Speaker Om Birla: ಬಹುಮತ ಇರುವ ಸ್ಪೀಕರ್ ಮೇಲೆ ಅವಿಶ್ವಾಸ ಯಾಕೆ: ರಾಜರಾಂ ತಲ್ಲೂರು ಬರಹ
Speaker Om Birla: ಬಹುಮತ ಇರುವ ಸ್ಪೀಕರ್ ಮೇಲೆ ಅವಿಶ್ವಾಸ ಯಾಕೆ: ಹಿರಿಯ ಪತ್ರಕರ್ತ ರಾಜರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಕೋಟಾ ಸಂಸದ ಮತ್ತು ಹಾಲೀ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಂವಿಧಾನದ 94(c) ಅನ್ವಯ ವಿರೋಧ ಪಕ್ಷಗಳ ಸಂಸದರು ನೊಟೀಸು ನೀಡಿದ್ದಾರೆ. ಅದು ಸ್ವೀಕೃತವಾದರೆ, ಆ ಬಗ್ಗೆ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿ, ಚರ್ಚೆ ನಡೆದು, ಮತಕ್ಕೆ ಹಾಕಿ, ನಿರ್ಣಯ ಸ್ವೀಕರಿಸಬೇಕೇ ಬೇಡವೇ ಎಂದು ತೀರ್ಮಾನ ಆಗುತ್ತದೆ.

ಇಲ್ಲಿ ಕುತೂಹಲ ಏನೆಂದರೆ, ಬಹುಮತ ಇರುವ ಆಡಳಿತ ಪಕ್ಷದ ಸದಸ್ಯರಾಗಿದ್ದವರೊಬ್ಬರನ್ನು ಸ್ಪೀಕರ್ ಸ್ಥಾನ ಎಂಬ ಪಕ್ಷಾತೀತ ಸಾಂವಿಧಾನಿಕ ಹುದ್ದೆಗೆ ಆಯ್ಕೆ ಮಾಡಿದ ಬಳಿಕ, ಆಡಳಿತ ಪಕ್ಷದ ವಿಶ್ವಾಸ ಇರುವ ತನಕ ಅವರ ಹುದ್ದೆಗೆ ಚ್ಯುತಿ ಇರುವುದಿಲ್ಲ. ಇದು ಗೊತ್ತಿದ್ದೂ ಸ್ಪೀಕರ್ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದು ಏಕೆ ?
ಗುಟ್ಟು ಅಲ್ಲೇ ಇರುವುದು. ಸಾಂವಿಧಾನಿಕ ಹುದ್ದೆ ಆದ ಸ್ಪೀಕರ್ ಸ್ಥಾನಕ್ಕೆ ಸಂವಿಧಾನದಲ್ಲಿ ಅತ್ಯುಚ್ಛ ಮರ್ಯಾದೆ ಇದೆ. ಸದನದ ಒಳಗೆ ಅವರು ಹೇಳಿದ್ದೇ ಅಂತಿಮ. ಅಂತಹ ಸ್ಥಾನದಲ್ಲಿ ಪಕ್ಷಾತೀತ, ಪ್ರಾಮಾಣಿಕ, ನ್ಯಾಯಪರ-ಜನಪರ ವ್ಯಕ್ತಿಯೊಬ್ಬರು ಕುಳಿತಿರಬೇಕು ಎಂಬುದು ಸಂವಿಧಾನ ರಚಯಿತರ ಬಯಕೆ ಆಗಿತ್ತು.
ಹಾಗೆ ಆಗದಿದ್ದಾಗ, ಸಮಸ್ಯೆಗಳು ಶುರು ಆಗುತ್ತವೆ. ಭಾರತದ ಸಂಸತ್ ಚರಿತ್ರೆಯಲ್ಲಿ ಸ್ಪೀಕರ್‌ಗಳ ಶ್ರೀಮಂತ ಚರಿತ್ರೆ ಇದೆ. ಎಂ ಎ ಅಯ್ಯಂಗಾರ್, ಜಿ. ಎಸ್. ಧಿಲ್ಲೋನ್, ಕೆ. ಎಸ್. ಹೆಗ್ಡೆ, ಬಲರಾಮ್ ಜಾಖಡ್, ಶಿವರಾಜ್ ಪಾಟೀಲ್, ಪಿ.ಎ. ಸಾಂಗ್ಮಾ, ಸೋಮನಾಥ ಚಟರ್ಜಿ... ಹೀಗೆ. ಸುದೀರ್ಘ ಕಾಲ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ (90ರ ದಶಕದಿಂದ ಈಚೆಗೆ ಸೀಮಿತವಾಗಿ ನೋಡಿದರೂ) ಜಾರ್ಜ್ ಫೆರ್ನಾಂಡೆಸ್, ಚಂದ್ರಶೇಖರ್, ವಾಜಪೇಯಿ, ಆದ್ವಾನಿ, ಸುಷ್ಮಾ ಸ್ವರಾಜ್, ಎಡ ಪಕ್ಷಗಳ ಹಲವರು ನಾಯಕರು, ವಿರೋಧಪಕ್ಷದ ಸಾಲಿನಲ್ಲಿ ಕುಳಿತು ಟ್ರೆಷರಿ ಬೆಂಚನ್ನು ತರಾಟೆಗೆ ತೆಗೆದುಕೊಳ್ಳುವುದು ಸಾಧ್ಯ ಇತ್ತು.
ಆದರೆ, 2019ರಿಂದೀಚೆಗೆ, ಪ್ರತಿಪಕ್ಷಗಳಿಗೆ ಉಸಿರುಕಟ್ಟಿಸುವ ವಾತಾವರಣ ಸದನದಲ್ಲಿದೆ. ಫುಟ್‌ಬಾಲ್ ಆಟದಲ್ಲಿರುವಂತೆ, ಸ್ಟ್ರೈಕರ್ ಗಳ ಸುತ್ತ ಸ್ವ-ರಕ್ಷಣೆಗೆ ಒಂದು ಪಡೆ ನಿರ್ಮಿಸಿ, ಅವರ ಚಲನವಲನಕ್ಕೆ ಅಡ್ಡಿ ಮಾಡುವ ತಂತ್ರ ಸದನದಲ್ಲಿ ಬಳಕೆ ಆಗುತ್ತಿದೆ. ಸಣ್ಣಸಣ್ಣ ಸಂಗತಿಗಳಿಗೂ ಆಕ್ಷೇಪ, ಪಾಯಿಂಟ್ ಆಫ್ ಆರ್ಡರ್ ಎತ್ತಲಾಗುತ್ತದೆ, ಟೆಷರಿ ಬೆಂಚಲ್ಲೇ ಗದ್ದಲ ಮಾಡಲಾಗುತ್ತದೆ.
ಅದಕ್ಕೆ ಸ್ಪೀಕರ್ ಮನ್ನಣೆ ನೀಡುತ್ತಾರೆ. ಆದರೆ, ಅದೇ ಸ್ಟಾಂಡರ್ಡನ್ನು ಆಳುವ ಪಕ್ಷಕ್ಕೆ ಬಳಸುವಲ್ಲಿ ಸ್ಪೀಕರ್ ಹಿಂಜರಿಕೆ ಎದ್ದು ಕಾಣಿಸುವಷ್ಟಿದ್ದ ಹಲವು ಘಟನೆಗಳಿವೆ. ಇದೆಲ್ಲ ಕಣ್ಣೆದುರೇ ನಡೆದರೂ ಚಕಾರ ಎತ್ತುವಂತಿಲ್ಲ. ಏಕೆಂದರೆ, ಸದನದಲ್ಲಿ ಸ್ಪೀಕರ್ ರೂಲಿಂಗ್ ಅಂತಿಮ. ಹಾಗಾದರೆ, ಸ್ಪೀಕರ್ ಪಕ್ಷಪಾತದ ಬಗ್ಗೆ ಸದನ ಚರ್ಚಿಸುವುದು ಹೇಗೆ ?
ಅದಕ್ಕೆ ಉಳಿಯುವ ಏಕೈಕ ಸಂಸದೀಯ ಹಾದಿ ಎಂದರೆ, ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ. ಇಲ್ಲಿ ನಿರ್ಣಯದ ಸೋಲು-ಗೆಲುವು ಮುಖ್ಯ ಅಲ್ಲ. ನಿರ್ಣಯ ಸದನದಲ್ಲಿ ಮಂಡನೆ ಆದ ಬಳಿಕ, ಒಂದೋ ಎರಡೋ ದಿನ ಆ ನಿರ್ಣಯದ ಮೇಲೆ ಸದನದಲ್ಲಿ ಚರ್ಚೆ ನಡೆಯುತ್ತದೆ. ನಿಯಮ 202A ಅನ್ವಯ ನಡೆಯುವ ಚರ್ಚೆಯು ನಿರ್ಣಯದಲ್ಲಿ ಮಂಡಿತವಾಗಿರುವ ದೂರುಗಳ ಬಗ್ಗೆಯೇ ನಡೆಯಬೇಕಾದುದು ಕಡ್ಡಾಯ. ಹಾಗಾಗಿ, ವಿರೋಧ ಪಕ್ಷಗಳವರಿಗೆ ಸ್ಪೀಕರ್ ಸ್ಥಾನಕ್ಕೆ "ಕನ್ನಡಿ ತೋರಿಸಲು," ಸದನದಲ್ಲಿ ಅವರ ಪಕ್ಷಪಾತ ನೀತಿಯ ಬಗ್ಗೆ ಸದನದ ಕಡತಗಳಲ್ಲಿ ದಾಖಲಾಗುವಂತೆ ಮಾತನಾಡಲು ಈ ಚರ್ಚೆ ಅವಕಾಶ ಮಾಡಿಕೊಡುತ್ತದೆ (ಸದನದ ಈ ಕಡತಗಳು ಭಾರತದ ಸಂಸದೀಯ ಇತಿಹಾಸದ ಭಾಗವಾಗಿ ಶಾಶ್ವತವಾಗಿ ಉಳಿಯಲಿವೆ!).
ನಿರ್ಣಯ ಅಂತಿಮವಾಗಿ ಏನೇ ಆದರೂ, ಸ್ಪೀಕರ್ "ಮೌಲ್ಯಮಾಪನ"ಕ್ಕೆ ಎನೂ ಕೊರತೆ ಆಗುವುದಿಲ್ಲ. ಸೂಕ್ಷ್ಮ ಸಂವೇದನೆಗಳಿರುವ ಸ್ಪೀಕರ್ ಆಗಿದ್ದರೆ, ಅವರಿಗೆ ತಮ್ಮನ್ನು ತಿದ್ದಿಕೊಳ್ಳುವುದಕ್ಕೆ ಇದೊಂದು ಸಾಂವಿಧಾನಿಕ ಅವಕಾಶ. ಸ್ಪೀಕರ್ ಓಂ ಬಿರ್ಲಾ ಈ ಅವಕಾಶವನ್ನು ಹೇಗೆ ಬಳಸಿಕೊಳ್ಳಲಿದ್ದಾರೆ ಕಾದು ನೋಡೋಣ.
ಅಂದಹಾಗೆ, ಈ ಹಿಂದೆ ಜಿ.ವಿ. ಮಾವಳಂಕರ್ (1954), ಸರ್ದಾರ್ ಹುಕುಂ ಸಿಂಗ್ (1966), ಬಲರಾಂ ಜಾಖಡ್ (1987) ಅವರ ವಿರುದ್ಧ ಅವಿಶ್ವಾಸ ನಿರ್ಣಯಗಳು ಮಂಡಿತವಾಗಿದ್ದವು; ಯಾವುದೇ ನಿರ್ಣಯ ಸದನದಲ್ಲಿ ಅಂಗೀಕೃತ ಆಗಿರಲಿಲ್ಲ.













Click it and Unblock the Notifications