಾ ಇದಕ್ಕೆ ಒಪ್ಪಿದ್ದಾನೆ. ಆಕೆಯ ಭಾವನೆಗೆ ಬೆಲೆ ಕೊಟ್ಟಿದ್ದಾನೆ.

ಮದುವೆಯ ರಾತ್ರಿಯೇ ರಹಸ್ಯ ಬಹಿರಂಗ
ಇಬ್ಬರ ಮದುವೆಯೂ ಅದ್ದೂರಿಯಾಗಿ ಖುಷಿ ಖುಷಿಯಾಗಿಯೇ ನಡೆದಿದೆ. ಇನ್ನೇನು ತನ್ನ ಹೊಸ ಜೀವನ ಶುರುವಾಯಿತು ಎನ್ನುವ ಸಂತಸದಲ್ಲಿ ವರ ತೇಲಾಡುತ್ತಿದ್ದ. ಆದರೆ ಫಸ್ಟ್ ನೈಟ್ ಕೋಣೆ ಪ್ರವೇಶಿಸುತ್ತಿದ್ದ ಹಾಗೆಯೇ ಎಲ್ಲವೂ ಉಲ್ಟಾ ಆಗಿದೆ. ವಧು ಆಘಾತಕಾರಿ ಸಂಗತಿಯನ್ನು ಹೊರ ಹಾಕಿದ್ದಾಳೆ. ನನಗೆ ನಿನ್ನನ್ನು ಮದುವೆಯಾಗುವುದು ಇಷ್ಟವಿರಲಿಲ್ಲ, ಹೆತ್ತವರ ಒತ್ತಡಕ್ಕೆ ಕಟ್ಟು ಬಿದ್ದು ಮದುವೆಯಾಗಿರುವುದಾಗಿ ಹೇಳಿದ್ದಾಳೆ. ಒಂದು ವೇಳೆ ಈ ಮದುವೆ ಮಾಡಿಕೊಳ್ಳದೆ ಹೋದರೆ ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳುವುದಾಗಿ ತಂದೆ ತಾಯಿ ಬೆದರಿಕೆ ಹಾಕಿದ್ದರಿಂದ ಈ ಮದುವೆ ಮಾಡಿಕೊಳ್ಳಬೇಕಾಯಿತು ಎಂದು ಹೇಳಿದ್ದಾಳೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ, ಆ ವಧು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವರನಿಗೆ ಬೇಕಾಗಿದ್ದರೆ ಮದುವೆಯಾಗಿದೆ ಎನ್ನುವ ಕಾರಣಕ್ಕೆ ಆಕೆಯ ಜೊತೆ ದೈಹಿಕ ಸಂಬಂಧ ಬೆಳೆಸಬಹುದು. ಆದರೆ ಅವಳ ಮನಸ್ಸಿನಲ್ಲಿ ಯಾವುದೇ ರೀತಿಯ ಜಾಗ ಅವನಿಗೆ ಇರುವುದಿಲ್ಲ ಎಂದು ಸಿನಿಮಾ ಡೈಲಾಗ್ ಅನ್ನೇ ಬಿಟ್ಟಿದ್ದಾಳೆ. ಪಾಪ ಮನಸ್ಸು ಸಿಗದ ದೇಹ ಯಾಕೆ ಎಂದು ವರ ಕೂಡಾ ಹಿಂದೆ ಸರಿದಿದ್ದಾನೆ.
2 ವರ್ಷಗಳ ಹೋರಾಟ ಮತ್ತು 10 ಲಕ್ಷ ರೂ. ನಷ್ಟ
ಈ ಘಟನೆಯ ನಂತರ, ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ಎರಡು ವರ್ಷ ಕೋರ್ಟ್ ಕಚೇರಿಗೆ ಅಲೆದಿದ್ದಾರೆ. ಇದಲ್ಲದೆ, ತಾನು ಮದುವೆಯಾಗಿದ್ದೇನೆ ಎನ್ನುವ ಒಂದೇ ಒಂದು ತಪ್ಪಿಗೆ ಜೀವನಾಂಶ ಮತ್ತು ಕಾನೂನು ಶುಲ್ಕವಾಗಿ ಸುಮಾರು 10 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಯಿತು.
ಇಲ್ಲಿ ಇನ್ನೊಂದು ಸಂಗತಿಯೆಂದರೆ ಈ ಹುಡುಗನಿಗೆ ಮತ್ತೆ ಮದುವೆಯಾಗಲು ಯಾವ ಸಂಬಂಧವೂ ಸಿಗುತ್ತಿಲ್ಲ, ಡೇಟಿಂಗ್ appಗಳಿಂದಲೂ ಪ್ರಯೋಜನವಾಗುತ್ತಿಲ್ಲ. ಒಳ್ಳೆಯ ಸಂಬಂಧಗಳೆಲ್ಲಾ ಕಳೆದು ಹೋಗಿದೆ. ಯಾರೋ ಮಾಡಿದ ತಪ್ಪಿಗೆ ಯಾರೋ ಶಿಕ್ಷೆ ಅನುಭವಿಸುವ ಹಾಗೆ ಆಗಿದೆ. ಒಟ್ಟಿನಲ್ಲಿ ಈ ಕತೆ ಸಿನಿಮಾಗಿಂತ ಕಡಿಮೆಯೇನಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ಮೂಲ ಮತ್ತು ಚರ್ಚೆ
ಈ ಸುದ್ದಿಯ ಪ್ರಾಥಮಿಕ ಮೂಲವೆಂದರೆ @fintech_shark ಅವರು Xನಲ್ಲಿ ಪೋಸ್ಟ್ ಮಾಡಿದ ವೈರಲ್ ವರದಿ ಮತ್ತು ರೆಡ್ಡಿಟ್ ಥ್ರೆಡ್. ಈ ಸುದ್ದಿ ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಇಲ್ಲಿ ಅನೇಕ ಬಳಕೆದಾರರು ಪುರುಷರ ಹಕ್ಕುಗಳು ಮತ್ತು ಭಾರತೀಯ ಕಾನೂನನ್ನು ಪ್ರಶ್ನಿಸಿದ್ದಾರೆ. ಆ ಹುಡುಗನ ಎರಡು ವರ್ಷಗಳು ವ್ಯರ್ಥವಾಗಿದ್ದು ಮಾತ್ರವಲ್ಲ, 10 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾನೆ. ಜೊತೆಗೆ ಮದುವೆಯಾದ ಕೆಲವೇ ದಿನಗಳಲ್ಲಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾನೆ ಎನ್ನುವ ಕಾರಣಕ್ಕೆ ಮರು ಮದುವೆ ಕೂಡಾ ಕಷ್ಟ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ದೈಹಿಕ ಸಂಬಂಧವಿಲ್ಲದ ಕಾರಣ, ವಿಚ್ಛೇದನದ ಬದಲು ಮದುವೆಯ ರದ್ದತಿಯನ್ನೇ ಕೋರಬಹುದಿತ್ತು ಎಂದು ಹಲವರು ಹೇಳಿದ್ದಾರೆ.


Click it and Unblock the Notifications
